ನಿವೃತ್ತ ಶಿಕ್ಷಕಿ ವೀಣಾ ದೇವಿ ಅವರು ಮನೆಯಿಂದಲೇ ಆರಂಭಿಸಿದ 'ಮಾಮ್ಸ್ ಮೇಡ್' ತಿಂಡಿ ವ್ಯಾಪಾರವು ಇಂದು 15 ಕೋಟಿ ರೂಪಾಯಿ ವಹಿವಾಟು ನಡೆಸುವ ದೊಡ್ಡ ಬ್ರ್ಯಾಂಡ್ ಆಗಿದೆ. ಬಿಹಾರದ ಸಾಂಪ್ರದಾಯಿಕ 'ಥೇಕುವಾ' ತಿಂಡಿಯ ಮೂಲಕ ಯಶಸ್ಸು ಕಂಡ ಇವರು, ಸುಮಾರು 50 ಮಹಿಳೆಯರಿಗೆ ಉದ್ಯೋಗ ನೀಡಿ ಸ್ಫೂರ್ತಿಯಾಗಿದ್ದಾರೆ.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವಿದ್ದರೆ ವಯಸ್ಸು ಅಥವಾ ವೃತ್ತಿ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ವೀಣಾ ದೇವಿ ಅವರೇ ಸಾಕ್ಷಿ. ಬಿಹಾರದಲ್ಲಿ 15 ವರ್ಷಗಳ ಕಾಲ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿದ್ದ ವೀಣಾ ದೇವಿ, ಇಂದು ಬೆಂಗಳೂರಿನಲ್ಲಿ 'ಮಾಮ್ಸ್ ಮೇಡ್' (MomsMade) ಎಂಬ ಯಶಸ್ವಿ ತಿಂಡಿ ಬ್ರ್ಯಾಂಡ್‌ನ ಮಾಲೀಕಿ.
ನಿವೃತ್ತಿಯ ನಂತರ ಸುಮ್ಮನೆ ಕೂರಲಿಲ್ಲ
ಕೆಲವು ವರ್ಷಗಳ ಹಿಂದೆ ವೀಣಾ ದೇವಿ ತಮ್ಮ ಮಗ ಸಮೀರ್ ಜೊತೆ ಬೆಂಗಳೂರಿಗೆ ವಲಸೆ ಬಂದರು. ದಶಕಗಳ ಕಾಲ ಶಿಕ್ಷಕಿಯಾಗಿ ಸಕ್ರಿಯವಾಗಿದ್ದ ಅವರಿಗೆ ಮನೆಯಲ್ಲಿ ಸುಮ್ಮನೆ ಕೂರುವುದು ಕಷ್ಟವೆನಿಸಿತು. ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನ ಮಹಿಳೆಯರು ಮನೆಯಿಂದಲೇ ಸಣ್ಣಪುಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಕಂಡ ವೀಣಾ ದೇವಿ, ತಾವೂ ಯಾಕೆ ಏನಾದರೂ ಮಾಡಬಾರದು ಎಂದು ಯೋಚಿಸಿದರು. ಹಾಗೆ ಹುಟ್ಟಿಕೊಂಡಿದ್ದೇ 'ಅಪ್ನಾ ಕಿಚನ್'.
25
ಬಿಹಾರದ ಸ್ಪೆಷಲ್ 'ಥೇಕುವಾ' ತಂದ ತಿರುವು
ಆರಂಭದಲ್ಲಿ ವೀಣಾ ದೇವಿ ನಮ್ಕೀನ್ ಮತ್ತು ದಾಲ್‌ಭೂಟೆಯಂತಹ ಸಾಮಾನ್ಯ ತಿಂಡಿಗಳನ್ನು ತಯಾರಿಸುತ್ತಿದ್ದರು. ಮಗ ಸಮೀರ್ ಒಂದು ಸಲಹೆ ನೀಡಿದ. ಬಿಹಾರದ ಛತ್ ಪೂಜೆಯ ಸಂದರ್ಭದಲ್ಲಿ ತಯಾರಿಸುವ ಸಾಂಪ್ರದಾಯಿಕ ಸಿಹಿ ತಿಂಡಿ 'ಥೇಕುವಾ' (Thekua) ತಯಾರಿಸಲು ಹೇಳಿದ. ಅಮ್ಮನ ಕೈರುಚಿಯಲ್ಲಿ ಮೂಡಿಬಂದ ಬೆಲ್ಲದ ಥೇಕುವಾ ಅಪಾರ್ಟ್‌ಮೆಂಟ್‌ನ ಜನರಿಗೆ ಎಷ್ಟು ಇಷ್ಟವಾಯಿತೆಂದರೆ, ದಿನಕ್ಕೆ 10-20 ಬರುತ್ತಿದ್ದ ಆರ್ಡರ್‌ಗಳು ನೋಡನೋಡುತ್ತಿದ್ದಂತೆ 100ರ ಗಡಿ ದಾಟಿತು.
35
15 ಕೋಟಿ ರೂಪಾಯಿ ವಹಿವಾಟು, 50 ಮಹಿಳೆಯರಿಗೆ ಉದ್ಯೋಗ
ಇಂದು ವೀಣಾ ದೇವಿ ಮತ್ತು ಸಮೀರ್ ಅವರ ಈ ಪುಟ್ಟ ಸಾಹಸ 'ಮಾಮ್ಸ್ ಮೇಡ್' ಹೆಸರಿನಲ್ಲಿ ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ. ಇಂದು ಇವರು ದಿನಕ್ಕೆ ಸುಮಾರು 1,000ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪೂರೈಸುತ್ತಿದ್ದಾರೆ. ವರದಿಗಳ ಪ್ರಕಾರ, ಈ ಕಂಪನಿಯ ವಾರ್ಷಿಕ ವಹಿವಾಟು ಸುಮಾರು 15 ಕೋಟಿ ರೂಪಾಯಿ! ವಿಶೇಷವೆಂದರೆ, ಇಲ್ಲಿ ಕೇವಲ ವ್ಯಾಪಾರ ನಡೆಯುತ್ತಿಲ್ಲ; ವೀಣಾ ದೇವಿ ಅವರು ಸುಮಾರು 50 ಮಂದಿ ಮಹಿಳೆಯರಿಗೆ ಉದ್ಯೋಗ ನೀಡಿ ಅವರಿಗೆ ಆಸರೆಯಾಗಿದ್ದಾರೆ.
ಮನೆಯಲ್ಲಿ ನಾಲ್ಕು ಜನಕ್ಕೆ ಮಾಡುವಾಗ ಅಳತೆ ಬೇಕಿರಲಿಲ್ಲ, ಅಮ್ಮನ ಕೈಗುಣವೇ ಸಾಕಿತ್ತು. ಆದರೆ ಸಾವಿರಾರು ಜನರಿಗೆ ಮಾಡುವಾಗ ರುಚಿ ಬದಲಾಗಬಾರದು ಎಂಬುದು ವೀಣಾ ಅವರ ಮುಂದಿದ್ದ ಸವಾಲು. ಇದಕ್ಕಾಗಿ ಅವರು ತಮ್ಮ ತಾಯಿ ಕಲಿಸಿಕೊಟ್ಟ ಪಾಕವಿಧಾನವನ್ನೇ ಆಧರಿಸಿ ಒಂದು ನಿರ್ದಿಷ್ಟ ಅಳತೆಗೋಲನ್ನು (SOP) ಸಿದ್ಧಪಡಿಸಿದರು. ಇದರಿಂದಾಗಿ ಇಂದಿಗೂ ಪ್ರತಿ ಥೇಕುವಾ ಸವಿಯುವಾಗ ಗ್ರಾಹಕರಿಗೆ ಮನೆಯಲ್ಲೇ ಮಾಡಿದ ಅನುಭವ ಸಿಗುತ್ತಿದೆ.
55
ಬದುಕು ಕಟ್ಟಿಕೊಳ್ಳಲು ದಾರಿದೀಪ
ಇತ್ತೀಚೆಗೆ ಪ್ರಖ್ಯಾತ ಟೆಕ್ ಹೂಡಿಕೆದಾರ ಆದಿತ್ಯ ಸಿಂಗ್ ಈ ಕಂಪನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರ ಸಂಸ್ಥೆ ಈ ಸ್ಟಾರ್ಟ್ ಅಪ್ ಮೇಲೆ 1.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಕೇವಲ ಒಂದು ವರ್ಷದಲ್ಲಿ ಕಂಪನಿಯು 15 ಪಟ್ಟು ಪ್ರಗತಿ ಸಾಧಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಹಾರದ ಹಳ್ಳಿಯ ತಿಂಡಿ ಥೇಕುವಾ, ಇಂದು ಬೆಂಗಳೂರಿನ ಮಾರುಕಟ್ಟೆ ದಾಟಿ ದೇಶದಾದ್ಯಂತ ಮನೆಮಾತಾಗುತ್ತಿದೆ. ವೀಣಾ ದೇವಿ ಅವರ ಈ ಕಥೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಯಸುವ ಸಾವಿರಾರು ಮಹಿಳೆಯರಿಗೆ ದಾರಿದೀಪವಾಗಿದೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.