ಪಾಕ್‌ ಗ್ರೀನ್‌ ಸಿಗ್ನಲ್ ಕೊಟ್ರೂ ನನಸಾಗಲೇ ಇಲ್ಲ ದಿಲೀಪ್ ಕುಮಾರ್ ಆ ಆಸೆ!

First Published | Jul 7, 2021, 1:10 PM IST

ಬಾಲಿವುಡ್‌ನ ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. 98 ವರ್ಷ ವಯಸ್ಸಿನ ಅವರು ತಮ್ಮ ವೃತ್ತಿ ಬದುಕಿನಲ್ಲಿ ಒಂದಕ್ಕಿಂತ ಮತ್ತೊಂದು ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಿದ್ದರೂ ಅವರ ಆಕಾಂಕ್ಷೆಯೊಂದು ಕನಸಾಗೇ ಉಳಿದಿದೆ. ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ ದಿಲೀಪ್‌ ಕುಮಾರ್‌ರವರ ಪೂರ್ವಜರ ಬಂಗಲೆ ಈಗಲೂ ಕಿಸ್ಸಾ ಖ್ವಾನಿ ಬಜಾರ್‌ನ ವಸತಿ ಪ್ರದೇಶದಲ್ಲಿದೆ. ಇದನ್ನು ಮ್ಯೂಜಿಯಂ ಆಗಿ ಬದಲಾಯಿಸುವುದು ಅವರ ಆಸೆಯಾಗಿತ್ತು, ಈ ಮೂಲಕ ಅವರ ಪೂರ್ವಜರ ನೆನಪು ಹಾಗೇ ಇಟ್ಟುಕೊಳ್ಳುವ ಉದ್ದೇಶ ಅವರದ್ದಾಗಿತ್ತು. ಇದಕ್ಕೆ ಪಾಕಿಸ್ತಾನ ಕೂಡಾ ಅನುಮತಿ ನಿಡಿತ್ತು. ಆದರೆ ಇದಕ್ಕೂ ಮೊದಲೇ ದಿಲೀಪ್ ಕುಮಾರ್ ಕಾಲವಾಗಿದ್ದಾರೆ.

2018ರಲ್ಲಿ ಪಾಕಿಸ್ತಾನ ಸರ್ಕಾರ ದಿಲೀಪ್ ಕುಮಾರ್ ಅವರ ಪೂರ್ವಜರ ಮನೆಯನ್ನು ರಾಷ್ಟ್ರೀಯ ಪರಂಪರೆ ಕಟ್ಟಡವೆಂದು ಘೋಷಿಸಿತ್ತು. ಈ ಬಂಗಲೆಗೆ ಔಪಚಾರಿಕ ರಕ್ಷಣೆ ನೀಡುವ ಪ್ರಕ್ರಿಯೆ ನಡೆಯುತ್ತಿತ್ತು. ಆದರೀಗ ಅದಕ್ಕೂ ಮೊದಲು ದಿಲೀಪ್ ಕುಮಾರ್ ಜಗತ್ತಿಗೆ ವಿದಾಯ ಹೇಳಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಸರ್ಕಾರವು ದಿಲೀಪ್ ಕುಮಾರ್‌ರವರ ಪೂರ್ವಜರ ಬಂಗಲೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಮುಂದಾಗಿತ್ತು. ಇದರ ಈಗಿನ ಮಾಲೀಕರಿಗೆ ಈ ಕೆಲಸಕ್ಕಾಗಿ ಮೇ 18 ರವರೆಗೆ ಸಮಯ ನೀಡಲಾಗಿತ್ತು. 1947 ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ಮೊದಲು, ದಿಲೀಪ್ ಕುಮಾರ್ ತಮ್ಮ ಹೆಚ್ಚಿನ ಸಮಯವನ್ನು ಈ ಭವನದಲ್ಲಿ ಕಳೆದಿದ್ದರೆಂಬುವುದು ಉಲ್ಲೇಖನೀಯ.
Tap to resize

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಸರ್ಕಾರವು ದಿಲೀಪ್ ಕುಮಾರ್ ಅವರ ಪೂರ್ವಜರ ಮನೆಯನ್ನು 80 ಲಕ್ಷ ರೂ.ಗೆ ಖರೀದಿಸಿ ಮ್ಯೂಸಿಯಂ ಆಗಿ ಪರಿವರ್ತಿಸಲು ನಿರ್ಧರಿಸಿದೆ. ಈ ಮೂಲಕ, ಪೇಶಾವರ್ ಬಾಲಿವುಡ್‌ಗೆ ಏನು ಕೊಡುಗೆ ನಿಡಿದೆ ಎಂಬುವುದನ್ನು ಜಗತ್ತಿಗೆ ತೋರಿಸುವ ಯೋಜನೆ ಪಾಕಿಸ್ತಾನದ್ದಾಗಿತ್ತು.
ದಿಲೀಪ್ ಕುಮಾರ್ ಅವರ ಭವನದ ಪಕ್ಕದಲ್ಲಿ ರಾಜ್ ಕಪೂರ್ ಅವರ ಪೂರ್ವಜರ ಬಂಗಲೆಯೂ ಇದೆ. ಸರ್ಕಾರ ಇದನ್ನು ಮಾರುಕಟ್ಟೆ ದರದಲ್ಲಿ ಅಂದರೆ ಸುಮಾರು 3.50 ಕೋಟಿ ರೂ.ಗೆ ಖರೀದಿಸಬೇಕು ಎಂದು ದಿಲೀಪ್ ಕುಮಾರ್ ಅವರ ಬಂಗಲೆ ಮಾಲೀಕ ಗುಲ್ ರೆಹಮಾನ್ ಮೊಹಮ್ಮದ್ ಹೇಳಿದ್ದಾರೆ. ಅದೇ ವೇಳೆ, ರಾಜ್ ಕಪೂರ್ ಅವರ ಭವನದ ಮಾಲೀಕ ಅಲಿ ಖಾದಿರ್ ಈ ಮಹಲುಗಾಗಿ 20 ಕೋಟಿ ಬೇಡಿಕೆ ಇಟ್ಟಿದ್ದರು.
ದಿಲೀಪ್ ಕುಮಾರ್ ಅವರ ಪೂರ್ವಜರ ಬಂಗಲೆ ಮತ್ತು ಕಪೂರ್ ಬಂಗಲೆ ಅಕ್ಕಪಕ್ಕದಲ್ಲಿದೆ. ಈ ಎರಡೂ ಕಟ್ಟಡಗಳು ಸುಮಾರು 100 ವರ್ಷಗಳಷ್ಟು ಹಳೆಯವು. ಈ ಕಟ್ಟಡಗಳ ಮಾಲೀಕರು ಅವುಗಳನ್ನು ಹಲವಾರು ಬಾರಿ ಕೆಡವಲು ಮತ್ತು ಇಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪ್ರಯತ್ನಿಸಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಇದಕ್ಕೆ ಅನುಮತಿ ನೀಡಿಲ್ಲ.
ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ಅವರ ಪೂರ್ವಜರ ಮನೆ ಇರುವ ಪಾಕಿಸ್ತಾನದ ಇದೇ ಪ್ರದೇಶದ ಜೊತೆ ಶಾರುಖ್ ಖಾನ್ ಅವರಿಗೆ ಆಳವಾದ ಸಂಬಂಧವಿದೆ ಎಂಬುವುದು ಉಲ್ಲೇಖನೀಯ. ಯಾಕೆಂದರೆ ಶಾರುಖ್ ಖಾನ್ ಅವರ ತಂದೆ ತಾಜ್ ಮುಹಮ್ಮದ್ ಖಾನ್ ಜನಿಸಿದ್ದು ಇಲ್ಲಿನ ಶಹವಾಲಿ ಕಟಾಲ್‌ನಲ್ಲಿ.
ಶಾರುಖ್ ಖಾನ್ ಅವರ ತಂದೆ ತಾಜ್ ಮುಹಮ್ಮದ್ ಖಾನ್ ವೃತ್ತಿಯಲ್ಲಿ ವಕೀಲ ಮತ್ತು ಕಾರ್ಯಕರ್ತರಾಗಿದ್ದರು. 1947 ರ ವಿಭಜನೆಯ ನಂತರ, ಶಾರುಖ್ ಅವರ ತಂದೆ ತಮ್ಮ ಇಡೀ ಕುಟುಂಬದೊಂದಿಗೆ ಭಾರತಕ್ಕೆ ಬಂದಿದ್ದರು.

Latest Videos

click me!