ಸ್ಟೇಡಿಯಂ ಮಾತ್ರವಲ್ಲ, ಫುಟ್ಬಾಲ್‌ಗೇ ದುಸ್ಥಿತಿ: 11 ವರ್ಷದಿಂದ ಕರ್ನಾಟಕದ ಒಬ್ಬರೂ ರಾಷ್ಟ್ರೀಯ ತಂಡಕ್ಕಿಲ್ಲ..!

By Kannadaprabha News  |  First Published Aug 20, 2024, 8:44 AM IST

ಸರಿಸುಮಾರು 1950ರಿಂದ 2010ರ ವರೆಗೂ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ಶಿಪ್‌, ಫಿಫಾ ವಿಶ್ವಕಪ್‌ ಕ್ವಾಲಿಫೈಯರ್‌, ನೆಹರೂ ಕಪ್‌, ಮೆರ್ಡೆಕಾ ಕಪ್‌ ಸೇರಿ ಪ್ರಮುಖ ಜಾಗತಿಕ ಟೂರ್ನಿಗಳಲ್ಲಿ ಆಡಿದ ಭಾರತ ತಂಡದಲ್ಲಿ ಕರ್ನಾಟಕದ ಆಟಗಾರರಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದರು. ಆದರೆ ಕಳೆದ 11 ವರ್ಷಗಳಲ್ಲಿ ರಾಜ್ಯದಿಂದ ಯಾವೊಬ್ಬ ಆಟಗಾರನೂ ಭಾರತ ಹಿರಿಯರ ತಂಡವನ್ನು ಪ್ರತಿನಿಧಿಸಿಲ್ಲ ಎಂಬುದು ಅಚ್ಚರಿ, ಆಘಾತಕಾರಿಯಾದರೂ ಸತ್ಯ.


ನಾಸಿರ್‌ ಸಜಿಪ

ಬೆಂಗಳೂರು(ಆ.20): ಕರ್ನಾಟಕದ ಫುಟ್ಬಾಲಿಗರು ಎಂದರೆ ಇಡೀ ಭಾರತವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಕಾಲವೊಂದಿತ್ತು. ಆ ಸಮಯದಲ್ಲಿ ಕರ್ನಾಟಕದ ಕಾಲ್ಚೆಂಡು ಮಾಂತ್ರಿಕರ ಆಟ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಕರ್ನಾಟಕದ ಆಟಗಾರರು ದೇಶದ ಪ್ರತಿಷ್ಠಿತ ಫುಟ್ಬಾಲ್‌ ಕ್ಲಬ್‌ಗಳ ಬೆನ್ನೆಲುಬಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಕನ್ನಡಿಗ ಫುಟ್ಬಾಲಿಗರನ್ನು ನಾವು ಈಗ ದುರ್ಬೀನು ಹಿಡಿದು ಹುಡುಕಿದರೂ ಸಿಗುತ್ತಿಲ್ಲ. ಅಂದರೆ ದುಸ್ಥಿತಿಯಲ್ಲಿರುವುದು ಬರೀ ರಾಜ್ಯ ಫುಟ್ಬಾಲ್‌ ಕ್ರೀಡಾಂಗಣ ಮಾತ್ರವಲ್ಲ. ರಾಜ್ಯದ ಫುಟ್ಬಾಲ್‌ ಸಂಸ್ಕೃತಿಯೇ ದುರವಸ್ಥೆಯಲ್ಲಿದೆ.

Latest Videos

undefined

ಸರಿಸುಮಾರು 1950ರಿಂದ 2010ರ ವರೆಗೂ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ಶಿಪ್‌, ಫಿಫಾ ವಿಶ್ವಕಪ್‌ ಕ್ವಾಲಿಫೈಯರ್‌, ನೆಹರೂ ಕಪ್‌, ಮೆರ್ಡೆಕಾ ಕಪ್‌ ಸೇರಿ ಪ್ರಮುಖ ಜಾಗತಿಕ ಟೂರ್ನಿಗಳಲ್ಲಿ ಆಡಿದ ಭಾರತ ತಂಡದಲ್ಲಿ ಕರ್ನಾಟಕದ ಆಟಗಾರರಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದರು. ಆದರೆ ಕಳೆದ 11 ವರ್ಷಗಳಲ್ಲಿ ರಾಜ್ಯದಿಂದ ಯಾವೊಬ್ಬ ಆಟಗಾರನೂ ಭಾರತ ಹಿರಿಯರ ತಂಡವನ್ನು ಪ್ರತಿನಿಧಿಸಿಲ್ಲ ಎಂಬುದು ಅಚ್ಚರಿ, ಆಘಾತಕಾರಿಯಾದರೂ ಸತ್ಯ.

ಒದ್ದರೆ ಬೀಳುವಂತಿದೆ ಬೆಂಗಳೂರಿನ ಫುಟ್‌ಬಾಲ್‌ ಸ್ಟೇಡಿಯಂ: ಭೂತದ ಬಂಗಲೆಯಂತೆ ಕಾಣುವ ಮೈದಾನ

ರಾಜ್ಯದ ಫುಟ್ಬಾಲಿಗರೊಬ್ಬರು ದೇಶದ ತಂಡವನ್ನು ಕೊನೆ ಬಾರಿ ಪ್ರತಿನಿಧಿಸಿದ್ದು 2013ರಲ್ಲಿ. ಬೆಂಗಳೂರಿನ ಎನ್‌.ಎಸ್‌. ಮಂಜು 2003ರಿಂದ 10 ವರ್ಷಗಳ ಕಾಲ ಭಾರತದ ಪರ ಆಡಿದ್ದಾರೆ. 2013ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮಂಜು ಕೊನೆ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಂದಿನಿಂದ ಇಂದಿನ ವರೆಗೂ ಅಂದರೆ ಬರೋಬ್ಬರಿ 11 ವರ್ಷಗಳಾದರೂ ರಾಜ್ಯದ ಯಾವೊಬ್ಬ ಆಟಗಾರನೂ ಭಾರತದ ಹಿರಿಯರ ತಂಡಕ್ಕೆ ಆಯ್ಕೆಯಾಗಿಲ್ಲ. ಕಿರಿಯರ ತಂಡದಲ್ಲಿ ಆಗೊಮ್ಮೆ ಈಗೊಮ್ಮೆ ರಾಜ್ಯದ ಆಟಗಾರರು ಕಾಣಸಿಕ್ಕರೂ, ಹಿರಿಯರ ತಂಡಕ್ಕೆ ಒಬ್ಬರೂ ಆಯ್ಕೆಯಾಗುತ್ತಿಲ್ಲ.

ಲೀಗ್‌ಗಳಿಗೆ ಕೊರತೆಯಿಲ್ಲ

ದೇಶವನ್ನು ಪ್ರತಿನಿಧಿಸಲು ರಾಜ್ಯದ ಫುಟ್ಬಾಲ್‌ ಆಟಗಾರರು ಇಲ್ಲ ಎನ್ನುವಾಗ ನಮ್ಮಲ್ಲಿ ಟೂರ್ನಿ, ಲೀಗ್‌ಗಳ ಕೊರತೆ ಇದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಆದರೆ ಬೆಂಗಳೂರಿನ ಹೃದಯ ಭಾಗದಲ್ಲಿ ದುಸ್ಥಿತಿಯಲ್ಲಿರುವ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ)ಯ ಕ್ರೀಡಾಂಗಣದಲ್ಲಿ ವರ್ಷ ಪೂರ್ತಿ ಲೀಗ್‌ಗಳು ನಡೆಯುತ್ತಿರುತ್ತವೆ.

ಸೂಪರ್‌ ಡಿವಿಷನ್‌, ‘ಎ’ ಡಿವಿಷನ್‌, ‘ಬಿ’ ಡಿವಿಷನ್, ‘ಸಿ’ ಡಿವಿಷನ್‌, ರಾಜ್ಯ ಮಹಿಳಾ ಲೀಗ್‌, ಕರ್ನಾಟಕ ರಾಜ್ಯ ಯೂತ್‌ ಲೀಗ್‌ನ ಅಂಡರ್‌-7, ಅಂಡರ್‌-13, ಅಂಡರ್‌-15, ಅಂಡರ್‌-17 ಸೇರಿದಂತೆ ವಿವಿಧ ವಯೋಮಾನದ ಟೂರ್ನಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇನ್ನು ಸ್ಟಾಫರ್ಡ್‌ ಕಪ್‌, ಮುಖ್ಯಮಂತ್ರಿ ಕಪ್‌ ಸೇರಿದಂತೆ ವಿವಿಧ ಟೂರ್ನಿಗಳೂ ಆಯೋಜನೆಗೊಳ್ಳುತ್ತಿರುತ್ತವೆ. ಆದರೆ ಆಟಗಾರರು ಈ ಲೀಗ್‌ಗಳಿಗೆ ಮಾತ್ರ ಸೀಮಿತಗೊಳ್ಳುತ್ತಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತಿಲ್ಲ.

ಕರ್ನಾಟಕ ತಂಡದಲ್ಲೂ ಕನ್ನಡಿಗರ ಕೊರತೆ

ಕರ್ನಾಟಕ ತಂಡ ರಾಷ್ಟ್ರೀಯ ಟೂರ್ನಿಯಲ್ಲಿ ಆಡುತ್ತಿದ್ದರೂ, ತಂಡದಲ್ಲಿ ಹೊರ ರಾಜ್ಯದ ಆಟಗಾರರೇ ಹೆಚ್ಚಿದ್ದಾರೆ. ಕಳೆದ ವರ್ಷ ರಾಜ್ಯ ತಂಡ ಪ್ರತಿಷ್ಠಿತ ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಇದರಲ್ಲಿ 7 ಮಂದಿ ಹೊರ ರಾಜ್ಯದ ಆಟಗಾರರಿದ್ದರು ಎಂದು ತಂಡದ ಆಟಗಾರರೇ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ‘ಕರ್ನಾಟಕ ತಂಡದಲ್ಲಿ ಹೊರ ರಾಜ್ಯದ ಆಟಗಾರರು ತುಂಬಾ ಮಂದಿ ಇದ್ದಾರೆ. ಸಂತೋಷ್‌ ಟ್ರೋಫಿ ವಿಜೇತ ತಂಡದಲ್ಲಿ 7 ಮಂದಿ ಬೇರೆ ರಾಜ್ಯದವರಿದ್ದರು. ಕೆಲವೊಮ್ಮೆ ಕನ್ನಡಿಗರಿಗಿಂತ ಬೇರೆ ರಾಜ್ಯದವರೇ ಹೆಚ್ಚಿರುತ್ತಾರೆ’ ಎಂದು ತಂಡದಲ್ಲಿದ್ದ ಮೂಲ ಕರ್ನಾಟಕ ಆಟಗಾರರೊಬ್ಬರು ತಿಳಿಸಿದ್ದಾರೆ.

54 ವರ್ಷ ಬಳಿಕ ಸಂತೋಷ್‌ ಟ್ರೋಫಿ ಗೆದ್ದಿದ್ದ ಕರ್ನಾಟಕ!

ಕಳೆದ ವರ್ಷ ಕರ್ನಾಟಕ ತಂಡ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ದೇಶದ ಪ್ರತಿಷ್ಠಿತ ಟೂರ್ನಿಯಲ್ಲಿ ರಾಜ್ಯ ತಂಡ ಬರೋಬ್ಬರಿ 54 ವರ್ಷಗಳ ಬಳಿಕ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಆದರೆ ಸಂತೋಷ್‌ ಟ್ರೋಫಿ ಗೆದ್ದ ಬಳಿಕವಾದರೂ ರಾಜ್ಯದ ಫುಟ್ಬಾಲ್‌ ಹಾಗೂ ಕ್ರೀಡಾಂಗಣದ ಸ್ಥಿತಿ ಸುಧಾರಿಸಲಿದೆ ಎಂದು ಆಟಗಾರರು, ಅಭಿಮಾನಿಗಳು ಭಾವಿಸಿದ್ದರು. ಅದು ಸುಳ್ಳಾಗಿದೆ.

ರಾಜ್ಯಕ್ಕೊಂದೇ ಕ್ರೀಡಾಂಗಣ!

ಕರ್ನಾಟಕದ ಫುಟ್ಬಾಲ್‌ ಆಟಗಾರರು ರಾಷ್ಟ್ರ ಮಟ್ಟದಲ್ಲಿ ಹಿಂದೆ ಬೀಳಲು ಕ್ರೀಡಾಂಗಣಗಳ ಸಮಸ್ಯೆಯೂ ಪ್ರಮುಖ ಕಾರಣ. ರಾಜ್ಯದಲ್ಲಿ ಕರ್ನಾಟಕ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಏಕೈಕ ಕ್ರೀಡಾಂಗಣ ಹೊಂದಿದೆ. ಅದು ಕೂಡಾ ಕುಸಿದು ಬೀಳುವ ಹಂತ ತಲುಪಿದೆ. ಇನ್ನುಳಿದಂತೆ ರಾಜ್ಯದ ಯಾವ ಭಾಗದಲ್ಲೂ ರಾಜ್ಯ ಸಂಸ್ಥೆಯ ಕ್ರೀಡಾಂಗಣವಿಲ್ಲ ಎಂದು ಹೆಸರೇಳಲಿಚ್ಛಿಸದ ಕೋಚ್‌ ಒಬ್ಬರು ಬೇಸರದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೋಟ್ಯಾಧಿಪತಿ ಕ್ರಿಸ್ಟಿಯಾನೊ ರೊನಾಲ್ಡೊ ಮಗನಿಗೆ ಫೋನ್ ಕೊಟ್ಟಿಲ್ವಂತೆ, ಇನ್‌ಸ್ಟಾ ಅಕೌಂಟ್ ಇರೋದು ಹೇಗೆ?

ಐಎಸ್‌ಎಲ್‌ನಲ್ಲೂ ರಾಜ್ಯದ ಕೇವಲ ನಾಲ್ಕು ಆಟಗಾರರು!

ಭಾರತ ಫುಟ್ಬಾಲ್‌ ಸಂಸ್ಥೆ(ಎಐಎಫ್‌ಎಫ್‌) ಐಪಿಎಲ್‌ ಮಾದರಿ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್) ಆಯೋಜಿಸುತ್ತಿದೆ. ಇದು ಭಾರತೀಯ ಫುಟ್ಬಾಲ್‌ನ ಅಡಿಗಲ್ಲು. ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಸೇರಿ ಒಟ್ಟು 12 ತಂಡಗಳಿವೆ. ಆದರೆ ಲೀಗ್‌ನಲ್ಲಿ ಕಳೆದ ಬಾರಿ ಕರ್ನಾಟಕದ ಕೇವಲ 4 ಆಟಗಾರರು ಮಾತ್ರ ಆಡಿದ್ದರು. ಶಂಕರ್‌ ಸಂಪಂಗಿರಾಜ್‌ (ಬಿಎಫ್‌ಸಿ), ವಿಘ್ನೇಶ್‌ ದಕ್ಷಿಣಮೂರ್ತಿ (ಒಡಿಶಾ ಎಫ್‌ಸಿ), ಅಂಕಿತ್‌ ಪದ್ಮನಾಭನ್‌ (ನಾರ್ತ್‌ ಈಸ್ಟ್‌ ಯುನೈಟೆಡ್‌) ಹಾಗೂ ಲೂಯಿಸ್‌ ನಿಕ್ಸನ್‌ (ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ) ಲೀಗ್‌ನಲ್ಲಿ ಆಡಿದ್ದ ರಾಜ್ಯದ ಆಟಗಾರರು. ದೇಶದ ಅತ್ಯುನ್ನತ ಫುಟ್ಬಾಲ್‌ ಲೀಗ್‌ನಲ್ಲೇ ರಾಜ್ಯದ 4 ಆಟಗಾರರು ಮಾತ್ರ ಆಡುತ್ತಿರುವುದು ಕರ್ನಾಟಕದ ಫುಟ್ಬಾಲ್‌ ಯಾವ ರೀತಿ ಇದೆ ಎಂಬುದಕ್ಕೆ ಹಿಡಿದ ಕೈಗನ್ನಡಿ.

ಏಕೆ ಈ ದುರವಸ್ಥೆ?

- ತಳಮಟ್ಟದಲ್ಲಿ ಪ್ರತಿಭೆಗಳ ಗುರುತಿಸಿ ಬೆಳೆಸಲು ವಿಫಲ
- ಅಗತ್ಯವಿರುವ ಫುಟ್ಬಾಲ್‌ ಕ್ರೀಡಾಂಗಣಗಳ ಕೊರತೆ
- ಒಂದು ಕ್ರೀಡಾಂಗಣವಿದ್ದರೂ ಶೋಚನೀಯ ಸ್ಥಿತಿಯಲ್ಲಿದೆ
- ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಾನ್ವೇಷಣೆ ಇಲ್ಲ
- ಫುಟ್ಬಾಲ್‌ ಆಟಗಾರರ ಆಯ್ಕೆಯಲ್ಲಿ ಭಾರೀ ರಾಜಕಾರಣ

click me!