ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಈಗ ಹೇಗಿದೆ? ವೈದ್ಯರು ನೀಡಿರುವ ಸ್ಪಷ್ಟ ಮಾಹಿತಿ ಇಲ್ಲಿದೆ

Published : Jul 16, 2026, 10:09 AM IST

ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

PREV
14
ಯಾರೂ ಆತಂಕ ಪಡುವ ಅಗತ್ಯವಿಲ್ಲ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಉಸಿರಾಟದ ತೊಂದರೆಯಿಂದ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಚೆನ್ನಮ್ಮ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

24
ವೈದ್ಯರ ಮಾಹಿತಿ

ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸತ್ಯನಾರಾಯಣ ಮೈಸೂರು ಅವರು ಚೆನ್ನಮ್ಮ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚೆನ್ನಮ್ಮ ಅವರಿಗೆ ಸಣ್ಣ ಪ್ರಮಾಣದ ಉಸಿರಾಟದ ತೊಂದರೆ ಹಾಗೂ ಎದೆಯಲ್ಲಿ ಕಫ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ (Chest Congestion). ದಾಖಲಾದ ಸಮಯದಲ್ಲಿ ಆಕ್ಸಿಜನ್ ಮಟ್ಟದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾವುದೇ ರೀತಿಯ ಗಂಭೀರ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

34
ಚಿಕಿತ್ಸೆಗೆ ಉತ್ತಮ ಸ್ಪಂದನೆ

ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರಿಗೆ ಆಗಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. 25 ದಿನಗಳ ಹಿಂದೆಯಷ್ಟೇ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ನಿನ್ನೆ ರಾತ್ರಿ ಮತ್ತೆ ಸಮಸ್ಯೆ ಕಾಣಿಸಿಕೊಂಡ ಕಾರಣ 8:30ರ ಸುಮಾರಿಗೆ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದೆ. ಪ್ರಸ್ತುತ ಅವರಿಗೆ ಆಂಟಿ ಬಯೋಟಿಕ್ಸ್ ನೀಡಲಾಗುತ್ತಿದ್ದು, ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

44
ಆಸ್ಪತ್ರೆಗೆ ಕುಟುಂಬಸ್ಥರ ಭೇಟಿ

ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾತ್ರಿ 10:30ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ಅಲ್ಲಿದ್ದು ಪತ್ನಿಯ ಆರೋಗ್ಯ ವಿಚಾರಿಸಿದರು. ನಂತರ ಪುತ್ರ ಹೆಚ್.ಡಿ.ರೇವಣ್ಣ ಮತ್ತು ಕುಟುಂಬದ ಇತರ ಸದಸ್ಯರು ಹಾಗೂ ವೈದ್ಯರೂ ಆಗಿರುವ ದೇವೇಗೌಡರ ಅಳಿಯ ಡಾ.ಮಂಜುನಾಥ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಿರಂತರವಾಗಿ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರಿಗೆ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ, ಅಭಿಮಾನಿಗಳು ಅಥವಾ ಪಕ್ಷದ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹಾಗೂ ಕುಟುಂಬಸ್ಥರು ಮನವಿ ಮಾಡಿದ್ದಾರೆ.

Read more Photos on
click me!

Recommended Stories