ದೇವರು ಎಲ್ಲ ಕೊಟ್ಟರೂ ಏನಾದರೊಂದು ಕೊರಗು ಇಟ್ಟೇ ಇಟ್ಟಿರ್ತಾನೆ. ಇದಕ್ಕೆ ಬಾಲಿವುಡ್ ಬಾದ್ ಶಾ ಕೂಡಾ ಹೊರತಲ್ಲ. ಶಾರೂಖ್ ಖಾನ್‌ಗೆ ಎಲ್ಲವೂ ಇದ್ದರೂ ಅಕ್ಕನ ವಿಚಾರವಾಗಿ ದುಃಖವೊಂದು ಸದಾ ಉಳಿದಿದೆ.
65 ವರ್ಷ ವಯಸ್ಸಿನ ಶೆಹನಾಜ್ ಲಾಲಾರುಖ್ ಖಾನ್, ತನ್ನ ಸಹೋದರನ ಮನೆಯಲ್ಲೇ ಇರುತ್ತಾರೆ. ಆದರೆ, ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇವರನ್ನು ಶಾರೂಖ್ ಹಾಗೂ ಗೌರಿ ಖಾನ್ ನೋಡಿಕೊಳ್ಳುತ್ತಾರೆ.
80ರ ದಶಕದಲ್ಲೇ ಎಂಎ ಎಲ್‌ಎಲ್‌ಬಿ ಮಾಡಿರುವ ಶಹನಾಜ್, ಎಲ್ಲರಂತೆ ತಂದೆತಾಯಿಗೆ ಮುದ್ದಿನ ಮಗಳಾಗಿ, ತಮ್ಮನಿಗೆ ಪ್ರೀತಿಯ ಅಕ್ಕನೀಗಿ ಲವಲವಿಕೆಯಿಂದಲೇ ಇದ್ದರು.
ಆದರೆ, 1981 ರಲ್ಲಿ ತನ್ನ ತಂದೆಯ ಮರಣದ ನಂತರ ಖಿನ್ನತೆಗೆ ಒಳಗಾಗಿದ್ದರು. ಆಕೆಯ ತಂದೆ ಕ್ಯಾನ್ಸರ್‌ನಿಂದ ನಿಧನರಾದಾಗ ಅವರು ನಗರದಿಂದ ಹೊರಗಿದ್ದರು. ಅಪ್ಪನ ಶವ ನೋಡಿದ ಕ್ಷಣವೇ ಪ್ರಜ್ಞೆ ತಪ್ಪಿ ಬಿದ್ದರು. ಈ ದುರಂತ ಘಟನೆಯ ನಂತರ, ಅವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು.
ಒಮ್ಮೆ ಸಂದರ್ಶನವೊಂದರಲ್ಲಿ, SRK ತಮ್ಮ ತಂದೆಯ ಮರಣದ ನಂತರ ಎರಡು ವರ್ಷಗಳ ಕಾಲ ತನ್ನ ಸಹೋದರಿ ಖಿನ್ನತೆಯೊಂದಿಗೆ ಹೋರಾಡಿದರು ಎಂದು ಬಹಿರಂಗಪಡಿಸಿದ್ದರು. ಆ ಎರಡು ವರ್ಷಗಳ ಕಾಲ ಯಾರೊಂದಿಗೂ ಮಾತಾಡದೆ, ಅಳದೆ, ನಗದೆ ಕಳೆದಿದ್ದರಂತೆ ಶಹನಾಜ್.
'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಮಯದಲ್ಲಿ, ಅಕ್ಕನನ್ನು ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದಿದ್ದಾಗಿ ಶಾರೂಖ್ ಹೇಳಿದ್ದಾರೆ. ಆ ವಿದೇಶಿ ಚಿಕಿತ್ಸೆ ಇಲ್ಲದೆ ಹೋಗಿದ್ದರೆ ಅಕ್ಕನನ್ನು ಎಂದಿಗೋ ಕಳೆದುಕೊಳ್ಳಬೇಕಾಗಿತ್ತು ಎಂದು ನಟ ಹೇಳಿದ್ದರು.
ಜವಾಬ್ದಾರಿಯುತ ಸಹೋದರನಾಗಿ, ಶಾರುಖ್ ಖಾನ್ ಅವರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಮತ್ತು ಈಗ ಅವರು ಶಾರೂಖ್ ಜೊತೆ 'ಮನ್ನತ್'ನಲ್ಲಿಯೇ ಇರುತ್ತಾರೆ. ಉದ್ದೇಶಪೂರ್ವಕವಾಗಿ ಮಾಧ್ಯಮದಿಂದ ದೂರವಿರಲು ಆಯ್ಕೆ ಮಾಡಿಕೊಂಡಿದ್ದಾರೆ, ಆದ್ದರಿಂದ ನೀವು ಯಾವುದೇ ಪಾರ್ಟಿಗಳಲ್ಲಿ ಅವರನ್ನು ನೋಡುವುದಿಲ್ಲ.
'ಅವಳು ಹೆಚ್ಚು ಅರ್ಹತೆ ಹೊಂದಿದ್ದಳು, ಆದರೆ ವಾಸ್ತವವನ್ನು ಎದುರಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ಈ ನಿರ್ಲಿಪ್ತತೆ, ಸುಳ್ಳು ಧೈರ್ಯವನ್ನು ಬೆಳೆಸಿಕೊಂಡಿದ್ದೇನೆ' ಎಂದು ಶಾರೂಖ್ ತಮ್ಮ ಅಕ್ಕನ ಬಗ್ಗೆ ಖೇದದಿಂದ ಹೇಳುತ್ತಾರೆ.
ಪುಟ್ಟ ಅಕ್ಕನ ಮಡಿಲಲ್ಲಿ ಮಲಗಿರುವ ಈ ಶಾರೂಖ್ ಫೋಟೋ ನೋಡಿ. ಎಲ್ಲವೂ ಚೆನ್ನಾಗಿದ್ದಿದ್ದರೆ ಶಹನಾಜ್ ಬದುಕೇ ಬೇರೆಯಾಗಿರುತ್ತಿತ್ತು.
ಬುದ್ಧಿವಂತಿಕೆ, ಶಿಕ್ಷಣ, ಶ್ರೀಮಂತಿಕೆ ಎಲ್ಲವೂ ಇದ್ದರೂ ತಂದೆತಾಯಿ ಕಳೆದುಕೊಂಡ ಆಘಾತ ಬರಸಿಡಿಲಿನಂತೆರಗಿ ಶಹನಾಜ್ ಬಾಳನ್ನೇ ತಲೆಕೆಳಗಾಗಿಸಿತು.