ಸೆರೆನಾ, ಹ್ಯಾಮಿಲ್ಟನ್‌ರಿಂದ ಚೆಲ್ಸಿ ಫುಟ್ಬಾಲ್ ತಂಡ ಖರೀದಿ..?

By Kannadaprabha News  |  First Published Apr 22, 2022, 7:50 AM IST

* ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಜನಪ್ರಿಯ ತಂಡ ಚೆಲ್ಸಿಯನ್ನು ಖರೀದಿಸಲು ಸೆರೆನಾ ಆಸಕ್ತಿ

* ಸೆರೆನಾ ವಿಲಿಯಮ್ಸ್‌ ಹಾಗೂ ಲೂಯಿಸ್‌ ಹ್ಯಾಮಿಲ್ಟನ್‌ ಚೆಲ್ಸಿಯನ್ನು ಖರೀದಿಸಲು ಆಸಕ್ತಿ

* ಸೆರೆನಾ ಈಗಾಗಲೇ ಲಾಸ್‌ ಏಂಜಲೀಸ್‌ನ ಮಹಿಳಾ ಫುಟ್ಬಾಲ್‌ ತಂಡದಲ್ಲಿ ಹೂಡಿಕೆ ಮಾಡಿದ್ದಾರೆ


ಲಂಡನ್‌(ಏ.22): 23 ಗ್ರ್ಯಾನ್‌ ಸ್ಲಾಂ ಸಿಂಗಲ್ಸ್‌ ಪ್ರಶಸ್ತಿ ವಿಜೇತ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ (Serena Williamson) ಹಾಗೂ 7 ಬಾರಿ ಫಾರ್ಮುಲಾ 1 ವಿಶ್ವ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ (Lewis Hamilton) ಅವರು ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಜನಪ್ರಿಯ ತಂಡ ಚೆಲ್ಸಿಯನ್ನು (Chelsea Football Club) ಖರೀದಿಸಲಿದ್ದಾರೆ ಎಂದು ವರದಿಯಾಗಿವೆ. ಲಿವರ್‌ಪೂಲ್‌ ಫುಟ್ಬಾಲ್‌ ಕ್ಲಬ್‌ ಮಾಜಿ ಮುಖ್ಯಸ್ಥ ಮಾರ್ಟಿನ್‌ ಬ್ರೌಟನ್‌ ಅವರ ಜೊತೆ ಸೇರಿ ಇವರಿಬ್ಬರು ತಂಡ ಖರೀದಿಗೆ ಆಸಕ್ತಿ ತೋರಿದ್ದು ಒಟ್ಟು 20 ಮಿಲಿಯನ್‌ ಪೌಂಡ್‌(198.7 ಕೋಟಿ ರು.) ಹೂಡಿಕೆ ಮಾಡಲು ಸಿದ್ಧರಿದ್ದಾರೆ ಎನ್ನಲಾಗಿದೆ.

ಬ್ರೌಟನ್‌ ಅವನ್ನೊಳಗೊಂಡ ತಂಡದಲ್ಲಿ ವಿಶ್ವ ಅಥ್ಲೆಟಿಕ್ಸ್‌ ಫೆಡರೇಶನ್‌ ಅಧ್ಯಕ್ಷ ಸೆಬಾಸ್ಟಿಯನ್‌ ಕೋ ಸೇರಿದಂತೆ ಹಲವರಿದ್ದಾರೆ. ಸೆರೆನಾ ಈಗಾಗಲೇ ಲಾಸ್‌ ಏಂಜಲೀಸ್‌ನ ಮಹಿಳಾ ಫುಟ್ಬಾಲ್‌ ತಂಡದಲ್ಲಿ ಹೂಡಿಕೆ ಮಾಡಿದ್ದಾರೆ. ರಷ್ಯಾದ ರೋಮನ್‌ ಅಬ್ರಾಮೊವಿಚ್‌ ಸದ್ಯ ಚೆಲ್ಸಿ ತಂಡದ ಮಾಲಕತ್ವ ಹೊಂದಿದ್ದಾರೆ. ಆದರೆ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಅವರು ತಂಡದ ಮಾಲಕತ್ವ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Latest Videos

undefined

ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಗೆಲುವು

ಮಲಪ್ಪುರಂ: 75ನೇ ಆವೃತ್ತಿಯ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯಲ್ಲಿ ಗುರುವಾರ ಸವೀರ್‍ಸಸ್‌ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 1-0 ಗೋಲಿನಿಂದ ಜಯ ಸಾಧಿಸಿತು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ರಾಜ್ಯ ತಂಡದ ಪರ ಅಂಕಿತ್‌ 38ನೇ ನಿಮಿಷದಲ್ಲಿ ಗೋಲು ಹೊಡೆದರು. ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ರಾಜ್ಯ ತಂಡ, ತನ್ನ ಮುಂದಿನ ಪಂದ್ಯವನ್ನು ಶನಿವಾರ ಮಣಿಪುರ ವಿರುದ್ಧ ಆಡಲಿದೆ.

ಏಷ್ಯನ್‌ ಗೇಮ್ಸ್‌: 14ರ ಶಟ್ಲರ್‌ ಉನ್ನತಿಗೆ ಸ್ಥಾನ

ನವದೆಹಲಿ: ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡ ಭಾರತದ ಅತಿ ಕಿರಿಯ ಶಟ್ಲರ್‌ ಎಂಬ ಖ್ಯಾತಿಗೆ 14 ವರ್ಷದ ಉನ್ನತಿ ಹೂಡಾ ಪಾತ್ರರಾಗಿದ್ದಾರೆ. ಹರಾರ‍ಯಣ ಮೂಲದ ಉನ್ನತಿ ಗುರುವಾರ ಕೊನೆಗೊಂಡ ಆಯ್ಕೆ ಟ್ರಯಲ್ಸ್‌ನ ಮಹಿಳಾ ಸಿಂಗಲ್ಸ್‌ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದು ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಉಬರ್‌ ಕಪ್‌ನಲ್ಲೂ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಏಷ್ಯನ್‌, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡವನ್ನು ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು, ಪುರುಷರ ತಂಡವನ್ನು ಲಕ್ಷ್ಯ ಸೆನ್‌, ಕಿದಂಬಿ ಶ್ರೀಕಾಂತ್‌ ಮುನ್ನಡೆಸಲಿದ್ದಾರೆ. ಟ್ರಯಲ್ಸ್‌ನಿಂದ ಹೊರಗುಳಿದಿದ್ದ 2 ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಸೈನಾ ನೆಹ್ವಾಲ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಏಷ್ಯನ್‌ ಕುಸ್ತಿ: ಭಾರತಕ್ಕೆ ಮತ್ತೆರಡು ಕಂಚಿನ ಪದಕ

ಉಲಾನ್‌ಬಾತರ್‌(ಮಂಗೋಲಿಯಾ): ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಗುರುವಾರ ಭಾರತದ ಇಬ್ಬರು ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಸುಷ್ಮಾ ಶೊಕೀನ್‌ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದ ಕಂಚು ತಮ್ಮದಾಗಿಸಿಕೊಂಡರೆ, 59 ಕೆ.ಜಿ. ವಿಭಾಗದಲ್ಲಿ, ಎರಡು ಬಾರಿ ಏಷ್ಯನ್‌ ಚಾಂಪಿಯನ್‌ ಸರಿತಾ ಮೋರ್‌ ಆರಂಭಿಕ ಎರಡು ಸುತ್ತುಗಳ ಸೋಲಿನ ಹೊರತಾಗಿಯೂ ಕಂಚು ಪಡೆದರು. ಭಾರತ ಕೂಟದಲ್ಲಿ ಒಟ್ಟು 7 ಪದಕಗಳನ್ನು ಗೆದ್ದುಕೊಂಡಿದೆ. ಇದಕ್ಕೂ ಮೊದಲು ಕರ್ನಾಟಕದ ಅರ್ಜುನ್‌ ಹಲಕುರ್ಕಿ ಸೇರಿ 5 ಪುರುಷ ಕುಸ್ತಿಪಟುಗಳು ಗ್ರೀಕೋ-ರೋಮನ್‌ ವಿಭಾಗದಲ್ಲಿ ಕಂಚು ಪಡೆದಿದ್ದರು.

click me!