Alcohol Ban: ಆಲ್ಕೋಹಾಲ್ ಬ್ಯಾನ್ ವಿಚಾರದಲ್ಲಿ ಇಬ್ಬಗೆ ನೀತಿಗೆ ಫ್ಯಾನ್ಸ್‌ ಆಕ್ರೋಶ..!

By Naveen KodaseFirst Published Nov 22, 2022, 3:34 PM IST
Highlights

ಆಲ್ಕೋಹಾಲ್ ಬ್ಯಾನ್ ವಿಚಾರದಲ್ಲಿ ಫಿಫಾ ವಿಶ್ವಕಪ್ ಆಯೋಜಕರಿಂದ ದ್ವಿಮುಖ ನೀತಿ
ಆಯ್ದ ಕೆಲವು ಅಭಿಮಾನಿಗಳಿಗೆ ಸಿಗಲಿದೆ ಮದ್ಯದ ವ್ಯವಸ್ಥೆ
ಕತಾರ್‌ನ 8 ಸ್ಟೇಡಿಯಂನ ಆಯ್ದ ಅಭಿಮಾನಿಗಳಿಗೆ ಸಿಗಲಿದೆ ಲಿಕ್ಕರ್

ದೋಹಾ(ನ.22): ಕತಾರ್‌ನಲ್ಲಿ ಆರಂಭವಾಗಿರುವ ಫಿಫಾ ವಿಶ್ವಕಪಪ್ ಫುಟ್ಬಾಲ್ ಟೂರ್ನಿಯ ಸ್ಟೇಡಿಯಂ ಆವರಣದಲ್ಲಿ ಮದ್ಯಪಾನ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. 2022ರ ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೇವಲ ಎರಡು ದಿನ ಬಾಕಿ ಇದ್ದಾಗ ಈ ರೀತಿಯ ಮಹತ್ತರ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಇದು ಹಲವು ಅಭಿಮಾನಿಗಳನ್ನು ಅಚ್ಚರಿಗೆ ನೂಕುವಂತೆ ಮಾಡಿದೆ. ಆದರೆ ಇದೀಗ ಟೂರ್ನಿ ಆಯೋಜಕರು ಯೂ ಟರ್ನ್ ಹೊಡೆದಿದ್ದು, ಆಯ್ದ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಫಿಫಾ ಆಯೋಜಕರ ಇಬ್ಬಗೆ ನೀತಿ ಇದೀಗ ಬಹಿರಂಗವಾಗಿದೆ.

ಫಿಫಾ ವಿಶ್ವಕಪ್‌ಗೆ ಸ್ಪಾನ್ಸರ್ ನೀಡಿರುವವರು ಫುಟ್ಬಾಲ್ ವಿಶ್ವಕಪ್ ಜರುಗುವ 8 ಸ್ಟೇಡಿಯಂಗಳ ಆವರಣದಲ್ಲೇ ಬಿಯರ್ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದ್ದು, ಆಯ್ದ ಟಿಕೆಟ್ ಹೊಂದಿರುವರು ಬಿಯರ್ ಹೀರಬಹುದಾಗಿದೆ. ಫುಟ್ಬಾಲ್ ಪಂದ್ಯಗಳು ಆರಂಭಕ್ಕೂ ಮೂರು ಗಂಟೆ ಮುಂಚಿತವಾಗಿ ಹಾಗೂ ಫುಟ್ಬಾಲ್ ಮುಗಿದ ಒಂದು ಗಂಟೆಯ ಬಳಿಕ ಬಿಯರ್ ಖರೀದಿಸಬಹುದಾಗಿದೆ. ಈ ಮಹತ್ತರವಾದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಸ್ಟೇಡಿಯಂಗಳ ಸುತ್ತಾಮುತ್ತ ಡಜನ್‌ಗಟ್ಟಲೇ ಟೆಂಟ್‌ಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಇಲ್ಲಿ ಮದ್ಯಪ್ರಿಯರು ತಮಗೆ ಬೇಕಾದ ಎಣ್ಣೆ ಖರೀದಿಸಬಹುದಾಗಿದೆ.

ಹೊಸ ನಿಯಮದ ಪ್ರಕಾರ ಯಾರೆಲ್ಲಾ ಎಣ್ಣೆ ಖರೀದಿಸಬಹುದು..?

ಶಾಂಪೇನ್, ವೈನ್, ವಿಸ್ಕಿ ಹಾಗೂ ಇನ್ನಿತರ ಆಲ್ಕೋಹಾಲ್‌ಗಳನ್ನು ಲಕ್ಸುರಿ ಹಾಸ್ಪಿಟಾಬಿಲಿಟಿ ಇರುವ ಸ್ಥಳದಿಂದ ಪಂದ್ಯ ವೀಕ್ಷಿಸುವ ಗಣ್ಯರಿಗೆ ಈಗಲೂ ಪೂರೈಕೆ ಮಾಡಲಾಗುತ್ತಿದೆ. ಇನ್ನು ವಿಐಪಿ ಟಿಕೆಟ್ ಪಡೆದವರು ಸ್ಟೇಡಿಯಂನಲ್ಲಿ ಕೇವಲ ಬಿಯರ್‌ನಷ್ಟೇ ಖರೀದಿಸಬಹುದಾಗಿದೆ. ಇದಷ್ಟೇ ಅಲ್ಲದೇ ದೋಹಾದಲ್ಲಿರುವ ಫಿಫಾ ಫ್ಯಾನ್ ಝೋನ್‌ನ ಮುಖ್ಯದ್ವಾರದಲ್ಲಿ ಹಾಗೂ ಇಲ್ಲಿನ ಸುಮಾರು 35 ಹೋಟೆಲ್ ಮತ್ತು ರೆಸ್ಟೋರೆಂಟ್ ಬಾರ್‌ಗಳಲ್ಲಿ ಎಣ್ಣೆ ಸಿಗಲು ವ್ಯವಸ್ಥೆ ಮಾಡಲಾಗಿದೆ. 

ಕತಾರ್‌ನಲ್ಲಿ ಎಣ್ಣೆ ಬ್ಯಾನ್‌, ಗೋದಾಮಿನ ರಾಶಿ ರಾಶಿ ಬಿಯರ್‌ ಕ್ಯಾನ್‌ ಫೋಟೋ ಪ್ರಕಟಿಸಿದ ಬಡ್ವೈಸರ್‌!

ಇನ್ನು ಫಿಫಾ ವಿಶ್ವಕಪ್ ಪಂದ್ಯ ಸ್ಟೇಡಿಯಂನಲ್ಲೇ ವೀಕ್ಷಿಸುತ್ತಾ ಮದ್ಯ ಸೇವಿಸುವಂತಹವರಿಗೆ ಫುಟ್ಬಾಲ್ ಆಡಳಿತ ಮಂಡಳಿಯು ದುಬಾರಿ ಮೊತ್ತದ ಟಿಕೆಟ್ ಬೆಲೆ ನಿಗದಿ ಪಡಿಸಲಾಗಿದ್ದು, 3,000 ಅಮೆರಿಕನ್ ಡಾಲರ್(2,42,677 ರುಪಾಯಿ) ನಿಗದಿ ಪಡಿಸಿದೆ. ಈ ಟಿಕೆಟ್ ಖರೀದಿಸಿದವರು, ಫುಟ್ಬಾಲ್ ಸ್ಟೇಡಿಯಂನಲ್ಲೇ ಶಾಂಪೇನ್, ವಿಸ್ಕಿ, ವೊಡ್ಕಾ ಹಾಗೂ ಆಯ್ದ ವೈನ್‌ಗಳನ್ನು ಹೀರಬಹುದಾಗಿದೆ. ಇನ್ನು ನಾನ್ ಆಲ್ಕೋಹಾಲಿಕ್ ಬೀಯರ್‌ಗಳನ್ನು ಕತಾರ್‌ನಲ್ಲಿ ನಡೆಯಲಿರುವ ಎಲ್ಲಾ 64 ಪಂದ್ಯಗಳನ್ನು ಖರೀದಿಸಿ ಸೇವಿಸಬಹುದಾಗಿದೆ. ಆದರೆ ದುಬಾರಿ ಮೊತ್ತದ ಟಿಕೆಟ್ ದರ ವಿಧಿಸಿರುವುದರ ಬಗ್ಗೆ ಫುಟ್ಬಾಲ್ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

click me!