SAFF Cup 2023: ಬೆಂಗಳೂರಿನಲ್ಲಿಂದು ಭಾರತ vs ನೇಪಾಳ ಫೈಟ್

By Kannadaprabha NewsFirst Published Jun 24, 2023, 9:43 AM IST
Highlights

ಸ್ಯಾಫ್ ಕಪ್ ಫುಟ್ವಾಲ್ ಟೂರ್ನಿಯಲ್ಲಿಂದು ಭಾರತ-ನೇಪಾಳ ಮುಖಾಮುಖಿ
ಪಾಕ್ ವಿರುದ್ದ ಗೆದ್ದು ಶುಭಾರಂಭ ಮಾಡಿರುವ ಭಾರತ
ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಸುನಿಲ್ ಚೆಟ್ರಿ ಪಡೆ

ಬೆಂಗಳೂರು(ಜೂ.24): ಬದ್ಧವೈರಿ ಪಾಕಿಸ್ತಾನ ವಿರುದ್ಧ 4-0 ಗೋಲುಗಳ ಭರ್ಜರಿ ಗೆಲುವಿನೊಂದಿಗೆ 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಅಭಿಯಾನ ಆರಂಭಿಸಿರುವ ಆತಿಥೇಯ ಭಾರತ ಶನಿವಾರ ನೇಪಾಳ ವಿರುದ್ಧ ಸೆಣಸಾಡಲಿದೆ. ಸುನಿಲ್‌ ಚೆಟ್ರಿ ಪಡೆ ಸತತ 2ನೇ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶವನ್ನು ಬಹುತೇಖ ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ.

‘ಎ’ ಗುಂಪಿನಲ್ಲಿರುವ ಭಾರತ ಸದ್ಯ 3 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕುವೈತ್ ವಿರುದ್ಧ 1-3ರಿಂದ ಪರಾಭವಗೊಂಡಿದ್ದ ನೇಪಾಳ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದೆ. ನೇಪಾಳ ವಿರುದ್ಧ ಈವರೆಗೆ ಭಾರತವೇ ಪ್ರಾಬಲ್ಯ ಸಾಧಿಸಿದ್ದು, 16-2 ರ ಗೆಲುವು-ಸೋಲಿನ ದಾಖಲೆ ಹೊಂದಿದೆ. ಕೊನೆ ಬಾರಿ 2021ರ ಸ್ಯಾಫ್ ಕಪ್‌ನಲ್ಲಿ ಮುಖಾಮುಖಿಯಾಗಿದ್ದಾಗಲೂ ಭಾರತವೇ ಗೆದ್ದಿತ್ತು. ಅಲ್ಲದೇ, ಭಾರತ ಕೊನೆ 7 ಪಂದ್ಯಗಳಲ್ಲಿ ಕ್ಲೀನ್‌ ಶೀಟ್(ಒಂದೂ ಗೋಲು ಬಿಟ್ಟುಕೊಡದೆ ಇರುವುದು) ಕಾಪಾಡಿಕೊಂಡಿದೆ. ಇನ್ನು, ಶನಿವಾರದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ-ಕುವೈತ್ ಮುಖಾಮುಖಿಯಾಗಲಿವೆ. ಈ ಪಂದ್ಯ ಮಧ್ಯಾಹ್ನ 3.3.ಕ್ಕೆ ಆರಂಭವಾಗಲಿದೆ.

ಭಾರತದ ಪಂದ್ಯ: ಸಂಜೆ 7.30 ಕ್ಕೆ,

ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್‌ ಕೋಡ್‌

ಕೋಚ್‌ ಸ್ಟಿಮಾಕ್‌ಗೆ 1 ಪಂದ್ಯ ನಿಷೇಧ

ಬೆಂಗಳೂರು: ಸ್ಯಾಫ್‌ ಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಹುಡುಗಾಟದಿಂದ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿಗೆ ಕಾರಣರಾಗಿದ್ದ ಭಾರತದ ಕೋಚ್‌ ಇಗೊರ್‌ ಸ್ಟಿಮಾಕ್‌ ಒಂದು ಪಂದ್ಯ ನಿಷೇಧಕ್ಕೊಳಗಾಗಿ ದ್ದಾರೆ. ಅಂದರೆ ಶನಿವಾರದ ನೇಪಾಳ ವಿರುದ್ಧದ ಪಂದ್ಯದಲ್ಲಿ ಅವರು ತಂಡದ ಜೊತೆ ಕಾಣಿಸಿಕೊಳ್ಳುವುದಿಲ್ಲ. ಜೂ.27ರ ಕುವೈತ್‌ ವಿರುದ್ಧದ ಪಂದ್ಯಕ್ಕೆ ಸ್ಟಿಮಾಕ್‌ ತಂಡದ ಡಗೌಟ್‌ಗೆ ಮರಳಲಿದ್ದಾರೆ.

ಮಹಿಳಾ ಫುಟ್ಬಾಲ್‌: ರಾಜ್ಯ ತಂಡಕ್ಕೆ 3ನೇ ಸೋಲು

ಅಮೃತ್‌ಸರ್: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನಲ್ಲಿ ಕರ್ನಾಟಕ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ. "ಎ" ಗುಂಪಿನ ಕೊನೆ ಪಂದ್ಯದಲ್ಲಿ ಶುಕ್ರವಾರ ಜಾರ್ಖಂಡ್‌ ವಿರುದ್ಧ 0-3 ಅಂತರದಲ್ಲಿ ರಾಜ್ಯ ತಂಡ ಸೋಲನುಭವಿಸಿತು. ಇದರೊಂದಿಗೆ 5 ಪಂದ್ಯಗಳಲ್ಲಿ ಕೇವಲ 1 ಗೆಲುವಿನೊಂದಿಗೆ 4 ಅಂಕ ಸಂಪಾದಿಸಿದ ರಾಜ್ಯ ತಂಡ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 6 ತಂಡಗಳಿದ್ದ ಗುಂಪಿನಿಂದ ತಮಿಳುನಾಡು(15 ಅಂಕ), ಒಡಿಶಾ(12) ಸೆಮೀಸ್‌ಗೇರಿದವು.

6 ರೆಸ್ಲರ್ಸ್‌ಗೆ ಸ್ಪೆಷಲ್‌ ಎಂಟ್ರಿ: ಯೋಗೇಶ್ವರ್‌ ದತ್‌ ಕಿಡಿ!

ವಾಟರ್‌ಪೋಲೋ: ರಾಜ್ಯ ತಂಡಗಳಿಗೆ ಸೋಲು

ಬೆಂಗಳೂರು: 75ನೇ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನ ವಾಟರ್‌ಪೋಲೋ ಸ್ಪರ್ಧೆಯಲ್ಲಿ ಕರ್ನಾಟಕದ ತಂಡಗಳು ಶುಕ್ರವಾರ ಸೋಲನುಭವಿಸಿವೆ. ಮೊದಲೆರಡು ದಿನ ಸತತ 2 ಪಂದ್ಯ ಗೆದ್ದಿದ್ದ ರಾಜ್ಯದ ಮಹಿಳಾ ತಂಡ ಶುಕ್ರವಾರ 2 ಪಂದ್ಯಗಳಲ್ಲೂ ಪರಾಭವಗೊಂಡಿತು. ಬಂಗಾಳ ವಿರುದ್ಧ 3-7 ಹಾಗೂ ಕೇರಳ ವಿರುದ್ಧ 1-9ರಿಂದ ಸೋತಿತು. ಇದೇ ವೇಳೆ ಪುರುಷರ ತಂಡ ಹ್ಯಾಟ್ರಿಕ್‌ ಸೋಲನುಭವಿಸಿತು. ಮಹಾರಾಷ್ಟ್ರ ವಿರುದ್ಧ 4-9ರಿಂದ ಸೋಲುಂಡಿತು.

ತೈಪೆ ಓಪನ್‌: ಕ್ವಾರ್ಟರ್‌ ಫೈನಲಲ್ಲಿ ಸೋತ ಪ್ರಣಯ್‌

ತೈಪೆ: ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಶುಕ್ರವಾರ ಪುರುಷರ ಸಿಂಗಲ್ಸ್ ಅಂತಿಮ 8ರ ಘಟ್ಟದ ಪಂದ್ಯದಲ್ಲಿ ವಿಶ್ವ ನಂ.9 ಆಟಗಾರ ಪ್ರಣಯ್‌, ವಿಶ್ವ ನಂ.16, ಹಾಂಕಾಂಗ್‌ನ ಆ್ಯಂಗುಸ್ ಲಾಂಗ್ ವಿರುದ್ಧ 19-21, 8-21 ಅಂತರದಲ್ಲಿ ಸೋಲನುಭವಿಸಿದರು.

click me!