FIFA World Cup: ಟೂರ್ನಿ ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್‌ಗೆ ಆಘಾತ, ಸ್ಟಾರ್‌ ಆಟಗಾರ ಔಟ್‌!

By Santosh NaikFirst Published Nov 20, 2022, 5:00 PM IST
Highlights

ವರ್ಷದ ಶ್ರೇಷ್ಠ ಆಟಗಾರನಿಗೆ ನೀಡಲಾಗುವ ಬ್ಯಾಲನ್‌ ಡಿ ಓರ್‌ ಪ್ರಶಸ್ತಿಯನ್ನು ಈ ವರ್ಷ ಗೆದ್ದಿರುವ ಫ್ರಾನ್ಸ್‌ ತಂಡದ ಸ್ಟಾರ್‌ ಆಟಗಾರ ಕರೀಂ ಬೆಂಜೆಮಾ ಫಿಫಾ ವಿಶ್ವಕಪ್‌ ಟೂರ್ನಿ ಆರಂಭಕ್ಕೂ ಮುನ್ನವೇ ತಂಡದಿಂದ ಹೊರಬಿದ್ದಿದ್ದಾರೆ. ತೊಡೆಯ ಗಾಯಕ್ಕೆ ತುತ್ತಾಗಿರುವ ಅವರು ಸಂಪೂರ್ಣ ವಿಶ್ವಕಪ್‌ನಿಂದ ಹೊರನಡೆದಿದ್ದಾರೆ.

ದೋಹಾ (ನ.20): ತಮ್ಮ ಜೀವನದ ಬಹುತೇಕ ಕೊನೆಯ ವಿಶ್ವಕಪ್‌ ಆಡುವ ಸಲುವಾಗಿ ಕತಾರ್‌ಗೆ ಬಂದಿದ್ದ ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡದ ಅನುಭವಿ ಸ್ಟ್ರೈಕರ್ ಕರೀಂ ಬೆಂಜೆಮಾ ಅವರ ಸಸಕನಸು ಭಗ್ನವಾಗಿದೆ. ತಂಡದ ಅಭ್ಯಾಸದ ಅವಧಿಯಲ್ಲಿ ತೊಡೆಗೆ ಗಾಯ ಮಾಡಿಕೊಂಡಿರುವ ಕರೀಂ ಬೆಂಜೆಮಾ ಸಂಪೂರ್ಣ ಫಿಫಾ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಸ್ಪೇನ್‌ನ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ನ ಆಟಗಾರನಾಗಿರುವ 34 ವರ್ಷದ ಕರೀಂ ಬೆಂಜೆಮಾ, ಶನಿವಾರ ಮಧ್ಯಪ್ರಾಚ್ಯದ ರಾಷ್ಟ್ರದಲ್ಲಿ ತಮ್ಮ ಮೊದಲ ಪೂರ್ಣ ಪ್ರಮಾಣದ ಅಭ್ಯಾಸದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಗಾಯಗೊಂಡಿದ್ದಾರೆ. ಬಳಿಕ ಅವರನ್ನು ದೋಹಾದಲ್ಲಿ ಸ್ಕ್ಯಾನಿಂಗ್‌ಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಂಗಳವಾರದ ಅಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯಕ್ಕೆ ಫಿಟ್‌ ಆಗಲಿಕ್ಕಿಲ್ಲ ಎಂದು ಕರೀಂ ಬೆಂಜೆಮಾ ಅಂದುಕೊಂಡಿದ್ದರು. ಆದರೆ, ಅವರ ಗಾಯ ಗಂಭೀರ ಪ್ರಮಾಣದಲ್ಲಿರುವ ಕಾರಣ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅದರೊಂದಿಗೆ ಅವರ ವಿಶ್ವಕಪ್‌ ಕನಸು ಕೂಡ ಮುಕ್ತಾಯವಾಗಿದೆ. ಫ್ರಾನ್ಸ್‌ ಫುಟ್‌ಬಾಲ್‌ ಸಂಸ್ಥೆ ಕೂಡ ಕರೀಂ ಬೆಂಜೆಮಾ ಟೂರ್ನಿಗೆ ಅಲಭ್ಯರಾಗಿರುವುದನ್ನು ಖಚಿತಪಡಿಸಿದ್ದು, ಕನಿಷ್ಠ ಮೂರು ವಾರಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದಿದೆ.

 


ಫ್ರಾನ್ಸ್‌ ಫುಟ್‌ಬಾಲ್‌ ಸಂಸ್ಥೆ ಸುದ್ದಿ ಖಚಿತಪಡಿಸುತ್ತಿದ್ದಂತೆ ಇನ್ಸ್‌ಟಾಗ್ರಾಮ್‌ನಲ್ಲಿ ಇದರ ಮಾಹಿತಿ ನೀಡಿರುವ ಕರೀಂ ಬೆಂಜೆಮಾ, ನಮ್ಮ ತಂಡದ ಟ್ರೋಫಿ ಉಳಿಸಿಕೊಳ್ಳುವ ಅರ್ಹ ವ್ಯಕ್ತಿಗೆ ನನ್ನ ಸ್ಥಾನವನ್ನು ಬಿಟ್ಟುಕೊಡುವುದು ಸೂಕ್ತ ಎಂದು ಕಾಣುತ್ತಿದೆ. ಆ ಮೂಲಕ ವಿಶ್ವಕಪ್‌ಅನ್ನು ತೊರೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ನನ್ನ ಇಡೀ ಜೀವನದಲ್ಲಿ ಯಾವುದನ್ನೂ ಕೂಡ ಸುಮ್ಮನೆ ಬಿಟ್ಟುಕೊಟ್ಟಿಲ್ಲ. ಆದರೆ, ಈಗ ನಾನು ತಂಡದ ಕುರಿತಾಗಿ ಯೋಚನೆ ಮಾಡಬೇಕಾದ ಸಮಯ ಬಂದಿದೆ. ತಂಡ ವಿಶ್ವಕಪ್‌ನಲ್ಲಿ ಉತ್ತಮ ಸಾಧನೆ ಮಾಡಬೇಕು ಹಾಗಾಗಿ ನನ್ನ ಸ್ಥಾನವನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇನೆ. ನಿಮ್ಮೆಲ್ಲಾ ಸಂದೇಶಗಳು ಹಾಗೂ ಬೆಂಬಲಕ್ಕೆ ಆಭಾರಿಯಾಗಿದ್ದೇನೆ' ಎಂದು ಅವರು ಹೇಳಿದ್ದಾರೆ.
ಇದು ಹಾಲಿ ಚಾಂಪಿಯನ್‌ ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆ ಎನಿಸಿದೆ. ಇದಕ್ಕೂ ಮುನ್ನ ಪ್ರಮುಖ ಆಟಗಾರ ಹಾಗೂ ಆರ್‌ಬಿ ಲೀಪ್‌ಜಿಗ್ ಸ್ಟ್ರೈಕರ್ ಕ್ರಿಸ್ಟೋಫರ್ ನ್ಕುಂಕು ಕೂಡ ತರಬೇತಿಯ ವೇಳೆ ಗಾಯಗೊಂಡು ಇಡೀ ಟೂರ್ನಿಯಿಂದ ಹೊರಬಿದ್ದಿದ್ದರು.

ಕೇರಳದಲ್ಲಿ ಫಿಫಾ ವಿಶ್ವಕಪ್ ಜ್ವರ... ಜೊತೆಯಾಗಿ ಮ್ಯಾಚ್ ನೋಡಲು ಮನೆ ಖರೀದಿಸಿದ ಕ್ರೀಡಾಪ್ರೇಮಿಗಳು

ಪಾಲ್ ಪೊಗ್ಬಾ, ಎನ್'ಗೊಲೊ ಕಾಂಟೆ, ಪ್ರೆಸ್ನೆಲ್ ಕಿಂಪೆಂಬೆ ಮತ್ತು ಗೋಲ್‌ಕೀಪರ್ ಮೈಕ್ ಮೈಗ್ನಾನ್ ಕೂಡ ತಮ್ಮ ಗಾಯಗಳ ಕಾರಣದಿಂದಾಗಿ ಆಯ್ಕೆಗೆ ಅಲಭ್ಯರಾಗಿದ್ದಾರೆ. ಫ್ರಾನ್ಸ್‌ ತಂಡ ಕೂಡ ಈ ವಿಚಾರವನ್ನು ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಬರೆದುಕೊಂಡಿದೆ. ಕರೀಂ ಬೆಂಜೆಮಾ ಅವರು ಸಂಪೂರ್ಣ ವಿಶ್ವಕಪ್‌ನಿಂದ ಹೊರಗುಳಿಯುವ ತೀರ್ಮಾನ ಕೈಗೊಳ್ಳಬೇಕಾದ ಸಮಯ ಬಂದಿದೆ ಎಂದು ಬರೆದಿದೆ. ಇಡೀ ತಂಡ ಕರೀಂ ಬೆಂಜೆಮಾ ಅವರ ಬೇಸರದಲ್ಲಿ ಭಾಗಿಯಾಗಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದು ಹೇಳಿದೆ. ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಫ್ರಾನ್ಸ್‌ ಮ್ಯಾನೇಜರ್‌ ಡಿಡಿಯರ್‌ ಡೆಶಾಂಪ್ಸ್‌, ಈ ವಿಶ್ವಕಪ್‌ಅನ್ನು ತಮ್ಮ ಪ್ರಮುಖ ಗುರಿಯಾಗಿ ಇರಿಸಿಕೊಂಡಿದ್ದ ಕರೀಂ ಬೆಂಜೆಮಾ ಅವರ ವಿಚಾರವಾಗಿ ಬಹಳ ಬೇಸರವಾಗಿದೆ ಎಂದಿದ್ದಾರೆ. ಫ್ರಾನ್ಸ್‌ ಟೀಮ್‌ಗೆ ಎದುರಾದ ಮತ್ತೊಮ್ಮೆ ಹೊಡೆತದ ನಡುವೆಯೂ, ನನ್ನ ತಂಡದ ವಿಚಾರವಾಗಿ ನನಗೆ ವಿಶ್ವಾಸವಿದೆ. ನಮ್ಮ ಮುಂದಿರುವ ದೊಡ್ಡ ಸವಾಲನ್ನು ಎದುರಿಸಲು ಎಲ್ಲಾ ಶ್ರಮವನ್ನೂ ಪಡಲಿದ್ದೇವೆ ಎಂದಿದ್ದಾರೆ.

FIFA WORLD CUP 2022 PRIZE MONEY: ಫುಟ್‌ಬಾಲ್‌-ಕ್ರಿಕೆಟ್‌ ವಿಶ್ವಕಪ್‌ ಬಹುಮಾನ ಮೊತ್ತ ಅಜಗಜಾಂತರ!

ಕರೀಂ ಬೆಂಜೆಮಾ ನಿರ್ಗಮನದೊಂದಿಗೆ ಈ ಬಾರಿಯ ಬ್ಯಾಲನ್‌ ಡಿ ಓರ್‌ನಲ್ಲಿ ಟಾಪ್‌-2 ಸ್ಥಾನ ಪಡೆದ ಇಬ್ಬರೂ ಆಟಗಾರರು ವಿಶ್ವಕಪ್‌ನಲ್ಲಿ ಇಲ್ಲದಂತಾಗಿದೆ. ಬ್ಯಾಲನ್‌ ಡಿ ಓರ್‌ನಲ್ಲಿ 2ನೇ ಸ್ಥಾನ ಪಡೆದಿದ್ದ ಸಾಡಿಯೋ ಮಾನೆ ಕೂಡ ಸೆನಗಲ್‌ ತಂಡದಿಂದ ಗಾಯದ ಕಾರಣಕ್ಕಾಗಿ ಹೊರಬಿದ್ದಿದ್ದಾರೆ.

 

click me!