ಮಾಜಿ ಪ್ರೇಯಸಿ ಗುಂಗಲ್ಲೇ ಇಳಯರಾಜ ರಚಿಸಿದ ಹಾಡಂತೆ ಇದು!

First Published | Sep 16, 2024, 3:49 PM IST

ಇಳಯ ರಾಜ. ಭೂಮಿಗೇ ರಾಜನಂತಿರುವ ಖ್ಯಾತ ಸಂಗೀತ ಸಂಯೋಜಕ, ಗೀತ ರಚನೆಕಾರ ಇಳಯರಾಜ ಅವರ ಹಾಡುಗಳು ಎಂದೆಂದಿಗೂ ಅಮರ. ಜೊತೆ ಜೊತೆಯಲಿ, ಮಣಿರತ್ನಂ ನಿರ್ದೇಶಿಸಿದ ಪಲ್ಲವ ಅನುಪಲ್ಲಿವಿ ಚಿತ್ರದ ನಗುವ ನಯನದಂಥ ಹಾಡುಗಳು ಅದೆಷ್ಟು ಸಾರಿ ಕೇಳಿದರೂ ಮನಸ್ಸಿಗೆ ಮುದ ನೀಡುವಂಥದ್ದು. ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಚಿತ್ರಗೀತೆಗಳಿಗೆ ಜೀವ ತುಂಬಿದ ಇಳಯರಾಜ ಅವರ ಹಾಡುಗಳು ಹಿಟ್ ಆಗಿದ್ದು ಒಂದೆರಡಲ್ಲ. ಇಂಥ ಸಂಗೀತ ಮಾಂತ್ರಿಕ ತಮ್ಮ ಮಾಜಿ ಪ್ರೆಯಸಿಯನ್ನು ನೆನಪಲ್ಲಿಟ್ಟಿಕೊಂಡು ರಚಿಸಿದ ಹಾಡಂತೆ ಇದು!

ಸಂಗೀತ ಮಾಂತ್ರಿಕ ಇಳಯರಾಜಾ ಅವರ ಹಾಡುಗಳಿಗೆ ಫಿದಾ ಆಗದವರಿಲ್ಲ, ತಮಿಳಿನ ಸಂಗೀತ ಸಂಯೋಜಕರಾದರು ಅವರು ಕನ್ನಡದಲ್ಲೂ ಹಲವು ಸೂಪರ್ ಹಿಟ್‌ ಹಾಡುಗಳನ್ನು ನೀಡಿದ್ದಾರೆ. ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ, ಶಂಕರ್‌ನಾಗ್‌ ನಟನೆಯ ಗೀತಾ ಚಿತ್ರದ ಜೊತೆಯಲಿ ಜೊತೆ ಜೊತಿಯಲಿ ಈ ಎಲ್ಲಾ ಖ್ಯಾತ ಸಿನಿಮಾಗಳ ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿರುವುದರಿಂದ ಕನ್ನಡಿಗರಿಗೆ ಅವರು ನಮ್ಮವರೇ ಅನಿಸಿದ್ದಾರೆ. ಇಂತಹ  ಇಳಯರಾಜ ಅವರಿಗೂ ಒಂದು ಲವ್ ಸ್ಟೋರಿ ಇತ್ತು. ತಮ್ಮ ಮಾಜಿ ಪ್ರೇಯಸಿಗಾಗಿ ಅವರು ಹಾಡೊಂದನ್ನು ಬರೆದಿದ್ದರು ಎಂಬ ವಿಚಾರ ನಿಮಗೆ ಗೊತ್ತಾ?

ತಮಿಳಿನ ತಂಗರ್ ಬಚ್ಚನ್ ನಿರ್ದೇಶನದಲ್ಲಿ 2002 ರಲ್ಲಿ ಬಿಡುಗಡೆಯಾದ ಚಿತ್ರ ಅಲಗಿ. ಇದರಲ್ಲಿ ಪ್ರಶಾಂತ್, ದೇವಯಾನಿ, ನಂದಿತಾ ದಾಸ್ ಮುಂತಾದ ದೊಡ್ಡ ತಾರಾಬಳಗವೇ ಇತ್ತು. ಈ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಸಂಗೀತ ಮಾಂತ್ರಿಕ ಇಳಯರಾಜಾ ಅವರ ಸಂಗೀತ. ಇದರಲ್ಲಿನ 'ಪಾಟು ಸೊಲ್ಲಿ ಪಾಡ ಸೊಲ್ಲಿ', 'ಓಳಿಯಲೇ ತೆರಿಯುವಧು ದೇವತಯ', 'ಕುರುವಿ ಕೊಡಂಜ ಕೊಯ್ಯಾ ಪಳಂ' ಮುಂತಾದ ಹಾಡುಗಳು ದೊಡ್ಡ ಹಿಟ್ ಆದವು.

ಇದರಲ್ಲಿ ಇನ್ನೊಂದು ವಿಶೇಷ ಹಾಡಿದೆ. ಅದುವೇ 'ಉನ್ ಕುತ್ತಮಾ ಏನ್ ಕುತ್ತಮಾ' ಹಾಡು. ಈ ಹಾಡಿನ ಸನ್ನಿವೇಶ ಸಿನಿಮಾದಲ್ಲಿ ತುಂಬಾ ಭಾವುಕವಾಗಿರುತ್ತದೆ. ವೈದ್ಯನಾಗಿರುವ ಪ್ರಶಾಂತ್ ತನ್ನ ಮಾಜಿ ಪ್ರೇಯಸಿಯನ್ನು ಕಷ್ಟದ ಪರಿಸ್ಥಿತಿಯೊಂದರಲ್ಲಿ ಭೇಟಿಯಾಗುತ್ತಾನೆ. 'ಹೇಗೋ ಬದುಕಬೇಕಾದವಳು ಹೀಗೆ ರಸ್ತೆಯಲ್ಲಿ ನಿಂತಿದ್ದಾಳಲ್ಲ' ಎಂದು ನೋವಿನಿಂದ ಇರುವಾಗ ಈ ಹಾಡು ಪ್ರಾರಂಭವಾಗುತ್ತದೆ. ಈ ಹಾಡು ಭಾವುಕವಾಗಿರಲು ಮುಖ್ಯ ಕಾರಣ ಅದರ ಸಾಹಿತ್ಯ. ಈ ಹಾಡನ್ನು ಬರೆದವರು ಬೇರೆ ಯಾರೂ ಅಲ್ಲ, ಭಾರತದ ಖ್ಯಾತ ಸಂಗೀತ ಮಾಂತ್ರಿಕ ಇಳಯರಾಜಾ. ಈ ಹಾಡಿನಲ್ಲಿ ಒಂದು ಆಳವಾಗಿ ಅರ್ಥ ನೀಡುವ ಸಾಲೊಂದಿದೆ. 'ರಸ್ತೆಯಲ್ಲಿ ನುಡಿಸಿದರೂ ವೀಣೆಗೆ ಸಂಗೀತವಿದೆ, ಅದು ವ್ಯರ್ಥವಾಗುವುದಿಲ್ಲ ಕೇಳುವ ಹೃದಯವಿದೆ, ಮೃದುವಾಗಿ ಹಾಡುತ್ತದೆ ವೀಣೆಯೊಂದಿಗೆ' ಎಂಬ ಸಾಲು ಎಂಥವರ ಮನಸ್ಸನ್ನೂ ನಾಡುವುದರಲ್ಲಿ ಅನುಮಾನವೇ ಇಲ್ಲ. 

Latest Videos


ಇಳಯರಾಜಾ ಹೀಗೆ ಭಾವನಾತ್ಮಕವಾಗಿ ಬರೆದಿದ್ದಾರೆ ಎಂದರೆ ಅದಕ್ಕೆ ಅವರ ಮಾಜಿ ಪ್ರೇಯಸಿಯೂ ಒಂದು ಕಾರಣ ಎಂದು ಹೇಳಲಾಗುತ್ತದೆ. ಇಳಯರಾಜಾ ಗಾಯತ್ರಿ ಎಂಬುವವರನ್ನು ಬಹುವಾಗಿ ಪ್ರೀತಿಸುತ್ತಿದ್ದರಂತೆ. ಆದರಿದು ಒನ್ ವೇ ಲವ್. ವೀಣಾ ವಾದನದಲ್ಲಿ ನಿಷ್ಣಾತರಾಗಿದ್ದ ವೀಣಾ ಅವರನ್ನು ಇಳಯರಾಜಾ ತುಂಬಾ ಹಚ್ಚಿಕೊಂಡಿದ್ದರಂತೆ. ಆದರೆ ಸಂಗೀತ ಮಾಂತ್ರಿಕನ ಪ್ರೀತಿಯನ್ನು ಸ್ವೀಕರಿಸಲು ನಿರಾಕರಿಸಿದ ಗಾಯತ್ರಿ, ತಮ್ಮ ಸಮುದಾಯದ ವ್ಯಕ್ತಿಯೊಂದಿಗೆ ವಿವಾಹವಾಗಿ ಊರು ಬಿಟ್ಟು ವಿದೇಶಕ್ಕೆ ತೆರಳಿದರಂತೆ. ಗಾಯತ್ರಿ ಮೇಲಿನ ಪ್ರೇಮ ವಿಫಲವಾದ ನಂತರವೇ ಅವರಿಗೆ ಸಿನಿಮಾದಲ್ಲಿ ಹೊಸ ತಿರುವು ಸಿಕ್ಕಿ, ಯಶಸ್ವಿ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದರು.  ಹೀಗಾಗಿ ಮಾಜಿ ಪ್ರೇಯಸಿ ನೆನಪಿನಲ್ಲಿ 'ಅಳಗಿ' ಚಿತ್ರದಲ್ಲೊಂದು ಹಾಡು ಬರೆದಿದ್ದಾರೆನ್ನಲಾಗುತ್ತದೆ. ಇಳಯರಾಜಾ. ಅದರಲ್ಲಿ ವೀಣೆಯನ್ನು ಉಲ್ಲೇಖಿಸಿ ಅವರು ಬರೆದ ಸಾಲುಗಳು ತಮ್ಮ ಮಾಜಿ ಪ್ರೇಯಸಿಗಾಗಿ ಬರೆದಿರಬಹುದು ಎಂದೇ ಮಂದಿ ಮಾತನಾಡಿಕೊಳ್ಳುತ್ತಾರೆ.

ಇತ್ತ ಕನ್ನಡದಲ್ಲಿ ಅವರು ಸಂಯೋಜಿಸಿದ ಮಧುರ ಹಾಡುಗಳಿಗೆ ತಲೆದೂಗದ ಜನರಿಲ್ಲ, ಅವರು ಸಂಗೀತ ಸಂಯೋಜಿಸಿದ ನಗುವ ನಯನ, ಜೀವ ಹೂವಾಗಿದೆ, ಕೆಳದೆ ನಿಮಗೀಗ, ತಂಗಾಳಿಯಲ್ಲಿ ನಾನು, ಜೊತೆಯಲ್ಲಿ ಜೊತೆ ಜೊತೆಯಲ್ಲಿ, ನಗು ಎಂದಿಗೂ... ಇವೆಲ್ಲಾ ಹಳೆಯ ಹಾಡುಗಳಾದರೂ ಇಂದಿಗೂ ಜನ ಗುನುಗುನಿಸುವ ಸದಾ ನೆನಪು ಮಾಡಿಕೊಳ್ಳುವ ಇಳಯರಾಜ ಸಂಯೋಜನೆಯ ಕನ್ನಡದ ಸೂಪರ್ ಹಿಟ್ ಹಾಡುಗಳಾಗಿವೆ. 

click me!