ಅಲ್ಲು ಅರ್ಜುನ್ ವರ್ಸಸ್ ತೆಲಂಗಾಣ ಸರ್ಕಾರ ಅನ್ನೋ ಹಾಗೆ ಪರಿಸ್ಥಿತಿ ಆಗಿದೆ. ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ಮೇಲೆ ತೀವ್ರ ಟೀಕೆ ಮಾಡಿದ್ದಾರೆ. ಅನುಮತಿ ಇಲ್ಲದೆ ಸಂಧ್ಯಾ ಥಿಯೇಟರ್ ಗೆ ಹೋದ ಅಲ್ಲು ಅರ್ಜುನ್, ಓರ್ವ ಮಹಿಳೆ ಸಾವಿಗೆ ಕಾರಣ ಅಂತ ಗರಂ ಆಗಿದ್ದಾರೆ. ಬಂಧಿತರಾದ ಅಲ್ಲು ಅರ್ಜುನ್ ಜಾಮೀನಿನ ಮೇಲೆ ಬಿಡುಗಡೆಯಾದಾಗ ಚಿತ್ರರಂಗದ ಗಣ್ಯರು ಅವರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ರು. ಇದರ ಬಗ್ಗೆಯೂ ಸಿಎಂ ರೇವಂತ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲು ಅರ್ಜುನ್ ಮನೆ ಮೇಲೆ ದಾಳಿ ಘಟನೆ ಸಂಚಲನ ಮೂಡಿಸಿದೆ. ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿ (JAC) ಸದಸ್ಯರು ಈ ದಾಳಿ ನಡೆಸಿದ್ದಾರೆ. ಅಲ್ಲು ಅರ್ಜುನ್ ಮನೆಯ ಆವರಣಕ್ಕೆ ನುಗ್ಗಿದ ಸದಸ್ಯರು ಧ್ವಂಸ ಮಾಡಿದ್ದಾರೆ. ಈ ದಾಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಲ್ಲು ಅರವಿಂದ್ ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾವು ಸಂಯಮದಿಂದ ಇದ್ದೇವೆ. ಕಾನೂನು ಪ್ರಕಾರ ಮುಂದುವರಿಯುತ್ತೇವೆ ಅಂತ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಇನ್ಮುಂದೆ ತೆಲಂಗಾಣದಲ್ಲಿ ಬೆನಿಫಿಟ್ ಶೋಗಳಿಗೆ, ಟಿಕೆಟ್ ದರ ಏರಿಕೆಗೆ ಅವಕಾಶ ಇಲ್ಲ ಅಂತ ಘೋಷಿಸುವ ಮೂಲಕ ಟಾಲಿವುಡ್ ಜೊತೆ ಸಿಎಂ ರೇವಂತ್ ರೆಡ್ಡಿ ಸಂದೇಶ ರವಾನಿಸಿದ್ದಾರೆ. ರೇವಂತ್ ರೆಡ್ಡಿ ಟೀಕೆ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಸಿಎಂ ರೇವಂತ್ ರೆಡ್ಡಿ ಹೆಸರು ಹೇಳದೆ, ತಿರುಗೇಟು ಕೊಟ್ಟಿದ್ದಾರೆ. ಬೇಕಂತಲೇ ಮಾಡಿದ್ದಲ್ಲ. ಇದು ಅನಿರೀಕ್ಷಿತ ದುರ್ಘಟನೆ. ಸುಳ್ಳು ಪ್ರಚಾರದಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರ್ತಿದ್ದಾರೆ. ಶ್ರೀತೇಜ್ ಆರೋಗ್ಯ, ಭವಿಷ್ಯದ ಬಗ್ಗೆ ನನಗೆ ಪೂರ್ಣ ಜವಾಬ್ದಾರಿ ಇದೆ ಅಂತ ಹೇಳಿದ್ದಾರೆ.
ಈಗ ಅಲ್ಲು ಅರ್ಜುನ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ಕಾಂಗ್ರೆಸ್ MLC ಮಲ್ಲಣ್ಣ ದೂರು ನೀಡಿದ್ದಾರೆ. ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಪೊಲೀಸ್ ಅಧಿಕಾರಿ ಸ್ನಾನ ಮಾಡ್ತಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿ ಮೂತ್ರ ವಿಸರ್ಜನೆ ಮಾಡ್ತಾನೆ. ಇದು ಪೊಲೀಸ್ ವ್ಯವಸ್ಥೆಯನ್ನ ಅವಮಾನಿಸಿದಂತೆ. ಪುಷ್ಪ 2 ಹೀರೋ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್, ನಿರ್ಮಾಪಕರ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಮೇಡಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ಸಂಧಯಾ ಥಿಯೇಟರ್ ಘಟನೆ ಆದಾಗಿನಿಂದ ಮಲ್ಲಣ್ಣ, ಹೀರೋ ಅಲ್ಲು ಅರ್ಜುನ್ ಮೇಲೆ ಗರಂ ಆಗಿದ್ದಾರೆ. ಅಲ್ಲು ಅರ್ಜುನ್ ಪ್ರಚಾರದ ಯಾವದೋ ತಪ್ಪಿನಿಂದ ಒಬ್ಬರ ಪ್ರಾಣ ಹೋಯ್ತು ಅಂತ ಆರೋಪ ಮಾಡ್ತಿದ್ದಾರೆ. ಈ ಸಂಧ್ಯಾ ಥಿಯೇಟರ್ ವಿವಾದ ದೊಡ್ಡದಾಗ್ತಾನೆ ಇದೆ. ಅಲ್ಲು ಅರ್ಜುನ್ ಗೆ ಸಿಕ್ಕ ರಾಷ್ಟ್ರ ಪ್ರಶಸ್ತಿಯನ್ನ ವಾಪಸ್ ಪಡೆಯಬೇಕು ಅಂತ ಕೆಲವು ಕಾಂಗ್ರೆಸ್ ನಾಯಕರು ಒತ್ತಾಯ ಮಾಡ್ತಿದ್ದಾರೆ.