
ಕಲ್ಲಿಕೋಟೆ(ಏ.26): ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ 2ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಬೆಂಗಳೂರು ಎಫ್‌ಸಿ ತಂಡದ ಕನಸು ನುಚ್ಚುನೂರಾಗಿದೆ. ಮಂಗಳವಾರ ನಡೆದ ಮೂರನೇ ಆವೃತ್ತಿಯ ಸೂಪರ್ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಎದುರು 2018ರ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡವು 1-2 ಗೋಲುಗಳಿಂದ ಸೋಲುಂಡಿತು. ಇತ್ತೀಚೆಗಷ್ಟೇ ಇಂಡಿಯನ್ ಸೂಪರ್ ಲೀಗ್ ಫೈನಲ್‌ನಲ್ಲಿ ಮುಗ್ಗರಿಸಿದ್ದ ಬಿಎಫ್‌ಸಿ ತಂಡವು, ಇದೀಗ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಎಡವಿತು.
ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಒಡಿಶಾ ಪರ 23ನೇ ನಿಮಿಷದಲ್ಲಿ ಡಿಯಾಗೊ ಮಾರ್ಸಿಯೋ ಮೊದಲ ಗೋಲು ಬಾರಿಸಿದರು. 38ನೇ ನಿಮಿಷದಲ್ಲಿ ಮಾರ್ಸಿಯೋ ಹೊಡೆದ ಮತ್ತೊಂದು ಗೋಲು ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿಕೊಟ್ಟಿತು. ಇನ್ನು 85ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿದ ಸುನಿಲ್ ಚೆಟ್ರಿ, ಬಿಎಫ್‌ಸಿ ಸೋಲಿನ ಅಂತರವನ್ನು ಕಡಿಮೆಗೊಳಿಸಲಷ್ಟೇ ಶಕ್ತರಾದರು. ಕೆಲ ಫ್ರೀ ಕಿಕ್ ಹಾಗೂ ಗೋಲು ಗಳಿಸುವ ಅವಕಾಶಗಳನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದು, ಬಿಎಫ್‌ಸಿ ಪಾಲಿಗೆ ಮುಳುವಾಗಿ ಪರಿಣಮಿಸಿತು.
ಇಂದಿನಿಂದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್
ದುಬೈ: 40ನೇ ಆವೃತ್ತಿಯ ಪ್ರತಿಷ್ಠಿತ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನ ಪ್ರಧಾನ ಸುತ್ತಿನ ಪಂದ್ಯಗಳು ಬುಧವಾರ ಆರಂಭಗೊಳ್ಳಲಿದ್ದು, 2023ರಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿರುವ ಭಾರತೀಯರ ಶಟ್ಲರ್ಗಳು ಪದಕದ ಬರ ನೀಗಿಸುವ ಕಾತರದಲ್ಲಿದ್ದಾರೆ. ಟೂರ್ನಿಯಲ್ಲಿ ಈವರೆಗೆ ಭಾರತ 17 ಪದಕ ಜಯಿಸಿದ್ದು, 1965ರಲ್ಲಿ ಏಕೈಕ ಚಿನ್ನದ ಪದಕವನ್ನು ದಿನೇಶ್ ಖನ್ನಾ ಗೆದ್ದಿದ್ದರು. ಹೀಗಾಗಿ ಸುಮಾರು 6 ದಶಕಗಳ ಬಳಿಕ ಮತ್ತೊಮ್ಮೆ ಬಂಗಾರದ ಸಾಧನೆ ಮಾಡಲು ಭಾರತ ಕಾಯುತ್ತಿದೆ.
ವಿರಾಟ್ ಕೊಹ್ಲಿ ಜತೆ ಬ್ಯಾಡ್ಮಿಂಟನ್ ಆಡಿದ ಅನುಷ್ಕಾ ಶರ್ಮಾ; ಫಿಟ್ನೆಸ್ ಪಾಠ ಮಾಡಿದ ವಿರುಷ್ಕಾ ಜೋಡಿ
ಪುರುಷರ ಸಿಂಗಲ್ಸ್ನಲ್ಲಿ ಕಿದಂಬಿ ಶ್ರೀಕಾಂತ್, ಎಚ್.ಎಸ್.ಪ್ರಣಯ್, ಲಕ್ಷ್ಯ ಸೇನ್ ಕಣದಲ್ಲಿದ್ದು, ಪಿ.ವಿ.ಸಿಂಧು, ಮಾಳವಿಕಾ, ಆಕರ್ಷಿ ಕಶ್ಯಪ್ ಮಹಿಳಾ ಸಿಂಗಲ್ಸ್ನಲ್ಲಿ ಆಡಲಿದ್ದಾರೆ. ಅಗ್ರ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಶೆಟ್ಟಿಪುರುಷರ ಡಬಲ್ಸ್ನಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದು, ಮಹಿಳಾ ಡಬಲ್ಸ್ನಲ್ಲಿ ತ್ರೀಸಾ-ಗಾಯತ್ರಿ ಮೇಲೆ ಭಾರೀ ನಿರೀಕ್ಷೆ ಇದೆ. ಅಶ್ವಿನಿ ಭಟ್-ಶಿಖಾ ಗೌತಮ್ ಕೂಡಾ ಕಣಕ್ಕಿಳಿಯಲಿದ್ದಾರೆ.
ಬೆಂಗಳೂರು 10ಕೆ ಓಟಕ್ಕೆ ಸಾನ್ಯಾ ರಾಸ್ ರಾಯಭಾರಿ
ಬೆಂಗಳೂರು: ಸತತ 3 ಒಲಿಂಪಿಕ್ಸ್ಗಳಲ್ಲಿ 4*400 ಮೀ. ರಿಲೇ ಓಟದಲ್ಲಿ ಚಿನ್ನ ಗೆದ್ದಿರುವ ಏಕೈಕ ಮಹಿಳೆ ಎನಿಸಿಕೊಂಡಿರುವ ಜಮೈಕಾದ ಸಾನ್ಯಾ ರಿಚರ್ಡ್ಸ್-ರಾಸ್ ಮೇ 21ರಂದು ನಡೆಯಲಿರುವ 15ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ನ ಅಂತಾರಾಷ್ಟ್ರೀಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಒಟ್ಟು 14 ಪದಕ ಗೆದ್ದಿರುವ ಸಾನ್ಯಾ ವಿಶ್ವ ರಿಲೇ, ಐಎಎಎಫ್ ಡೈಮಂಡ್ ಮತ್ತು ಗೋಲ್ಡನ್ ಲೀಗ್ಗಳಲ್ಲೂ ಹಲವು ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.