ಬಹಳಷ್ಟು ಜನ ಹೆದರಿಸಿದರೂ, ತಮ್ಮದೇ ಆದ ರೀತಿಯಲ್ಲಿ ಆ ಮನೆ ಬಗ್ಗೆ ಕತೆಗಳನ್ನು ಕಟ್ಟಿದರೂ ನಟಿ ಅದಾ ಶರ್ಮಾ ಅದ್ಯಾವುದಕ್ಕೂ ಕಿವಿಗೊಡದೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಇದ್ದ ಮನೆಗೆ ಹೋಗಿದ್ದಾರೆ.
ಮೊದಲು ನಟಿ ಈ ಮನೆ ಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಅದಾ ಶರ್ಮಾ ಈ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದು, ತಿಂಗಳಿಗೆ ಬರೋಬ್ಬರಿ 4.5 ಲಕ್ಷ ರೂ. ಬಾಡಿಗೆ ಕಟ್ಟಲಿದ್ದಾರೆ.
ಮುಂಬೈನಲ್ಲಿರುವ ಈ ಎರಡು ಮಹಡಿಯ ಅಪಾರ್ಟ್‌ಮೆಂಟ್, 2020 ಜೂನ್‌ನಲ್ಲಿ ಸುಶಾಂತ್ ಸಿಂಗ್ ಸಾವಿನ ಬಳಿಕ, ಕಳೆದ ನಾಲ್ಕು ವರ್ಷಗಳಿಂದ ಪಾಳು ಬಿದ್ದಿತ್ತು.
ನಟನ ಸಾವು ಆತ್ಮಹತ್ಯೆ, ಕೊಲೆ ಮುಂತಾದ ಊಹಾಪೋಹಗಳ ನಡುವೆ ಈ ಮನೆಗೆ ಬರಲು ಯಾರೂ ಧೈರ್ಯ ತೋರಿರಲಿಲ್ಲ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೋದವರ ಮನೆಯಲ್ಲಿ ನೆಗೆಟಿವ್ ವೈಬ್ಸ್ ಇರುತ್ತದೆ ಎಂದು ಹೆದರಿಸುತ್ತಿದ್ದರು.
ಆದರೆ ಕೇರಳ ಸ್ಟೋರಿ ನಟಿಯು ಇದ್ಯಾವುದಕ್ಕೂ ಹೆದರದೇ ಅದೇ ಮನೆ ಬೇಕೆಂದು ಹೋಗಿ, ಈಗ ಅಲ್ಲಿ ಸಖತ್ 'ಪಾಸಿಟಿವ್ ವೈಬ್ಸ್' ಇದೆ ಎಂದು ಹೇಳಿದ್ದಾರೆ.
ಮುಂಬೈನ ಬಾಂದ್ರಾದ ಮೌಂಟ್ ಬ್ಲಾಂಕ್‌ನಲ್ಲಿರುವ ಅವರ ಅಪಾರ್ಟ್ಮೆಂಟ್‌ನಲ್ಲಿ ತಮಗೆ ಬೇಕಾದಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡಿರುವ ಅದಾ ಶರ್ಮಾ ತಮಗೆ ಈ ಮನೆ ಇಷ್ಟವಾಗಿದ್ದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ.
'ನಾನು ನನ್ನ ಜೀವನದುದ್ದಕ್ಕೂ ಪಾಲಿ ಹಿಲ್‌ನಲ್ಲಿ (ಬಾಂದ್ರಾ) ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ನಾನು ಅಲ್ಲಿಂದ ಹೊರನಡೆದಿರುವುದು ಇದೇ ಮೊದಲು. ನಾನು ವೈಬ್‌ಗಳಿಗೆ ತುಂಬಾ ಸಂವೇದನಾಶೀಲನಾಗಿದ್ದೇನೆ ಮತ್ತು ಈ ಸ್ಥಳ (ಸುಶಾಂತ್ ಸಿಂಗ್ ರಜಪೂತ್ ಅವರ ಅಪಾರ್ಟ್‌ಮೆಂಟ್) ನನಗೆ ಸಕಾರಾತ್ಮಕ ವೈಬ್ ನೀಡುತ್ತದೆ' ಎಂದಿದ್ದಾರೆ ಬಸ್ತಾರ್ ನಟಿ
'ಕೇರಳ ಮತ್ತು ಮುಂಬೈನಲ್ಲಿ ನಮ್ಮ ಮನೆಗಳು ಮರಗಳಿಂದ ಆವೃತವಾಗಿವೆ ಮತ್ತು ನಾವು ಪಕ್ಷಿಗಳು ಮತ್ತು ಅಳಿಲುಗಳಿಗೆ ಆಹಾರವನ್ನು ನೀಡುತ್ತಿದ್ದೆವು. ಹಾಗಾಗಿ, ಪಕ್ಷಿಗಳಿಗೆ ಆಹಾರಕ್ಕಾಗಿ ಒಂದು ನೋಟ ಮತ್ತು ಸಾಕಷ್ಟು ಸ್ಥಳಾವಕಾಶವಿರುವ ಮನೆಯನ್ನು ನಾನು ಬಯಸುತ್ತೇನೆ. ಇದು ಅಂಥದೇ ಮನೆಯಾಗಿದೆ' ಎಂದು ನಟಿ ಹೇಳಿದ್ದಾರೆ.
ಈ ಮನೆಗೆ ಬರುತ್ತೇನೆಂದಾಗ ಜನ ಹೆದರಿಸಿದರು. ಕೇರಳ ಸ್ಟೋರಿ ಮಾಡುತ್ತೇನೆಂದಾಗಲೂ ಹೆದರಿಸಿದರು. ಆದರೆ, ನಾನು ಯಾವಾಗಲೂ ನನ್ನ ಅಂತಃಪ್ರಜ್ಞೆಯನ್ನು ಅನುಸರಿಸುತ್ತೇನೆ ಎನ್ನುತ್ತಾರೆ ನಟಿ.
ಅದಾ ಈ ಮನೆಗೆ ಮೇಕ್ ಓವರ್ ಮಾಡಿದ್ದು, ಇಡೀ ಸ್ಥಳದ ಗೋಡೆಗಳಿಗೆ ಬಿಳಿ ಬಣ್ಣ ಬಳಿಸಿದ್ದಾರೆ. ಕೆಳಗಿನ ಮಹಡಿಯನ್ನು ಮಂದಿರವಾಗಿ ಪರಿವರ್ತಿಸಲಾಗಿದೆ, ಮೇಲಿನ ಮಹಡಿಯಲ್ಲಿ ಒಂದು ಕೋಣೆಯನ್ನು ಸಂಗೀತ ಕೊಠಡಿಯಾಗಿ ಮಾಡಲಾಗಿದೆ ಮತ್ತು ಇನ್ನೊಂದು ಡ್ಯಾನ್ಸ್ ಸ್ಟುಡಿಯೋ ಆಗಿ ಮಾರ್ಪಟ್ಟಿದೆ. ಟೆರೇಸ್ ಅನ್ನು ಉದ್ಯಾನವಾಗಿ ಪರಿವರ್ತಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.
'ಸುಶಾಂತ್ ತುಂಬಾ ಗೌರವ ಹೊಂದಿರುವ ನಟ. ಅವರಿಗೆ ಸಂಬಂಧಿಸಿದ್ದೆಲ್ಲವನ್ನೂ ಗೌರವಿಸಲು ನಾನು ಬಯಸುತ್ತೇನೆ, ಕ್ಯಾಶುಯಲ್ ಕಾಮೆಂಟ್ಗಳನ್ನು ಮಾಡುವ ಜನರನ್ನು ನಾನು ಪ್ರಶಂಸಿಸುವುದಿಲ್ಲ' ಎಂದು ನಟಿ ಈ ಹಿಂದೆ ಹೇಳಿದ್ದರು.