ಕರ್ನಾಟಕದ ಫುಟ್ಬಾಲ್‌ನಲ್ಲಿ ಹೊರ ರಾಜ್ಯದ ಆಟಗಾರರ ಪ್ರಾಬಲ್ಯಕ್ಕೆ ಕಾರಣಗಳೇನು?

By Kannadaprabha NewsFirst Published Aug 23, 2024, 9:35 AM IST
Highlights

ಕರ್ನಾಟಕದಲ್ಲಿ ರಾಜ್ಯದ ಫುಟ್ಬಾಲ್ ಆಟಗಾರರಿಗಿಂತ ಹೊರ ರಾಜ್ಯದ ಆಟಗಾರ ಪ್ರಾಬಲ್ಯ ಜಾಸ್ತಿಯಾಗಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

- ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು: ಕರ್ನಾಟಕ ಫುಟ್ಬಾಲ್‌ ತಂಡದಲ್ಲಿ ಕನ್ನಡಿಗ ಆಟಗಾರರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ಹೊರ ರಾಜ್ಯದ ಆಟಗಾರರೇ ಕರ್ನಾಟಕದ ತಂಡಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಫುಟ್ಬಾಲ್ ಸಂಸ್ಕೃತಿ ಮರೆಯಾಗಿದೆಯೇ ಅಥವಾ ಮಕ್ಕಳು ಫುಟ್ಬಾಲ್‌ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ನಮ್ಮದೇ ತಂಡಗಳಲ್ಲಿ ಹೊರ ರಾಜ್ಯದವರ ಪ್ರಾಬಲ್ಯಕ್ಕೆ ಕಾರಣ ಏನು ಎಂಬುದನ್ನು ಹುಡುಕಿ ಹೊರಟ ‘ಕನ್ನಡಪ್ರಭ’ಕ್ಕೆ ಕುತೂಹಲಕಾರಿ ಮಾಹಿತಿ ಲಭ್ಯವಾಗಿದೆ.

Latest Videos

ಕರ್ನಾಟಕದಲ್ಲಿ ನೂರಾರು ಸ್ಥಳೀಯ ಫುಟ್ಬಾಲ್‌ ಕ್ಲಬ್‌ಗಳು ಕಾರ್ಯಾಚರಿಸುತ್ತಿವೆ. ಕೆಲ ಕ್ಲಬ್‌ಗಳು ರಾಜ್ಯ, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತವೆ. ನಮ್ಮಲ್ಲಿ ಕ್ಲಬ್‌ಗಳು ಜಾಸ್ತಿ ಇದ್ದಷ್ಟು ಸ್ಥಳೀಯ ಆಟಗಾರರರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ ಎಂದು ನಾವು ನಂಬಿದ್ದೇವೆ. ಆದರೆ ಕರ್ನಾಟಕದಲ್ಲಿ ಬೇರೆ ರಾಜ್ಯಗಳ ಆಟಗಾರರ ಪ್ರಾಬಲ್ಯಕ್ಕೆ ಈ ಕ್ಲಬ್‌ಗಳೇ ಕಾರಣ ಎಂದರೆ ತಪ್ಪಲ್ಲ.

ಕ್ರಿಕೆಟಿಗರನ್ನು ಮೀರಿಸಿದ ನೀರಜ್ ಚೋಪ್ರಾ ಬ್ರ್ಯಾಂಡ್‌ ವ್ಯಾಲ್ಯೂ..! ಮನು ಭಾಕರ್ ಬ್ರ್ಯಾಂಡ್‌ ವ್ಯಾಲ್ಯೂ ಭಾರೀ ಏರಿಕೆ..!

ಸಾಧಾರಣವಾಗಿ ಯಾವುದೇ ಕ್ಲಬ್‌ಗಳಲ್ಲಿ ಕೇವಲ 30ರಿಂದ 40 ಆಟಗಾರರು ಮಾತ್ರ ಇರುತ್ತಾರೆ. ಆದರೆ ಯಾವುದಾದರೂ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಬಳಿಕ ಕ್ಲಬ್‌ಗೆ ಸೇರುವ ಮಕ್ಕಳ ಸಂಖ್ಯೆ 400ರಿಂದ 600ಕ್ಕೆ ಹೆಚ್ಚಾಗುತ್ತವೆ. ಆ ಬಳಿಕ ಕ್ಲಬ್‌ಗಳು ಆಡಿದ್ದೇ ಆಟ. ‘ಕನ್ನಡಪ್ರಭ’ಕ್ಕೆ ಗೊತ್ತಾಗಿರುವ ಮಾಹಿತಿ ಪ್ರಕಾರ, ಬಹುತೇಕ ಕ್ಲಬ್‌ಗಳು ಒಂದು ಮಗುವಿಗೆ ವಾರ್ಷಿಕ 1.5-2 ಲಕ್ಷ ರು. ವರೆಗೂ ಶುಲ್ಕ ಪಡೆಯುತ್ತದೆ. 3ರಿಂದ 4 ಲಕ್ಷ ರು. ಪಡೆಯುವ ಕ್ಲಬ್‌ಗಳೂ ಇವೆ ಎನ್ನುತ್ತವೆ ಮೂಲಗಳು.

ಈಶಾನ್ಯ ರಾಜ್ಯಗಳೇ ಗುರಿ: ಫುಟ್ಬಾಲ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಈಶಾನ್ಯ ರಾಜ್ಯಗಳ ಮಕ್ಕಳೇ ಕರ್ನಾಟಕದಲ್ಲಿರುವ ಸ್ಥಳೀಯ ಕ್ಲಬ್‌ಗಳ ಗುರಿ. ಇದಕ್ಕಾಗಿಯೇ ಕೆಲ ಏಜೆನ್ಸಿಗಳು ಕಾರ್ಯಾಚರಿಸುತ್ತಿವೆ. ಅಲ್ಲಿನ ಮಕ್ಕಳನ್ನು ನಮ್ಮ ರಾಜ್ಯದ ಸ್ಥಳೀಯ ಕ್ಲಬ್‌ಗಳಿಗೆ ಒಪ್ಪಿಸುವುದೇ ಏಜೆನ್ಸಿಗಳ ಕೆಲಸ.

ಈಶಾನ್ಯದ ಮಕ್ಕಳು ಇಲ್ಲಿನ ಕ್ಲಬ್‌ಗಳಿಗೆ ಸೇರಿದ ಬಳಿಕ ಅವರನ್ನು ಇಲ್ಲಿನ ಶಾಲೆಗೆ ಸೇರಿಸಲಾಗುತ್ತದೆ. ಕೆಲ ಮಕ್ಕಳು ಇಲ್ಲಿನ ಶಾಲೆಗಳಲ್ಲಿ ದಾಖಲಾತಿ ಹೊಂದಿದ್ದರೂ, ತಮ್ಮದೇ ರಾಜ್ಯಗಳಲ್ಲಿ ನೆಲೆಸಿರುತ್ತಾರೆ. ಅಂದರೆ, ಇದರಲ್ಲಿ ಇಲ್ಲಿನ ಶಾಲೆಗಳ ಪಾತ್ರವೂ ಇರುತ್ತವೆ. ಹೀಗಾಗಿ ನಮ್ಮಲ್ಲಿನ ಕ್ಲಬ್‌ಗಳಲ್ಲಿ ಹೆಚ್ಚಾಗಿ ಈಶಾನ್ಯದವರೇ ಇರುತ್ತಾರೆ. ಹೊರರಾಜ್ಯದ ಮಕ್ಕಳ ಸಂಪೂರ್ಣ ಖರ್ಚು ವೆಚ್ಚವನ್ನು ಸ್ಥಳೀಯ ಕ್ಲಬ್‌ಗಳೇ ನೋಡಿಕೊಳ್ಳುತ್ತವೆ. ಅಂದರೆ, ಸ್ಥಳೀಯ ಮಕ್ಕಳಿಂದ ಪಡೆಯುವ ಶುಲ್ಕದಲ್ಲಿ ಹೊರರಾಜ್ಯದ ಮಕ್ಕಳ ಖರ್ಚು ವೆಚ್ಚದ ನಿರ್ವಹಣೆ ಆಗುತ್ತದೆ.

ಲೆಕ್ಕಕ್ಕಷ್ಟೇ ಸ್ಥಳೀಯ ಮಕ್ಕಳು: ಕ್ಲಬ್‌ಗಳಲ್ಲಿ 600ರಷ್ಟು ಮಕ್ಕಳಿರುವಾಗ ತರಬೇತಿ ಗುಣಮಟ್ಟ ಕಡಿಮೆಯಾಗುವುದು ಸಹಜ. ಆದರೆ ಯಾವ ಆಟಗಾರರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂಬುದು ಕ್ಲಬ್‌ಗಳ ಮಾಲಕರು ಮೊದಲೇ ಯೋಜನೆ ರೂಪಿಸಿರುತ್ತಾರೆ. ಹೀಗಾಗಿಯೇ ಏಜೆನ್ಸಿಗಳ ಮೂಲಕ ಸೇರ್ಪಡೆಗೊಂಡ ಹೊರರಾಜ್ಯದ ಮಕ್ಕಳೇ ತಂಡದಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ. ಅವರಿಗೇ ವಿಶೇಷ ತರಬೇತಿ, ಪೌಷ್ಠಿಕ ಆಹಾರ ನೀಡಲಾಗುತ್ತದೆ. ಉಳಿದಂತೆ ಬಹುತೇಕ ಆಟಗಾರರು ಕೇವಲ ಚೆಂಡು ಪಾಸ್‌ ಮಾಡಲು ತಂಡದಲ್ಲಿರುತ್ತಾರೆ.

ಆರ್‌ಸಿಬಿ ಪರ ಆಡಲು ಕೆಕೆಆರ್ ತಂಡದ ಈ ಮ್ಯಾಚ್ ಫಿನಿಶರ್‌ಗೆ ಆಸೆಯಂತೆ..! ಬೆಂಗಳೂರಿಗೆ ಬರ್ತಾರಾ ಈ ಹಾರ್ಡ್‌ ಹಿಟ್ಟರ್

ಇನ್ನು, ತಂಡದಲ್ಲಿ ಕರ್ನಾಟಕದ ಆಟಗಾರರ ಪಾತ್ರ ಕೂಡಾ ಅಷ್ಟಕ್ಕಷ್ಟೇ. ಕೆಲ ಪಂದ್ಯಗಳಲ್ಲಿ ಕೆಲವೇ ನಿಮಿಷಗಳ ಮಾತ್ರ ಅವರನ್ನು ಆಡಿಸಲಾಗುತ್ತೆ. ಹೀಗಾಗಿ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಂತಾಗುತ್ತದೆ. ಪೋಷಕರಿಗೂ ಕೂಡಾ ತಮ್ಮ ಮಗುವಿದ್ದ ತಂಡ ಗೆದ್ದಿದೆ ಎಂಬ ಖುಷಿ. ಆದರೆ ಅವರಲ್ಲಿನ ಪ್ರತಿಭೆ ಬೆಳಕಿಗೆ ಬಂದಿರುವುದಿಲ್ಲ. ಯಾರನ್ನು ಆಡಿಸಬೇಕು, ಯಾರು ಬೆಳೆಯಬೇಕು, ಪಂದ್ಯದಲ್ಲಿ ಯಾರು ಯಾರಿಗೆ ಚೆಂಡನ್ನು ಪಾಸ್‌ ಮಾಡಬೇಕು, ಯಾರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಸಿಗಬೇಕು ಎಂಬುದು ಕ್ಲಬ್‌ಗಳೇ ನಿರ್ಧರಿಸುತ್ತವೆ. ಹೀಗಾಗಿ ನಿರ್ದಿಷ್ಟ ಮಕ್ಕಳಷ್ಟೇ ರಾಜ್ಯದ ಹಿರಿಯರ ತಂಡಗಳಿಗೆ ಆಯ್ಕೆಯಾಗುತ್ತಾರೆ.

ಕನ್ನಡಿಗ ಎನಿಸಿಕೊಳ್ಳಲು 5 ವರ್ಷ ಆಡಿದ್ರೆ ಸಾಕು!

ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ನಿಯಮದ ಪ್ರಕಾರ, ಬೇರೆ ಯಾವುದೇ ರಾಜ್ಯದ ಆಟಗಾರರು ನಮ್ಮ ರಾಜ್ಯದಲ್ಲಿ 5 ವರ್ಷ ಆಡಿದರೆ ಅವರನ್ನು ಕರ್ನಾಟಕದವರು ಎಂದೇ ಪರಿಗಣಿಸಲಾಗುತ್ತದೆ. ಬಳಿಕ ಅವರಿಗೆ ನಮ್ಮ ರಾಜ್ಯದ ತಂಡದಲ್ಲಿ ಆಡಬಹುದು. ಹೀಗಾಗಿಯೇ ಈಶಾನ್ಯ ರಾಜ್ಯದಿಂದ 10 ವರ್ಷದೊಳಗಿನ ಮಕ್ಕಳನ್ನು ಇಲ್ಲಿಗೆ ಕರೆತರುವ ಕ್ಲಬ್‌ಗಳು, ರಾಜ್ಯದ ಯಾವುದಾದರೂ ಶಾಲೆಗೆ ಸೇರಿಸುತ್ತವೆ. ಕೆಲ ಮಕ್ಕಳು ಇಲ್ಲೇ ಕಲಿತರೂ ಇನ್ನೂ ಕೆಲ ಮಕ್ಕಳು ತಮ್ಮ ತಮ್ಮ ರಾಜ್ಯಗಳಲ್ಲೇ ಇರುತ್ತಾರೆ. ಆದರೆ ಶಾಲಾ ದಾಖಲಾತಿ ಪ್ರಕಾರ ಅವರು ಕರ್ನಾಟಕದಲ್ಲಿಯೇ ಇರುವುದರಿಂದ ಕನ್ನಡಿಗ ಎನಿಸಿಕೊಳ್ಳುತ್ತಾರೆ.

ಕ್ರಿಕೆಟಿಗರನ್ನು ಮೀರಿಸಿದ ನೀರಜ್ ಚೋಪ್ರಾ ಬ್ರ್ಯಾಂಡ್‌ ವ್ಯಾಲ್ಯೂ..! ಮನು ಭಾಕರ್ ಬ್ರ್ಯಾಂಡ್‌ ವ್ಯಾಲ್ಯೂ ಭಾರೀ ಏರಿಕೆ..!

ಈಶಾನ್ಯದ ಮಕ್ಕಳಲ್ಲಿ ವಯೋ ವಂಚನೆ ಹೆಚ್ಚು

ಈಶಾನ್ಯ ಭಾಗದಿಂದ ನಮ್ಮ ರಾಜ್ಯಕ್ಕೆ ಬರುವವರು ಹೆಚ್ಚಿನವರು ವಯೋ ವಂಚನೆ ಮಾಡಿರುತ್ತಾರೆ ಎಂಬ ಆರೋಪವಿದೆ. ಏಜೆನ್ಸಿಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಯಸ್ಸು ಕಡಿಮೆ ತೋರಿಸಿ ಮಕ್ಕಳನ್ನು ವಿವಿಧ ವಯೋಮಾನದ ಟೂರ್ನಿಗಳಲ್ಲಿ ಆಡಿಸಲಾಗುತ್ತದೆ. ಮೂಲಗಳ ಪ್ರಕಾರ, ಅಂಡರ್‌-13ನಲ್ಲಿ ಆಡುವ ಹೊರರಾಜ್ಯದ ಕೆಲ ಮಕ್ಕಳ ನಿಜವಾದ ವಯಸ್ಸು ಕನಿಷ್ಠ 15 ವರ್ಷವಾಗಿರುತ್ತದೆ. ಅವರ ದಾಖಲಾತಿಗಳನ್ನು ಪರಿಶೀಲಿಸಿ ಲೀಗ್‌ನಲ್ಲಿ ಆಡಿಸಲಾಗುತ್ತದೆಯಾದರೂ, ಹೊರರಾಜ್ಯದಿಂದ ಬರುವಾಗಲೇ ಆ ಮಕ್ಕಳ ದಾಖಲಾತಿ ತಿದ್ದುಪಡಿ ಮಾಡಿ ತಂದಿರಲಾಗುತ್ತದೆ ಎಂದು ತಿಳಿದುಬಂದಿದೆ.

ಸ್ಥಳೀಯರ ಬೇಡಿಕೆ ಏನು?

ಕರ್ನಾಟಕದ ತಂಡದಲ್ಲಿ ಇಲ್ಲಿನವರಿಗೆ ಹೆಚ್ಚಿನ ಅವಕಾಶ ಸಿಗಬೇಕು ಎಂಬುದು ಸ್ಥಳೀಯರ ಆಗ್ರಹ. ಇದಕ್ಕಾಗಿ, ಹೊರ ರಾಜ್ಯದಿಂದ ಬಂದ ಮಕ್ಕಳು ಕರ್ನಾಟಕದಲ್ಲಿ ಕನಿಷ್ಠ 12-15 ವರ್ಷ ಇರಬೇಕು ಎಂಬ ನಿಯಮ ರೂಪಿಸಬೇಕು. ಸ್ಥಳೀಯ ಜನನ ಪ್ರಮಾಣ ಪತ್ರವನ್ನಷ್ಟೇ ವಯಸ್ಸಿನ ಅಧಿಕೃತ ದಾಖಲೆಯಾಗಿ ಪರಿಗಣಿಸಬೇಕು ಎಂದು ಫುಟ್ಬಾಲ್‌ ಸಂಸ್ಥೆಗೆ ಸ್ಥಳೀಯರು ಬೇಡಿಕೆಯಿಟ್ಟಿದ್ದಾರೆ.
 

click me!