ಚಿಲ್ಲರೆಗಾಗಿ ಗಾರ್ಮೆಂಟ್ಸ್ ಕೆಲಸ ಮಾಡಿದವ ಇಂದು ಹಿಟ್ ಸಿನಿಮಾಗಳ ಸೂಪರ್ ಸ್ಟಾರ್!

First Published Jul 30, 2024, 9:30 PM IST

ಸಿನಿಮಾ ಇಂಡಷ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸೂರ್ಯ ಒಬ್ಬರಾಗಿರುವ ನಟ ಸೂರ್ಯ, ನಟರಾಗಿ ತಮ್ಮ ಕರಿಯರ್ ಆರಂಭಿಸೋ ಮುನ್ನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. 
 

ದಕ್ಷಿಣದ ಸ್ಟಾರ್ ನಟ ಸೂರ್ಯ (Surya Sivakumar) ಅವರ ಖ್ಯಾತಿ ಮತ್ತು ಅಭಿಮಾನಿ ಬಳಗವು ದಕ್ಷಿಣ ಭಾರತದ ಗಡಿಯನ್ನೂ ಮೀರಿದೆ. ಸೂರ್ಯ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿ ಎದ್ದು ನಿಂತಿದ್ದಾರೆ, ಮತ್ತು ತಮ್ಮ ಅಸಾಧಾರಣ ಅಭಿನಯ ಮತ್ತು ದಶಕಗಳಿಂದ ಸಿನಿಮಾದಲ್ಲಿ ಮಿಂಚುವ ಮೂಲಕ ದೇಶಾದ್ಯಂತ ವ್ಯಾಪಕ ಖ್ಯಾತಿ ಗಳಿಸಿದ್ದಾರೆ. ಸೂರ್ಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. 

ಸೂರ್ಯ ಅವರ ಮೂಲ ಹೆಸರು ಸರವಣನ್ ಶಿವಕುಮಾರ್ (Saravanan Sivakumar). ಸರವಣನ್ ಎಂಬ ಹೆಸರಿನ ಇನ್ನೊಬ್ಬ ನಟ ಇದ್ದಿರೋದ್ರಿಂದ ಕನ್ ಫ್ಯೂಷನ್ ಬೇಡವೆಂದು ಅವರು ಬಳಸಿದ ರಂಗನಾಮ ಸೂರ್ಯ. ನಟನಲ್ಲದೆ, ಸೂರ್ಯ ನಿರ್ಮಾಪಕ ಮತ್ತು ದೂರದರ್ಶನ ನಿರೂಪಕರೂ ಆಗಿ ಗುರುತಿಸಿಕೊಂಡವರು. 
 

Latest Videos


ಸೂರ್ಯ ತಮಿಳಿನ ಖ್ಯಾತ ಹಿರಿಯ ನಟ ಶಿವಕುಮಾರ್  (Sivakumar) ಮತ್ತು ಅವರ ಪತ್ನಿ ಲಕ್ಷ್ಮಿ ಅವರ ಪುತ್ರ. ಅವರ ಸಹೋದರ ಕಾರ್ತಿ (Karthee) ಕೂಡ ದಕ್ಷಿಣ ಭಾರತದ ಚಲನಚಿತ್ರ ನಟ ಅನ್ನೋದು ನಿಮಗೆ ಗೊತ್ತೇ ಇದೆ. ಇವರಿಬ್ಬರ ಸಹೋದರಿ ಬೃಂದಾ ಶಿವಕುಮಾರ್ ಗಾಯಕಿ ಮತ್ತು ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದು, ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಚೆನ್ನೈನ ಲೊಯೊಲಾ ಕಾಲೇಜಿನಿಂದ B.COM ಪದವಿ ಪಡೆದ ನಂತರ ಅವರು ಚಲನಚಿತ್ರೋದ್ಯಮ ಪ್ರವೇಶಿಸಿದರು. ಆದರೆ ಸೂರ್ಯರಿಗೆ ಮೊದಲಿನಿಂದ ನಿರ್ದೇಶಕರಾಗೋ ಆಸಕ್ತಿ ಇತ್ತಂತೆ. ತಂದೆಯವರು ಅಂದಿನ ಖ್ಯಾತ ನಟರಾಗಿದ್ರೂ ಸೂರ್ಯ ನೇರವಾಗಿ ಸಿನಿಮಾಕ್ಕೆ ಇಳಿಯಲಿಲ್ಲ. ಇವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ (manager in garment factory) ಕೆಲಸ ಮಾಡೋ ಮೂಲಕ. 
 

ಪದವಿ ಪಡೆದ ನಂತರ ಮತ್ತು ನಟನೆಯನ್ನು ಪ್ರಾರಂಭಿಸುವ ಮೊದಲು ಸೂರ್ಯ ತಾನೊಬ್ಬ ಒಳ್ಳೆಯ ಮಗನಾಗಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎನ್ನುವ ಜವಾಬ್ಧಾರಿ ಬಂದಿತ್ತಂತೆ. ಹಾಗಾಗಿ ಸೂರ್ಯ ತಮ್ಮ ತಂದೆಯವರ ಹೆಸರನ್ನ ಬಳಸಿಕೊಳ್ಳದೇ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಆರು ತಿಂಗಳು ಕೆಲಸ ಮಾಡಿದ್ದರಂತೆ. ಆವಾಗ ಸಿಗುತ್ತಿದ್ದ ಚಿಲ್ಲರೆ ಹಣ ಮತ್ತು ನೋಟು ತುಂಬಿದ ಸ್ಯಾಲರಿ ಕವರ್ ನೋಡಿಯೇ ಖುಷಿ ಪಟ್ಟಿದ್ದರಂತೆ ಸೂರ್ಯ. ತನ್ನ ತಾಯಿಗೆ ತನ್ನ ಮೊದಲ ಸಂಬಳದಲ್ಲಿ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರಂತೆ. ಮತ್ತೆ ನಟನಾಗಿ ಯಶಸ್ವಿ ಆಗಿದ್ದು ಮಾತ್ರ ಇತಿಹಾಸ.
 

ಸೂರ್ಯ 1997ರಲ್ಲಿ ನೆರುಕ್ಕು ನೆರ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು 2001 ರಲ್ಲಿ ಬಿಡುಗಡೆಯಾದ ನಂದಾ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ಆದರೆ ಅವರಿಗೆ ಕಮರ್ಷಿಯಲ್ ಸಕ್ಸಸ್ ಕೊಟ್ಟದ್ದು 2003 ರಲ್ಲಿ ಬಿಡುಗಡೆಯಾದ ಕಾಖಾ ಕಾಖಾ ಸಿನಿಮಾ. ಇದಲ್ಲದೇ ಘಜಿನಿ, ಪಿತಾಮಗನ್, ಸಿಂಗಂ ಸೀಕ್ವಲ್ (Singham) ಸಿನಿಮಾ ಇವರಿಗೆ ಭಾರಿ ಜನಪ್ರಿಯತೆಯನ್ನು ತಂದು ಕೊಟ್ಟ ಸಿನಿಮಾಗಳು. 
 

ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ರಕ್ತ ಚರಿತ್ರ 2' ಚಿತ್ರದ ಮೂಲಕ ಸೂರ್ಯ ಹಿಂದಿ ಮತ್ತು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ವಿಕ್ರಮ್ ಕುಮಾರ್ ಅವರ ಅದ್ಭುತ ವೈಜ್ಞಾನಿಕ ಕಾದಂಬರಿ ಚಿತ್ರ 24 ರಲ್ಲಿ, ಅವರು ಮೊದಲ ಬಾರಿಗೆ ಮೂರು ಪಾತ್ರಗಳಲ್ಲಿ ನಟಿಸಿದರು. ಸೂರರೈ ಪೊಟ್ರು ಚಿತ್ರಕ್ಕಾಗಿ ಸೂರ್ಯ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದರು. 
 

ಸೂರ್ಯ 2006 ರಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ಜ್ಯೋತಿಕಾ ಅವರನ್ನು ವಿವಾಹವಾದರು. ಸೂರ್ಯ ಮತ್ತು ಜ್ಯೋತಿಕಾ (Jyothika) ಮೊದಲ ಬಾರಿಗೆ 1999 ರ ಪೂವೆಲ್ಲಂ ಕೆಟ್ಟುಪ್ಪರ್ ಚಿತ್ರದಲ್ಲಿ  ಜೊತೆಯಾಗಿ ನಟಿಸಿದ್ದರು. ಇವರಿಬ್ಬರು ಜೊತೆಯಾಗಿ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 

ಸೂರ್ಯ ಅವರು ಅಗರಂ ಫೌಂಡೇಶನ್ ಸ್ಥಾಪಕರು, ಇದು ದೀನದಲಿತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತದೆ. ಇನ್ನು ಸೂರ್ಯ ತಮ್ಮ ನಿರ್ಮಾಣ ಕಂಪನಿಗೆ 2ಡಿ ಎಂಟರ್ಟೈನ್ಮೆಂಟ್ ಎಂದು ತಮ್ಮ ಮಕ್ಕಳ ಮೊದಲ ಅಕ್ಷರಗಳಾದ ದೇವ್ ಮತ್ತು ದಿಯಾ (Dev and Diya) ಅವರ ಹೆಸರನ್ನು ಇಟ್ಟರು. ಇದನ್ನು ಸೂರ್ಯ, ಅವರ ಸಹೋದರ ಕಾರ್ತಿ, ಪತ್ನಿ ಜ್ಯೋತಿಕಾ ಮತ್ತು ರಾಜಶೇಖರ್ ಪಂಧನ್ ಜಂಟಿಯಾಗಿ ನಿರ್ವಹಿಸುತ್ತಿದ್ದಾರೆ.
 

click me!