ಏಷ್ಯಾಕಪ್ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ದ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ. ಕಾರಣ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾಹಾಗೂ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದಾರೆ.
ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿಕೊಂಡ ರೋಹಿತ್ ಶರ್ಮಾ, ಸ್ಫೋಟಕ ಬ್ಯಾಟಿಂಗ್ ವಿಶ್ವಾಸದಲ್ಲಿದ್ದರು. ಆದರೆ ರೋಹಿತ್ ಶರ್ಮಾ 22 ಎಸೆತದಲ್ಲಿ 11 ರನ್ ಸಿಡಿಸಿ ನಿರ್ಗಮಿಸಿದ್ದಾರೆ.
ಏಷ್ಯಾಕಪ್ 2023 ಟೂರ್ನಿಯ ಭಾರತದ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಮುಗ್ಗರಿಸಿದ್ದಾರೆ. 11 ರನ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ರೋಹಿತ್ ಶರ್ಮಾ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಸಚಿನ್ ತೆಂಡೂಲ್ಕರ್ 23 ಪಂದ್ಯಗಳನ್ನಾಡಿದ್ದಾರೆ. ಇದು ಟೀಂ ಇಂಡಿಯಾ ಕ್ರಿಕೆಟಿಗ ಏಷ್ಯಾಕಪ್ ಟೂರ್ನಿಯಲ್ಲಿಆಡಿದ ಗರಿಷ್ಠ ಪಂದ್ಯವಾಗಿದೆ. ಇದೀಗ ರೋಹಿತ್ ಶರ್ಮಾ ಕೂಡ 23 ಪಂದ್ಯ ಆಡುವ ಮೂಲಕ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ 1990ರಿಂದ 2012ರ ವರೆಗೆ ಏಷ್ಯಾಕಪ್ ಟೂರ್ನಿ ಆಡಿದ್ದಾರೆ. ಸಚಿನ್ 23 ಪಂದ್ಯಗಳಿಂದ 971 ರನ್ ಸಿಡಿಸಿದ್ದಾರೆ. ಗರಿಷ್ಠ ಪಂದ್ಯ ಮಾತ್ರವಲ್ಲ ಸಚಿನ್ ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠರನ್ ಸಿಡಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ 23 ಪಂದ್ಯಗಳಿಂದ 756 ರನ್ ಸಿಡಿಸಿದ್ದಾರೆ. ಈ ಮೂಲಕ ಸಚಿನ್ ನಂತರದ ಸ್ಥಾನದಲ್ಲಿದ್ದಾರೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸಚಿನ್ ದಾಖಲೆ ಮುರಿಯುವ ಅವಕಾಶಗಳಿವೆ.
Rohit Sharma Bowled
ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ನೀರಸ ಪ್ರದರ್ಶನ ನೀಡಿರುವ ಕಾರಣ ಇದೀಗ ಸಚಿನ್ ಏಷ್ಯಾಕಪ್ ಗರಿಷ್ಠ ರನ್ ದಾಖಲೆ ಮುರಿವುದು ಅನುಮಾನ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ವಿಕೆಟ್ ಪತನದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಔಟಾಗಿದ್ದಾರೆ. ಕೊಹ್ಲಿ 4 ರನ್ ಸಿಡಿಸಿ ನಿರ್ಗಮಿಸಿದ್ದಾರೆ. 27 ರನ್‌ಗೆ ಭಾರತ 2 ಪ್ರಮುಖ ವಿಕೆಟ್ ಕಳೆದುಕೊಂಡು ಪರದಾಡಿತು.