
ಬೆಂಗಳೂರು(ಜೂ.23): ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಭಾರತದ ಎದುರು ಪಾಕಿಸ್ತಾನ ಫುಟ್ಬಾಲ್ ತಂಡವು 4-0 ಅಂತರದ ಹೀನಾಯ ಸೋಲು ಅನುಭವಿಸಿದೆ. ಸುನಿಲ್ ಚೆಟ್ರಿ ಬಾರಿಸಿದ ಹ್ಯಾಟ್ರಿಕ್ ಗೋಲು ಹಾಗೂ ಉದಾಂತ್ ಸಿಂಗ್ ಬಾರಿಸಿದ ಮಿಂಚಿನ ಗೋಲಿನ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಭಾರತ ಫುಟ್ಬಾಲ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸ್ಯಾಫ್ ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
90 ನಿಮಿಷಗಳ ಕಾಲ ನಡೆದ ಪಂದ್ಯದುದ್ದಕ್ಕೂ ಪಾಕಿಸ್ತಾನ ಎದುರು ಸಂಪೂರ್ಣ ಪ್ರಾಬಲ್ಯ ಮೆರೆಯುವಲ್ಲಿ ಸುನಿಲ್ ಚೆಟ್ರಿ ಪಡೆ ಯಶಸ್ವಿಯಾಯಿತು. ಇದೀಗ ಬೆನ್ನಲ್ಲೇ ಮಾತನಾಡಿರುವ ಪಾಕಿಸ್ತಾನ ತಂಡದ ಕೋಚ್ ತೋರ್ಬೆನ್ ವಿಟಜೆವಸ್ಕಿ, ಪಂದ್ಯವನ್ನಾಡಲು ವೀಸಾ ಸಮಸ್ಯೆ ಕಾಡಿದ್ದರಿಂದಾಗಿ ಪಂದ್ಯವನ್ನು ನಾವು ಸೋತೆವು ಎನ್ನುವ ಕುಂಟು ನೆಪವನ್ನು ಹೇಳಿದ್ದಾರೆ.
"ಭಾರತಕ್ಕೆ ಪ್ರವಾಸ ಮಾಡಲು ನಮಗೆ ತಡವಾಗಿ ವೀಸಾ ಸಿಕ್ಕಿತು. ಮುಂಬೈ ಏರ್‌ಪೋರ್ಟ್‌ನಲ್ಲಿಯೂ ಇಮಿಗ್ರೇಶನ್ ವಿಚಾರವಾಗಿ ಸಾಕಷ್ಟು ಸಮಸ್ಯೆಯಾಯಿತು. ಹೀಗಾಗಿ ನಮ್ಮ ಹುಡುಗರು ಸಾಕಷ್ಟು ಕಷ್ಟವನ್ನು ಎದುರಿಸಿದರು. ಎರಡನೇ ಗುಂಪು 16 ಗಂಟೆಗಳ ಪ್ರಯಾಣದ ಬಳಿಕ ಪಂದ್ಯ ಆರಂಭಕ್ಕೆ ಕೇವಲ 6 ಗಂಟೆಯಿದ್ದಾಗ ಹೋಟೆಲ್‌ಗೆ ಬಂದಿಳಿದರು. ಇಷ್ಟಾದ ಬಳಿಕ ಪಂದ್ಯವನ್ನಾಡುವುದು ಸುಲಭವಲ್ಲ. ಆದರೆ ನಾವು ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕಾಗುತ್ತದೆ. ಅದನ್ನಂತೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಫುಟ್ಬಾಲ್ ತಂಡದ ಕೋಚ್ ತೋರ್ಬೆನ್ ವಿಟಜೆವಸ್ಕಿ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ಮಾರಿಷಸ್‌ನಲ್ಲೂ ಸಾಕಷ್ಟು ಸಮಸ್ಯೆಗಳಾದವು. ಆದರೆ ನಮಗೆ ಒಂದಷ್ಟು ಹೆಚ್ಚಿನ ಸಮಯಾವಕಾಶವಿದ್ದಿದ್ದರೇ, ನಾವು ಇನ್ನಷ್ಟು ಚೆನ್ನಾಗಿ ಆಡುತ್ತಿದ್ದೆವು. ರಾತ್ರಿಯಿಡಿ ನಾವು ಪ್ರಯಾಣ ಮಾಡಿದ್ದರಿಂದ ಆಟಗಾರರು ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಈ ರೀತಿಯಾದರೇ, ಪಂದ್ಯಕ್ಕೆ ಒಳ್ಳೆಯ ಸಿದ್ದತೆ ಎನಿಸಿಕೊಳ್ಳುವುದಿಲ್ಲ. ಹೀಗಾಗಿ ನಾವು ಆಟಗಾರರಿಂದ ಹೆಚ್ಚಿಗೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಪಾಕ್ ಕೋಚ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.
ಪಾಕಿಸ್ತಾನ ಆಟಗಾರರು 2 ಬ್ಯಾಚ್‌ಗಳಲ್ಲಿ ಬೆಂಗಳೂರಿಗೆ ಆಗಮಿಸಿದರು. ಬುಧವಾರ ಬೆಳಗ್ಗಿನ ಜಾವ 1 ಗಂಟೆ ವೇಳೆಗೆ ಮಾರಿಷಸ್ನಿಂದ ಮುಂಬೈಗೆ ಬಂದಿಳಿದ ತಂಡದಲ್ಲಿ ಆಟಗಾರರು, ಕೋಚಿಂಗ್ ಸಿಬ್ಬಂದಿ ಸೇರಿ ಒಟ್ಟು 32 ಸದಸ್ಯರಿದ್ದು ಎಲ್ಲರಿಗೂ ಒಂದೇ ವಿಮಾನದಲ್ಲಿ ಟಿಕೆಟ್ ಹೊಂದಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ 2 ಬ್ಯಾಚ್‌ಗಳಲ್ಲಿ ತಂಡವು ಬೆಂಗಳೂರು ತಲುಪಿತು. ಮೊದಲ ಬ್ಯಾಚ್ ಬೆಳಗ್ಗೆ 4 ಗಂಟೆಗೆ ಬೆಂಗಳೂರಿಗೆ ಹೊರಟರೆ, 2ನೇ ಬ್ಯಾಚ್ ಬೆಳಗ್ಗೆ 9.15ರ ವಿಮಾನದಲ್ಲಿ ಪ್ರಯಾಣಿಸಿತು. 2ನೇ ಬ್ಯಾಚ್‌ನಲ್ಲಿದ್ದ ಸದಸ್ಯರು ಕಂಠೀರವ ಕ್ರೀಡಾಂಗಣದ ಬಳಿ ನಿಗದಿಯಾಗಿರುವ ಹೋಟೆಲ್ ತಲುಪಿದಾಗ ಮಧ್ಯಾಹ್ನ 1 ಗಂಟೆ. ಅಂದರೆ ಪಂದ್ಯ ಆರಂಭಗೊಳ್ಳಲು ಕೇವಲ 6 ಗಂಟೆ ಮೊದಲು ಬೆಂಗಳೂರಿಗೆ ಬಂದಿಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.