
ಪೋರ್ಚುಗಲ್(ಏ.19): ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಹಾಗೂ ಪೂರ್ಚುಗಲ್ ತಂಡದ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಹಾಗೂ ಜಾರ್ಜಿಯಾನ ರೋಡ್ರಿಗಸ್ (Georgina Rodriguez) ದಂಪತಿಯ ನವಜಾತ ಗಂಡು ಮಗು ಸಾವನ್ನಪ್ಪಿದೆ. ಈ ವಿಚಾರವನ್ನು ಸ್ವತಃ ರೊನಾಲ್ಡೋ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ರೊನಾಲ್ಡೋ ಹಾಗೂ ಜಾರ್ಜಿಯಾನ ದಂಪತಿಯು ತಾವು ಅವಳಿ ಮಕ್ಕಳನ್ನು ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಹೆಣ್ಣು ಮಗು ಮಾತ್ರ ಬದುಕಿಳಿದಿರುವುದಾಗಿ ರೊನಾಲ್ಡೋ ತಿಳಿಸಿದ್ದಾರೆ.
ನಮ್ಮ ಗಂಡು ಮಗು ಕೊನೆಯುಸಿರೆಳೆದಿದೆ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ಎಲ್ಲಾ ಪೋಷಕರಂತೆ ನಮಗೂ ಕೂಡಾ ಇದು ಅತೀವ ನೋವು ಕೊಟ್ಟ ಸಂಗತಿಯಾಗಿದೆ ಎಂದು ರೊನಾಲ್ಡೋ ಹಾಗೂ ಜಾರ್ಜಿಯಾನಾ ಜಂಟಿ ಸಹಿ ಮಾಡಿದ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈಗ ನಮ್ಮ ಜತೆಗಿರುವ ಹೆಣ್ಣು ಮಗು ನಮಗೆ ಹೊಸ ಚೈತನ್ಯ, ಭರವಸೆ ಹಾಗೂ ಸಂತೋಷವನ್ನು ಮೂಡುವಂತೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಸರಿಯಾಗಿ ಉಪಚರಿಸಿದ ವೈದ್ಯರು, ನರ್ಸ್‌ಗಳು ಹಾಗೂ ತಜ್ಞ ಸಿಬ್ಬಂದಿಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ನಮ್ಮ ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದೇವೆ. ಹೀಗಾಗಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸುತ್ತೀರಾ ಎಂದು ಭಾವಿಸುತ್ತೇವೆ. ನಮ್ಮ ಗಂಡು ಮಗು, ನೀನೊಬ್ಬ ದೇವದೂತ, ನಾವು ಎಂದೆಂದಿಗೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ನುಡಿನಮನ ಸಲ್ಲಿಸಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡುವಾಗ ಜಾರ್ಜಿಯಾನ ರೋಡ್ರಿಗಸ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಜಾರ್ಜಿಯಾನ ರೋಡ್ರಿಗಸ್ ದಂಪತಿಗೆ ಈಗಾಗಲೇ 4 ವರ್ಷದ ಮಗುವಿದ್ದು ಒಟ್ಟಿಗೆ ವಾಸವಾಗಿದ್ದಾರೆ. ಇದಷ್ಟೇ ಅಲ್ಲದೇ ರೊನಾಲ್ಡೋ ಅವರಿಗೆ ಬೇರೆ ಗೆಳತಿಯರಿಂದ ಮೂರು ಮಕ್ಕಳನ್ನು ಪಡೆದಿದ್ದಾರೆ.
ಮದುವೆಯಾಗದೇ 6ನೇ ಮಗುವಿಗೆ ತಂದೆಯಾಗಲಿದ್ದಾರೆ Cristiano Ronaldo...!
ನಿಮ್ಮ ದುಃಖವು ನಮ್ಮ ದುಃಖ ಕೂಡಾ ಹೌದು. ಈ ಸಂಕಷ್ಟದ ಸಂದರ್ಭದಲ್ಲಿ ನಾವು ನಿಮ್ಮ ಜತೆಗಿದ್ದೇವೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಟ್ವೀಟ್ ಮಾಡಿ ಸಾಂತ್ವನ ಹೇಳಿದೆ. ಇನ್ನು ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ ಕೂಡಾ ತಮ್ಮ ವೆಬ್‌ಸೈಟ್‌ನಲ್ಲಿ ರೊನಾಲ್ಡ್ ಸಂಕಷ್ಟದ ಸಂದರ್ಭದಲ್ಲಿ ಸಾಂತ್ವನ ಹೇಳಿದೆ. ತಮ್ಮ ಪ್ರೀತಿಯ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಜಾರ್ಜಿಯಾನ ರೋಡ್ರಿಗಸ್ ದಂಪತಿಯು ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಆ ಮಗುವು ಸಾವನ್ನಪ್ಪಿರುವುದರಕ್ಕೆ ರಿಯಲ್ ಮ್ಯಾಡ್ರಿಡ್‌ನ ಅಧ್ಯಕ್ಷರು ಹಾಗೂ ಬೋರ್ಡ್ ಆಫ್ ಡೈರಕ್ಟರ್‌ಗಳು ಕಂಬನಿ ಮಿಡಿಸಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ರಿಯಲ್ ಮ್ಯಾಡ್ರಿಡ್, ಕ್ರಿಸ್ಟಿಯಾನೋ ರೊನಾಲ್ಡೋ ಕುಟುಂಬದ ಜತೆ ನಿಲ್ಲಲಿದೆ ಎಂದು ಸಾಂತ್ವನ ಹೇಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.