ನೋಕಿಯಾ ಲ್ಯಾಪ್‌ಟ್ಯಾಪ್! ಸ್ಮಾರ್ಟ್‌ಫೋನಲ್ಲಿ ಹೋದ ಮಾನ ಲ್ಯಾಪ್‌ಟಾಪಲ್ಲಿ ಸಿಗುತ್ತಾ?

By Suvarna News  |  First Published Dec 1, 2020, 9:48 AM IST

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಜಾಲತಾಣದಲ್ಲಿ ನೋಕಿಯಾ ಲ್ಯಾಪ್‌ಟ್ಯಾಪ್ ಸರ್ಟಿಫೈಡ್ ಮಾಡಿದ ಮಾಹಿತಿ ಬಹಿರಂಗವಾಗಿದೆ. ನೋಕಿಯಾ ಮೊಬೈಲ್ ಫೋನ್‌ಗಳ ಬಳಕೆ ನೆಚ್ಚಿನ ಮಾರುಕಟ್ಟೆಯಾದ ಭಾರತದಲ್ಲಿ ಈ ಲ್ಯಾಪ್‌ಟ್ಯಾಪ್‌ಗಳು ಬಿಡುಗಡೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
 


ಸ್ಮಾರ್ಟ್‌ಫೋನ್‌ಗಳ ಮೂಲಕ ಜನಪ್ರಿಯವಾಗುತ್ತಿರುವ ನೋಕಿಯಾ ಇದೀಗ ಲ್ಯಾಪ್‌ಟ್ಯಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ನೋಕಿಯಾ ಲ್ಯಾಪ್‌ಟ್ಯಾಪ್‌ಗಳು ಸರ್ಟಿಫೈಡ್ ಆಗಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಐಎಸ್)  ಸರ್ಟಿಫೈಡ್ ಮಾಡಿದ ಪ್ರಕಾರ ನೋಕಿಯಾ ಬಿಡುಗಡೆ ಮಾಡಲಿರುವ ಲ್ಯಾಪ್‌ಟ್ಯಾಪ್‌ಗಳು ಚೀನಾದ ಟೋಂಗ್‌ಪ್ಯಾಂಗ್ ಕಂಪನಿ ತಯಾರಿಸಲಿದೆ. ಬಿಐಎಸ್ ವೆಬ್‌ಸೈಟ್‌ನಲ್ಲಿ ನೋಕಿಯಾ ಬಿಡುಗಡೆ ಮಾಡಲಿರುವ ಲ್ಯಾಪ್‌ಟ್ಯಾಪ್‌ಗಳ ಮಾಡೆಲ್‌ಗಳು ಈ ರೀತಿಯಾಗಿವೆ :  NKi510UL82S, NKi510UL85S, NKi510UL165S, NKi510UL810S, NKi510UL1610S, NKi310UL41S, NKi310UL42S, NKi310UL82S, ಮತ್ತು NKi310UL85S ಎಂದು ನೋಕಿಯಾಮೊಬ್ ವರದಿ ಮಾಡಿದೆ.

Latest Videos

undefined

ವಾಟ್ಸಾಪಿನಲ್ಲಿ Disappearing Messages ಸಕ್ರಿಯಗೊಳಿಸುವುದು ಹೇಗೆ?

ಭಾರತದಲ್ಲಿ ನೋಕಿಯಾ ಲ್ಯಾಪ್‌ಟ್ಯಾಪ್‌ಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಂಪನಿ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎಂಬುದನ್ನು ಗಮನಿಸಬೇಕು.

ಬಿಐಎಸ್‌ ವೆಬ್‌ಸೈಟ್‌ನಲ್ಲಿ ಹೆಸರಿಸರಲಾಗಿರುವ ಮೊದಲೆರಡು ಅಕ್ಷರಗಳಾದ ಎನ್‌ಕೆ ಬಹುಶಃ ಅವುಗಳ ಅರ್ಥ ನೋಕಿಯಾ ಆಗಿರಬಹುದು. ಆ ನಂತರದ ಐ5 ಅಥವಾ ಐ3 ಅಕ್ಷರಗಳು ಪ್ರೊಸೆಸರ್‌ಗಳನ್ನು ವಿವರಿಸುವ ಸಂಕೇತಗಳಾಗಿರುತ್ತವೆ. ಹಾಗೆಯೇ 10 ಎಂಬುದು ಬಹುಶಃ ಮೈಕ್ರೋಸಾಫ್ಟ್ ವಿಂಡೋಸ್ 10 ಆಪರೇಟಿಂಗ್ ಸಾಫ್ಟ್‌ವೇರ್ ಆಗಿರಬಹುದು ಎಂದು ನೋಕಿಯಾಮೊಬ್ ಊಹೆ ಮಾಡಿದೆ. ಹಾಗಾಗಿ, ಒಂದು ವೇಳೆ ನಾವು ಮಾಡೆಲ್ ನಂಬರ್‌ಗಳ ಪ್ರಕಾರ ಹೋದರೆ, ಇಂಟೆಲ್ ಕೋರ್ ಪ್ರೊಸೆಸರ್‌ಗಳಿರುವ  ಐದು ನೋಕಿಯಾ ಲ್ಯಾಪ್ ಟ್ಯಾಪ್ ಹಾಗೂ ಮತ್ತೆ ಉಳಿದ ನಾಲ್ಕು ಮಾಡೆಲ್‌ಗಳು ಇಂಟೆಲ್ ಕೋರ್ ಐ3 ನೋಕಿಯಾ ಲ್ಯಾಪ್‌ಟ್ಯಾಪ್‌ಗಳಾಗಿರಬಹುದು ಎಂದು ಊಹಿಸಬಹುದು.

ಹೊಸ ನೋಕಿಯಾ ಲ್ಯಾಪ್‌ಟಾಪ್‌ಗಳನ್ನು ಫ್ಲಿಪ್‌ಕಾರ್ಟ್ ಅಥವಾ ನೋಕಿಯಾದ ಯಾವುದೇ ಹೊಸ ಬ್ರಾಂಡ್ ಪರವಾನಗಿದಾರರು ಮಾರಾಟ ಮಾಡುತ್ತಾರೆಯೇ ಎಂದು ಕಾದು ನೋಡಬೇಕು. ಒಂದು ವೇಳೆ ಫ್ಲಿಪ್‌ಕಾರ್ಟ್ ಮಾತ್ರವೇ ಇದ್ದರೆ ಈ ಲ್ಯಾಪ್‌ಟ್ಯಾಪ್‌ಗಳು ಬಹುಶಃ ಭಾರತದಲ್ಲಿ ಮಾತ್ರ ದೊರೆಯಲಿವೆ ಮತ್ತು ಈ ಬಗ್ಗೆ ಶೀಘ್ರದಲ್ಲೇ ಟೀಸಿಂಗ್ ಕೂಡ ಹೊರಬಹುದು.  ಯಾಕೆಂದರೆ, ಫ್ಲಿಪ್‌ಕಾರ್ಟ್, ನೋಕಿಯಾ ಬ್ರ್ಯಾಂಡ್ ಟಿವಿ ಮತ್ತು ಸ್ಟ್ರೀಮಿಂಗ್ ಸಾಧನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಪರವಾನಿಗೆ ಪಡೆದಿರುವುದನ್ನು ನೀವಿಲ್ಲಿ ಸ್ಮರಿಸಬಹುದು. 

ವಿಂಡೋಸ್ ಡೆಸ್ಕ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆ್ಯಪ್‌ಗಳು ಸೇರ್ಪಡೆ?

ಇದೇ ಮೊದಲ್ಲ
ನೋಕಿಯಾ ಲ್ಯಾಪ್‌ಟ್ಯಾಪ್ ಉತ್ಪಾದನೆ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೇ ಕಂಪನಿ ಲ್ಯಾಪ್‌ಟ್ಯಾಪ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿದ್ದಿದೆ. ಮೊಬೈಲ್ ಫೋನ್‌ ಮಾರಾಟದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದ ನೋಕಿಯಾ ಒಂದು ಹಂತದಲ್ಲಿ, ಕಂಪ್ಯೂಟರ್, ಲ್ಯಾಪ್‌ಟ್ಯಾಪ್ ಕಂಪ್ಯೂಟರ್ಸ್, ಮಿನಿ ಲ್ಯಾಪ್‌ಟ್ಯಾಪ್‌ಗಳನ್ನು ಮಾರಾಟ ಮಾಡಿದೆ. 1980ರಲ್ಲಿ ಮಿಕ್ರೋಮಿಕ್ಕೋ ವಿಭಾಗವು ನೋಕಿಯಾದ ಕಂಪ್ಯೂಟರ್ ತಯಾರಿಕಾ ವಿಭಾಗದ ನೋಕಿಯಾ ಡೇಟಾ ಭಾಗವಾಗಿತ್ತು. ಇದನ್ನು ಮುಂದೆ 1991ರಲ್ಲಿ ಮಾರಾಟ ಮಾಡಲಾಯಿತು. 2009ರಲ್ಲಿ ನೋಕಿಯಾ ಕಂಪನಿಯು, ನೋಕಿಯಾ ಬುಕ್ಲೆಟ್ 3ಜಿ ಎನ್ನುವ ಮಿನಿ ಲ್ಯಾಪ್‌ಟ್ಯಾಪ್ ಅಥವಾ ನೋಟ್‌ಬುಕ್ ಉತ್ಪಾದಿಸುವುದಾಗಿ ಘೋಷಿಸಿತು. ಈ ಮಿನಿ ಲ್ಯಾಪ್‌ಟ್ಯಾಪ್‌ನಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ 7 ಅನ್ನು ಆಪರೇಟಿಂಗ್ ಸಾಫ್ಟ್‌ವೇರ್ ಆಗಿ ಬಳಸಲಾಗಿತ್ತು. ಸಿಮ್ ಕಾರ್ಡ್ ಮೂಲಕ 3ಜಿ ಸಪೋರ್ಟ್ ಕೂಡ ಇತ್ತು. ನೋಕಿಯಾ ಒವಿ ಮ್ಯಾಪ್ಸ್ ಸೇವೆಯೂ ಇತ್ತು. ಕಂಪನಿ ಪ್ರಕಾರ, ಈ ಲ್ಯಾಪ್ ಟ್ಯಾಪ್ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 12 ಗಂಟೆಯವರೆಗೂ  ಬಾಳಿಕೆ ಬರುತ್ತಿತ್ತು. ಆದರೆ, ಈ ಪ್ರಾಡಕ್ಟ್ ಬಳಿಕ ಮತ್ತೆ ಯಾವುದೇ ಲ್ಯಾಪ್‌ಟ್ಯಾಪ್ ಉತ್ಪಾದನೆಯನ್ನು ಕಂಪನಿ ಮಾಡಲಿಲ್ಲ ಎಂದು ಕಾಣುತ್ತದೆ.

ಬಳಿಕ ಮೊಬೈಲ್ ಫೋನ್‌ಗಳ ಮಾರಾಟದಲ್ಲಿ ಅದ್ವಿತೀಯವಾಗಿದ್ದ ನೋಕಿಯಾ, ಭಾರತದಲ್ಲಂತೂ ಅಪಾರ ಪ್ರಮಾಣದ ಬಳಕೆದಾರರನ್ನು ಹೊಂದಿತ್ತು. ಆದರೆ, ಸ್ಮಾರ್ಟ್‌ಫೋನ್‌ಗಳು ಬಳಕೆ ಹೆಚ್ಚಾಗುತ್ತಿದ್ದಂತೆ ಕೊಂಚ ಮಂಕಾಗಿದ್ದು ನೋಕಿಯಾ ಮತ್ತೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಜೊತೆಗೆ ಇದೀಗ ಲ್ಯಾಪ್‌ಟ್ಯಾಪ್‌ ಉತ್ಪಾದನೆಗೆ ಮುಂದಾಗಿರುವುದು ಬಳಕೆದಾರರಿಗೆ ಸಂತೋಷ ನೀಡಬಹುದು. ಆದರೆ, ಲ್ಯಾಪ್‌ಟ್ಯಾಪ್ ಬಗ್ಗೆ ಕಂಪನಿ ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂಬುದನ್ನು ಗಮನಿಸಬೇಕು.

8T ಬೆನ್ನಲ್ಲೇ ಒನ್‌ಪ್ಲಸ್‌ನಿಂದ ಹೊಸ ವರ್ಷದಲ್ಲಿ 9 ಪ್ರೋ ಫೋನ್?

click me!