‘ರಾಜಮೌಳಿಯವರ ‘ಬಾಹುಬಲಿ’ ಚಿತ್ರದಿಂದ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಆರಂಭವಾಯಿತು. ಆ ಕಾನ್ಸೆಪ್ಟನ್ನು ಕೆಜಿಎಫ್ ಮತ್ತು ಕಾಂತಾರ ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋದವು.’
ಹೀಗೆ ಹೇಳಿದ್ದು ಜನಪ್ರಿಯ ತಮಿಳು ನಟ ಸೂರ್ಯ. ಅವರು ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಂಗುವ’ ನ.14ರಂದು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು.
‘ಕಂಗುವ ಸಿನಿಮಾದಲ್ಲಿ ಹೊಸ ಜಗತ್ತನ್ನು ತೋರಿಸಿದ್ದೇವೆ. 700 ವರ್ಷಗಳ ಹಿಂದಿನ ಕತೆಯನ್ನು ಹೇಳುತ್ತಿದ್ದೇವೆ. ಒಳ್ಳೆಯ ಕಂಟೆಂಟ್ ಇದ್ದಾಗ ಜನ ಸಿನಿಮಾ ಮೆಚ್ಚಿಕೊಳ್ಳುತ್ತಾರೆ. ಅದೇ ನಂಬಿಕೆಯಿಂದ ಕಂಗುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾವನ್ನು 3ಡಿ, 4ಡಿಯಲ್ಲೂ ಬಿಡುಗಡೆ ಮಾಡುತ್ತೇವೆ’ ಎಂದರು.
ಸುದ್ದಿಗೋಷ್ಠಿಗೆ ತಡವಾಗಿ ಬಂದ ಸೂರ್ಯ ಆರಂಭದಲ್ಲಿಯೇ ತಡವಾಗಿದ್ದಕ್ಕೆ ಕ್ಷಮೆ ಯಾಚಿಸಿದರು. ಆ ಬಳಿಕ ನನಗೆ ಬೆಂಗಳೂರು ಅಂದಾಕ್ಷಣ ಅಭಿಮಾನಿಗಳು ಸಿನಿಮಾ ಬಿಡುಗಡೆ ದಿನ ಸೆಲೆಬ್ರೇಟ್ ಮಾಡುವ ಕ್ಷಣಗಳೇ ನೆನಪಾಗುತ್ತವೆ.
ಜನ ನಮಗೆ ಬಹಳಷ್ಟು ಪ್ರೀತಿ ತೋರಿಸಿದ್ದಾರೆ. ಅವರಿಗೆ ಇಷ್ಟವಾಗುವ ಒಳ್ಳೆಯ ಸಿನಿಮಾ ಕೊಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಕರ್ನಾಟಕದಲ್ಲಿ ಸಿನಿಮಾ ವಿತರಣೆ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಕೆ ವೆಂಕಟ್ ನಾರಾಯಣ್ ಸುದ್ದಿಗೋಷ್ಠಿಯಲ್ಲಿದ್ದರು.
ತಮಿಳು ನಟ ಸೂರ್ಯ ನಟನೆಯ ಐತಿಹಾಸಿಕ ಸಿನಿಮಾ ‘ಕಂಗುವ’ 38 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. 38 ಭಾಷೆಗಳಲ್ಲಿ ಬಿಡುಗಡೆಯಾದರೆ ಅಷ್ಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಎಂಬ ಖ್ಯಾತಿ ‘ಕಂಗುವ’ ಚಿತ್ರಕ್ಕೆ ದೊರೆಯಲಿದೆ.