ಫುಟ್ಬಾಲ್ ಮಹಾಕಾಳಗಕ್ಕೆ ಒಂದೇ ದಿನ ಮಾತ್ರ ಬಾಕಿ. ಎಲ್ಲಾ ತಂಡಗಳು ಈಗಾಗಲೇ ಖತಾರ್ ತಲುಪಿದೆ. ಆದರೆ ಉರುಗ್ವೆ ಹಾಗೂ ಅರ್ಜೆಂಟೀನಾ ತಂಡಗಳು ತಮ್ಮ ದೇಶದಿಂದ 900 ಕೆಜಿ ಮಾಂಸವನ್ನು ಹೊತ್ತು ಖತಾರ್‌ಗೆ ಬಂದಿಳಿದಿದೆ.
ದೋಹಾ(ನ.19): ಫಿಫಾ ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಇನ್ನು ಕೇವಲ ಒಂದೇ ದಿನ ಬಾಕಿ ಇದೆ. ಭಾನುವಾರ ಬಹುನಿರೀಕ್ಷಿತ ಕಾಲ್ಚೆಂಡಿನ ಮಹಾಸಮರಕ್ಕೆ ಚಾಲನೆ ದೊರೆಯಲಿದ್ದು, ಈಗಾಗಲೇ ಎಲ್ಲಾ 32 ತಂಡಗಳು ಕತಾರ್ ತಲುಪಿವೆ. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಪಂಚತಾರಾ ಹೋಟೆಲ್‌ನ ಬದಲು ದೋಹಾದಲ್ಲಿರುವ ಕತಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಹೂಡಿದೆ. ಇದಕ್ಕೆ ಬಹಳ ಆಸಕ್ತಿದಾಯಕ ಕಾರಣವಿದೆ.
ವಿವಿಯ ಕ್ಯಾಂಪಸ್‌ನಲ್ಲಿ ಆಟಗಾರರಿಗೆಂದೇ ದೊಡ್ಡ ಬಾರ್ಬೆಕ್ಯೂ ಒಂದನ್ನು ಅಳವಡಿಸಲಾಗಿದೆ. ಆಟಗಾರರು ಅರ್ಜೆಂಟೀನಾದ ಖ್ಯಾತ ಅಸಾಡೊಸ್ ಎನ್ನುವ ಖಾದ್ಯವನ್ನು ಸವಿಯಲು ಈ ವ್ಯವಸ್ಥೆಯನ್ನು ಬಳಸಲಿದ್ದಾರೆ. ಬಾರ್ಬೆಕ್ಯೂ ಮೇಲೆ ಮಾಂಸವನ್ನಿರಿಸಿ ಅದನ್ನು ಸುಟ್ಟು ಅದರ ಮೇಲೆ ಉಪ್ಪು ಸವರಿ ತರಕಾರಿ ಹಾಗೂ ವೈನ್ ಜೊತೆ ಸೇವಿಸಲಾಗುತ್ತದೆ. ಈ ವ್ಯವಸ್ಥೆ ಇರಲೇಬೇಕು ಎನ್ನುವ ಷರತ್ತನ್ನು ಅರ್ಜೆಂಟೀನಾ ತಂಡ ಹಾಕಿತ್ತು. ಇದೇ ಕಾರಣಕ್ಕೆ ಹೋಟೆಲ್ ಬದಲು ಹಾಸ್ಟಲ್‌ನಲ್ಲಿ ಉಳಿಸಲಾಗಿದೆ ಎಂದು ತಿಳಿದುಬಂದಿದೆ.
undefined
900 ಕೆ.ಜಿ ಮಾಂಸ ಹೊತ್ತು ತಂಡ ಅರ್ಜೆಂಟೀನಾ, ಉರುಗ್ವೆ!
ಅರ್ಜೆಂಟೀನಾ ಹಾಗೂ ಉರುಗ್ವೆ ತಂಡಗಳು ತಲಾ 900 ಕೆ.ಜಿ.ಗೂ ಹೆಚ್ಚು ಮಾಂಸದೊಂದಿಗೆ ಕತಾರ್‌ಗೆ ಆಗಮಿಸಿವೆ. ಆಟಗಾರರ ಆಹಾರ ಪದ್ಧತಿಗೆ ಆ ದೇಶಗಳ ಫುಟ್ಬಾಲ್ ಸಂಸ್ಥೆಗಳು ವಿಶೇಷ ಕಾಳಜಿ ವಹಿಸಿವೆ.
ಸ್ಟೇಡಿಯಂಗಳಲ್ಲಿ ಬಿಯರ್ ಮಾರಾಟಕ್ಕೆ ಕತಾರ್ ತಡೆ!
ವಿಶ್ವಕಪ್‌ಗೆ ಕ್ಷಣಗಣನೆ ಆರಂಭಗೊಂಡಿರುವಾಗ ಕತಾರ್ ತನ್ನ ಮದ್ಯ ನೀತಿಯನ್ನು ಮತ್ತೆ ಬದಲಿಸಿದೆ. ಕ್ರೀಡಾಂಗಣಗಳಲ್ಲಿ ಬಿಯರ್ ಮಾರಾಟ ಹಾಗೂ ಸೇವನೆಗೆ ನಿರ್ಬಂಧ ಹೇರಿದೆ. 2010ರಲ್ಲಿ ಆತಿಥ್ಯ ಹಕ್ಕು ಪಡೆಯುವ ಸಮಯದಲ್ಲಿ ಬಿಯರ್ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡುವುದಾಗಿ ಕತಾರ್ ಒಪ್ಪಿಕೊಂಡಿತ್ತು. ಈ ವರ್ಷ ಸೆಪ್ಟೆಂಬರ್‌ನಲ್ಲೂ ತಾನು ಫಿಫಾ ಜೊತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಬದ್ಧ ಎಂದು ಕತಾರ್ ಪುನರುಚ್ಚರಿಸಿತ್ತು. ಆದರೆ ಇದೀಗ ತನ್ನ ನಿರ್ಧಾರ ಬದಲಿಸುವುದರಿಂದ ಫಿಫಾದ ಪ್ರಮುಖ ಪ್ರಾಯೋಜಕರಲ್ಲಿ ಒಂದಾದ ಬೆಲ್ಜಿಯಂ ಮೂಲದ ಎಬಿ-ಇನ್‌ಬೆವ್(ಬಡ್‌ವೈಸರ್‌ನ ಮಾತೃ ಸಂಸ್ಥೆ)ಗೆ ಭಾರೀ ನಷ್ಟಉಂಟಾಗಲಿದೆ. 1985ರಿಂದ ಪ್ರಾಯೋಜಕತ್ವ ನೀಡುತ್ತಿರುವ ಎಬಿ-ಇನ್‌ಬೆವ್ 4 ವರ್ಷಗಳಿಗೊಮ್ಮೆ ಫಿಫಾಗೆ 75 ಮಿಲಿಯನ್ ಡಾಲರ್(ಈಗಿನ ಡಾಲರ್ ಮೌಲ್ಯದಲ್ಲಿ 61 ಕೋಟಿ ರು.) ಪಾವತಿಸಲಿದೆ. ಇದೀಗ ಕತಾರ್‌ನ ನಿರ್ಧಾರದಿಂದ ಫಿಫಾ ದೊಡ್ಡ ಮೊತ್ತವನ್ನು ಇನ್‌ಬೆವ್ ಸಂಸ್ಥೆಗೆ ಹಿಂದಿರುಗಿಸಬೇಕಾಗಬಹುದು.
FIFA World Cup: ಒಂದು ಪಿಂಟ್ ಬಡ್ವೈಸರ್‌ಗೆ ಕೊಡೋ ಹಣದಲ್ಲಿ ನೀವಿಲ್ಲಿ ಗೋವಾಕ್ಕೇ ಹೋಗಿ ಬರಬಹುದು!
ಪೋಲೆಂಡ್ ತಂಡಕ್ಕೆ ಎಫ್16 ಫೈಟರ್ ಜೆಟ್‌ಗಳ ಕಾವಲು!
ಪೋಲೆಂಡ್ ತಂಡ ತನ್ನ ದೇಶದಿಂದ ಕತಾರ್‌ಗೆ ಹೊರಟಾಗ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಎಫ್16 ಫೈಟರ್ ಜೆಟ್‌ಗಳು ಕಾಲವಿದ್ದವು. ವಿಮಾನ ಪೋಲೆಂಡ್‌ನ ವಾಯು ಸೀಮೆ ದಾಟುವ ವರೆಗೂ ಭದ್ರತೆ ನೀಡಲಾಯಿತು. ಇತ್ತೀಚೆಗಷ್ಟೇ ಉಕ್ರೇನ್ ರಷ್ಯಾ ಮೇಲೆ ಹಾರಿಸಿದ್ದು ಎನ್ನಲಾದ ಕ್ಷಿಪಣಿಯೊಂದು ಉಕ್ರೇನ್‌ನ ಗಡಿಯಲ್ಲಿ ಪೋಲೆಂಡ್‌ನ ಹಳ್ಳಿಯ ಮೇಲೆ ಬಿದ್ದು ಇಬ್ಬರು ಮೃತಪಟ್ಟಿದ್ದರು. ಈ ಕಾರಣಕ್ಕೆ ತನ್ನ ಆಟಗಾರರನ್ನು ವಿಶೇಷ ಭದ್ರತೆಯೊಂದಿಗೆ ಕಳುಹಿಸಿಕೊಡಲು ಪೋಲೆಂಡ್ ಸರ್ಕಾರ ನಿರ್ಧರಿಸಿತ್ತು.
ವಿಶ್ವಕಪ್ ಟ್ರೋಫಿ ಬಣ್ಣದ ಬೂಟ್ಸ್ ಧರಿಸಲಿರುವ ಮೆಸ್ಸಿ!
ವಿಶ್ವ ಶ್ರೇಷ್ಠ ಫುಟ್ಬಾಲಿಗ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಟೂರ್ನಿಯಲ್ಲಿ ವಿಶ್ವಕಪ್ ಟೋಫಿ ಬಣ್ಣದ ಬೂಟ್ಸ್ ಧರಿಸಲಿದ್ದಾರೆ. ಬಂಗಾರದ ಬಣ್ಣದ ಬೂಟ್‌ಗಳ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಎಲ್ಲರ ಗಮನ ಸೆಳೆದ ಅರ್ಜೆಂಟೀನಾದ ಫ್ಲೈಟ್!
ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಅರ್ಜೆಂಟೀನಾ, ದೋಹಾ ಎರ್ಪೋರ್ಚ್‌ಗೆ ಬಂದಿಳಿದಾಗ ಎಲ್ಲರ ಗಮನ ತಂಡ ಆಗಮಿಸಿದ ವಿಮಾನದ ಮೇಲಿತ್ತು. ವಿಮಾನದ ಮೇಲೆ ಮೆಸ್ಸಿ ಸೇರಿ ತನ್ನ ತಾರಾ ಆಟಗಾರರ ಚಿತ್ರಗಳನ್ನು ಪೇಂಟ್ ಮಾಡಲಾಗಿದೆ.