Home organization apps: ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಈಗ ಮನೆಗೆಲಸದವರ ನೇಮಕಾತಿಯಲ್ಲಿ ದೊಡ್ಡ ಬದಲಾವಣೆ ಗಾಳಿ ಬೀಸುತ್ತಿದ್ದು, ಜನರು ಆ್ಯಪ್ ಆಧಾರಿತ ಸೇವೆಗಳನ್ನು ಬಳಸುತ್ತಿದ್ದಾರೆ. ಆರು ತಿಂಗಳಲ್ಲಿ ಈ ಸೇವೆಗಳಿಗೆ ಬೇಡಿಕೆ ಹತ್ತು ಪಟ್ಟು ಹೆಚ್ಚಾಗಿರುವುದು ಇದಕ್ಕೆ ಸಾಕ್ಷಿ.
ನಗರವಾಸಿಗಳು ಈಗ ಮನೆಗೆಲಸದವರ ನೇಮಕಾತಿಗಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬಟ್ಟೆಗಳನ್ನು ಜೋಡಿಸುವುದು, ವಾರ್ಡ್‌ರೋಬ್ ವ್ಯವಸ್ಥಿತಗೊಳಿಸುವುದು, ಬೆಳ್ಳುಳ್ಳಿ ಸುಲಿಯುವುದು ಅಥವಾ ದಾಳಿಂಬೆ ಬಿಡಿಸುವುದರಿಂದ ಹಿಡಿದು ವಾರಾಂತ್ಯದ ಪಾರ್ಟಿಗಳಿಗೆ ಮನೆ ಸಿದ್ಧಪಡಿಸುವವರೆಗೆ ಪ್ರತಿಯೊಂದು ಕೆಲಸಕ್ಕೂ ಜನರು ಈಗ ಆ್ಯಪ್ ಆಧಾರಿತ ಸೇವೆಗಳನ್ನು ಬಳಸುತ್ತಿದ್ದಾರೆ. ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಈ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ.
25
ಹೆಚ್ಚಿನ ಕೆಲಸದ ಒತ್ತಡವಿದ್ದಾಗ
ಬೆಂಗಳೂರು ಮೂಲದ 'ಸ್ನ್ಯಾಬಿಟ್' (Snabbit) ಸಂಸ್ಥೆಯು ಕಳೆದ ಆರು ತಿಂಗಳ ಅವಧಿಯಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿದೆ. 2025ರ ಆಗಸ್ಟ್‌ನಲ್ಲಿ ತಿಂಗಳಿಗೆ 1 ಲಕ್ಷ ಕೆಲಸಗಳನ್ನು ನೀಡುತ್ತಿದ್ದ ಈ ಸಂಸ್ಥೆ, ಈಗ ತಿಂಗಳಿಗೆ 10 ಲಕ್ಷ ಆರ್ಡರ್‌ಗಳನ್ನು ಪಡೆಯುತ್ತಿದೆ. "ನಿಯಮಿತವಾಗಿ ಕೆಲಸಕ್ಕೆ ಬರುವವರು ರಜೆ ಹಾಕಿದಾಗ ಅಥವಾ ಹೆಚ್ಚಿನ ಕೆಲಸದ ಒತ್ತಡವಿದ್ದಾಗ ನಮ್ಮ ಸೇವೆಗಳು ಗ್ರಾಹಕರಿಗೆ ದೊಡ್ಡ ಆಸರೆಯಾಗುತ್ತಿವೆ," ಎಂದು ಸ್ನ್ಯಾಬಿಟ್ ಸಂಸ್ಥಾಪಕ ಆಯುಷ್ ಅಗರ್ವಾಲ್ ತಿಳಿಸಿದ್ದಾರೆ.
35
ಅರ್ಬನ್ ಕಂಪನಿಯ 'ಇನ್‌ಸ್ಟಾ ಹೆಲ್ಪ್' ಹವಾ
ಇದೇ ರೀತಿಯ ಯಶಸ್ಸನ್ನು ಅರ್ಬನ್ ಕಂಪನಿ (Urban Company) ಕೂಡ ಕಾಣುತ್ತಿದೆ. ಕಳೆದ ವರ್ಷ ಆರಂಭವಾದ ಇದರ 'ಇನ್‌ಸ್ಟಾ ಹೆಲ್ಪ್' ವಿಭಾಗವು ಕೇವಲ ಎಂಟು ತಿಂಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಈ ವಿಭಾಗವು ಒಟ್ಟು 16 ಲಕ್ಷ ಆರ್ಡರ್‌ಗಳನ್ನು ಸ್ವೀಕರಿಸಿದೆ. ಅಂದರೆ ತಿಂಗಳಿಗೆ ಸರಾಸರಿ 5 ಲಕ್ಷಕ್ಕೂ ಹೆಚ್ಚು ಜನರು ಈ ಸೇವೆಯನ್ನು ಬಳಸುತ್ತಿದ್ದಾರೆ.
ಈ ಆ್ಯಪ್‌ಗಳಲ್ಲಿ ಕೆಲಸ ಮಾಡುವವರಿಗೆ ಮಾಸಿಕ 20,000 ದಿಂದ 25,000 ರೂಪಾಯಿಗಳವರೆಗೆ ಖಚಿತ ಆದಾಯವಿರುತ್ತದೆ. ಅವರಿಗೆ ಅಂದು ಎಷ್ಟು ಕೆಲಸದ ಆರ್ಡರ್‌ಗಳು ಸಿಕ್ಕಿವೆ ಎನ್ನುವುದಕ್ಕಿಂತ, ಅವರು ನಿಗದಿತ ಶಿಫ್ಟ್‌ಗಳಲ್ಲಿ ಲಭ್ಯವಿದ್ದಾರೆಯೇ ಎಂಬುದರ ಮೇಲೆ ಸಂಬಳ ನಿರ್ಧಾರವಾಗುತ್ತದೆ. ಹೂಡಿಕೆದಾರರ ಪ್ರಕಾರ, ಗ್ರಾಹಕರು ಈ ಸೇವೆಗಳನ್ನು ಪದೇ ಪದೇ ಬಳಸುತ್ತಿರುವುದು ಈ ಉದ್ಯಮದ ಸುಸ್ಥಿರತೆಗೆ ಸಾಕ್ಷಿಯಾಗಿದೆ. ಕೆಲವು ಗ್ರಾಹಕರು ತಿಂಗಳಿಗೆ ಎಂಟು ಬಾರಿ ಈ ಸೇವೆಗಳನ್ನು ಬುಕ್ ಮಾಡುತ್ತಿದ್ದಾರೆ.
55
ಉಪಯುಕ್ತ ಪೂರಕ ವ್ಯವಸ್ಥೆ
ಸದ್ಯಕ್ಕೆ ಈ ಆ್ಯಪ್‌ಗಳು ಕಾಯಂ ಮನೆಗೆಲಸದವರಿಗೆ ಸಂಪೂರ್ಣ ಪರ್ಯಾಯವಲ್ಲದಿದ್ದರೂ, ಕೆಲಸದವರ ಕೊರತೆಯ ಸಮಯದಲ್ಲಿ ನಗರವಾಸಿಗಳ ಪಾಲಿಗೆ ಅತ್ಯಂತ ಉಪಯುಕ್ತ ಪೂರಕ ವ್ಯವಸ್ಥೆಯಾಗಿ ಮಾರ್ಪಟ್ಟಿವೆ.