ಬ್ಯಾಟ್‌ನಿಂದ ವಿಕೆಟ್‌ ಚೆಲ್ಲಾಪಿಲ್ಲಿ ಮಾಡಿದ ಹರ್ಮನ್‌ಪ್ರೀತ್ ಕೌರ್‌ಗೆ ಐಸಿಸಿಯಿಂದ ಬ್ಯಾನ್ ಶಿಕ್ಷೆ..!

First Published | Jul 25, 2023, 5:03 PM IST

ನವದೆಹಲಿ: ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು, ಅಂಪೈರ್‌ಗಳನ್ನು ಬಹಿರಂಗವಾಗಿ ಟೀಕಿಸಿದಕ್ಕೆ ಭಾರತದ ನಾಯಕಿ ಹರ್ಮನ್‌ಪ್ರೀತ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಶಾಕ್‌ ನೀಡಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.
 

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಂಪೈರ್ ನೀಡಿದ ಔಟ್ ತೀರ್ಪಿಗೆ ಮೈದಾನದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದರು. 
 

ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು, ಅಂಪೈರ್‌ಗಳನ್ನು ಬಹಿರಂಗವಾಗಿ ಟೀಕಿಸಿದಕ್ಕೆ ಭಾರತದ ನಾಯಕಿ ಹರ್ಮನ್‌ಪ್ರೀತ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) 2 ಪಂದ್ಯ ನಿಷೇಧ ಹೇರುವ ಸಾಧ್ಯತೆ ಇದೆ

Latest Videos


ಐಸಿಸಿ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆಯಾದರೂ, ಮೂಲಗಳ ಪ್ರಕಾರ ಹರ್ಮನ್‌ಪ್ರೀತ್‌ ಕೌರ್‌ಗೆ ಪಂದ್ಯದ ಸಂಭಾವನೆಯ 50% ದಂಡದ ಜತೆಗೆ 4 ಋಣಾತ್ಮಕ ಅಂಕಗಳಿಗೆ ಗುರಿಯಾಗಲಿದ್ದಾರೆ.

ಐಸಿಸಿ ನಿಯಮದ ಪ್ರಕಾರ 24 ತಿಂಗಳ ಅವಧಿಯಲ್ಲಿ 4ರಿಂದ 7 ಋಣಾತ್ಮಕ ಅಂಕ ಪಡೆದರೆ, ಅದು 2 ನಿಷೇಧ ಅಂಕಗಳಾಗಿ ಪರಿಗಣಿಸಲ್ಪಡುತ್ತದೆ.
 

2 ನಿಷೇಧ ಅಂಕಕ್ಕೆ ಗುರಿಯಾದರೆ ಆ ಆಟಗಾರ/ಆಟಗಾರ್ತಿಯನ್ನು 1 ಟೆಸ್ಟ್‌ ಅಥವಾ 2 ಏಕದಿನ ಅಥವಾ 2 ಟಿ20 ಪಂದ್ಯಗಳಿಗೆ(ಯಾವುದು ಮೊದಲೋ ಅದು) ನಿಷೇಧಿಸಲಾಗುತ್ತದೆ. ಇದು ಮುಂಬರುವ ಏಷ್ಯನ್‌ ಗೇಮ್ಸ್‌ ವೇಳೆ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
 

ಚೀನಾದಲ್ಲಿ ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ಏಷ್ಯನ್‌ ಗೇಮ್ಸ್ ನಡೆಯಲಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.

ಒಂದು ವೇಳೆ ಹರ್ಮನ್‌ಪ್ರೀತ್ ಕೌರ್ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಂಡರೆ, ಹರ್ಮನ್‌ಪ್ರೀತ್, ಮೊದಲೆರಡು ಪಂದ್ಯಗಳಿಂದ ಹೊರಗುಳಿಯಬೇಕಾಗಬಹುದು.

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಎಂಟ್ರಿ ನೀಡಲಾಗಿದೆ. ಹೀಗಾಗಿ ಒಂದು ವೇಳೆ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಂದ ಹರ್ಮನ್‌ಪ್ರೀತ್ ಹೊರಗುಳಿಯಬೇಕಾಗಿ ಬಂದರೆ ಏಷ್ಯನ್‌ ಗೇಮ್ಸ್‌ನ ಕ್ವಾರ್ಟರ್‌ ಫೈನಲ್ ಮತ್ತು ಸೆಮಿಫೈನಲ್‌ನಿಂದ ಹೊರಗುಳಿಯಬೇಕಾಗಿ ಬರಬಹುದು.

ಇನ್ನು ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿಯೂ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, ಇನ್ನು ಮುಂದೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವಾಗ ಅಂಪೈರ್‌ಗಳ ಜತೆ ಹೇಗೆ ವರ್ತಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಇಲ್ಲಿಗೆ ಬರುತ್ತೇವೆ. ಅಂಪೈರ್‌ಗಳು ನೀಡಿದ ಕೆಲವು ತೀರ್ಮಾನಗಳು ನಮ್ಮನ್ನು ಅಚ್ಚರಿಗೀಡಾಗುವಂತೆ ಮಾಡಿತು ಎಂದು ಹೇಳಿದ್ದರು. 

click me!