ಫುಟ್ಬಾಲ್‌ ವಿಶ್ವಕಪ್‌ ಸಿದ್ಧತೆಗೆ ಕತಾರ್‌ ವೆಚ್ಚ 17 ಲಕ್ಷ ಕೋಟಿ!

By Kannadaprabha News  |  First Published Nov 19, 2022, 1:16 PM IST

30 ಲಕ್ಷ ಜನಸಂಖ್ಯೆ ಹೊಂದಿರುವ ಕತಾರ್‌ ಫಿಫಾ ಫುಟ್ಬಾಲ್‌ ಟೂರ್ನಿಗಾಗಿ ಬರೋಬ್ಬರಿ 17 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ಹೊಸದಾಗಿ 7 ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಹೋಟೆಲ್‌, ರೆಸಾರ್ಟಲ್ಲಿ ಆಟಗಾರರ ವಾಸ್ತವ್ಯ, ಪ್ರೇಕ್ಷಕರು ತಂಗಲು ಹೊಸ ಕಟ್ಟಡ, ಹಡಗು, ಲೋಕಲ್‌ ಬಸ್‌ನಂತೆ ವಿಮಾನ ಸಂಚಾರ ಸೇರಿ ಖತಾರ್ ಖರ್ಚು ವೆಚ್ಚ ಅತೀ ದುಬಾರಿಯಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.


ಸ್ಪಂದನ್‌ ಕಣಿಯಾರ್‌

ಭಾರತದ 10ನೇ ಅತಿ ಸಣ್ಣ ರಾಜ್ಯವಾದ ತ್ರಿಪುರದಷ್ಟಿರುವ, ಕೇವಲ 30 ಲಕ್ಷ ಜನಸಂಖ್ಯೆ ಹೊಂದಿರುವ ಕತಾರ್‌ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಇದನ್ನು ಅಸಾಮಾನ್ಯ ಸಾಧನೆಯೆಂದೇ ಕರೆಯಬೇಕು. ಫುಟ್ಬಾಲ್‌ ವಿಶ್ವಕಪ್‌ ಟೂರ್ನಿ ಅಂದರೆ ಅದೊಂದು ಜಾಗತಿಕ ಜಾತ್ರೆ. ಹತ್ತಾರು ದೇಶಗಳ ಲಕ್ಷಾಂತರ ಅಭಿಮಾನಿಗಳು ಪಾಲ್ಗೊಳ್ಳುವ ಹಬ್ಬ. 2010ರಲ್ಲಿ ಆತಿಥ್ಯ ಹಕ್ಕು ಸಿಕ್ಕ ಬಳಿಕ, 29 ದಿನ ಕಾಲ್ಚೆಂಡಿನ ಮಹಾಸಮರವನ್ನು ಆಯೋಜಿಸಲು ಕತಾರ್‌ 12 ವರ್ಷಗಳಿಂದ ಸಿದ್ಧತೆ ನಡೆಸಿದೆ. ಬರೋಬ್ಬರಿ 220 ಬಿಲಿಯನ್‌ ಡಾಲರ್‌ (ಅಂದಾಜು 17 ಲಕ್ಷ ಕೋಟಿ ರು.) ಖರ್ಚು ಮಾಡಿದೆ. ಇದು ಭಾರತದ ವಾರ್ಷಿಕ ಬಜೆಟ್‌ನ ಅರ್ಧದಷ್ಟು. ಇಷ್ಟುಸಣ್ಣ ರಾಷ್ಟ್ರ ಇಷ್ಟೊಂದು ದೊಡ್ಡ ಟೂರ್ನಿಗಾಗಿ ಮಾಡಿರುವ ಸಿದ್ಧತೆಗಳು ಎಂಥದ್ದು?, ಇರುವ ಸಂಪನ್ಮೂಲಗಳನ್ನು ಎಷ್ಟುಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ, ಕತಾರ್‌ ಹೊರುತ್ತಿರುವ ಭಾರಕ್ಕೆ ಹೆಗಲು ಜೋಡಿಸಿರುವ ರಾಷ್ಟ್ರಗಳು ಯಾವುವು? ಇತ್ಯಾದಿ ವಿವರಗಳನ್ನು ‘ಕನ್ನಡಪ್ರಭ’ ಇಂದು ನಿಮ್ಮ ಮುಂದಿಡುತ್ತಿದೆ.

Tap to resize

Latest Videos

undefined

ಹೊಸದಾಗಿ 7 ಕ್ರೀಡಾಂಗಣ ನಿರ್ಮಾಣ!
ಕತಾರ್‌ ಹಾಗೂ ಇಕ್ವೆಡಾರ್‌ ನಡುವಿನ ಉದ್ಘಾಟನಾ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಕತಾರ್‌ನ ದಶಕಕ್ಕೂ ಹೆಚ್ಚಿನ ಪರಿಶ್ರಮ ಜಗತ್ತಿನ ಮುಂದೆ ಅನಾವರಣಗೊಳ್ಳುವ ಸಮಯ ಬಂದಿದೆ. 8 ಕ್ರೀಡಾಂಗಣಗಳು ವಿಶ್ವಕಪ್‌ಗೆ ಆತಿಥ್ಯ ನೀಡಲಿದ್ದು, ಖಲೀಫಾ ಅಂ.ರಾ. ಕ್ರೀಡಾಂಗಣ ಹೊರತುಪಡಿಸಿ, ಇನ್ನುಳಿದ ಏಳು ಕ್ರೀಡಾಂಗಣಗಳನ್ನು ಕತಾರ್‌ ಹೊಸದಾಗಿ ನಿರ್ಮಾಣ ಮಾಡಿದೆ. ಪ್ರತಿಯೊಂದು ಕ್ರೀಡಾಂಗಣವು ಅತ್ಯಾಧುನಿಕ ವಿನ್ಯಾಸ ಹೊಂದಿದ್ದು, ವಿಶ್ವದ ಯಾವುದೇ ಪ್ರತಿಷ್ಠಿತ ಫುಟ್ಬಾಲ್‌ ಕ್ರೀಡಾಂಗಣಗಳಿಗಿಂತ ಕಡಿಮೆ ಇಲ್ಲ ಎನ್ನುವಂತಿವೆ.

ಫಿಫಾ ವಿಶ್ವಕಪ್‌ಗೆ ಕೌಂಟ್‌ಡೌನ್‌, 900 ಕೆಜಿ ಮಾಂಸ ತಂದ ಅರ್ಜೆಂಟೀನಾ, ಉರುಗ್ವೆ!

ಕೆಲ ಕ್ರೀಡಾಂಗಣಗಳು ಮರಳುಗಾಡಿನ ಪಕ್ಕದಲ್ಲಿವೆ. ಇನ್ನೂ ಕೆಲವೆಡೆ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹೀಗಾಗಿ ಧೂಳಿನ ಸಮಸ್ಯೆ ಎದುರಾಗಬಹುದು ಎನ್ನಲಾಗಿದೆ.

ಹೋಟೆಲ್‌, ರೆಸಾರ್ಟಲ್ಲಿ ಆಟಗಾರರ ವಾಸ್ತವ್ಯ
ಆತಿಥೇಯ ಕತಾರ್‌ ಸೇರಿ 32 ತಂಡಗಳಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ, ಬೀಚ್‌ ರೆಸಾರ್ಚ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇಂಗ್ಲೆಂಡ್‌, ಫ್ರಾನ್ಸ್‌ ಸೇರಿ ಇನ್ನೂ ಕೆಲ ತಂಡಗಳ ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದು, ಆಟಗಾರರು ರೆಸಾರ್ಚ್‌ಗಳನ್ನು ತಮ್ಮ ಕುಟುಂಬಸ್ಥರಿಗಾಗಿ ಬುಕ್‌ ಮಾಡಿಕೊಂಡಿದ್ದಾರೆ.

ಪ್ರೇಕ್ಷಕರು ತಂಗಲು ಹೊಸ ಕಟ್ಟಡ, ಹಡಗು!
ಕತಾರ್‌ನ ಒಟ್ಟು ಜನಸಂಖ್ಯೆಯ ಅರ್ಧದಷ್ಟುಜನ ಅಂದರೆ 13ರಿಂದ 15 ಲಕ್ಷ ಮಂದಿ ಈ ವಿಶ್ವಕಪ್‌ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ. ಒಂದೇ ಸಮಯದಲ್ಲಿ ಇಷ್ಟೊಂದು ಪ್ರವಾಸಿಗರನ್ನು ನಿಭಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಬಹುದು. ಇದಕ್ಕಾಗಿ ಕತಾರ್‌ ಹಲವು ದೈತ್ಯ ಕಟ್ಟಡಗಳನ್ನು ಕಟ್ಟಿದೆ. ಹೋಟೆಲ್‌ಗಳು, ಅಪಾರ್ಚ್‌ಮೆಂಟ್‌ಗಳು ತಲೆ ಎತ್ತಿವೆ. ಹಡಗುಗಳ ಕಂಟೈನರ್‌ಗಳನ್ನು ತಾತ್ಕಾಲಿಕ ಕೊಠಡಿಗಳಾಗಿ ಪರಿವರ್ತಿಸಲಾಗಿದೆ. ದೋಹಾದ ಸಮುದ್ರ ತೀರದಲ್ಲಿ ಮೂರು ಕ್ರೂಸ್‌ ಹಡಗುಗಳನ್ನು ನಿಲ್ಲಿಸಲಾಗಿದೆ. ಈ ಮೂರು ಕ್ರೂಸ್‌ಗಳು ಏನಿಲ್ಲವೆಂದರೂ 10000 ಹಾಸಿಗೆ ಸಾಮರ್ಥ್ಯವೊನ್ನು ಹೊಂದಿವೆ. ಇಷ್ಟೆಲ್ಲಾ ವ್ಯವಸ್ಥೆ ಇದೆಯಾದರೂ, ಅಭಿಮಾನಿಗಳ ಜೇಬಿಗೆ ಕತ್ತರಿ ಬೀಳಲಿದೆ. ಏಕೆಂದರೆ ಕಂಟೈನರ್‌ ಕೊಠಡಿಯ ಬಾಡಿಗೆಯೇ ಒಂದು ದಿನಕ್ಕೆ 80ರಿಂದ 200 ಅಮೆರಿಕನ್‌ ಡಾಲರ್‌(ಅಂದಾಜು 6500-16000 ರು.). ಇನ್ನು ತಕ್ಕಮಟ್ಟಿಗಿನ ಸೌಕರ್ಯವಿರುವ ಹೋಟೆಲ್‌ ಕೊಠಡಿಗಳಲ್ಲಿ ಉಳಿಯಲು ಕನಿಷ್ಠ 380ರಿಂದ 400 ಅಮೆರಿಕನ್‌ ಡಾಲರ್‌ (ಅಂದಾಜು 30000 ರು.) ಖರ್ಚು ಮಾಡಬೇಕಿದೆ.

FIFA World Cup 2022 ಕಾಲ್ಚೆಂಡಿನ ಮಹಾಸಮರಕ್ಕೆ 8 ಕ್ರೀಡಾಂಗಣ ರೆಡಿ!

ಲೋಕಲ್‌ ಬಸ್‌ನಂತೆ ವಿಮಾನ ಸಂಚಾರ!
ಕತಾರ್‌ ತನ್ನ ಸುತ್ತಮುತ್ತಿಲಿನ ರಾಷ್ಟ್ರಗಳಾದ ಯುಎಇ, ಒಮಾನ್‌, ಸೌದಿ ಅರೇಬಿಯಾ ಜೊತೆ ಹೆಚ್ಚು ವಿಮಾನ ಸಂಚಾರಕ್ಕೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ನಿತ್ಯ ದೋಹಾದಿಂದ ದುಬೈ, ಅಬು ಧಾಬಿ, ಮಸ್ಕಟ್‌, ಜೆಡ್ಡಾ ಸೇರಿ ಇನ್ನೂ ಕೆಲ ನಗರಗಳಿಗೆ ಹೆಚ್ಚುವರಿ 500 ವಿಮಾನಗಳು ಸಂಚರಿಸಲಿವೆ. ಈ ನಗರಗಳು ದೋಹಾದಿಂದ ಕೇವಲ ಒಂದು, ಒಂದೂವರೆ ಗಂಟೆ ಪ್ರಯಾಣದಷ್ಟುದೂರದಲ್ಲಿವೆ. ಅಭಿಮಾನಿಗಳು ಉತ್ತಮ ಸೌಕರ್ಯಗಳನ್ನು ಹೊಂದಿರುವ ದುಬೈ, ಅಬು ಧಾಬಿಯಲ್ಲಿ ಉಳಿದುಕೊಂಡು ಪಂದ್ಯ ವೀಕ್ಷಣೆಗೆ ಕತಾರ್‌ಗೆ ಬಂದು ಹೋಗಬಹುದು.

ವಿಶ್ವಕಪ್‌ಗಾಗಿಯೇ ಮೆಟ್ರೋ ರೈಲು!
2010ರಲ್ಲಿ ಆತಿಥ್ಯ ಹಕ್ಕು ದೊರೆತ ಬಳಿಕ ಕತಾರ್‌ ಮೆಟ್ರೋ ರೈಲು ಕಾಮಗಾರಿ ಆರಂಭಿಸಿತು. ಬರೋಬ್ಬರಿ 36 ಬಿಲಿಯನ್‌ ಡಾಲರ್‌(ಅಂದಾಜು 3 ಲಕ್ಷ ಕೋಟಿ ರು.) ಖರ್ಚು ಮಾಡಿ 2019ರಲ್ಲಿ ರೈಲು ಸಂಚಾರ ಆರಂಭಿಸಿತು. ಇನ್ನು ವಿಶ್ವಕಪ್‌ಗೆಂದೇ ಪಂಚ ಪಥ ಹೈವೇಗಳನ್ನು ಸಿದ್ಧಗೊಳಿಸಲಾಗಿದೆ. ಕತಾರ್‌ ಸಣ್ಣ ದೇಶವಾಗಿರುವ ಕಾರಣ, ಎಲ್ಲಾ 8 ಕ್ರೀಡಾಂಗಣಗಳು ದೋಹಾ ನಗರದ ಮಧ್ಯ ಭಾಗದಿಂದ 55 ಕಿಲೋ ಮೀಟರ್‌ನೊಳಗಿದೆ. ಪಂದ್ಯದ ಟಿಕೆಟ್‌ ಇದ್ದರೆ ಮೆಟ್ರೋ ಪ್ರಯಾಣ ಉಚಿತ. ಒಂದೇ ದಿನ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ವೀಕ್ಷಿಸಲು ಸಾಧ್ಯ. ಇದಲ್ಲದೇ 700 ಎಲೆಕ್ಟ್ರಿಕ್‌ ಸೇರಿ 4000 ಬಸ್‌ಗಳು ಸಹ ಪ್ರಯಾಣಿಕರನ್ನು ನಗರದ ವಿವಿಧ ಭಾಗಗಳಿಂದ ಕ್ರೀಡಾಂಗಣಗಳಿಗೆ ಕೊಂಡೊಯ್ಯಲಿವೆ. ನಿತ್ಯ 50000ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ಗಳನ್ನು ಬಳಸುವ ನಿರೀಕ್ಷೆ ಇದೆ ಎಂದು ಆಯೋಜಕರು ಹೇಳಿದ್ದಾರೆ.

ಪಿಚ್‌ನೊಳಗಿವೆ 350 ಸೆನ್ಸರ್‌ಗಳು!
ಪಂದ್ಯ ನಡೆಯುವ ಸಂದರ್ಭದಲ್ಲಿ ಹೊರಗಿನ ತಾಪಮಾನ, ತೇವಾಂಶ ಸೇರಿ ಇನ್ನೂ ಕೆಲ ಅಂಶಗಳನ್ನು ಪರಿಗಣಿಸಿ ಆಟಗಾರರ ಅನುಕೂಲಕ್ಕೆ ತಕ್ಕಂತೆ ಸ್ವಯಂಚಾಲಿತವಾಗಿ ತಾಪಮಾನವನ್ನು ಕಾಯ್ದುಕೊಳ್ಳಲು ಪಿಚ್‌ನೊಳಗೆ 350 ವಿವಿಧ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಇನ್ನು ಅಭಿಮಾನಿಗಳ ಅನುಕೂಲಕ್ಕೆಂದು ಕ್ರೀಡಾಂಗಣದ ಸ್ಟ್ಯಾಂಡ್‌ಗಳಲ್ಲಿ ದೊಡ್ಡ ದೊಡ್ಡ ಎಸಿ ವೆಂಟ್‌ಗಳ ಜೊತೆ ಪ್ರತಿ ಕುರ್ಚಿಯ ಕೆಳಗಡೆಯೂ ಎಸಿ ವೆಂಟ್‌ಗಳನ್ನು ಅಳವಡಿಸಲಾಗಿದೆ. ಕ್ರೀಡಾಂಗಣಗಳ ಎಸಿ ಬಳಕೆಗೆಂದೇ ದೋಹಾದಿಂದ 48 ಕಿ.ಮೀ. ದೂರದಲ್ಲಿರುವ ಸೌರ ಶಕ್ತಿ ಉತ್ಪಾದನ ಕೇಂದ್ರಗಳು 10 ಪಟ್ಟು ಹೆಚ್ಚು ವಿದ್ಯುತ್‌ ಉತ್ಪಾದಿಸಲಿವೆ.

ಪ್ರತಿ ಸ್ಟೇಡಿಯಂನಲ್ಲಿ 2000 ಕ್ಯಾಮೆರಾ
ಕ್ರೀಡಾಂಗಣಗಳಲ್ಲಿ ನಾಸಾ ಮಾದರಿಯ ಕಂಟ್ರೋಲ್‌ ರೂಂ ಅನ್ನು ಕತಾರ್‌ ಸ್ಥಾಪಿಸಿದೆ. ಪ್ರತಿ ಕ್ರೀಡಾಂಗಣದಲ್ಲೂ ಕನಿಷ್ಠ 2000 ಸೆಕ್ಯೂರಿಟಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕ್ರೀಡಾಂಗಣದ ಮೂಲೆ ಮೂಲೆಯನ್ನೂ ಕಂಟ್ರೋಲ್‌ ರೂಂನಲ್ಲಿ ಕೂತು ವೀಕ್ಷಿಸಬಹುದಾಗಿದೆ. ಝೂಮ್‌ ಮಾಡಿ ಪ್ರತಿ ಆಸನವನ್ನೂ ನೋಡಬಹುದು. ಅಲ್ಲದೇ ಜನಸಂದಣಿ ತಡೆಯಲು ಸೆನ್ಸಾರ್‌ಗಳಿದ್ದು, ಕಂಟ್ರೋಲ್‌ ರೂಂಗೆ ಎಚ್ಚರಿಕೆ ನೀಡಲಿದೆ.

ಭದ್ರತೆಗೆ ಹಲವು ದೇಶಗಳ ನೆರವು
ವಿಶ್ವಕಪ್‌ ವೇಳೆ ಭದ್ರತಾ ಲೋಪವಾಗಬಾರದು ಎನ್ನುವ ಕಾರಣಕ್ಕೆ ಕತಾರ್‌ ಹಲವು ದೇಶಗಳಿಂದ ನೆರವು ಪಡೆದಿದೆ. ಬ್ರಿಟನ್‌ನ ರಾಯಲ್‌ ಏರ್‌ಫೋರ್ಸ್‌ ಕ್ರೀಡಾಂಗಣದ ಸುತ್ತ ತನ್ನ ವಿಮಾನಗಳ ಹಾರಾಟ ನಡೆಸಲಿದೆ. ಅಮೆರಿಕ ಗುಪ್ತಚರ ಹಾಗೂ ಭದ್ರತಾ ನೆರವು ನೀಡಿದೆ. ಟರ್ಕಿ ತನ್ನ ಪೊಲೀಸ್‌ ಸಿಬ್ಬಂದಿಯನ್ನು ಕಳುಹಿಸಿದ್ದು, ಪಾಕಿಸ್ತಾನದ ಸಾವಿರಾರು ಸೈನಿಕರು ಕತಾರ್‌ಗೆ ತೆರಳಿದ್ದಾರೆ. ಒಟ್ಟು ಸರ್ಕಾರಿ ಹಾಗೂ ಖಾಸಗಿ ಸೇರಿ ಒಟ್ಟು 50000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

click me!