ಬೆಂಗ್ಳೂರು ಯುನೈಟೆಡ್‌ ಫುಟ್ಬಾಲ್ ತಂಡವನ್ನು ಐ-ಲೀಗ್‌ಗೇರಿಸುವ ಗುರಿ: ಖಾಲೀದ್ ಜಮೀಲ್‌

By Kannadaprabha NewsFirst Published Jun 4, 2022, 12:13 PM IST
Highlights

* ಬೆಂಗಳೂರು ಯುನೈಟೆಡ್ ಫುಟ್ಬಾಲ್‌ ತಂಡವನ್ನು ಮತ್ತೊಂದು ಸ್ತರಕ್ಕೇರಿಸುವ ವಿಶ್ವಾಸದಲ್ಲಿ ಖಾಲೀದ್‌ ಜಮೀಲ್

* ಖಾಲೀದ್‌ ಜಮೀಲ್ ಐಎಸ್‌ಎಲ್‌ ತಂಡಕ್ಕೆ ಕೋಚ್‌ ಆದ ಮೊದಲ ಭಾರತೀಯ

* ಈ ಹಿಂದೆ ಐಜ್ವಾಲ್‌ ಎಫ್‌ಸಿ ತಂಡವನ್ನು ಕೆಳ ಹಂತದಿಂದ ಮೇಲೆತ್ತಿ ಐ-ಲೀಗ್‌ ಚಾಂಪಿಯನ್‌ ಆಗಿ ರೂಪಿಸಿದ್ದ ಜಮೀಲ್

ಬೆಂಗಳೂರು(ಜೂ.04): ಐಎಸ್‌ಎಲ್‌ ತಂಡಕ್ಕೆ ಕೋಚ್‌ ಆದ ಮೊದಲ ಭಾರತೀಯ ಎನ್ನುವ ಹಿರಿಮೆ ಹೊಂದಿರುವ ಭಾರತದ ಮಾಜಿ ಫುಟ್ಬಾಲಿಗ ಖಾಲೀದ್‌ ಜಮೀಲ್‌ (Khalid Jamil), ಎಫ್‌ಸಿ ಬೆಂಗಳೂರು ಯುನೈಟೆಡ್‌(ಎಫ್‌ಸಿಬಿಯು) (FC Bengaluru United) ತಂಡದ ನೂತನ ಪ್ರಧಾನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 3ನೇ ದರ್ಜೆಯ ಲೀಗ್‌ನಲ್ಲಿ ಆಡುತ್ತಿರುವ ಎಫ್‌ಸಿಬಿಯು ತಂಡವನ್ನು ಆದಷ್ಟು ಬೇಗ ಭಾರತದ ಪ್ರತಿಷ್ಠಿತ ಟೂರ್ನಿಯಾದ ಐ-ಲೀಗ್‌ಗೆ ಕೊಂಡೊಯ್ಯುವ ಗುರಿ ಇದೆ ಎಂದಿದ್ದಾರೆ. 

ಈ ಹಿಂದೆ ಐಜ್ವಾಲ್‌ ಎಫ್‌ಸಿ ತಂಡವನ್ನು ಕೆಳ ಹಂತದಿಂದ ಮೇಲೆತ್ತಿ ಐ-ಲೀಗ್‌ ಚಾಂಪಿಯನ್‌ (I League Champion) ಆಗಿ ರೂಪಿಸಿದ್ದ ಜಮೀಲ್‌, ಹೊಸ ಸವಾಲಿಗೆ ಸಿದ್ಧವಿರುವುದಾಗಿ ಹೇಳಿದ್ದಾರೆ. ನಗರದಲ್ಲಿರುವ ತಂಡದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀಲ್‌, ‘ಕರ್ನಾಟಕ, ಬೆಂಗಳೂರಲ್ಲಿ ಸಾಕಷ್ಟು ಯುವ ಪ್ರತಿಭೆಗಳಿವೆ. ಒಂದು ಉತ್ತಮ ತಂಡ ಕಟ್ಟುವುದು ನಮ್ಮ ಉದ್ದೇಶ’ ಎಂದರು. 3 ವರ್ಷಗಳ ಹಿಂದೆ ಸ್ಥಾಪನೆಗೊಂಡ ಎಫ್‌ಸಿಬಿಯು ತಂಡ, ಬಿಡಿಎಫ್‌ಎ ಲೀಗ್‌ ಸೇರಿ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದು, ಭಾರತದ ಅತ್ಯಂತ ಹಳೆಯ ಫುಟ್ಬಾಲ್‌ ಟೂರ್ನಿ ಎನಿಸಿರುವ ಡುರಾಂಡ್‌ ಕಪ್‌ನಲ್ಲೂ ಸ್ಪರ್ಧಿಸಿತ್ತು.

ಇಂದಿನಿಂದ ಹಾಕಿ ಫೈವ್ಸ್‌: ಭಾರತಕ್ಕೆ ಶುಭಾರಂಭ ಗುರಿ

ಲುಸ್ಸಾನೆ: ಚೊಚ್ಚಲ ಆವೃತ್ತಿಯ ಎಫ್‌ಐಎಚ್‌ ಹಾಕಿ ಫೈವ್ಸ್‌ ಟೂರ್ನಿ ಸ್ವಿಜರ್‌ಲೆಂಡ್‌ನ ಲುಸ್ಸಾನೆಯಲ್ಲಿ ಶನಿವಾರ ಆರಂಭವಾಗಲಿದ್ದು, ಭಾರತ ಪುರುಷ ಮತ್ತು ಮಹಿಳಾ ತಂಡ ಕ್ರಮವಾಗಿ ಸ್ವಿಜರ್‌ಲೆಂಡ್‌ ಹಾಗೂ ಉರುಗ್ವೆ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಭಾರತ ಪುರುಷರ ತಂಡ ಶನಿವಾರವೇ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನದ ಸವಾಲು ಎದುರಿಸಲಿದೆ. 

Khelo India: ಇಂದಿನಿಂದ ಖೇಲೋ ಇಂಡಿಯಾ ಗೇಮ್ಸ್‌ ಶುರು

ಮಹಿಳಾ ತಂಡ ಶನಿವಾರ 2ನೇ ಪಂದ್ಯವನ್ನು ಪೋಲೆಂಡ್‌ ವಿರುದ್ಧ ಆಡಲಿದೆ. ಬಳಿಕ ಭಾನುವಾರ ಪುರುಷರ ತಂಡ ಮಲೇಷ್ಯಾ, ಪೋಲೆಂಡ್‌, ಮಹಿಳಾ ತಂಡ ಸ್ವಿಜರ್‌ಲೆಂಡ್‌, ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಅಂದೇ ಅಗ್ರ 2 ಸ್ಥಾನ ಪಡೆಯುವ ತಂಡಗಳ ನಡುವೆ ಫೈನಲ್‌ ನಡೆಯಲಿದೆ. ಹಾಕಿಯ ಟಿ20 ಎನಿಸಿಕೊಂಡಿರುವ ಈ ಟೂರ್ನಿಯಲ್ಲಿ ಪ್ರತೀ ತಂಡದಲ್ಲಿ 11ರ ಬದಲು ಕೇವಲ 5 ಆಟಗಾರರು ಆಡಲಿದ್ದಾರೆ. ಪ್ರತಿ ಪಂದ್ಯ ತಲಾ 10 ನಿಮಿಷಗಳ ಎರಡು ಅವಧಿ ಎಂದರೆ ಒಟ್ಟು 20 ನಿಮಿಷಗಳ ಕಾಲ ನಡೆಯಲಿದ್ದು, ಅಂಕಣ ಕೂಡಾ ಸಣ್ಣದಿರಲಿದೆ.

ನಿಖಾತ್‌, ಈಶಾ ಸಿಂಗ್‌ಗೆ 2 ಕೋಟಿ ರುಪಾಯಿ: ತೆಲಂಗಾಣ ಸರ್ಕಾರದಿಂದ ವಿತರಣೆ

ಹೈದರಾಬಾದ್‌: ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌ ಹಾಗೂ ಜೂನಿಯರ್‌ ಶೂಟಿಂಗ್‌ ವಿಶ್ವಕಪ್‌ನ ಚಿನ್ನ ವಿಜೇತ ಈಶಾ ಸಿಂಗ್‌ ಅವರಿಗೆ, ತೆಲಂಗಾಣ ಸರ್ಕಾರ ತಲಾ 2 ಕೋಟಿ ರು. ನಗದು, ಹೈದರಾಬಾದ್‌ನ ಜ್ಯುಬ್ಲಿ ಹಿಲ್ಸ್‌ ಅಥವಾ ಬಂಜಾರಾ ಹಿಲ್ಸ್‌ನಲ್ಲಿ ನಿವೇಶನವನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 25 ವರ್ಷದ ನಿಖಾತ್‌ ಇತ್ತೀಚೆಗೆ ವಿಶ್ವ ಬಾಕ್ಸಿಂಗ್‌ನ 52 ಕೆ.ಜಿ. ವಿಭಾಗದಲ್ಲಿ ಬಂಗಾರ ಗೆದ್ದಿದ್ದರು. ಇನ್ನು 17 ವರ್ಷದ ಈಶಾ ಜರ್ಮನಿಯಲ್ಲಿ ನಡೆದ ಶೂಟಿಂಗ್‌ ವಿಶ್ವಕಪ್‌ನಲ್ಲಿ 3 ಚಿನ್ನ ಪದಕ ಜಯಿಸಿದ್ದರು.

click me!