ನಟಿ ಜಯಾ ಬಚ್ಚನ್ ಬಳಿ 40 ಕೋಟಿಗೂ ಹೆಚ್ಚು ಬಂಗಾರ ಇರುವುದು ಬಹಿರಂಗ, ಅಮಿತಾಬ್ ಬಳಿ ಇನ್ನೂ ಹೆಚ್ಚು!

First Published Feb 14, 2024, 6:15 PM IST

ಬಾಲಿವುಡ್‌ ನ ಹಿರಿಯ ನಟಿ  ಜಯಾ ಬಚ್ಚನ್ ಬಳಿ ಊಹೆಗೂ ಮೀರಿದ ಅತ್ಯಮೂಲ್ಯ  ಆಸ್ತಿ ಇರುವುದು ಬಹಿರಂಗವಾಗಿದೆ. ಒಟ್ಟು 1,578 ಕೋಟಿ ರೂ ಮೌಲ್ಯದ ಆಸ್ತಿ ಇದ್ದು, ಜಯಾ ಬಚ್ಚನ್  ಬಳಿ  40 ಕೋಟಿ ಗೂ ಅಧಿಕ ಮೌಲ್ಯದ ಬೆಲೆಬಾಳುವ ಬಂಗಾರಗಳಿವೆ. ವಿಶೇಷವೆಂದರೆ ಹೆಂಡತಿಯನ್ನೂ ಮೀರಿ ಅಮಿತಾಬ್‌ ಬಳಿ 54 ಕೋಟಿಗೂ ಅಧಿಕ ಮೌಲ್ಯದ ಆಭರಣ ಸಂಗ್ರಹ ಹೊಂದಿದ್ದಾರೆ.

2022-23 ರ ಹಣಕಾಸು ವರ್ಷದಲ್ಲಿ ಜಯಾ ಬಚ್ಚನ್ ಅವರ ವೈಯಕ್ತಿಕ ನಿವ್ವಳ ಮೌಲ್ಯವು 1,63,56,190 ರೂ ಆಗಿದ್ದರೆ, ಅದೇ ಅವಧಿಯಲ್ಲಿ ಅಮಿತಾಬ್ ಬಚ್ಚನ್ ಅವರ ಸಂಪತ್ತು ರೂ 273,74,96,590 ಆಗಿದೆ. ಅವರ ಒಟ್ಟು ಚರ ಆಸ್ತಿಯ ಮೌಲ್ಯ 849.11 ಕೋಟಿ ರೂ.ಗಳಾಗಿದ್ದು, ಸ್ಥಿರಾಸ್ತಿ ಮೊತ್ತ 729.77 ಕೋಟಿ ರೂ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10,11,33,172 ರೂ.(10ಕೋಟಿ) ಮತ್ತು ಅಮಿತಾಬ್ ಬಚ್ಚನ್ ಅವರದ್ದು 120,45,62,083 ರೂ. (120 ಕೋಟಿ) ಆಗಿದೆ.

ಬಚ್ಚನ್‌ರ ಐಷಾರಾಮಿ ಜೀವನಶೈಲಿ ಅವರ ಆಸ್ತಿಯಿಂದಲೇ ತಿಳಿದು ಬರುತ್ತದೆ. ಇನ್ನು ಜಯಾ ಅವರ ಬಳಿ 40.97 ಕೋಟಿ ರೂಪಾಯಿ ಮೌಲ್ಯದ ಆಭರಣಗಳ ಸಂಗ್ರಹ ಹೊಂದಿದ್ದಾರೆ. ಮತ್ತು 9.82 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಕ್ರದ ವಾಹನಗಳು ಕೂಡ ಇದೆ. ಗಂಡ ಅಮಿತಾಭ್ ಬಚ್ಚನ್ ಅವರು 54.77 ಕೋಟಿ ಮೌಲ್ಯದ ಆಭರಣಗಳ ಸಂಗ್ರಹವನ್ನು ಹೊಂದಿದ್ದಾರೆ. ಅಂದರೆ ಹೆಂಡತಿಗಿಂತ ಹೆಚ್ಚು ಆಭರಣ ಬಿಗ್‌ ಬಿ ಬಳಿ ಇದೆ. ಇದರ ಜೊತೆಗೆ ಬಿಗ್‌ ಬಿ ಎರಡು ಮರ್ಸಿಡಿಸ್ ಮತ್ತು ರೇಂಜ್ ರೋವರ್ ಸೇರಿದಂತೆ ಒಟ್ಟು 17.66 ಕೋಟಿ ಮೌಲ್ಯದ 16 ವಾಹನಗಳ ಸಂಗ್ರಹ ಹೊಂದಿದ್ದಾರೆ. 

ಬಚ್ಚನ್‌ ದಂಪತಿಗಳ ಆಸ್ತಿಗಳ ಬಗ್ಗೆ ತಿಳಿದು ಜನ ಹೌಹಾರಿದ್ದಾರೆ. ಆಭರಣ ಸಂಗ್ರಹವೇ ಇಷ್ಟೊಂದು ಮೊತ್ತದಲ್ಲಿ ಇದೆ ಎಂದಾದರೆ ಇನ್ನೂ ಹೆಣ್ಣು ಮಕ್ಕಳ ಫೇವರಿಟ್‌ ಸೀರೆ ಸಂಗ್ರಹ ಎಷ್ಟಿರಬಹುದು. ಅದರಲ್ಲಿ ಬೆಲೆ ಬಾಳುವ ಬಟ್ಟೆ ಬರೆಗಳು ಇನ್ನೆಷ್ಟು ಇರಬಹುದು ಎಂಬುದು ಊಹಿಸಲೂ ಸಾಧ್ಯವಿಲ್ಲ. ಇನ್ನು ಮಕ್ಕಳಿಗೆ ಮೊಮ್ಮಕ್ಕಳಿಗೆ ಉಡುಗೊರೆ ರೂಪದಲ್ಲಿ ನೀಡಿರುವ ಆಸ್ತಿಗಳು ಇನ್ನೆಷ್ಟೋ ಗೊತ್ತಿಲ್ಲ. ಇವೆಲ್ಲ ಜಯಾ ಅವರು ರಾಜ್ಯ ಸಭೆ ಚುನಾವಣೆಗೆ  ಘೋಷಿಸಿರುವ ಆಸ್ತಿ ವಿವರವಾಗಿದೆ.

ಹಿರಿಯ ನಟಿ ಮತ್ತು ರಾಜಕಾರಣಿ ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷದಿಂದ (ಎಸ್‌ಪಿ) ರಾಜ್ಯಸಭೆಗೆ ಸತತ ಐದನೇ ಅವಧಿಗೆ ಮರುನಾಮಕರಣಗೊಂಡಿದ್ದಾರೆ. ಮಂಗಳವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. 2004 ರಿಂದ ಎಸ್‌ಪಿ ಸದಸ್ಯರಾಗಿ ಸೇವೆ ಸಲ್ಲಿಸಿದ 75 ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ತಮ್ಮ ಪತಿ ಅಮಿತಾಭ್ ಬಚ್ಚನ್ ಜೊತೆಗೆ ಜಂಟಿಯಾಗಿ 1,578 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿದೆ. ಆದರೆ ಇನ್ನೂ ಘೋಷಿಸದೇ ಇರುವ ಆಸ್ತಿಗಳು ಎಷ್ಟಿವೆಯೋ ಯಾರು ಬಲ್ಲರು!

ಬಚ್ಚನ್‌ ದಂಪತಿಗಳ ಒಟ್ಟು ಆಸ್ತಿಗಳು ವಿವಿಧ ಮೂಲಗಳ ಮೂಲಕ ಸ್ವಾಧೀನಪಡಿಸಿಕೊಂಡಿರುವ ಆಸ್ತಿಯನ್ನು ಕೂಡ ಒಳಗೊಂಡಿವೆ, ಜಯಾ ಬಚ್ಚನ್ ಸಲ್ಲಿಕೆ ಮಾಡಿರುವ ವರದಿಯಲ್ಲಿ ಅವರ ಸಂಸದರ ವೇತನ ಮತ್ತು ವೃತ್ತಿಪರ ಶುಲ್ಕಗಳಿಂದ ಸಂಪತ್ತನ್ನು ಗಳಿಸಿದ್ದಾರೆ, ಆದರೆ ಅಮಿತಾಬ್ ಬಚ್ಚನ್ ಬಡ್ಡಿ, ಬಾಡಿಗೆ, ಲಾಭಾಂಶಗಳು, ಬಂಡವಾಳ ಲಾಭಗಳು ಮತ್ತು ಸೌರ ಸ್ಥಾವರದಿಂದ ಬರುವ ಆದಾಯವಾಗಿದೆ. ಅಮಿತಾ ಬಚ್ಚನ್‌ ವೃತ್ತಿಯಿಂದ ಬರುವ ಆದಾಯ ನಮೂದು ಆದಂತಿಲ್ಲ.

ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, 15 ರಾಜ್ಯಗಳಲ್ಲಿ 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, 403 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷವು 108 ಸ್ಥಾನಗಳನ್ನು ಹೊಂದಿದ್ದರೆ, ಆಡಳಿತಾರೂಢ ಬಿಜೆಪಿ 252 ಸದಸ್ಯರನ್ನು ಹೊಂದಿದೆ ಮತ್ತು ಕಾಂಗ್ರೆಸ್ ಎರಡು ಸದಸ್ಯರನ್ನು ಹೊಂದಿದೆ.  ಜಯಾ ಬಚ್ಚನ್ ಜೊತೆಗೆ ಸಮಾಜವಾದಿ ಪಕ್ಷವು ಮಾಜಿ ಸಂಸದ ರಾಮ್‌ಜಿಲಾಲ್ ಸುಮನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಅಲೋಕ್ ರಂಜನ್ ಅವರನ್ನು ಮೇಲ್ಮನೆ ಚುನಾವಣೆಗೆ ಕಣಕ್ಕಿಳಿಸಿದೆ. 

click me!