ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ನಾನಾ ಏರಿಳಿತಗಳನ್ನು ಕಾಣಬಹುದಾಗಿದೆ. ಇತ್ತೀಚೆಗೆ ಹಲವು ದಿನಗಳ ಕಾಲ ಷೇರುಪೇಟೆಯಲ್ಲಿ ಸಾಕಷ್ಟು ಇಳಿಕೆ ಕಾಣುತ್ತಿದ್ದರೂ, ಈ ಒಂದು ನಿರ್ದಿಷ್ಟ ಸ್ಟಾಕ್ ಸಾಕಷ್ಟು ಲಾಭದಲ್ಲಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ತಮ್ಮ ನೆಲೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವಾಗ, ಇದು ಮಿನುಗುವ ನಕ್ಷತ್ರವಾಗಿ ಹೊರಹೊಮ್ಮಿದೆ. ಈ ಸ್ಟಾಕ್ ಕಂಪನಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಸೆನ್ಸೆಕ್ಸ್, ನಿಫ್ಟಿಯಲ್ಲಿ ಹೂಡಿಕೆದಾರರಿಗೆ ಕೋಟಿ ಕೋಟಿ ನಷ್ಟವಾಗಿದ್ದರೂ, ಎನ್‌ಸಿಸಿ ಕಂಪನಿ ಹೂಡಿಕೆದಾರರನ್ನು ಅಚ್ಚರಿಗೊಳಿಸಿದೆ. ಹೈದರಾಬಾದ್ ಮೂಲದ ನಿರ್ಮಾಣ ಕಂಪನಿ ಎನ್‌ಸಿಸಿ ನಿರ್ಮಾಣ ಕ್ಷೇತ್ರಕ್ಕೆ ಹೊಸದೇನಲ್ಲ. ಅವರು ರಸ್ತೆ, ಕಟ್ಟಡ, ನೀರಾವರಿ ವ್ಯವಸ್ಥೆ ಮತ್ತು ಹೆಚ್ಚಿನದನ್ನು ನಿರ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ವಿದ್ಯುತ್, ಲೋಹಗಳು, ಗಣಿಗಾರಿಕೆ ಮತ್ತು ರೈಲ್ವೆಯಲ್ಲೂ ಬಂಡವಾಳ ಹೂಡಿದ್ದಾರೆ. ಇನ್ನು, ಅವರ ಹೆಜ್ಜೆಗುರುತು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ; ಮಸ್ಕತ್ ಮತ್ತು ದುಬೈನಲ್ಲಿನ ಅಂಗಸಂಸ್ಥೆಗಳ ಮೂಲಕ ಮಧ್ಯಪ್ರಾಚ್ಯದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಅಷ್ಟೇ ಅಲ್ಲದೆ, ತಮ್ಮ ಅಂಗಸಂಸ್ಥೆಯಾದ ಎನ್‌ಸಿಸಿ ಇನ್‌ಫ್ರಾಸ್ಟ್ರಕ್ಚರ್ ಹೋಲ್ಡಿಂಗ್ಸ್ ಲಿಮಿಟೆಡ್ ಮೂಲಕ ರಸ್ತೆ ಮತ್ತು ಇಂಧನ ಯೋಜನೆಗಳಲ್ಲಿ ಎನ್‌ಸಿಸಿ ತೊಡಗಸಿಕೊಂಡಿದೆ. ಹಾಗೂ, ಎನ್‌ಸಿಸಿ ಅರ್ಬನ್ ಇನ್‌ಫ್ರಾಸ್ಟ್ರಕ್ಚರ್ ಮೂಲಕ ರಿಯಲ್ ಎಸ್ಟೇಟ್‌ನಲ್ಲೂ ಛಾಪು ಮೂಡಿಸಿದೆ. ಮಂಗಳವಾರ ಇದು ಷೇರು ಮಾರುಕಟ್ಟೆಯಲ್ಲಿ ಶೇ. 7 ರಷ್ಟು ಏರಿಕೆ ಕಂಡಿದ್ದು, ಆ ದಿನದಂದು ದಾಖಲಾದ ವ್ಯಾಪಾರದ ಪ್ರಮಾಣವು ಸೆಪ್ಟೆಂಬರ್ 2023 ಕ್ಕೆ ಅತ್ಯಧಿಕವಾಗಿದೆ ಎಂದು ತಿಳಿದುಬಂದಿದೆ.
ಮ್ಯಾನೇಜ್‌ಮೆಂಟ್ ಆರ್ಡರ್ ಬುಕ್‌ನಲ್ಲಿ 83 ಶೇಕಡಾ ಹೆಚ್ಚಳವನ್ನು ಹೆಮ್ಮೆಯಿಂದ ಘೋಷಿಸಿದ್ದು, ಇದರಿಂದ ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. 8,054 ಕೋಟಿ ರೂ. ಆರ್ಡರ್ ಬಂದಿದ್ದಕ್ಕೆ ಈ ಕಂಪನಿಯ ಸ್ಟಾಕ್ ಮೌಲ್ಯ ತೀವ್ರ ಏರಿಕೆ ಕಂಡಿದೆ. ಈ ಕಂಪನಿಯಲ್ಲಿ ಭಾರತದ ವಾರೆನ್ ಬಫೆಟ್ ಖ್ಯಾತಿಯ ದಿವಂಗತ ರಾಕೇಶ್ ಜುಂಜುನ್ವಾಲಾ ಪಾಲ ಹೊಂದಿದ್ದರು.
ಈಗ ಅವರ ಪತ್ನಿ ರೇಖಾ NCC ಯಲ್ಲಿ 13.09 ರಷ್ಟು ಪಾಲನ್ನು ಹೊಂದಿದ್ದಾರೆ. ಅಂದರೆ ಸುಮಾರು 8.22 ಕೋಟಿ ಷೇರು ಹೊಂದಿದ್ದಾರೆ. ಇದರಿಂದ ಒಂದೇ ದಿನದಲ್ಲಿ 90,39,90,252 ರೂ. ಅಂದರೆ 90 ಕೋಟಿ ರೂ. ಗೂ ಹೆಚ್ಚು ಲಾಭ ಗಳಿಸಿದ್ದಾರೆ. ಇದು ಅಚ್ಚರಿಯ ವಿಷಯವಾದರೂ ನಿಜ.
ಇನ್ನು, ಈ ಲಾಭ ಇತ್ತೀಚೆಗೆ ಮಾತ್ರ ಸಂಭವಿಸಿದ್ದಲ್ಲ. NCC ಸ್ವತಃ ಮಲ್ಟಿಬ್ಯಾಗರ್ ಸ್ಟಾಕ್ ಎಂದು ಸಾಬೀತಾಗಿದ್ದು, ಕೇವಲ ಒಂದು ವರ್ಷದಲ್ಲಿ 100 ಪ್ರತಿಶತದಷ್ಟು ಆದಾಯವನ್ನು ನೀಡುತ್ತದೆ.