ಸಿನಿಮಾ ಜೀವನ ಎಂಬುದು ವಿವಿಧ ಲೆಕ್ಕಾಚಾರಗಳೊಂದಿಗೆ ನಡೆಯುತ್ತದೆ. ವೃತ್ತಿಜೀವನದ ಆರಂಭದಲ್ಲಿ ಖ್ಯಾತಿಯನ್ನು ಗಳಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಕೆಲವೊಮ್ಮೆ ಒಪ್ಪಿಕೊಂಡ ಸಿನಿಮಾಗಳಿಂದ ನಟ-ನಟಿಯರನ್ನು ತೆಗೆಯಲಾಗುತ್ತದೆ. ಅಂತಹದ್ದೇ ಒಂದು ಘಟನೆ ನಟಿ ರಕುಲ್ ಪ್ರೀತ್ ಸಿಂಗ್ ಅವರ ಜೀವನದಲ್ಲಿ ನಡೆದಿದೆ. ವಿಶೇಷವೇನೆಂದರೆ, ಅವರನ್ನು ಪ್ರಭಾಸ್ ಸಿನಿಮಾದಿಂದ ತೆಗೆದುಹಾಕಲಾಗಿತ್ತು. ಈ ಬಗ್ಗೆ ಇತ್ತೀಚೆಗೆ ರಕುಲ್ ಪ್ರೀತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಈ ಸಿನಿಮಾದ ನಾಲ್ಕು ದಿನಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಆ ನಂತರ ನಾನು ಮತ್ತೊಂದು ಸಿನಿಮಾ ಚಿತ್ರೀಕರಣಕ್ಕಾಗಿ ದೆಹಲಿಗೆ ಹೋಗಿದ್ದೆ. ಆಗ ನನ್ನನ್ನು ಈ ಚಿತ್ರದಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿತು. ಆದರೆ ಪ್ರಭಾಸ್ ಚಿತ್ರದಿಂದ ಕೈಬಿಟ್ಟ ಬಗ್ಗೆ ನನಗೆ ಯಾವ ಮಾಹಿತಿಯನ್ನೂ ನೀಡಲಿಲ್ಲ ಎಂದು ರಕುಲ್ ಹೇಳಿದ್ದಾರೆ.
ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದು ತುಂಬಾ ಸಂತೋಷಪಟ್ಟಿದ್ದೆ. ಆದರೆ, ನಾಲ್ಕು ದಿನಗಳ ಚಿತ್ರೀಕರಣದ ನಂತರ ಯಾವುದೇ ಮಾಹಿತಿ ನೀಡದೆ ನನ್ನ ಜಾಗಕ್ಕೆ ಬೇರೆಯವರನ್ನು ಆಯ್ಕೆ ಮಾಡಿಕೊಂಡರು, ಆಗ ತಾನು ಇನ್ನೂ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿರಲಿಲ್ಲ ಎಂದು ರಕುಲ್ ಹೇಳಿದ್ದಾರೆ.
ಒಳ್ಳೆಯ ಬ್ರೇಕ್‌ಗಾಗಿ ಕಾಯುತ್ತಿದ್ದ ಸಮಯ ಅದು, ಆಗ ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಕ್ಕಿತು ಎಂದು ಸಂತೋಷಪಟ್ಟಿದ್ದೆ. ಒಂದು ವೇಳೆ ನಟಿಸಿದ್ದರೆ ಅದು ಪ್ರಭಾಸ್ ಜೊತೆ ಮಾಡಿದ ಮೊದಲ ತೆಲುಗು ಚಿತ್ರವಾಗುತ್ತಿತ್ತು. ಆದರೆ ಕೆಲವೊಮ್ಮೆ, ಕಠಿಣ ಪರಿಶ್ರಮದ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದಾಗ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಮ್ಮ ಅನುಭವವನ್ನು ರಕುಲ್ ಹಂಚಿಕೊಂಡಿದ್ದಾರೆ.
ಯಾವುದೇ ಇಂಡಸ್ಟ್ರಿಯ ಬಗ್ಗೆ ತಿಳಿದಿಲ್ಲದಿದ್ದಾಗ ಇಂತಹ ಘಟನೆಗಳು ನಡೆದರೂ ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬಾರದು ಎಂದು ಭಾವಿಸಿದ್ದೆ ಎಂದು ರಕುಲ್ ಹೇಳಿದ್ದಾರೆ. ಇನ್ನು ರಕುಲ್ ಅವರನ್ನು ತೆಗೆದುಹಾಕಿದ ಪ್ರಭಾಸ್ ಸಿನಿಮಾ ಯಾವುದು ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಆ ಚಿತ್ರ ಬೇರಾವುದೂ ಅಲ್ಲ, ಅದು ಮಿಸ್ಟರ್ ಪರ್ಫೆಕ್ಟ್. ಈ ಚಿತ್ರದಲ್ಲಿ ಮೊದಲು ರಕುಲ್ ಪ್ರೀತ್ ಸಿಂಗ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು.. ನಂತರ ಅವರ ಸ್ಥಾನಕ್ಕೆ ಕಾಜಲ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಿಸ್ಟರ್ ಪರ್ಫೆಕ್ಟ್ ನಿರ್ಮಾಪಕ ದಿಲ್ ರಾಜು ಅವರು ಸ್ಪಷ್ಟನೆ ನೀಡಿದ್ದಾರೆ.
ದಿಲ್ ರಾಜು ಮಾತನಾಡುತ್ತಾ ‘ಬೃಂದಾವನಂ’ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗಲೇ ಮಿಸ್ಟರ್ ಪರ್ಫೆಕ್ಟ್ ಚಿತ್ರವನ್ನು ಆರಂಭಿಸಿದೆವು. ಇದರಲ್ಲಿ ಪ್ರಭಾಸ್ ನಾಯಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಲ್ಲಿಯವರೆಗೆ ನನಗೆ ನೆಗೆಟಿವ್ ರಿಸಲ್ಟ್ ಎದುರಾಗಿರಲಿಲ್ಲ. ಹಿಂದಿನ ಸಿನಿಮಾದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದರೂ ನಾನು ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳಲಿಲ್ಲ.
ನಂತರ ಬೃಂದಾವನಂ ಮತ್ತು ಮಿಸ್ಟರ್ ಪರ್ಫೆಕ್ಟ್ ಚಿತ್ರಗಳನ್ನು ಆರಂಭಿಸಿದೆವು. ಮಿಸ್ಟರ್ ಪರ್ಫೆಕ್ಟ್ ಚಿತ್ರದಲ್ಲಿ ಮೊದಲು ರಕುಲ್ ಪ್ರೀತ್ ಸಿಂಗ್ ನಾಯಕಿ. ಐದು ದಿನಗಳ ಕಾಲ ಚಿತ್ರೀಕರಣವನ್ನೂ ಮಾಡಿದೆವು. ಆ ದೃಶ್ಯಗಳನ್ನು ನೋಡಿದೆ. ನನಗೆ ತೃಪ್ತಿ ಸಿಗಲಿಲ್ಲ. ಷಏಕೆಂದರೆ ಮಿಸ್ಟರ್ ಪರ್ಫೆಕ್ಟ್ ಸಿನಿಮಾ ಸಂಪೂರ್ಣವಾಗಿ ನಾಯಕಿಯ ಪಾತ್ರವನ್ನು ಆಧರಿಸಿದೆ. ರಕುಲ್ ತುಂಬಾ ಸಣ್ಣಗಿದ್ದರು. ಏನೇ ಆದರೂ ಒಳ್ಳೆಯದಕ್ಕೆ ಎಂದು ಚಿತ್ರೀಕರಣವನ್ನು ನಿಲ್ಲಿಸಿದೆವು. ಪ್ರಭಾಸ್ ಅವರಿಗೂ ವಿಷಯ ತಿಳಿಸಿದೆ.
ಒಳ್ಳೆಯ ನಾಯಕಿ ಬೇಕು ಎಂದು ನಾನು, ಪ್ರಭಾಸ್ ಮತ್ತು ತಂಡ ಚರ್ಚಿಸುತ್ತಿರುವಾಗ ತಕ್ಷಣ ಕಾಜಲ್ ಅಗರ್ವಾಲ್ ಹೆಸರು ಮುನ್ನೆಲೆಗೆ ಬಂತು. ಪ್ರಭಾಸ್ ಅವರಿಗೆ ವಿಷಯ ತಿಳಿಸಿದೆ. ಈಗಾಗಲೇ ಅವರ ಜೊತೆ ಡಾರ್ಲಿಂಗ್ ಸಿನಿಮಾ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು. ಡಾರ್ಲಿಂಗ್ ಚಿತ್ರದ ಕಥೆ ಬೇರೆ. ನಮ್ಮ ಕಥೆ ಬೇರೆ. ಪಾತ್ರಗಳು ಬೇರೆ ಎಂದು ಹಳೆಯ ಸಿನಿಮಾಗಳ ಕೆಲವು ಉದಾಹರಣೆಗಳನ್ನು ನೀಡಿದೆ. ಸರಿ! ನಿಮ್ಮಿಷ್ಟ ಎಂದು ಪ್ರಭಾಸ್ ಹೇಳಿದರು.
ಕಾಜಲ್ ಈಗಾಗಲೇ ನಮ್ಮ ಬ್ಯಾನರ್‌ನಲ್ಲಿ ಬೃಂದಾವನಂ ಸಿನಿಮಾ ಮಾಡುತ್ತಿದ್ದರು. ಅವರಿಗೆ ಕಥೆ ಹೇಳಿದ ತಕ್ಷಣ ಅವರಿಗೆ ತುಂಬಾ ಇಷ್ಟವಾಗಿ ಸಿನಿಮಾ ಮಾಡಲು ಒಪ್ಪಿಕೊಂಡರು. ರಕುಲ್ ಅವರನ್ನು ಹಾಗೆ ಕೈಬಿಡುವುದು ನನಗೆ ತುಂಬಾ ನೋವುಂಟು ಮಾಡಿತು. ಆದರೆ ನನಗೆ ಸಿನಿಮಾಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. ವ್ಯಕ್ತಿಗಳಿಗಿಂತ ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ರಕುಲ್ ಸ್ಥಾನದಲ್ಲಿ ಕಾಜಲ್ ಅವರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದೆವು. ಬೃಂದಾವನಂ ಮತ್ತು ಮಿಸ್ಟರ್ ಪರ್ಫೆಕ್ಟ್ ಎರಡೂ ಚಿತ್ರಗಳು ದೊಡ್ಡ ಹಿಟ್ ಆದವು ಎಂದು ದಿಲ್‌ರಾಜು ಹೇಳಿದರು.