FIFA World Cup 2022: ನಾಲ್ಕು ಬಾರಿಯ ವಿಶ್ವಚಾಂಪಿಯನ್‌ ಜರ್ಮನಿಗೆ ಶಾಕ್‌ ನೀಡಿದ ಜಪಾನ್‌!

By Santosh Naik  |  First Published Nov 23, 2022, 8:47 PM IST

ಫಿಫಾ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಏಷ್ಯಾದ ಬಲಾಢ್ಯ ತಂಡ ಜಪಾನ್‌ 2-1 ಗೋಲುಗಳಿಂದ ನಾಲ್ಕು ಬಾರಿಯ ಫಿಫಾ ವಿಶ್ವಕಪ್‌ ಚಾಂಪಿಯನ್‌ ಜರ್ಮನಿ ತಂಡವನ್ನು ಬಗ್ಗುಬಡಿದಿದೆ.


ದೋಹಾ (ನ.23): ಫುಟ್‌ಬಾಲ್‌ ಜಗತ್ತಿನಲ್ಲಿ ಕಳೆದೆರಡು ದಿನ ಆಘಾತಕಾರಿ ವಿಚಾರದಿಂದಲೆ ಸುದ್ದಿಯಾಗಿದೆ. ಅದರಲ್ಲೂ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯ ಅಚ್ಚರಿಗಳ ಮೇಲೆ ಅಚ್ಚರಿ ನೀಡುತ್ತಿದೆ. ಸೌದಿ ಅರೇಬಿಯಾ ದೈತ್ಯ ಅರ್ಜೆಂಟೀನಾಗೆ ಶರಣಾದ ಒಂದು ದಿನದಲ್ಲಿಯೇ ಮತ್ತೊಂದು ಶಾಕಿಂಗ್‌ ರಿಸಲ್ಟ್‌ ದಾಖಲಾಗಿದೆ. ಬುಧವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಜಪಾನ್‌ ತಂಡ 2-1 ಗೋಲುಗಳಿಂದ ನಾಲ್ಕು ಬಾರಿಯ ಚಾಂಪಿಯನ್‌ ಹಾಗೂ ವಿಶ್ವಫುಟ್‌ಬಾಲ್‌ನ ಮಹಾ ದೈತ್ಯ ತಂಡಗಳಲ್ಲಿ ಒಂದಾದ ಜರ್ಮನಿಗೆ ಆಘಾತ ನೀಡಿದೆ. 2ನೇ ಅವಧಿಯ ಕೊನೆ ಹಂತದಲ್ಲಿ ವಿಶ್ವಕಪ್‌ನ ಸೆಮಿಫೈನಲ್‌ ಹಂತಕ್ಕೇರುವ ಅಂಡರ್‌ಡಾಗ್‌ ಎನಿಸಿಕೊಂಡಿದ್ದ ಜಪಾನ್‌ ತಂಡ ಎರಡು ಗೋಲುಗಳನ್ನು ಸಿಡಿಸುವ ಮೂಲಕ 2014ರ ಫಿಫಾ ವಿಶ್ವಕಪ್‌ನ ಚಾಂಪಿಯನ್‌ ತಂಡವನ್ನು ಬಗ್ಗುಬಡಿದಿದೆ. 33ನೇ ನಿಮಿಷದಲ್ಲಿ ಇಲ್ಕೆ ಗುಂಡೋಗನ್ ಪೆನಾಲ್ಟಿ ಮೂಲಕ ಗೋಲು ಗಳಿಸುವ ಮೂಲಕ ಜರ್ಮನಿ ಗೋಲಿನ ಖಾತೆ ತೆರೆದಿತ್ತು. ಆದರೆ, ಜಪಾನ್‌ ತಂಡ 75ನೇ ನಿಮಿಷ ಹಾಗೂ 83ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ಗೆಲುವು ದಾಖಲಿಸಿತು. ಈ ಎರಡೂ ಗೋಲುಗಳನ್ನು ಸೂಪರ್‌ ಸಬ್‌ಗಳಾದ ರಿಟ್ಸು ಡೋನ್‌ ಹಾಗೂ ಟಕುಮಾ ಅಸಾನೋ ಬಾರಿದರು.

83ನೇ ನಿಮಿಷದಲ್ಲಿ ಅಸಾನೋ ಸೆನ್ಸೇಷನ್‌ ಗೋಲು ಬಾರಿಸುತ್ತಿದ್ದಂತೆ ಜಪಾನ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನೊಂದೆಡೆ ಇದರ ನಿರೀಕ್ಷೆಯೇ ಇರದ ಜರ್ಮನಿ ತಂಡದ ಆಟಗಾರರ ಮುಖದಲ್ಲಿ ಆಘಾತ ಕಾಣಿಸಿತು. ಇದರೊಂದಿಗೆ ಜರ್ಮನಿ ತಂಡ ಸತತ 2ನೇ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯದಲ್ಲಿಯೇ ಸೋಲು ಕಂಡಂತಾಗಿದೆ.

Tap to resize

Latest Videos

undefined

ಇದು ಜಪಾನ್‌ ತಂಡಕ್ಕೆ ಜರ್ಮನಿ ವಿರುದ್ಧ ಮೊಟ್ಟಮೊದಲ ಗೆಲುವು ಎನಿಸಿದೆ. ಜರ್ಮನಿ ವಿರುದ್ಧ ವಿಶ್ವಕಪ್‌ನಲ್ಲಿ ಆಡಿದ ಹಿಂದಿನ ಎರಡು ಪಂದ್ಯಗಳಲ್ಲಿ ಡ್ರಾ ಹಾಗೂ ಸೋಲು ಫಲಿತಾಂಶ ಕಂಡಿತ್ತು. ಇನ್ನು 2ನೇ ಅವಧಿಯ ಆಟಕ್ಕೆ ಮುನ್ನ ಮುನ್ನಡೆ ಪಡೆದುಕೊಂಡರೂ ಜರ್ಮನಿ ತಂಡ ಸೋಲು ಕಂಡಿದ್ದು ಇದು 2ನೇ ಬಾರಿ. ಇದಕ್ಕೂ ಮುನ್ನ 1978ರಲ್ಲಿ ಕೊನೆಯ ಬಾರಿಗೆ ಮುನ್ನಡೆ ಪಡೆದರೂ ತಂಡ ಸೋಲು ಕಂಡಿತ್ತು. ಅಂದು ಆಸ್ಟ್ರಿಯಾ ವಿರುದ್ಧ ಜರ್ಮನಿ 2-3ರ ಸೋಲು ಕಂಡಿತ್ತು. ಅದಾದ ಬಳಿಕ ಆಡಿದ 21 ಪಂದ್ಯಗಳಲ್ಲಿ 2ನೇ ಅವಧಿಯನ್ನು ಮುನ್ನಡೆಯಿಂದ ಆಡಿದಾಗ ಜರ್ಮನಿ ಸೋತ ಉದಾಹರಣೆಯೇ ಇದ್ದಿರಲಿಲ್ಲ. ಇನ್ನು ವಿಶ್ವಕಪ್‌ನಲ್ಲಿ ಪಂದ್ಯವನ್ನು ಹಿನ್ನಡೆಯಿಂದ ಮೇಲೆದ್ದು ಜಪಾನ್‌ ತಂಡ ಗೆಲುವು ಕಂಡಿದ್ದು ಇದೇ ಮೊದಲ ಬಾರಿಯಾಗಿದೆ. ಇದಕ್ಕೂ ಮುನ್ನ ವಿಶ್ವಕಪ್‌ನಲ್ಲಿ ಮೊದಲಿಗೆ ಹಿನ್ನಡೆ ಪಡೆದ 13 ಪಂದ್ಯಗಳಲ್ಲಿ 11 ರಲ್ಲಿ ಸೋಲು ಕಂಡಿದ್ದರೆ, 2ರಲ್ಲಿ ಡ್ರಾ ಕಂಡಿತ್ತು. 

FIFA World Cup ಅರ್ಜೆಂಟೀನಾವನ್ನು ಮಣಿಸಿದ ಬೆನ್ನಲ್ಲೇ ಒಂದು ದಿನ ರಜೆ ಘೋಷಿಸಿದ ಸೌದಿ ದೊರೆ..!

ಇ ಗುಂಪಿನಲ್ಲಿ ಎದುರಾದ ಈ ಆಘಾತಕಾರಿ ಸೋಲಿನೊಂದಿಗೆ ಜರ್ಮನಿ ತಂಡ ನಾಲ್ಕು ತಂಡಗಳ ಪೈಕಿ ಕೊನೇ ಸ್ಥಾನಕ್ಕೆ ಜಾರಿದೆ. ಇನ್ನೊಂದೆಡೆ ಜಪಾನ್‌ ತಂಡ ಅಗ್ರಸ್ಥಾನಕ್ಕೇರಿದೆ. ಇನ್ನೊಂದೆಡೆ ಕೋಸ್ಟಾರಿಕಾ ಹಾಗೂ ಸ್ಪೇನ್‌ ತಂಡಗಳು ಕೂಡ ಈ ಗುಂಪಿನಲ್ಲಿದ್ದು, ಗ್ರೂಪ್‌ ಆಫ್‌ ಡೆತ್‌ನಿಂದ ಜರ್ಮನಿ ಪಾರಾಗುವುದು ಬಹುತೇಕ ಅನುಮಾನ ಎನ್ನಲಾಗಿದೆ.

FIFA World Cup ಇಂದು ಜರ್ಮನಿ vs ಜಪಾನ್ ಸೇರಿದಂತೆ ದಿಗ್ಗಜ ತಂಡಗಳು ಸೆಣಸಾಟ

ಜರ್ಮನಿ ತಂಡ ಸೋಲು ಕಂಡ ಬಳಿಕ ಇಡೀ ರಾಷ್ಟ್ರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಜರ್ಮನಿಯ ಪಬ್‌ಗಳಲ್ಲಿ ತಂಡದ ಕಟ್ಟರ್‌ ಅಭಿಮಾನಿಗಳು ಕಣ್ಣೀರಿಡುತ್ತಲೇ ಹೊರಬಂದಿರುವ ದೃಶ್ಯಗಳನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇನ್ನೊಂಡೆದೆ ಜಪಾನ್‌ ದೇಶದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ದೋಹಾದ ಖಲೀಫಾ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ 15 ನಿಮಿಷಗಳ ಹೊರತಾಗಿ ಹೆಚ್ಚಿನ ಸಮಯದಲ್ಲಿ ಜರ್ಮನಿಯೇ ಪ್ರಾಬಲ್ಯ ಸಾಧಿಸಿತ್ತು. ಆದರೆ, ಕೊನೇ ನಿಮಿಷಗಳಲ್ಲಿ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಲು ಜಪಾನ್‌ ಯಶಸ್ಸು ಕಂಡಿತು. ಪಂದ್ಯದ 33ನೇ ನಿಮಿಷದಲ್ಲಿ ಜಪಾನ್‌ನ ವಿಂಗ್‌ ಬ್ಯಾಕ್‌ ಡೇವಿಡ್‌ ರೌಮ್‌ ಅವರ ಮೇಲೆ ಜಪಾನ್‌ನ ಗೋಲ್ ಕೀಪರ್‌ ಶೈಚು ಗೊಂಡಾ ಫೌಲ್‌ ಮಾಡಿದ್ದ ಕಾರಣಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗುಂಡೋಗನ್‌ ಗೋಲು ಬಾರಿಸಿದ್ದರು. ಆದರೆ, ಪಂದ್ಯ ಮುಗಿಯಲು 8 ನಿಮಿಷವಿರುವಾಗ ರಿಟ್ಸು ಡೋನ್‌ ಹಾಗೂ ಟಕುಮಾ ಅಸಾನೋ ಗೋಲು ಬಾರಿಸುವುದರೊಂದಿಗೆ ಐತಿಹಾಸಿಕ ಗೆಲುವು ಕಂಡಿತು. ಈ ಇಬ್ಬರೂ ಆಟಗಾರರು ಜರ್ಮನಿಯ ಬುಂಡೇಸ್ಲಿಗಾ ಲೀಗ್‌ನಲ್ಲಿ ಆಡುವ ಆಟಗಾರರಾಗಿದ್ದಾರೆ.
 

click me!