ಅರ್ಜೆಂಟೀನಾ ಪಡೆಗಿಂದು ಸೌದಿ ಅರೇಬಿಯಾ ಸವಾಲು
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಅರ್ಜೆಂಟೀನಾ
ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಅರ್ಜೆಂಟೀನಾ
ಲುಸೈಲ್(ನ.22): ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿ ಟೂರ್ನಿಗೆ ಕಾಲಿಡುತ್ತಿರುವ 2 ಬಾರಿ ಚಾಂಪಿಯನ್ ಅರ್ಜೆಂಟೀನಾ ಆರಂಭಿಕ ಪಂದ್ಯದಲ್ಲಿ ಮಂಗಳವಾರ ಸೌದಿ ಅರೇಬಿಯಾ ಸವಾಲು ಎದುರಿಸಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಅರ್ಜೆಂಟೀನಾದಲ್ಲಿ ಲಿಯೋನೆಲ್ ಮೆಸ್ಸಿ, ರೊಡ್ರಿಗೊ ಪೌಲ್, ಮಾರ್ಟಿನೆಜ್, ಡಿ ಮಾರಿಯ, ಪೌಲೊ ಡಿಬಾಲ ಸೇರಿದಂತೆ ತಾರಾ ಆಟಗಾರರ ದಂಡೇ ಇದೆ. ಆದರೆ ತಂಡದ ರಕ್ಷಣಾ ಪಡೆ ದುರ್ಬಲವಾಗಿ ತೋರುತ್ತಿದ್ದು, ಸೌದಿ ತಂಡ ಇದರ ಲಾಭವೆತ್ತಲು ಎದುರು ನೋಡುತ್ತಿದೆ.
ಮತ್ತೊಂದೆಡೆ ವಿಶ್ವ ನಂ.51 ಸೌದಿ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದು, ಅರ್ಹತಾ ಸುತ್ತಿನ 12 ಪಂದ್ಯಗಳಲ್ಲಿ ಒಂದೂ ಗೋಲು ಬಿಟ್ಟುಕೊಟ್ಟಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅರ್ಜೆಂಟೀನಾದ ಫಾರ್ವರ್ಡ್ ಹಾಗೂ ಸೌದಿಯ ರಕ್ಷಣಾ ಪಡೆಯ ನಡುವೆ ಪ್ರಬಲ ಪೈಪೋಟಿ ಕಂಡುಬರುವ ಸಾಧ್ಯತೆ ಇದೆ.
undefined
ಪಂದ್ಯ: ಮಧ್ಯಾಹ್ನ 3.30ಕ್ಕೆ(ಭಾರತೀಯ ಕಾಲಮಾನ)
ಇಂದಿನ ಇತರೆ ಪಂದ್ಯಗಳು:
ಡೆನ್ಮಾರ್ಕ್-ಟ್ಯುನೀಶಿಯಾ, ಸಂಜೆ 6.30ಕ್ಕೆ
ಮೆಕ್ಸಿಕೋ-ಪೋಲೆಂಡ್, ರಾತ್ರಿ 9.30ಕ್ಕೆ
ಫ್ರಾನ್ಸ್-ಆಸ್ಪ್ರೇಲಿಯಾ, ರಾತ್ರಿ 12.30ಕ್ಕೆ
ಮೊದಲ ಪಂದ್ಯದಲ್ಲೇ ಎಡವಿದ ಕತಾರ್!
ಅಲ್-ಖೋರ್: ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ ಕತಾರ್ ಸೋಲಿನ ಆರಂಭ ಪಡೆಯಿತು. ಭಾನುವಾರದ ಉದ್ಘಾಟನಾ ಪಂದ್ಯದಲ್ಲಿ 0-2 ಗೋಲುಗಳಿಂದ ಈಕ್ವೆಡಾರ್ ವಿರುದ್ಧ ಪರಾಭವಗೊಂಡಿತು. 92 ವರ್ಷಗಳ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಆತಿಥೇಯ ತಂಡ ತನ್ನ ಮೊದಲ ಪಂದ್ಯ ಸೋತಿದ್ದು ಇದೇ ಮೊದಲು.
ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ವಿವಾದ, ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್!
ಈಕ್ವೆಡಾರ್ 3ನೇ ನಿಮಿಷದಲ್ಲೇ ಗೋಲು ಬಾರಿಸಿದರೂ, ಅದು ಆಫ್‌ಸೈಡ್ ಎಂದು ರೆಫ್ರಿಗಳು ಗೋಲನ್ನು ರದ್ದುಗೊಳಿಸಿದರು. ಬಳಿಕ ಮೊದಲಾರ್ಧದಲ್ಲೇ ನಾಯಕ ಎನ್ನಾರ್ ವ್ಯಾಲೆನ್ಸಿಯಾ 2 ಗೋಲು ಬಾರಿಸಿ ಆತಿಥೇಯ ತಂಡಕ್ಕೆ ಆಘಾತ ನೀಡಿದರು. 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಅವಕಾಶವನ್ನು ಗೋಲಾಗಿಸಿದ ವ್ಯಾಲೆನ್ಸಿಯಾ, 33ನೇ ನಿಮಿಷದಲ್ಲಿ ಪ್ರಿಕಾಡಿಯೊ ನೀಡಿದ ಪಾಸ್‌ನ ನೆರವಿನಿಂದ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು.
ದ್ವಿತೀಯಾರ್ಧಕ್ಕೆ ಜನವೇ ಇಲ್ಲ!
ಪಂದ್ಯ ವೀಕ್ಷಣೆಗೆ ಅಲ್-ಬೇತ್ ಕ್ರೀಡಾಂಗಣದಲ್ಲಿ 67,372 ಪ್ರೇಕ್ಷಕರು ಸೇರಿದ್ದರು. ಬಹುತೇಕರು ಕತಾರ್ ಅಭಿಮಾನಿಗಳು. ಮೊದಲಾರ್ಧದಲ್ಲೇ ತಮ್ಮ ತಂಡ 2 ಗೋಲು ಬಿಟ್ಟುಕೊಟ್ಟಬಳಿಕ ದ್ವಿತೀಯಾರ್ಧಕ್ಕೂ ಮೊದಲೇ ಸಾವಿರಾರು ಮಂದಿ ಮೈದಾನ ತೊರೆದರು.
ಕತಾರ್‌ನಲ್ಲಿ ವಿದೇಶಿ ಅಭಿಮಾನಿಗಳ ಪರದಾಟ!
ದೋಹಾ: ಲಕ್ಷಾಂತರ ಕೋಟಿ ರು. ಖರ್ಚು ಮಾಡಿ ಫಿಫಾ ವಿಶ್ವಕಪ್ ಆಯೋಜಿಸುತ್ತಿರುವ ಕತಾರ್, ಆ ದೇಶಕ್ಕೆ ವಿಶ್ವಕಪ್ ವೀಕ್ಷಣೆಗೆ ತೆರಳಿರುವ ಹಲವು ದೇಶಗಳ ಅಭಿಮಾನಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಕತಾರ್ ಹಿಂದೆ ಬಿದ್ದಿದೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವಕಪ್ ವೀಕ್ಷಣೆಗೆ ತೆರಳಿರುವ ಅಭಿಮಾನಿಗಳ ಅನುಭವವನ್ನು ಕೇಳಿ ವರದಿ ಮಾಡಿರುವ ಬ್ರಿಟನ್‌ನ ‘ಡೈಲಿ ಮೇಲ್’, ವಾಸ್ತವ್ಯ ವ್ಯವಸ್ಥೆ ಕಳಪೆ ಗುಣಮಟ್ಟದ್ದಾಗಿದೆ ಎಂದಿದೆ. ಇರಾನ್‌ನ ಫುಟ್ಬಾಲ್ ಅಭಿಮಾನಿಯೊಬ್ಬರು ತಾವು ಹಡಗಿನ ಕಂಟೈನರ್‌ಗಳಿಂದ ಸಿದ್ಧಪಡಿಸಿರುವ ಕೊಠಡಿಗೆ ಒಂದು ರಾತ್ರಿಗೆ 185 ಪೌಂಡ್(ಅಂದಾಜು 18000 ರು.) ಪಾವತಿಸಿದ್ದಾಗಿ ಹೇಳಿದ್ದಾರೆ. ಕೊಠಡಿಯು ತೀರಾ ಚಿಕ್ಕದಾಗಿದ್ದು, 6 ಅಡಿ ಎತ್ತರವಿರುವ ತಮಗೆ ಸರಿಯಾಗಿ ಮಲಗಲು ಆಗುತ್ತಿಲ್ಲ. ಬ್ಯಾಗ್‌ಗಳನ್ನು ಇಡಲು ಜಾಗವೇ ಇಲ್ಲ ಎಂದಿದ್ದಾರೆ. ಕೊಠಡಿಯು ಶೂ ಬಾಕ್ಸ್‌ನಂತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ ವೇಲ್ಸ್‌ನ ಅಭಿಮಾನಿಯೊಬ್ಬರು ಎಸಿಯ ಶಬ್ಧ ಬಹಳ ಜೋರಾಗಿದ್ದು, ನಿದ್ದೆ ಮಾಡಲು ಆಗುತ್ತಿಲ್ಲ ಎಂದಿದ್ದಾರೆ. ಅಭಿಮಾನಿಗಳ ವಾಸ್ತವ್ಯಕ್ಕೆಂದು ಸಿದ್ಧಗೊಂಡಿರುವ ಸ್ಥಳದಲ್ಲಿ ಜಿಮ್, ಕೆಫೆ, ಓಪನ್ ಥಿಯೇಟರ್ ಇರಲಿದೆ ಎಂದು ಕತಾರ್ ಭರವಸೆ ನೀಡಿತ್ತು. ಆದರೆ ಎಲ್ಲಿ ನೋಡಿದರೂ ಕಟ್ಟದ ನಿರ್ಮಾಣದಿಂದ ಉಂಟಾದ ಕಸದ ರಾಶಿಗಳಿವೆ ಎಂದು ಸಿಟ್ಟು ಹೊರಹಾಕಿದ್ದಾರೆ.