ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ, ಅಂಬಾನಿ ಒಡೆತನದ ಕಂಪೆನಿಯ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ ಅನ್ನೋ ಸುದ್ದಿ ಈ ಹಿಂದೆ ಕೇಳಿಬಂದಿತ್ತು. ಸದ್ಯ, ಮತ್ತೊಮ್ಮೆ ಇಶಾ ಅಂಬಾನಿ ಒಡೆತನದ ಈ ಸಂಸ್ಥೆಯಲ್ಲಿ ಸ್ಯಾಲರಿಯಿಲ್ಲದೆ ಉದ್ಯೋಗಿಗಳು ಕಂಗೆಟ್ಟಿದ್ದಾರೆ ಎಂದು ತಿಳಿದುಬಂದಿದೆ
ಇಶಾ ಅಂಬಾನಿ ಬೆಂಬಲಿತ ಕ್ವಿಕ್ ಗ್ರೋಸರಿ ಡೆಲಿವರಿ ಪ್ರೊವೈಡರ್ ಡಂಜೊ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸಲು ವಿಫಲವಾಗಿದೆ. ವರದಿಯ ಪ್ರಕಾರ, ಕಂಪನಿಯು ಆದಾಯ ಹಣಕಾಸು ಸಂಸ್ಥೆ ಒನ್‌ಟ್ಯಾಪ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದರೂ ಡಂಜೊ ಉದ್ಯೋಗಿಗಳು ತಮ್ಮ ನವೆಂಬರ್ ತಿಂಗಳ ಸಂಬಳವನ್ನು ಪಡೆದಿಲ್ಲ ಎಂದು ಹೇಳಲಾಗ್ತಿದೆ..
ಈ ವಾರದ ಆರಂಭದಲ್ಲಿ, ಕಂಪೆನಿಯು ತಮ್ಮ ಹೂಡಿಕೆದಾರರಿಂದ ಮುಂದಿನ ವಾರದ ಆರಂಭದಲ್ಲಿ ನಿರೀಕ್ಷಿತ ಹಣವನ್ನು ಪಡೆಯುತ್ತಿದೆ ಎಂದು ಉದ್ಯೋಗಿಗಳಿಗೆ ತಿಳಿಸಿತ್ತು. ಈ ಹಣ ತಲುಪಿದ ತಕ್ಷಣ ನವೆಂಬರ್ ತಿಂಗಳ ಸಂಬಳವನ್ನು ನೀಡಲು ಸಾಧ್ಯವಾಗುತ್ತದೆ ಎಂದಿತ್ತು. ಆದರೆ ಆ ಭರವಸೆಯನ್ನ ಈಡೇರಿಸಲು ಸಾಧ್ಯವಾಗಿಲ್ಲ.
ಕಂಪೆನಿ ತನ್ನ ಪ್ರಕಟಣೆಯಲ್ಲಿ, 'ಡಿಸೆಂಬರ್ 15, 2023ರ ಮೊದಲು ನಾವು ಹಳೆಯ ಸ್ಯಾಲರಿಯನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಇತರ ಪರ್ಯಾಯಗಳನ್ನು ಹುಡುಕಲು ಎಲ್ಲಾ ಅತ್ಯುತ್ತಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಸಂಬಳ ವಿಳಂಬಕ್ಕೆ ವಿಷಾದಿಸುತ್ತೇನೆ ಮತ್ತು ನಿಮ್ಮ ನಿರಂತರ ಬೆಂಬಲವನ್ನು ಕೋರುತ್ತೇನೆ' ಎಂದು ತಿಳಿಸಿದೆ.
Dunzo ಈ ವರ್ಷ ತಮ್ಮ ಉದ್ಯೋಗಿಗಳ ಸಂಬಳವನ್ನು ಹಲವು ಬಾರಿ ವಿಳಂಬಗೊಳಿಸಿದೆ. FY23ರಲ್ಲಿ 1,800 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿದೆ. ಇದು ಹಿಂದಿನ ವರ್ಷಕ್ಕಿಂತ 288 ಶೇಕಡಾ ಹೆಚ್ಚಳವಾಗಿದೆ. ಸಹ-ಸಂಸ್ಥಾಪಕರು ಮತ್ತು ಅದರ ಹಣಕಾಸು ಮುಖ್ಯಸ್ಥರು ಸೇರಿದಂತೆ ಹಲವಾರು ಉನ್ನತ ಮಟ್ಟದ ಕಾರ್ಯನಿರ್ವಾಹಕರ ನಿರ್ಗಮನದಿಂದ ಕಂಪನಿಗೆ ಹೊಡೆತ ಬಿದ್ದಿದೆ.
2014ರಲ್ಲಿ ಕಬೀರ್ ಬಿಸ್ವಾಸ್, ಅಂಕುರ್ ಅಗರ್ವಾಲ್, ದಲ್ವಿರ್ ಸೂರಿ ಮತ್ತು ಮುಕುಂದ್ ಝಾ ಸ್ಥಾಪಿಸಿದ ಈ ಸ್ಟಾರ್ಟ್ಅಪ್ ಆರಂಭದಲ್ಲಿ ಲಾಭದಲ್ಲೇ ಸಾಗಿತ್ತು. ಗೂಗಲ್ ಮತ್ತು ಲೈಟ್‌ಬಾಕ್ಸ್‌ನಂತಹ ದೈತ್ಯ ಕಂಪೆನಿಗಳ ಗಮನ ಸೆಳೆಯಿತು. ಇಶಾ ಅಂಬಾನಿಯವರ ರಿಲಯನ್ಸ್ ರಿಟೇಲ್ ಕಳೆದ ವರ್ಷ ಜನವರಿಯಲ್ಲಿ ಸುಮಾರು 1641 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಡಂಜೊದಲ್ಲಿ ಸುಮಾರು 25% ಪಾಲನ್ನು ಖರೀದಿಸಿತು.
ಆ ನಂತರ ಡಂಜೊ ನಷ್ಟದಲ್ಲೇ ಸಾಗುತ್ತಿದೆ. ತಿಂಗಳ ಹಿಂದೆ ಡಂಜೊ ಸಹ-ಸಂಸ್ಥಾಪಕರಾದ ದಲ್ವಿರ್ ಸೂರಿ ಸಂಸ್ಥೆಯಿಂದ ನಿರ್ಗಮಿಸಿದ್ದರು. ಹೀಗಾಗಿ ಅಂಬಾನಿ ಒಡೆತನದ ಸಂಸ್ಥೆ ನಗದು ಕೊರತೆಯನ್ನು ಅನುಭವಿಸುತ್ತಿದೆ ಎಂಬುದು ಸ್ಪಷ್ಟವಾಗಿತ್ತು.
ಡಂಜೊ ಮರ್ಚೆಂಟ್ ಸರ್ವಿಸಸ್ (ಡಿಎಂಎಸ್) ನಂತಹ ಹೊಸ ವ್ಯವಹಾರಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಂಜೊ ಸಹ-ಸಂಸ್ಥಾಪಕ ದಲ್ವಿರ್ ಸೂರಿ, ಸಂಸ್ಥೆಯಿಂದ ನಿರ್ಗಮಿಸಿದ್ದಾರೆ ಎಂದು ಸಿಇಒ ಕಬೀರ್ ಬಿಸ್ವಾಸ್ ಘೋಷಿಸಿದ್ದರು.