ಮೆಗಾಸ್ಟಾರ್ ಚಿರಂಜೀವಿ ಅವರ ವೃತ್ತಿಜೀವನದಲ್ಲಿ ಖೈದಿ, ಜಗದೇಕ ವೀರುಡು ಅತಿಲೋಕ ಸುಂದರಿ, ಗ್ಯಾಂಗ್ ಲೀಡರ್, ಸ್ವಯಂ ಕೃಷಿ ಹೀಗೆ ಕೆಲವು ವಿಶೇಷ ಚಿತ್ರಗಳ ಬಗ್ಗೆ ನಾವು ಕೇಳುತ್ತಲೇ ಇರುತ್ತೇವೆ. ಚಿರಂಜೀವಿ ತಮ್ಮ ಸ್ಟಾರ್ ಇಮೇಜ್ ಜೊತೆಗೆ ಅಲ್ಲೊಂದು ಇಲ್ಲೊಂದು ತಮ್ಮ ವೃತ್ತಿಜೀವನದಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುತ್ತಲೇ ಬಂದಿದ್ದಾರೆ. ಸ್ವಯಂ ಕೃಷಿ, ರುದ್ರವೀಣ ಚಿತ್ರಗಳು ಅವರಿಗೆ ಪ್ರಶಂಸೆ ತಂದುಕೊಟ್ಟವು. ಆದರೆ ಚಿರಂಜೀವಿ ಅವರ ವೃತ್ತಿಜೀವನದ ಒಂದು ಸಿನಿಮಾ ಒಳ್ಳೆಯ ಚಿತ್ರವಾಗಿದ್ದರೂ ಕೆಲವು ತಪ್ಪುಗಳಿಂದ ಡಿಸಾಸ್ಟರ್ ಅನ್ನೋ ಹಣೆಪಟ್ಟಿ ಅಂಟಿಸಿಕೊಂಡಿತು.
ಆ ಚಿತ್ರ ಬೇರ್ಯಾವುದೂ ಅಲ್ಲ, ಅದು ಅಂಜಿ. ಮಲ್ಲೆಮಾಲ ಪ್ರೊಡಕ್ಷನ್ ನಡಿ ಶ್ಯಾಮ್ ಪ್ರಸಾದ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದರು. ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಅಂಜಿ ಚಿತ್ರ ತೆರೆಕಂಡಿತು. ಈ ಚಿತ್ರದಲ್ಲಿ ಚಿರಂಜೀವಿಗೆ ಜೋಡಿಯಾಗಿ ನಮ್ರತಾ ನಟಿಸಿದ್ದರು. ಈ ಚಿತ್ರದ ಕಥೆ ಕೋಡಿ ರಾಮ ಕೃಷ್ಣ ಅವರ ಟೇಕಿಂಗ್ ಅದ್ಭುತವಾಗಿತ್ತು. ಶಿವಲಿಂಗದ ಸುತ್ತ ಒಂದು ಕಾಲ್ಪನಿಕ ಕಥೆಯನ್ನು ಹೆಣೆದು ವಿಷುಯಲ್ ಎಫೆಕ್ಟ್ಸ್ ಜೊತೆ ಮ್ಯಾಜಿಕ್ ಮಾಡಬೇಕೆಂದು ಕೋಡಿ ರಾಮ ಕೃಷ್ಣ ಪ್ರಯತ್ನಿಸಿದ್ದರು.
ಆದರೆ ಈ ಚಿತ್ರಕ್ಕೆ ಅಸಲಿ ಹಾನಿ ಆಗಿದ್ದು ಪ್ರೊಡಕ್ಷನ್ ವಿಚಾರದಲ್ಲಿ. ಬಜೆಟ್ ಸಮಸ್ಯೆಯಿಂದ ಆರು ವರ್ಷ ಈ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿತು. ಸಿನಿಮಾ 2004 ರ ಸಂಕ್ರಾಂತಿಗೆ ಬಿಡುಗಡೆಯಾಯಿತು. ಆರು ವರ್ಷ ತಡವಾಗಿ ಬಿಡುಗಡೆಯಾದ ಚಿತ್ರ ಎಂಬ ನೆಗೆಟಿವ್ ಅಭಿಪ್ರಾಯದೊಂದಿಗೆ ಚಿತ್ರಮಂದಿರಗಳಿಗೆ ಬಂತು. ಈ ನೆಗೆಟಿವ್ ಅಭಿಪ್ರಾಯಕ್ಕೆ ಕಾರಣ, ಚಿರಂಜೀವಿ ಅವರ ಸಿನಿಮಾಗಳಲ್ಲಿ ನೋಡಲು ಸಿಗುವಂತಹ ಮಾಸ್ ಅಂಶಗಳು ಈ ಚಿತ್ರದಲ್ಲಿ ಇರಲಿಲ್ಲ. ಇದರಿಂದ ಪ್ರೇಕ್ಷಕರು ಈ ಚಿತ್ರವನ್ನು ಡಿಸಾಸ್ಟರ್ ಎಂಬ ಮುದ್ರೆ ಒತ್ತಿದರು.
ಚಿತ್ರಮಂದಿರಗಳಲ್ಲಿ ಅಂಜಿ ಚಿತ್ರಕ್ಕೆ ನಷ್ಟವಾಯಿತು. ಆದರೆ ಈ ಚಿತ್ರ ಎಷ್ಟು ಅದ್ಭುತವಾಗಿದೆ ಎಂದು ನಂತರ ತಿಳಿಯಿತು. ಟಿವಿಯಲ್ಲಿ ಪ್ರಸಾರವಾದಾಗ ಪ್ರತಿಯೊಬ್ಬರೂ ಈ ಸಿನಿಮಾವನ್ನು ಮತ್ತೆ ಮತ್ತೆ ನೋಡಲು ಪ್ರಾರಂಭಿಸಿದರು. ವಿಷುಯಲ್ ಎಫೆಕ್ಟ್ಸ್, ಈ ಚಿತ್ರದಲ್ಲಿದ್ದ ಹೊಸತನ ಎಲ್ಲರನ್ನೂ ಅಚ್ಚರಿಗೊಳಿಸಿತು. ನಿರ್ಮಾಣ ಸಂಸ್ಥೆ ಈ ಚಿತ್ರ ನಿರ್ಮಾಣದಲ್ಲಿ ಸ್ವಲ್ಪ ಜಾಗ್ರತೆ ವಹಿಸಿದ್ದರೆ, ಒಂದು ಯೋಜನೆಯೊಂದಿಗೆ ಚಿತ್ರವನ್ನು ಬೇಗ ಮುಗಿಸಿ ಬಿಡುಗಡೆ ಮಾಡಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದು ಅನೇಕರು ಹೇಳುತ್ತಾರೆ.
ಗಾಯದ ಮೇಲೆ ಬರೆ ಎಳೆದಂತೆ ಅಂಜಿ ಚಿತ್ರ ಬಿಡುಗಡೆಯಾದಾಗಲೇ ಬಾಲಯ್ಯ ಅವರ ಲಕ್ಷ್ಮಿ ನರಸಿಂಹ ಮತ್ತು ಪ್ರಭಾಸ್ ಅವರ ವರ್ಷಂ ಚಿತ್ರಗಳು ಬಿಡುಗಡೆಯಾದವು. ಲಕ್ಷ್ಮಿ ನರಸಿಂಹ ಹಿಟ್ ಆಯಿತು. ಪ್ರಭಾಸ್ ಅವರ ವರ್ಷಂ ಚಿತ್ರ ಲಕ್ಷ್ಮಿ ನರಸಿಂಹ ಮತ್ತು ಅಂಜಿ ಚಿತ್ರಗಳನ್ನು ಹಿಂದಿಕ್ಕಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆದರೆ ಅಂಜಿ ಚಿತ್ರಕ್ಕೆ ನಂತರದ ದಿನಗಳಲ್ಲಿ ಒಳ್ಳೆಯ ಹೆಸರು ಬಂತು. ಟಾಲಿವುಡ್ ನಲ್ಲಿ ಸ್ಪೆಷಲ್ ಎಫೆಕ್ಟ್ಸ್ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಚಿತ್ರ ಅಂಜಿ. ಅದೇ ರೀತಿ ಛಾಯಾಗ್ರಹಣ, ಅತ್ಯುತ್ತಮ ಮೇಕಪ್ ವಿಭಾಗಗಳಲ್ಲಿ ಎರಡು ನಂದಿ ಪ್ರಶಸ್ತಿಗಳನ್ನು ಪಡೆಯಿತು. ಅಂಜಿ ಚಿತ್ರಕ್ಕೆ ಇನ್ನೊಂದು ಹೆಗ್ಗಳಿಕೆಯೂ ಇದೆ. ಈ ಚಿತ್ರ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ತ್ರೀಡಿ ಡಿಜಿಟಲ್ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಸಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ಸಿಜಿ ವರ್ಕ್, ವಿಷುಯಲ್ ಎಫೆಕ್ಟ್ಸ್ ಹೆಚ್ಚಾಗಿ ಬಳಸುವ ಈ ಸಮಯದಲ್ಲಿ ಅಂಜಿ ಚಿತ್ರ ಬಿಡುಗಡೆಯಾಗಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತೇನೋ.