ನಾವು ಸೋತಿದ್ದೇ ಈ ಎರಡು ತಪ್ಪಿನಿಂದ: ಕೊನೆಗೂ ಭಾರತ ಎದುರಿನ ಸೋಲಿಗೆ ಕಾರಣ ಬಾಯ್ಬಿಟ್ಟ ಪಾಕ್ ನಾಯಕ ಬಾಬರ್..!

First Published Jun 10, 2024, 12:13 PM IST

ನ್ಯೂಯಾರ್ಕ್‌: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತದ ಎದುರು ಪಾಕಿಸ್ತಾನ ತಂಡವು ಶರಣಾಗಿದೆ. ಈ ಬಾರಿ ಭಾರತ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಲು ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಲಿಲ್ಲ. ಇದೀಗ ಪಾಕ್ ಸೋಲಿಗೆ ಇದೇ ಕಾರಣ ಎನ್ನುವುದನ್ನು ನಾಯಕ ಬಾಬರ್ ಅಜಂ ಬಾಯ್ಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸಾಕಷ್ಟು ಮಹತ್ವದ ಪಂದ್ಯಗಳಲ್ಲಿ ಒಂದು ಎನಿಸಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 6 ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತೀಯ ಕಾಲಮಾನ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ ಕೇವಲ 119 ರನ್ ಗಳಿಸಿ ಸರ್ವಪತನ ಕಂಡಿತು.

ಪಾಕಿಸ್ತಾನದ ವೇಗಿಗಳಾದ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ಅಮೀರ್ ಹಾಗೂ ನಸೀಂ ಶಾ ಮಾರಕ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತ ಕಲೆಹಾಕಿತು. ಪರಿಣಾಮ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡವು ಇದೇ ಮೊದಲ ಬಾರಿಗೆ ಪಾಕಿಸ್ತಾನ ಎದುರು ಆಲೌಟ್ ಆಯಿತು.

ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ರಿಷಭ್ ಪಂತ್ 42, ಅಕ್ಷರ್ ಪಟೇಲ್ 20 ಹಾಗೂ ನಾಯಕ ರೋಹಿತ್ ಶರ್ಮಾ 13 ರನ್ ಬಾರಿಸಿದ್ದು ಬಿಟ್ಟರೇ, ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಎಚ್ಚರಿಕೆಯ ಆರಂಭ ಪಡೆಯಿತಾದರೂ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಸಹ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 113 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಸಾಧಾರಣ ಗುರಿ ಬೆನ್ನತ್ತಲಾಗದ ಪಾಕಿಸ್ತಾನ ತಂಡದ ಸೋಲಿನ ಬಗ್ಗೆ ನಾಯಕ ಬಾಬರ್ ಅಜಂ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೇ ಪಾಕ್ ಸೋಲಿಗೆ ತಾವು ಮಾಡಿದ ಎರಡು ತಪ್ಪುಗಳ ಬಗ್ಗೆಯೂ ತುಟಿ ಬಿಚ್ಚಿದ್ದಾರೆ.

ಭಾರತ ಎದುರು ನಾವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಗಿದ್ದು ಹಾಗೂ ಮಹತ್ವದ ಘಟ್ಟದಲ್ಲಿ ನಾವು ಡಾಟ್ ಬಾಲ್ ಆಡಿದ್ದು ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದು ಬಾಬರ್ ಅಜಂ ಹೇಳಿದ್ದಾರೆ.

ಭಾರತ ಎದುರಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಬಾಬರ್ ಅಜಂ, "ನಾವು ಚೆನ್ನಾಗಿಯೇ ಬೌಲಿಂಗ್ ಮಾಡಿದೆವು. ಬ್ಯಾಟಿಂಗ್‌ ಮಾಡುವಾಗ ನಾವು ನಿರಂತವಾಗಿ ವಿಕೆಟ್ ಕಳೆದುಕೊಂಡೆವು ಹಾಗೂ ಹೆಚ್ಚು ಡಾಟ್ ಬಾಲ್ ಆಡಿದೆವು. ನಾವು ಸಿಂಪಲ್ ಆಟ ಆಡಬೇಕು ಎಂದುಕೊಂಡಿದ್ದೆವು. ಆದರೆ ಗುರಿ ಬೆನ್ನತ್ತುವಾಗ ನಾವು ಸ್ಟ್ರೈಕ್ ರೊಟೇಟ್ ಮಾಡುವ ವಿಚಾರದಲ್ಲಿ ಎಡವಿದೆವು ಎನ್ನುವುದನ್ನು ಬಾಬರ್ ಒಪ್ಪಿಕೊಂಡಿದ್ದಾರೆ.

ಗುರಿ ಬೆನ್ನತ್ತುವಾಗ ಮೊದಲ 6 ಓವರ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ರನ್ ಗಳಿಸಬೇಕು ಅಂದುಕೊಂಡಿದ್ದೆವು. ಆದರೆ ಒಂದು ವಿಕೆಟ್ ಕಳೆದುಕೊಂಡ ಬಳಿಕ ನಾವು ಲಯ ತಪ್ಪಿದೆವು. ನಾವಿನ್ನು ಎರಡು ಪಂದ್ಯ ಆಡುವುದಿದೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತೇವೆ ಎಂದು ಬಾಬರ್ ಅಜಂ ಹೇಳಿದ್ದಾರೆ.

'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ಯುಎಸ್‌ಎಗೆ ಶರಣಾಗಿತ್ತು. ಇದಾದ ಬಳಿಕ ಇದೀಗ ಟೀಂ ಇಂಡಿಯಾ ಎದುರು ಮುಗ್ಗರಿಸಿದೆ. ಇನ್ನು ಪಾಕ್‌ ತಂಡವು ಐರ್ಲೆಂಡ್ ಹಾಗೂ ಕೆನಡಾ ಎದುರು ಪಂದ್ಯ ಆಡಲಿದ್ದು, ಎರಡೂ ಪಂದ್ಯ ಗೆದ್ದು, ಉಳಿದ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರಷ್ಟೇ ಬಾಬರ್ ಪಡೆ ಸೂಪರ್ 8ರ ಘಟ್ಟಕ್ಕೆ ಲಗ್ಗೆಯಿಡಲು ಸಾಧ್ಯವಾಗಲಿದೆ.

Latest Videos

click me!