ಇಂದು ಬಿಲಿಯನೇರ್ ಆಗಿರುವ ಅದೆಷ್ಟೋ ಮಂದಿ ಈ ಮಟ್ಟಿನ ಯಶಸ್ಸನ್ನು ತಲುಪಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕಡುಬಡತನದಲ್ಲಿ ಬೆಳೆದು ವಿದ್ಯಾಭ್ಯಾಸಕ್ಕೂ ಹಣವಿಲ್ಲದೆ ಒದ್ದಾಡಿದವರಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ದೈತ್ಯ ಸಾಮ್ರಾಜ್ಯಗಳನ್ನು ನಿರ್ಮಿಸಿದ ಅನೇಕ ಉದ್ಯಮಿಗಳಿದ್ದಾರೆ. ಅಂತಹ ಉದ್ಯಮಿಗಳಲ್ಲೊಬ್ಬರು ಕೈಲಾಶ್ ಕಾಟ್ಕರ್.
ಕೈಲಾಶ್ ಕಾಟ್ಕರ್ ಅವರು ಭಾರತದ ಪ್ರಮುಖ ಸೈಬರ್ ಸೆಕ್ಯುರಿಟಿ ಕಂಪನಿಯಾದ ಕ್ವಿಕ್ ಹೀಲ್‌ನ ಸಂಸ್ಥಾಪಕರು. ಈಗ ಕ್ವಿಕ್ ಹೀಲ್ ದೈತ್ಯ ಕಂಪೆನಿಯಾಗಿ ಮಾರ್ಪಟ್ಟಿದೆ. 1,40,000 ಕೋಟಿ ರೂ. ಲಾಭವನ್ನು ಗಳಿಸುತ್ತಿದೆ. ಆದರೆ ಕೈಲಾಶ್ ಅವರ ಪರಿಸ್ಥಿತಿ ಆರಂಭದಲ್ಲಿ ಇಷ್ಟು ಉತ್ತಮವಾಗಿರಲ್ಲಿಲ್ಲ. ಹಲವಾರು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ ನಂತರವಷ್ಟೇ ಕೈಲಾಶ್ ಅವರಿಗೆ ಬೃಹತ್ ಉದ್ಯಮ ನಿರ್ಮಿಸಲು ಸಾಧ್ಯವಾಯಿತು.
ಮಹಾರಾಷ್ಟ್ರದ ರಹಿಮತ್‌ಪುರದ ಬಡ ಕುಟುಂಬದಲ್ಲಿ ಜನಿಸಿದ ಕೈಲಾಶ್ 9ನೇ ತರಗತಿಯಲ್ಲಿದ್ದಾಗ ಆರ್ಥಿಕ ಸಮಸ್ಯೆಯನ್ನು ಎದುರಿಸಿದ ಕಾರಣ ಶಾಲೆಯನ್ನು ತೊರೆಯಬೇಕಾಯಿತು. ಯಾವುದೇ ಪದವಿ ಇಲ್ಲದೆ ಉದ್ಯೋಗವನ್ನು ಸಾಕಷ್ಟು ಕಷ್ಟಪಡಬೇಕಾಯಿತು. ಆದರೆ ಕೈಲಾಶ್ ಭರವಸೆ ಕಳೆದುಕೊಳ್ಳಲಿಲ್ಲ. ರೇಡಿಯೊ ಮತ್ತು ಕ್ಯಾಲ್ಕುಲೇಟರ್ ರಿಪೇರಿ ಅಂಗಡಿಯಲ್ಲಿ ಉದ್ಯೋಗ ಮಾಡಲು ಆರಂಭಿಸಿದರು.
ಸಣ್ಣ ಉದ್ಯೋಗಕ್ಕೆ ಕೈಲಾಶ್ ಅವರಿಗೆ ತಿಂಗಳಿಗೆ 400 ರೂ. ನೀಡಲಾಗುತ್ತಿತ್ತು. 1991ರಲ್ಲಿ, ಕೈಲಾಶ್ ಪುಣೆಯಲ್ಲಿ 15,000 ರೂಪಾಯಿಗಳ ಹೂಡಿಕೆಯೊಂದಿಗೆ ಸ್ವಂತ ಅಂಗಡಿಯನ್ನು ತೆರೆದರು. ಈ ನಡುವೆ ಕೈಲಾಶ್ ಅವರ ಸಹೋದರ ಕುಟುಂಬದ ಆರ್ಥಿಕ ಸಂಕಷ್ಟದಿಂದ ಶಿಕ್ಷಣ ಮುಂದುವರಿಸಲು ಪರದಾಡುತ್ತಿದ್ದರು. ಹೀಗಾಗಿ ಕೈಲಾಶ್ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಲು ತಮ್ಮ ಸಹೋದರನ 5,000 ರೂ. ಶುಲ್ಕ ಪಾವತಿಸಿದರು.
ಈ ಮಧ್ಯೆ, ಭವಿಷ್ಯವನ್ನು ಕಂಪ್ಯೂಟರ್‌ಗಳು ಆಳುತ್ತವೆ ಎಂದು ಕೈಲಾಶ್‌ಗೆ ಅರ್ಥವಾಯಿತು. ಅವರು 22 ನೇ ವಯಸ್ಸಿನಲ್ಲಿ ಬ್ಯಾಂಕಿನಲ್ಲಿ ಮೊದಲ ಬಾರಿಗೆ ಕಂಪ್ಯೂಟರ್‌ನ್ನು ನೋಡಿದರು ಮತ್ತು ಅವರು ಕಂಪ್ಯೂಟರ್ ಖರೀದಿಸಲು 50,000 ರೂ. ನೀಡಿದರು. 1993ರಲ್ಲಿ, ಕೈಲಾಶ್ ಕಂಪ್ಯೂಟರ್‌ಗಳ ದುರಸ್ತಿ ಮತ್ತು ನಿರ್ವಹಣೆಯನ್ನು ಒದಗಿಸುವ CAT ಕಂಪ್ಯೂಟರ್ ಸೇವೆಗಳ ಕಂಪನಿಯನ್ನು ಸ್ಥಾಪಿಸಿದರು.
ಈ ಸಮಯದಲ್ಲಿ, ರಿಪೇರಿಗೆ ಬಂದ ಹೆಚ್ಚಿನ ಕಂಪ್ಯೂಟರ್‌ಗಳು ವೈರಸ್ ಅಟ್ಯಾಕ್ಡ್ ಎಂದು ಅವರು ಅರ್ಥಮಾಡಿಕೊಂಡರು. ಹೀಗಾಗಿ ಅವರು ತಮ್ಮ ಕಿರಿಯ ಸಹೋದರನನ್ನು ಆಂಟಿವೈರಸ್ ಕ್ಷೇತ್ರದ ಮೇಲೆ ಕೇಂದ್ರೀಕರಿಸಲು ಕೇಳಿಕೊಂಡರು. ಕೈಲಾಶ್ ಮತ್ತು ಸಂಜಯ್ ಕಾಟ್ಕರ್ ಇಬ್ಬರೂ ತಮ್ಮ ರಿಪೇರಿ ಅಂಗಡಿಯಿಂದ ಆಂಟಿ-ವೈರಸ್ ಅನ್ನು ಅಭಿವೃದ್ಧಿಪಡಿಸಿದರು ಮತ್ತು ವೈರಸ್ ಅಟ್ಯಾಕ್‌ಡ್ ಕಂಪ್ಯೂಟರ್‌ಗಳಲ್ಲಿ ಅದನ್ನು ಪರೀಕ್ಷಿಸಿದರು.
ಕ್ರಮೇಣ, ಕಾಟ್ಕರ್ ಸಹೋದರರು ತಮ್ಮ ಗಮನವನ್ನು ಹಾರ್ಡ್‌ವೇರ್ ರಿಪೇರಿಯಿಂದ ಆಂಟಿವೈರಸ್ ಸಾಫ್ಟ್‌ವೇರ್‌ಗೆ ಬದಲಾಯಿಸಲು ಪ್ರಾರಂಭಿಸಿದರು. 1995 ರಲ್ಲಿ, ಅವರು ಮೊದಲ ಕ್ವಿಕ್ ಹೀಲ್ ಉತ್ಪನ್ನವನ್ನು ರೂ 700 ಗೆ ಬಿಡುಗಡೆ ಮಾಡಿದರು. ಇದು ಅವರಿಗೆ ಬಿಸಿನೆಸ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸಿತು.
ಇಂದು, ಕೈಲಾಶ್ ಕಾಟ್ಕರ್ ಅವರು ಕಂಪನಿಯ ಎಂಡಿ ಮತ್ತು ಸಿಇಒ ಆಗಿದ್ದಾರೆ ಮತ್ತು ಸಂಜಯ್ ಕಾಟ್ಕರ್ ಅವರು ಸಂಸ್ಥೆಯ ಜಂಟಿ ಎಂಡಿಯಾಗಿದ್ದಾರೆ. ಕಂಪನಿಯು 2023 ರ ವೇಳೆಗೆ 1,40,000 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಗಳಿಸಿದೆ.