ಈ ನಟನ ಯಶಸ್ಸಿನ ಗ್ರಾಫ್ ಅದ್ಬುತವಾಗಿದೆ. ಒಂಬತ್ತು ವರ್ಷಗಳ ಅವಧಿಯಲ್ಲಿ ಹಿಟ್ ಮೇಲೆ ಹಿಟ್ ಕೊಟ್ಟಿದ್ದಾರೆ. ಈ ಸಮಯದಲ್ಲಿ, ಅವರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ 2500 ಕೋಟಿ ರೂ. ಸಂಗ್ರಹಿಸಿವೆ.
ಇದೆಲ್ಲವೂ ಅತ್ಯಂತ ಯಶಸ್ವಿ ವೃತ್ತಿಜೀವನವನ್ನು ಸೂಚಿಸುತ್ತದೆ, ನಿರ್ಮಾಪಕರು ಚಲನಚಿತ್ರಗಳಿಗಾಗಿ ಅವರ ಮನೆಯ ಹೊರಗೆ ಸಾಲುಗಟ್ಟಿ ನಿಲ್ಲುತ್ತಾರೆ ಎನಿಸುತ್ತದೆ. ಆದರೆ, ಅವರ ಮುಂದಿನ ಚಿತ್ರಕ್ಕಾಗಿ ನಿರ್ಮಾಪಕರನ್ನು ಹುಡುಕಲು ಆಗುತ್ತಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಹೌದು, ಇದು ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಕತೆ. ದಳಪತಿ ವಿಜಯ್ ರಜನಿಕಾಂತ್‌ರಂತೆ ತುಂಬಾ ಹೆಸರು ಮಾಡುತ್ತಾ ಸಾಗಿದ್ದಾರೆ. ಅವರ ಅಭಿಮಾನಿಗಳ ದೊಡ್ಡ ಸೇನೆಯೇ ಇದೆ.
2015ರಲ್ಲಿ ಅವರ ಪುಲಿ ಚಿತ್ರ ಕಳಪೆ ಪ್ರದರ್ಶನ ನೀಡಿತ್ತು. ಆದರೆ, ಅದರ ಬಳಿಕ ಕೈ ಇಟ್ಟಿದ್ದೆಲ್ಲ ಚಿನ್ನ. ನಂತರದಲ್ಲಿ ಅವರು ಅಭಿನಯಿಸಿದ ಥೆರಿ, ಬೈರವ, ಮೆರ್ಸಲ್, ಸರ್ಕಾರ್, ಬಿಗಿಲ್, ಮಾಸ್ಟರ್, ಬೀಸ್ಟ್, ವರಿಸು, ಮತ್ತು ಲಿಯೋ ಬಿಡುಗಡೆಯನ್ನು ಕಂಡಿದೆ.
ಚಿತ್ರಗಳು ಒಟ್ಟಾರೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 2500 ಕೋಟಿ ಗಳಿಸಿವೆ. 600 ಕೋಟಿ ರೂಪಾಯಿಗಳ ಜಾಗತಿಕ ವಹಿವಾಟು ಹೊಂದಿರುವ ಲಿಯೋ, ಸಾರ್ವಕಾಲಿಕ ಅತಿ ಹೆಚ್ಚು ಗಳಿಸಿದ ತಮಿಳು ಚಲನಚಿತ್ರಗಳಲ್ಲಿ ಒಂದಾಗಿದೆ.
ವಿಜಯ್ ಪ್ರಸ್ತುತ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಬಿಡುಗಡೆಗೆ ಕಾಯುತ್ತಿದ್ದಾರೆ, ಅವರು ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ ಇದಾಗಿದೆ.
ಆದರೆ ಇದರ ನಂತರ ವಿಜಯ್ ತಮ್ಮ 69ನೇ ಮತ್ತು ಅಂತಿಮ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾತ್ಕಾಲಿಕವಾಗಿ ಥಲಪತಿ 69 ಎಂದು ಕರೆಯಲ್ಪಡುವ ಆ ಚಿತ್ರದ ನಂತರ ಚಲನಚಿತ್ರಗಳನ್ನು ತ್ಯಜಿಸಿ ರಾಜಕೀಯಕ್ಕೆ ಸೇರುವ ನಿರ್ಧಾರವನ್ನು ನಟ ಘೋಷಿಸಿದ್ದಾರೆ.
ಆದರೆ ವರದಿಗಳ ಪ್ರಕಾರ, ನಟನಿಗೆ ಚಿತ್ರಕ್ಕಾಗಿ ನಿರ್ಮಾಪಕರು ಸಿಗುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ವಿಜಯ್ ತಮ್ಮ ಮುಂದಿನ ಚಿತ್ರಕ್ಕೆ ಸಂಪೂರ್ಣ ಸೃಜನಾತ್ಮಕ ನಿಯಂತ್ರಣವನ್ನು ಮತ್ತು 250 ಕೋಟಿ ರೂಪಾಯಿಗಳ ಶುಲ್ಕವನ್ನು ಕೇಳಿರುವುದು.
ನಟನ ತಂಡವು ಇದೀಗ ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಆದರೆ ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ವರದಿಗಳು ಹೇಳುತ್ತವೆ.
ವಿಜಯ್ ರಾಜಕೀಯ ಪ್ರವೇಶ
ಫೆಬ್ರವರಿ 2024ರಲ್ಲಿ, ವಿಜಯ್ ಅವರು ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ರಚನೆಯನ್ನು ಘೋಷಿಸಿದರು. ಏಪ್ರಿಲ್ ಮತ್ತು ಮೇ 2024 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷವು ಸ್ಪರ್ಧಿಸಲಿಲ್ಲ.
ಆದರೆ 2026 ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ಸಜ್ಜಾಗುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ. ವಿಜಯ್ ಅವರು 2025ರ ವೇಳೆಗೆ ತಮ್ಮ ಚಲನಚಿತ್ರ ಕಮಿಟ್‌ಮೆಂಟ್‌ಗಳನ್ನು ಮುಗಿಸಿ ನಂತರ ರಾಜಕೀಯ ಪ್ರವೇಶಿಸಲು ಯೋಜಿಸಿದ್ದಾರೆ.