ಬೆಂಗಳೂರಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗದಲ್ಲಿ 3 ದಿನಗಳ ಸಿಎಂಆರ್‌ಎಸ್ ಸುರಕ್ಷತಾ ತಪಾಸಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗವು ಸಾರ್ವಜನಿಕ ಬಳಕೆಗೆ ಮುಕ್ತವಾದರೆ, ನಮ್ಮ ಮೆಟ್ರೋದ ಒಟ್ಟು ಕಾರ್ಯಾಚರಣಾ ಜಾಲವು 100 ಕಿ.ಮೀ ಗಡಿ ದಾಟಲಿದೆ.
ಮೂರು ದಿನಗಳ ಮಹತ್ವದ ಶಾಸನಬದ್ಧ ಸುರಕ್ಷತಾ ತಪಾಸಣೆ ಯಶಸ್ವಿಯಾಗಿ ಪೂರ್ಣ
ಬೆಂಗಳೂರು (ಅ.08): ಬನ್ನೇರುಘಟ್ಟ ರಸ್ತೆ ಹಾಗೂ ದಕ್ಷಿಣ ಬೆಂಗಳೂರಿನ ಜನತೆಯ ಬಹುನಿರೀಕ್ಷಿತ 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದ (Pink Line) ವಾಣಿಜ್ಯ ಸಂಚಾರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಉದ್ದದ ಎತ್ತರಿಸಿದ (Elevated) ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ನಡೆಸುತ್ತಿದ್ದ ಮೂರು ದಿನಗಳ ಮಹತ್ವದ ಶಾಸನಬದ್ಧ ಸುರಕ್ಷತಾ ತಪಾಸಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.
25
ಮೂರು ದಿನಗಳ ಕಾಲ ನಡೆದ ಪರಿಶೀಲನೆ:
ದಕ್ಷಿಣ ವಲಯದ ಸಿಎಂಆರ್‌ಎಸ್ ಆಯುಕ್ತರಾದ ಶ್ರೀ ವಿ. ವೆಂಕಟಸುಬ್ರಮಣಿಯನ್ ಅವರ ನೇತೃತ್ವದ ತಜ್ಞರ ತಂಡವು ಅಕ್ಟೋಬರ್ 6 ರಿಂದ 8 ರವರೆಗೆ ಸತತ ಮೂರು ದಿನಗಳ ಕಾಲ ಮಾರ್ಗದುದ್ದಕ್ಕೂ ಸಾಲು ಸಾಲು ಪರೀಕ್ಷೆಗಳನ್ನು ನಡೆಸಿದೆ.
ಅಕ್ಟೋಬರ್ 6: ಮುಖ್ಯ ಮಾರ್ಗ ಹಾಗೂ ಅದಕ್ಕೆ ಸಂಬಂಧಿಸಿದ ಸಿವಿಲ್ ಮೂಲಸೌಕರ್ಯಗಳನ್ನು ಮೋಟಾರ್ ಟ್ರಾಲಿ ಮೂಲಕ ಕೂಲಂಕಷವಾಗಿ ಪರಿಶೀಲಿಸಲಾಯಿತು.
ಅಕ್ಟೋಬರ್ 7: ಕೊತ್ತನೂರು ಡಿಪೋದಲ್ಲಿರುವ ಸೌಲಭ್ಯಗಳನ್ನು ತಪಾಸಣೆ ಮಾಡಿದ್ದಲ್ಲದೆ, ಮುಖ್ಯ ಮಾರ್ಗದಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ (Train trials and testing) ನಡೆಸಿ ವೇಗ ಮತ್ತು ನಿಯಂತ್ರಣವನ್ನು ಪರಿಶೀಲಿಸಲಾಯಿತು.
ಅಕ್ಟೋಬರ್ 8: ಬೈಯಪ್ಪನಹಳ್ಳಿಯಲ್ಲಿರುವ ಅತ್ಯಾಧುನಿಕ ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ (OCC) ಭೇಟಿ ನೀಡಿ ಸಿಗ್ನಲಿಂಗ್ ಹಾಗೂ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯನ್ನು ಪರೀಕ್ಷಿಸುವ ಮೂಲಕ ತಪಾಸಣೆಯನ್ನು ಪೂರ್ಣಗೊಳಿಸಲಾಯಿತು.
35
ಗುಲಾಬಿ ಮಾರ್ಗದ 6 ಪ್ರಮುಖ ನಿಲ್ದಾಣಗಳು:
ಈ ಎತ್ತರಿಸಿದ ಮಾರ್ಗವು ಒಟ್ಟು 6 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ:
ಕಾಳೇನ ಅಗ್ರಹಾರ (Kalena Agrahara)
ಹುಳಿಮಾವು (Hulimavu)
ಐಐಎಂಬಿ (IIMB)
ಜೆ.ಪಿ. ನಗರ 4ನೇ ಹಂತ (JP Nagar 4th Phase)
ಜಯದೇವ ಆಸ್ಪತ್ರೆ (Jayadeva Hospital - ಇಂಟರ್‌ಚೇಂಜ್ ನಿಲ್ದಾಣ)
ಬಿಎಂಆರ್‌ಸಿಎಲ್ ಈಗಾಗಲೇ ಆಗಸ್ಟ್‌ನಲ್ಲಿ ಆರ್‌ಡಿಎಸ್ಒ (RDSO) ಸಂಸ್ಥೆಯಿಂದ ವೇಗ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಇದಾದ ಬಳಿಕ ರೈಲ್ವೆ ಮಂಡಳಿಯಿಂದ ಮೆಟ್ರೋ ಬೋಗಿಗಳಿಗೆ ತಾತ್ಕಾಲಿಕ ಅನುಮೋದನೆ ಮತ್ತು ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರಿಂದ (ISA) ಸಿಗ್ನಲಿಂಗ್ ವ್ಯವಸ್ಥೆಗೆ ಸುರಕ್ಷತಾ ಪ್ರಮಾಣೀಕರಣ ದೊರೆತಿದೆ. ಈಗ ಸಿಎಂಆರ್‌ಎಸ್ ಪರಿಶೀಲನಾ ವರದಿ ಕೈಸೇರಲಿದ್ದು, ಅವರು ನೀಡುವ ಅಂತಿಮ ಷರತ್ತುಗಳನ್ನು ಪಾಲಿಸಿದ ಬಳಿಕ ಸಾರ್ವಜನಿಕ ಸೇವೆಗೆ ಅಧಿಕೃತ ಹಸಿರು ನಿಶಾನೆ ದೊರೆಯಲಿದೆ.
55
100 ಕಿ.ಮೀ ಗಡಿ ದಾಟಲಿರುವ ನಮ್ಮ ಮೆಟ್ರೋ!
ಈ 7.5 ಕಿ.ಮೀ ಮಾರ್ಗವು ಸಾರ್ವಜನಿಕ ಬಳಕೆಗೆ ಮುಕ್ತವಾದ ಬೆನ್ನಲ್ಲೇ, ನಮ್ಮ ಮೆಟ್ರೋದ ಒಟ್ಟು ಕಾರ್ಯಾಚರಣಾ ಜಾಲವು ಪ್ರಸ್ತುತ ಇರುವ 96.10 ಕಿ.ಮೀ ನಿಂದ ಬರೋಬ್ಬರಿ 103.60 ಕಿ.ಮೀಗೆ ವಿಸ್ತರಣೆಯಾಗಲಿದೆ. ಇದರೊಂದಿಗೆ ದೇಶದಲ್ಲೇ 100 ಕಿ.ಮೀಗೂ ಹೆಚ್ಚು ವಿಸ್ತಾರವಾದ ಮೆಟ್ರೋ ಹೊಂದಿದ ನಗರಗಳ ಸಾಲಿಗೆ ಬೆಂಗಳೂರು ಸೇರ್ಪಡೆಯಾಗಲಿದೆ. ಬನ್ನೇರುಘಟ್ಟ ರಸ್ತೆಯ ಭೀಕರ ಟ್ರಾಫಿಕ್ ಕಿರಿಕಿರಿಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಈ ಮಾರ್ಗ ದೊಡ್ಡ ವರದಾನವಾಗಲಿದೆ.