ನಟ ಜಯಂ ರವಿ-ಆರತಿ ವಿಚ್ಚೇದನಕ್ಕೆ ಆಕೆ ಕಾರಣ! ಸಮಯ ಕಳೆದಂತೆ ಸತ್ಯ ಹೊರ ಬರಲಿದೆ ಎಂದು ಪತ್ನಿ ಹೇಳಿದ್ದು ಇದನ್ನಾ?

First Published | Sep 18, 2024, 12:00 AM IST

ಕಾಲಿವುಡ್ ನಟ ಜಯಂ ರವಿ ಮತ್ತು ಆರತಿ ದಂಪತಿಗಳ ವಿಚ್ಛೇದನದ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಅವರ ಬೇರ್ಪಡಿಕೆಗೆ ಜನಪ್ರಿಯ ಗಾಯಕಿ ಕೆನಿಷಾ ಕಾರಣ ಎಂಬ ಹೊಸ ಸುದ್ದಿ ಹೊರಬಿದ್ದಿದೆ.  

ಕಾಲೇಜಿನಲ್ಲಿ ಭೇಟಿಯಾದ ಶ್ರೀಮಂತ ಕುಟುಂಬದ ಹುಡುಗಿ ಆರತಿಯನ್ನು ಪ್ರೀತಿಸಿ ಮದುವೆಯಾದರು ತಮಿಳು ಸೂಪರ್ ಸ್ಟಾರ್ ಜಯಂ ರವಿ. ಇಬ್ಬರು ಗಂಡು ಮಕ್ಕಳಿಗೆ ತಂದೆ ತಾಯಿಯಾದ ಜಯಂ ರವಿ ಮತ್ತು ಆರತಿ ದಂಪತಿಗಳು ಈಗ ಮನಸ್ತಾಪದಿಂದ ವಿಚ್ಛೇದನ ಪಡೆಯುತ್ತಿದ್ದಾರೆ. ವಿಚ್ಛೇದನದ ಬಗ್ಗೆ ಆರತಿ ಯಾವುದೇ ನಿರ್ಧಾರ ಪ್ರಕಟಿಸುವ ಮುನ್ನವೇ ಜಯಂ ರವಿ ಮುಂದಾಗಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದರು. ಅಲ್ಲದೇ, ಅವರು ಚೆನ್ನೈ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. 

ಇದಾದ ಬಳಿಕ ಆರತಿ ಪರವಾಗಿ ಸಂಚಲನಾತ್ಮಕ ಹೇಳಿಕೆ ಹೊರಬಿದ್ದಿತ್ತು. ಅದರಲ್ಲಿ ತಮ್ಮ ಪತಿ ರವಿಯನ್ನು ಹಲವು ಬಾರಿ ಭೇಟಿಯಾಗದಂತೆ ತಡೆಯಲಾಗಿದೆ ಎಂದೂ, ರವಿ ತೆಗೆದುಕೊಂಡ ನಿರ್ಧಾರದ ನಂತರ ತಾನು ಮತ್ತು ಮಕ್ಕಳು ಏನು ಮಾಡಬೇಕೆಂದು ತಿಳಿಯದೆ ಚಡಪಡಿಸುತ್ತಿದ್ದೇವೆ ಎಂದೂ ಅವರು ತಮ್ಮ ನೋವನ್ನು ತೋಡಿಕೊಂಡಿದ್ದರು. ಇದು ಸಂಪೂರ್ಣವಾಗಿ ರವಿ ಅವರ ಸ್ವಂತ ನಿರ್ಧಾರ ಎಂದು ಖಚಿತಪಡಿಸಿದ್ದ ಆರತಿ, ತಮ್ಮ ನಡವಳಿಕೆಯ ಬಗ್ಗೆ ನಡೆಯುತ್ತಿರುವ ಕೆಲವು ಚರ್ಚೆಗಳಿಗೆ ಪ್ರತಿಕ್ರಿಯಿಸುವುದು ಅಗತ್ಯವಾಗಿದೆ ಮತ್ತು ಮಕ್ಕಳ ತಾಯಿಯಾಗಿ ಅವರ ಪಕ್ಕದಲ್ಲಿ ನಿಲ್ಲುವ ಸಮಯ ಇದಾಗಿದೆ. ಒಪ್ಪಿಗೆಯಿಂದ ಡಿವೋರ್ಸ್ ಕೊಟ್ಟಿಲ್ಲ, ಸಮಯ ಕಳೆದಂತೆ ಸತ್ಯ ಹೊರ ಬರಲಿದೆ  ಎಂದು ಹೇಳಿದ್ದರು. ಆರತಿ ಮಾತಿನಲ್ಲಿ ಸತ್ಯವಿದೆ ಎಂದು ಹಲವರು ಒಪ್ಪಿಕೊಂಡರೆ, ಜಯಂ ರವಿ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುವುದರ ಹಿಂದಿನ ಉದ್ದೇಶವೇನು ಎಂದು ಕೆಲವರು ಪ್ರಶ್ನಿಸಿದ್ದರು.

Tap to resize

ವಿಚ್ಛೇದನದ ಪ್ರಕಟಣೆ ನೀಡಿದ ಬಳಿಕ ನಟ ಜಯಂ ರವಿ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಗಾಯಕಿ ಕೆನಿಷಾ ಜೊತೆಗಿನ ಅವರ ಸಂಬಂಧವೇ ಬೇರ್ಪಡಿಕೆಗೆ ಕಾರಣ ಎಂದು ಹಲವು ವರದಿಗಳು ಹರಿದಾಡುತ್ತಿವೆ. ನಟ ಜಯಂ ರವಿ ಅವರು ತಮ್ಮ ರಜೆಯ ದಿನಗಳನ್ನು ಕಳೆಯಲು ಇತ್ತೀಚೆಗೆ ಗೋವಾಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರಂತೆ. ಅದೇ ರೀತಿ ಜೂನ್ 4 ರಂದು ಜಯಂ ರವಿ ಮತ್ತು ಆರತಿ ಅವರ ವಿವಾಹ ವಾರ್ಷಿಕೋತ್ಸವದಂದು ಜಯಂ ರವಿ ಅವರು ಆರತಿ ಅಥವಾ ಅವರ ಕುಟುಂಬದೊಂದಿಗೆ ಇರಲಿಲ್ಲ ಎನ್ನಲಾಗಿದೆ. ಕಳೆದ 14 ವರ್ಷಗಳಿಂದ ತಮ್ಮ ವಿವಾಹ ವಾರ್ಷಿಕೋತ್ಸವದಂದು ಯಾವುದೇ ಚಿತ್ರೀಕರಣವನ್ನು ತಪ್ಪಿಸಿ ಪತ್ನಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದ ಅವರು ಈ ವರ್ಷ ಚಿತ್ರೀಕರಣದಲ್ಲಿದ್ದೇನೆ ಎಂದು ಹೇಳಿದ್ದಾರಂತೆ.
 

ಆ ಸಮಯದಲ್ಲಿ ಆರತಿ ಹೆಸರಿನಲ್ಲಿ ನೋಂದಣಿಯಾಗಿದ್ದ ಕಾರಿನಲ್ಲಿ ನಿಷೇಧಿತ ಕಪ್ಪು ಸನ್ ಫಿಲ್ಮ್ ಹಾಕಿದ್ದಕ್ಕಾಗಿ ಪೊಲೀಸರು ಜಯಂ ರವಿ ಅವರಿಗೆ ದಂಡ ವಿಧಿಸಿದ್ದರು. ಕಾರು ಆರತಿ ಹೆಸರಿನಲ್ಲಿ ನೋಂದಣಿಯಾಗಿದ್ದರಿಂದ ಎಸ್‌ಎಂಎಸ್ ನೇರವಾಗಿ ಅವರಿಗೆ ಹೋಗಿದೆ. ಇದನ್ನು ಕಂಡು ಆಘಾತಕ್ಕೊಳಗಾದ ಆರತಿ, ಚಿತ್ರೀಕರಣದ ನೆಪ ಹೇಳಿ ಗೋವಾಕ್ಕೆ ಯಾರೊಂದಿಗೆ ಹೋಗಿದ್ದೀರಿ ಎಂದು ಜಗಳ ತೆಗೆದಿದ್ದಾರಂತೆ. ಬಳಿಕ ಆರತಿ ತಮ್ಮ ಪರಿಚಯಸ್ಥರ ಮೂಲಕ ಜಯಂ ರವಿ ಯಾರೊಂದಿಗೆ ಇದ್ದಾರೆ ಎಂದು ವಿಚಾರಿಸಿದಾಗ ಕೆನಿಷಾ ಹೆಸರು ಕೇಳಿಬಂದಿದೆ. ಆಗ ಜಯಂ ರವಿ ಅವರು, ತನ್ನ ಜೊತೆ ಕೇವಲ ಕೆನಿಷಾ ಮಾತ್ರವಲ್ಲ, ಹಲವಾರು ಸ್ನೇಹಿತರಿದ್ದಾರೆ ಎಂದು ಹೇಳಿ ಸಮಾಧಾನಪಡಿಸಿದ್ದಾರಂತೆ. ಈ ಸಮಸ್ಯೆ ಶಮನವಾದ 10 ದಿನಗಳ ನಂತರ ಮತ್ತೊಂದು ಸಮಸ್ಯೆ ಎದುರಾಗಿದೆಯಂತೆ.

ಜೂನ್ 24 ರಂದು ಜಯಂ ರವಿ ಬಳಸುತ್ತಿದ್ದ ಕಾರು ಅತಿ ವೇಗ ಮತ್ತು ಸಂಚಾರ ನಿಯಮ ಉಲ್ಲಂಘಿಸಿರುವುದಾಗಿ ತಮ್ಮ ಫೋನಿಗೆ ಎಸ್‌ಎಂಎಸ್ ಬಂದಾಗ, ಆ ಕಾರನ್ನು ಚಲಾಯಿಸುತ್ತಿದ್ದವರು ಕೆನಿಷಾ ಎಂಬುದು ಬೆಳಕಿಗೆ ಬಂದಿದೆ. ಈಗಾಗಲೇ ಜಯಂ ರವಿ ಮೇಲೆ ಕೋಪಗೊಂಡಿದ್ದ ಆರತಿ, ತಮ್ಮ ಪತಿಯೊಂದಿಗೆ ತೆಗೆಸಿಕೊಂಡಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರಂತೆ. ಅಷ್ಟೇ ಅಲ್ಲದೆ, ನೇರವಾಗಿ ಗೋವಾಕ್ಕೆ ಹೋಗಿ ವಿಚಾರಿಸಿದಾಗ, ಜಯಂ ರವಿ ಅವರು ಗೋವಾಕ್ಕೆ ಭೇಟಿ ನೀಡಿದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದ ಹೋಟೆಲ್‌ನಲ್ಲಿ ಉಳಿದುಕೊಂಡಿಲ್ಲ ಎಂಬುದು ತಿಳಿದುಬಂದಿದೆ. ಅದೇ ರೀತಿ ಗಾಯಕಿ ಕೆನಿಷಾ ಜೊತೆ ಜಯಂ ರವಿ ಐಷಾರಾಮಿ ಬಂಗಲೆ ಖರೀದಿಸಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ ಎಂಬ ಕೆಲವು ವರದಿಗಳು ಹರಿದಾಡಿದ್ದರೂ, ಈ ವರದಿಗಳು ಇನ್ನೂ ದೃಢಪಟ್ಟಿಲ್ಲ.

ಇತ್ತೀಚೆಗೆ ಜನಪ್ರಿಯ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ ಬೈಲ್ವಾನ್ ರಂಗನಾಥನ್, ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆರತಿ ತಾಯಿ ಸುಜಾತಾ ವಿಜಯಕುಮಾರ್ ಆಡಿಯೋದಲ್ಲಿ ಹೇಳಿರುವ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ಅದರಂತೆ ಆರತಿ ಮತ್ತು ಜಯಂ ರವಿ ನಡುವೆ ಆಗಾಗ ಜಗಳ ನಡೆಯುತ್ತಿತ್ತಂತೆ. ಆಗ ಜಗಳ ನಡೆದಾಗಲೆಲ್ಲಾ ಸುಜಾತಾ ಜಯಂ ರವಿ ಪರವಾಗಿಯೇ ನಿಲ್ಲುತ್ತಿದ್ದರಂತೆ. ಏಕೆಂದರೆ ಜಯಂ ರವಿ ಶಾಂತ ಮತ್ತು ಸಂಯಮದ ಸ್ವಭಾವದವರಂತೆ. ಆದರೆ ಆರತಿ ಬೇಗ ಕೋಪ ಮಾಡಿಕೊಳ್ಳುವ ಸ್ವಭಾವದವರಂತೆ. ತಮ್ಮ ಜೀವನದಲ್ಲಿ ಇಂತಹ ಸಮಸ್ಯೆ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಸುಜಾತಾ ಹೇಳಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಇನ್ನು ಗಾಯಕಿ ಕೆನಿಷಾ ಅವರನ್ನು ಜಯಂ ರವಿ ಜೊತೆಗೆ ತಳುಕು ಹಾಕಿ ಹಲವು ವಿವಾದಗಳು ಎದ್ದಿದ್ದರೂ, ಮಕ್ಕಳ ಸಲುವಾಗಿ ಇಬ್ಬರೂ ಒಂದಾಗುವ ಸಾಧ್ಯತೆ ಇದೆ ಎಂದು ಬೈಲ್ವಾನ್ ರಂಗನಾಥನ್ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಆದರೆ ಜಯಂ ರವಿ ವಿಚ್ಛೇದನ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Latest Videos

click me!