HP ಹೊಚ್ಚ ಹೊಸ ಪ್ರಿಂಟರ್ ಬಿಡುಗಡೆ ಮಾಡಿದೆ. ವೈರ್‌ಲೆಸ್, ಆಲ್ ಇನ್ ವನ್ ಮಲ್ಟಿಫಂಕ್ಷನ್ ಪ್ರಿಂಟರ್ ಇದಾಗಿದ್ದು, ಹಲವು ವಿಶೇಷತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ಬೆಂಗಳೂರು(ಡಿ.05): ಕೊರೋನಾ ಬಂದದ್ದೇ ತಡ ಮನೆಯಲ್ಲೊಂದು ಕಂಪ್ಯೂಟರ್ ಕಡ್ಡಾಯ ಎಂಬಂತಾಯಿತು. ಬಹುಶಃ ಭಾರತದಲ್ಲಿ ಡಿಜಿಟಲೀಕರಣದ ವೇಗ ಹೆಚ್ಚಿಸಿದ್ದೂ ಕೊರೋನಾ ಇರಬಹುದು. ಕಂಪ್ಯೂಟರ್ ಬಂದ ಮೇಲೆ ಪ್ರಿಂಟರ್ ಬೇಡವೇ?
ನಕಲಿ ಉತ್ಪನ್ನ ಮಾರಾಟಗಾರರಿಂದ ಗ್ರಾಹಕರ ರಕ್ಷಣೆಗೆ ಮುಂದಾದ HP!
ಯಾವ ಪ್ರಿಂಟರ್ ಕೊಳ್ಳುವುದು ಎಂದು ಯೋಚಿಸುವವರಿಗೆ ಇಲ್ಲೊಂದು ಆಯ್ಕೆಯಿದೆ. ಎಚ್.ಪಿ. ಸ್ಮಾರ್ಟ್ ಟ್ಯಾಂಕ್ 530 ಈ ಕಾಲಕ್ಕೆ ಹೊಂದುವಂಥ ವೈರ್‌ಲೆಸ್ ಆಲ್ ಇನ್ ವನ್ ಮಲ್ಟಿಫಂಕ್ಷನ್ ಪ್ರಿಂಟರ್. ಇದರಲ್ಲಿ ಪ್ರಿಂಟು, ಕಾಪಿ, ಸ್ಕ್ಯಾನ್ ಮಾಡಬಹುದು. ಎಲ್ಲಕ್ಕಿಂತ ಮುಖ್ಯ ಎಂದರೆ ಪುಟ್ಟಬಾಟಲಿಯಲ್ಲಿ ಸಿಗುವ ಇಂಕು ತಂದು ತುಂಬಬಹುದು.
ಅಷ್ಟೇನೂ ದೊಡ್ಡದಲ್ಲದ, ಅಷ್ಟೇನೂ ಭಾರವೂ ಇಲ್ಲದ ಮನೆಯ ಮೂಲೆಯೊಂದರಲ್ಲಿ ಇಡಬಹುದಾದ ಪ್ರಿಂಟರ್ ಇದು. ಭಾರ 6.19 ಕಿಲೋಗ್ರಾಮ್. ಉದ್ದಗಲ ಎತ್ತರಗಳು 449 * 373 * 198 ಮಿಲಿಮೀಟರ್. ಕಣ್ಣಿಗೆ ಮತ್ತು ಕೈಗೆ ಚೆಂದವಾಗಿ ಟಚ್ ಸ್ಕ್ರೀನಿದೆ. ಚೆಂದದ ಮೆನು ಇದೆ. ಆಯ್ಕೆಯೂ ಸುಲಭವೇ.
ಹಿಂಬದಿಯಲ್ಲಿ ಮಡಿಚಿಡಬಹುದಾದ ಪೇಪರ್ ಟ್ರೇಯಿದೆ. ಪ್ರಿಂಟಿಂಗ್ ಇಲ್ಲದೇ ಹೋದಾಗ ಅದನ್ನು ಮಡಿಚಿ ಮೇಲೊಂದು ಬಟ್ಟೆಮುಚ್ಚಿಟ್ಟರೆ ಧೂಳು ಒಳಹೋಗದು. ಝೆರಾಕ್ಸ್ ಕಾಪಿ ತೆಗೆಯುವುದಕ್ಕೆ ಆಟೋಮ್ಯಾಟಿಕ್ ಡಾಕ್ಯುಮೆಂಟ್ ಫೀಡರ್ ಇದೆ.
ಯುಎಸ್‌ಬಿ ಮೂಲಕವೂ ಬ್ಲೂಟೂಥ್ ಮೂಲಕವೂ ಕಂಪ್ಯೂಟರ್ ಅಥವಾ ಫೋನಿನ ಜೊತೆ ಸಂಪರ್ಕ ಪಡೆಯಬಹುದಾದ ಪ್ರಿಂಟರ್ ಇದು. ವೈಫೈ ಸಂಪರ್ಕ ಕೂಡ ಸಾಧ್ಯ.ಹೀಗಾಗಿ ನೀವು ಆಫೀಸಿನಲ್ಲಿದ್ದರೂ ರಿಮೋಟ್ ಪ್ರಿಂಟಿಂಗ್ ಮಾಡಬಹುದು. ಆದರೆ ಆ್ಯಪ್ ಹಾಕಿಕೊಂಡಿರಬೇಕು ಅಷ್ಟೇ.
ಇದರಲ್ಲಿ ಆಟೋಮ್ಯಾಟಿಕ್ ಡುಯಲ್ ಸೈಡ್ ಪ್ರಿಂಟಿಂಗ್ ಇಲ್ಲ. ಡಬಲ್ ಸೈಡ್ ಪ್ರಿಂಟಿಂಗ್ ಆಪ್ಷನ್ ಕೊಟ್ಟಾಗ ನಾವೇ ಪೇಪರನ್ನು ತಿರುವಿ ಹಾಕಬೇಕು. ಕಾಪಿ ಮಾಡುವಾಗಲೂ ಅದೇ ಕತೆ.
ಇದು ಥರ್ಮಲ್ ಇಂಕ್ ಜೆಟ್ ಪ್ರಿಂಟರ್ ಜಾತಿಗೆ ಸೇರಿದ್ದು. ದಿನವೂ ಸಾವಿರಗಟ್ಟಲೆ ಪುಟ ಪ್ರಿಂಟುಮಾಡುವವರಿಗೆ ಇದು ಆಗಿಬರಲಿಕ್ಕಿಲ್ಲ. ಆದರೆ ಮನೆಗೆ, ಸಣ್ಣ ಆಫೀಸಿಗೆ ಇದು ಸಾಕು. ದಿನಕ್ಕೆ ಇಪ್ಪತ್ತೈದರಿಂದ ಮೂವತ್ತು ಪುಟ ಪ್ರಿಂಟು ಬೇಕಾದವರಿಗೆ ಹೇಳಿ ಮಾಡಿಸಿದ ಪ್ರಿಂಟರ್ ಇದು.
ಪ್ರಿಂಟ್ ಚೆನ್ನಾಗಿಯೇ ಇದೆ. ಬ್ಲಾಕ್ ಅಂಡ್ ವೈಟ್ ಆದರೆ 1200 *1200 ಡಿಪಿಐ. ಕಲರ್ ಆದರೆ 4800 * 1200. ಪೇಪರ್ ಟ್ರೇಯಲ್ಲಿ ಒಂದು ಸಲಕ್ಕೆ 100 ಪೇಪರ್ ಹಾಕಬಹುದು. ಔಟ್ ಪುಟ್ ಟ್ರೇ ಸುಮಾರು 25 ಶೀಟುಗಳನ್ನು ಹೊರಬಲ್ಲದು. ಎ4, ಬಿ5, ಎ6 ಶೀಟುಗಳ ಜೊತೆಗೇ ಕವರಿನ ಮೇಲೆ ವಿಳಾಸ ಕೂಡ ಪ್ರಿಂಟಿಸಬಲ್ಲದು. ಸ್ಕಾನರ್ ಕೂಡ ಅಚ್ಚುಕಟ್ಟಾಗಿದೆ. ಆದರೆ ಬಹಳ ದೊಡ್ಡ ಸೈಜಿನ ಫೋಟೋ ಸ್ಕಾನ್ ಮಾಡಲಾಗದು.
ಒಂದು ಪುಟದ ಕಪ್ಪು ಬಿಳುಪು ಪ್ರಿಂಟಿಗೆ ಹತ್ತು ಪೈಸೆ ಖರ್ಚಾಗುತ್ತದೆ. ಅದೇ ಕಲರ್ ಪ್ರಿಂಟ್ ತೆಗೆದರೆ 20 ಪೈಸೆ ತಗಲುತ್ತದೆ.
ಪ್ರಿಂಟರಿನ ಬೆಲೆ 16,999. ಅಮೆಜಾನ್ ಮುಂತಾದ ಕಡೆ ಡಿಸ್ಕೌಂಟೂ ಉಂಟು.