ಮಹಾಪರಾಧ ಮಾಡಿದ ರಿಷಭ್ ಪಂತ್, ನಿಷೇಧದ ಭೀತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ..!

First Published Apr 4, 2024, 5:19 PM IST

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಕೆಕೆಆರ್ ಎದುರು ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ತಪ್ಪು ಮಾಡಿದ ರಿಷಭ್ ಪಂತ್‌ ಇದೀಗ ನಿಷೇಧದ ಭೀತಿಗೆ ಸಿಲುಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 106 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ.

ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಸುನಿಲ್ ನರೈನ್, ಅಂಗ್‌ಕೃಷ್ ರಘುವಂಶಿ ಹಾಗೂ ಆಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ದಾಖಲೆಯ 272 ರನ್ ಕಲೆಹಾಕಿತು.

ಇನ್ನು ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ವರುಣ್ ಚಕ್ರವರ್ತಿ ಹಾಗೂ ವೈಭವ್ ಅರೋರ ಮಾರಕ ದಾಳಿಗೆ ತತ್ತರಿಸಿ ಕೇವಲ 166 ರನ್‌ಗಳಿಗೆ ಸರ್ವಪತನ ಕಂಡು ಮುಖಭಂಗ ಅನುಭವಿಸಿತು.

ಇನ್ನು ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್‌ಗೆ ಮತ್ತೊಂದು ಆಘಾತ ಎದುರಾಗಿದ್ದು, ಐಪಿಎಲ್ ಆಡಳಿತ ಮಂಡಳಿ 24 ಲಕ್ಷ ರುಪಾಯಿ ದಂಡ ವಿಧಿಸಿದೆ.


ಹೌದು, ಕೆಕೆಆರ್ ಎದುರಿನ ಪಂದ್ಯದ ವೇಳೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ನಾಯಕ ಪಂತ್‌ಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ತನ್ನ ತಂಡದ ಆಟಗಾರರಿಗೆ 6 ಲಕ್ಷ ರುಪಾಯಿ ಅಥವಾ ಪಂದ್ಯದ ಸಂಭಾವನೆಯ 25% ಮೊತ್ತ ಇವುಗಳಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ಭರಿಸಬೇಕಿದೆ. 

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎರಡನೇ ಬಾರಿಗೆ ನಿಧಾನಗತಿಯ ಬೌಲಿಂಗ್ ಮಾಡಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ.

ಈ ಮೊದಲು ಮಾರ್ಚ್ 31ರಂದು ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ವೇಳೆಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಬೌಲಿಂಗ್ ದಾಳಿ ನಡೆಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿತ್ತು. ಆಗ ನಾಯಕ ಪಂತ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿತ್ತು.

ಇನ್ನು ಒಂದು ವೇಳೆ ಇದೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಧಾನಗತಿಯ ಬೌಲಿಂಗ್ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದರೆ, ನಾಯಕ ಪಂತ್‌ಗೆ 30 ಲಕ್ಷ ರುಪಾಯಿ ದಂಡ ಹಾಗೂ ಮುಂದಿನ ಒಂದು ಪಂದ್ಯದ ಮಟ್ಟಿಗೆ ನಿಷೇಧಕ್ಕೆ ಒಳಗಾಗಲಿದ್ದಾರೆ.

ಐಪಿಎಲ್ ರೂಲ್‌ಬುಕ್ ಪ್ರಕಾರ, ಇನಿಂಗ್ಸ್‌ನ ಮೊದಲ ಚೆಂಡು ಎಸೆದವಾಗಿನಿಂದ 90 ನಿಮಿಷಗಳೊಳಗಾಗಿ ಬೌಲಿಂಗ್ ಮಾಡುವ ತಂಡ ಇನಿಂಗ್ಸ್ ಮುಗಿಸಬೇಕು. ಇದಕ್ಕಿಂತ ಹೆಚ್ಚಿಗೆ ಸಮಯವನ್ನು ಬೌಲಿಂಗ್ ಮಾಡುವ ತಂಡ ತೆಗೆದುಕೊಂಡರೆ, ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದಂತಾಗುತ್ತದೆ.
 

click me!