ದಿವಾಳಿಯಾಗುತ್ತಾ OLA Electric? 40 ಕೋಟಿ ಬಾಕಿ ಪಾವತಿ ವಿವಾದಕ್ಕೆ NCLT ಮೆಟ್ಟಿಲೇರಿದ ಸಪ್ಲೈಯರ್ಸ್!

Published : Jul 07, 2026, 04:54 PM IST

ಓಲಾ ಎಲೆಕ್ಟ್ರಿಕ್‌ಗೆ ಸುಮಾರು 40 ಕೋಟಿ ರೂ. ಬಾಕಿ ಪಾವತಿಸದ ಆರೋಪದ ಮೇಲೆ ಇಬ್ಬರು ಬಿಡಿಭಾಗಗಳ ಪೂರೈಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (NCLT) ದಿವಾಳಿತನ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ. 

PREV
15
ಇಬ್ಬರು ಬಿಡಿಭಾಗಗಳ ಪೂರೈಕೆದಾರರಿಂದ ದಿವಾಳಿತನ ಪ್ರಕ್ರಿಯೆಗೆ ಅರ್ಜಿ

ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಓಲಾ ಎಲೆಕ್ಟ್ರಿಕ್ (Ola Electric) ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಸರಿಸುಮಾರು 40 ಕೋಟಿ ರೂಪಾಯಿ ಬಾಕಿ ಹಣವನ್ನು ಪಾವತಿಸದೆ ವಂಚಿಸಿದೆ ಎಂದು ಆರೋಪಿಸಿ ಕಂಪನಿಯ ಇಬ್ಬರು ಪ್ರಮುಖ ಬಿಡಿಭಾಗಗಳ ಪೂರೈಕೆದಾರರು (Component Suppliers) ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಮೆಟ್ಟಿಲೇರಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಸ್ಟರ್ಲಿಂಗ್ ಟೂಲ್ಸ್ ಲಿಮಿಟೆಡ್‌ನ ಇವಿ ಬಿಡಿಭಾಗಗಳ ವಿಭಾಗವಾದ 'ಸ್ಟರ್ಲಿಂಗ್ ಇ-ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್' (Sterling E-Mobility Solutions Ltd.) ಮತ್ತು ಆನಂದ್ ಗ್ರೂಪ್‌ನ ಭಾಗವಾಗಿರುವ 'ಆನೆವೋಲ್ವ್ ಮಾಂಡೋ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್' (Anevolve Mando eMobility Pvt. Ltd.) ಕಂಪನಿಗಳು ಈ ಕಾನೂನು ಕ್ರಮ ಕೈಗೊಂಡಿವೆ. ಈ ಎರಡೂ ಸಂಸ್ಥೆಗಳು ಓಲಾ ಎಲೆಕ್ಟ್ರಿಕ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ 'ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್' ವಿರುದ್ಧ IBC 2016 ರ ಸೆಕ್ಷನ್ 9 ರ ಅಡಿಯಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು (CIRP) ಪ್ರಾರಂಭಿಸುವಂತೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ.

25
ಬಿಡಿಭಾಗಗಳ ಗುಣಮಟ್ಟದ ಕೊರತೆ; ಓಲಾ ಎಲೆಕ್ಟ್ರಿಕ್ ತಿರುಗೇಟು

ಈ ಬೆಳವಣಿಗೆಯನ್ನು ಕೇವಲ ವಾಣಿಜ್ಯ ವಿವಾದ (Commercial Dispute) ಎಂದು ಕರೆದಿರುವ ಓಲಾ ಎಲೆಕ್ಟ್ರಿಕ್‌ಗೆ ಹತ್ತಿರವಿರುವ ಮೂಲಗಳು, ಕಂಪನಿಯು ಸಪ್ಲೈಯರ್‌ಗಳ ವಿರುದ್ಧವೇ ಮೊದಲು ಕಾನೂನು ಸಮರ ಸಾರಿದೆ ಎಂದು ತಿಳಿಸಿವೆ. ಪೂರೈಕೆದಾರರು ನೀಡಿದ ಬಿಡಿಭಾಗಗಳು ಒಪ್ಪಂದದ ಪ್ರಕಾರ ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲ ಎಂದು ಓಲಾ ಆರೋಪಿಸಿದೆ. "ನಮಗೆ ಸರಬರಾಜು ಮಾಡಿದ ಬಿಡಿಭಾಗಗಳ ಗುಣಮಟ್ಟ ಸರಿಯಾಗಿಲ್ಲ ಎಂದು ಆರೋಪಿಸಿ ನಾವು ಈಗಾಗಲೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇವೆ. ನಾವು ಮೊದಲು ಕೇಸ್ ದಾಖಲಿಸಿದ ನಂತರ, ಅದಕ್ಕೆ ಪ್ರತಿಯಾಗಿ ವೆಂಡರ್‌ಗಳು ತಮಗಿರುವ ಬಾಕಿ ಹಣದ ನೆಪವೊಡ್ಡಿ ಐಬಿಸಿ (IBC) ಅಡಿಯಲ್ಲಿ ಎನ್‌ಸಿಎಲ್‌ಟಿ ಮೆಟ್ಟಿಲೇರಿದ್ದಾರೆ," ಎಂದು ವಿಷಯ ತಿಳಿದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

35
ವೆಂಡರ್‌ಗಳ ಜೊತೆ ಓಲಾಗೆ ಇದು ಮೊದಲನೇ ವಿವಾದವೇನಲ್ಲ!

ಓಲಾ ಎಲೆಕ್ಟ್ರಿಕ್ ಮತ್ತು ಅದರ ವೆಂಡರ್‌ಗಳ ನಡುವೆ ಇಂತಹ ಕಾನೂನು ಸಮರ ನಡೆಯುತ್ತಿರುವುದು ಇದೇ ಮೊದಲೇನಲ್ಲ, ಬದಲಿಗೆ ಇದು ಸರಣಿ ವಿವಾದಗಳ ಮುಂದುವರಿದ ಭಾಗವಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ (ಮಾರ್ಚ್ 2025) 'ರೋಸ್ಮರ್ಟಾ ಡಿಜಿಟಲ್ ಸರ್ವಿಸಸ್ ಲಿಮಿಟೆಡ್' (Rosmerta Digital Services Ltd.) ಎಂಬ ಸಂಸ್ಥೆಯು ಸಹ ತನಗೆ ನೀಡಬೇಕಾದ ಸೇವಾ ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ವಿರುದ್ಧ ಎನ್‌ಸಿಎಲ್‌ಟಿಯ ಬೆಂಗಳೂರು ಪೀಠದ ಮುಂದೆ ದಿವಾಳಿತನದ ಅರ್ಜಿಯನ್ನು ಸಲ್ಲಿಸಿತ್ತು. ಆದರೆ, ನಂತರದ ದಿನಗಳಲ್ಲಿ ಉಭಯ ಕಂಪನಿಗಳು ಮಾತುಕತೆಯ ಮೂಲಕ ಪರಸ್ಪರ ವಿವಾದವನ್ನು ಬಗೆಹರಿಸಿಕೊಂಡಿದ್ದರಿಂದ, ಆ ಅರ್ಜಿಯನ್ನು ಹಿಂಪಡೆಯಲಾಗಿತ್ತು.

45
ಹೊಸ ಆರ್ಥಿಕ ವರ್ಷದಲ್ಲಿ ವಾಹನ ನೋಂದಣಿ ದುಪ್ಪಟ್ಟು

ಒಂದೆಡೆ ಕಾನೂನು ಸಂಕಷ್ಟ ಎದುರಾಗಿದ್ದರೂ, ಮತ್ತೊಂದೆಡೆ ಓಲಾ ಎಲೆಕ್ಟ್ರಿಕ್ ಸಂಸ್ಥೆಯು ತನ್ನ ವ್ಯವಹಾರ ಕಾರ್ಯಾಚರಣೆಯಲ್ಲಿ ಉತ್ತಮ ಪ್ರದರ್ಶನವನ್ನು ದಾಖಲಿಸುತ್ತಿದೆ. ಸರ್ಕಾರದ ಅಧಿಕೃತ 'ವಾಹನ' (VAHAN) ನೋಂದಣಿ ದತ್ತಾಂಶವನ್ನು ಉಲ್ಲೇಖಿಸಿ ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ, ಚಾಲ್ತಿ ಆರ್ಥಿಕ ವರ್ಷದ 2027 ರ (FY27) ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಓಲಾ ವಾಹನಗಳ ನೋಂದಣಿ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿದ್ದ 22,252 ವಾಹನಗಳ ನೋಂದಣಿ ಸಂಖ್ಯೆಯು, ಈ ತ್ರೈಮಾಸಿಕದಲ್ಲಿ ಸರಿಸುಮಾರು ದುಪ್ಪಟ್ಟಾಗುವ ಮೂಲಕ 43,719ಕ್ಕೆ ತಲುಪಿದೆ ಎಂದು ಕಂಪನಿ ಹೇಳಿದೆ.

55
ತ್ರೈಮಾಸಿಕ ನಷ್ಟದಲ್ಲಿ 42 ರಷ್ಟು ಭಾರಿ ಕಡಿತ

ವಾಹನ ಮಾರಾಟದ ಸುಧಾರಣೆಯ ಜೊತೆಗೆ ಕಂಪನಿಯು ತನ್ನ ಆರ್ಥಿಕ ನಷ್ಟದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಕಂಪನಿಯು ಮಾರ್ಚ್ ತ್ರೈಮಾಸಿಕದಲ್ಲಿ (Q4 FY26) ತನ್ನ ಏಕೀಕೃತ ನಿವ್ವಳ ನಷ್ಟವನ್ನು ಶೇಕಡಾ 42 ರಷ್ಟು ಕಡಿಮೆ ಮಾಡಿಕೊಂಡಿದೆ. ಇದರಿಂದಾಗಿ ಕಂಪನಿಯ ನಷ್ಟದ ಪ್ರಮಾಣವು 870 ಕೋಟಿ ರೂಪಾಯಿಗಳಿಂದ 500 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಆದರೆ, ನಷ್ಟದ ಪ್ರಮಾಣ ತಗ್ಗಿದ್ದರೂ ಇದೇ ಅವಧಿಯಲ್ಲಿ ಕಂಪನಿಯ ಒಟ್ಟಾರೆ ಆದಾಯ ಮತ್ತು ವಾಹನಗಳ ಉತ್ಪಾದನಾ ಪ್ರಮಾಣದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಈ ಪರಿಸ್ಥಿತಿಯನ್ನು ಕಂಪನಿಯು ತನ್ನ ವ್ಯವಹಾರವನ್ನು ಮರುಹೊಂದಿಸುವ ಮಹತ್ವದ ವರ್ಷ (Year of Reset) ಎಂದು ಬಣ್ಣಿಸಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories