ಸುಕೇಶ್ ಮಾಸ್ಟರ್ ಮೈಂಡ್ ಉಪಯೋಗಿಸಿ ಹೆಸರು ಗಳಿಸಿಕೊಂಡಿರುವ ನಟಿಯರಿಗೆ ಗಾಳ ಬೀಸುತ್ತಿದ್ದ. ಹೇಗಾದರೂ ಅವರ ಸ್ನೇಹ ಸಂಪಾದನೆ ಮಾಡಿಕೊಳ್ಳಬೇಕು ಎನ್ನುವುದು ಉದ್ದೇಶ.
ಬಾಲಿವುಡ್ನ ಖ್ಯಾತ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿಯನ್ನು ಸುಕೇಶ್ ಚಂದ್ರಶೇಖರ್ ಟಾರ್ಗೆಟ್ ಮಾಡಿದ್ದಾಗಿ ಬಹಿರಂಗವಾಗಿತ್ತು. ಇದೀಗ ಮಾಧ್ಯಮ ಸಂಸ್ಥೆ ಒಂದು ವರದಿ ಮಾಡಿದಂತೆ ಜಾಹ್ನವಿ ಕಪೂರ್ ಮೇಲೆಯೂ ಈತನ ವಕೃದೃಷ್ಟಿ ಬಿದ್ದಿತಂತೆ.
ಜಾಹ್ನವಿ ಕಪೂರ್ (Janhvi Kapoor), ಭೂಮಿ ಪಡ್ನೇಕರ್ ಹಾಗೂ ಸಾರಾ ಅಲಿ ಖಾನ್ (Sara Ali Khan) ಅವರನ್ನೂ ಸುಕೇಶ್ ಟಾರ್ಗೆಟ್ ಮಾಡಿದ್ದು ಬಹಿರಂಗವಾಗಿದೆ. ಈ ಖ್ಯಾತ ನಟಿಯರಿಗೆ ಉಡುಗೊರೆ ಕಳುಹಿಸಲು ಸುಕೇಶ್ ಬಹುಕೋಟಿ ವಂಚನೆ ಹಣ ಬಳಕೆ ಮಾಡಲು ಮುಂದಾಗಿದ್ದನಂತೆ.
ಸುಕೇಶ್ ಚಂದ್ರಶೇಖರ್ ರಾನ್‌ಬಾಕ್ಸಿ ಸಂಸ್ಥೆಯ ಮಾಲೀಕನ ಪತ್ನಿ ಅದಿತಿ ಸಿಂಗ್ ಅವರಿಂದ 215 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಈಗ ದೆಹಲಿಯ ತಿಹಾರ್ ಜೈಲಿನಲ್ಲಿ ಇದ್ದಾನೆ. ನಟಿಮಣಿಯರನ್ನು ವಿಚಾರಣೆಗೆ ಕರೆಯಲಾಗಿತ್ತು.
ವಂಚಕ ಸುಕೇಶ್ ನಟಿ ಸಾರಾ ಅಲಿ ಖಾನ್ ಅವರನ್ನು ಟಾರ್ಗೆಟ್ ಮಾಡಲು ನಾನಾ ವಿಧವಾಗಿ ಪ್ರಯತ್ನಿಸಿದ್ದ ಎಂಬುದು ಬೆಳಕಿಗೆ ಬಂದಿದೆ. 2021ರ ಮೇ 21ರಂದು ಸಾರಾಗೆ ಸೂರಜ್ ರೆಡ್ಡಿ ಎಂದು ಪರಿಚಯಿಸಿಕೊಳ್ಳುತ್ತಾ ಸುಕೇಶ್ ಮೆಸೇಜ್ ಮಾಡಿದ್ದ. ನಂತರದಲ್ಲಿ ಸ್ನೇಹದ ಸಂಕೇತವಾಗಿ ಕಾರ್ ಕೊಡುತ್ತೇನೆ ಎಂದು ಹೇಳಿದ್ದ ಎಂಬ ಸಂಗತಿ ಬಹಿರಂಗವಾಗಿದೆ.
ಉಡುಗೊರೆ ರೂಪದಲ್ಲಿ ಚಾಕಲೇಟ್ ಕಳಿಸಿದ್ದ ಸುಕೇಶ್, ಅದರಲ್ಲಿ ಫ್ರಾಂಕ್ ಮುಲ್ಲರ್ ಕಂಪನಿಯ ವಾಚ್ ಒಂದನ್ನೂ ಕೊಟ್ಟಿದ್ದ. ಭಾರತದಲ್ಲಿ ಅದರ ಬೆಲೆ ಲಕ್ಷಾಂತರ ರೂಗಳು! ಉಡುಗೊರೆ ಪ್ರಕರಣದಲ್ಲಿ ಜನವರಿ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಸಾರಾರನ್ನು ವಿಚಾರಣೆಗೆ ಒಳಪಡಿಸಿತ್ತು.
ನಟಿ ಜಾಹ್ನವಿ ಕಪೂರ್ ಅವರನ್ನು ಸುಕೇಶ್ ಅವರ ಪತ್ನಿ ಲೀನಾ ಮರಿಯಾ ಪಾಲ್ ಮೂಲಕ ಟಾರ್ಗೆಟ್ ಮಾಡಲಾಗಿತ್ತು. 18 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ಜಾಹ್ನವಿಗೆ ನೀಡಲಾಗಿದೆ ಎನ್ನುವ ಮಾತು ಇದೆ.
ಸಲೂನ್ ಒಂದನ್ನು ಉದ್ಘಾಟನೆ ಮಾಡುವ ನೆಪದಲ್ಲಿ ಜಾಹ್ನವಿ ಅವರ ಸ್ನೇಹ ಸಂಪಾದಿಸಲು ಸುಕೇಶ್ ಸೂತ್ರ ಹಣೆದಿದ್ದು ಒಂದೊಂದಾಗಿ ಗೊತ್ತಾಗಿದೆ. ಜಾಹ್ನವಿ ಸ್ನೇಹಿತರೊಬ್ಬರು ಈ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.