
ಮಾಲೆ(ಆ.25): 2021ರ ಎಎಫ್‌ಸಿ ಕಪ್ ಫುಟ್ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು 6-2 ಗೋಲುಗಳ ಅಂತರದಲ್ಲಿ ಮಾಝಿಯಾ ಸ್ಪೋರ್ಟ್ ತಂಡದೆದುರು ಭರ್ಜರಿ ಗೆಲುವು ದಾಖಲಿಸುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿದೆ.
'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಬಿಎಫ್‌ಸಿ ಹಾಗೂ ಮಾಝಿಯಾ ತಂಡವು ಪಂದ್ಯ ಆರಂಭಕ್ಕೂ ಮುನ್ನವೇ ನಾಕೌಟ್‌ಗೇರುವ ಅವಕಾಶದಿಂದ ವಂಚಿತವಾಗಿದ್ದವು. ಆದರೆ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಸುನಿಲ್ ಚೆಟ್ರಿ ಪಡೆ ಯಶಸ್ವಿಯಾಯಿತು. ಪಂದ್ಯದ ಆರಂಭದಿಂದಲೇ ಬಿಎಫ್‌ಸಿ ಪಡೆ ಆಕ್ರಮಣಕಾರಿ ಪ್ರದರ್ಶನ ತೋರಿತು. ಪಂದ್ಯದ 6ನೇ ನಿಮಿಷದಲ್ಲಿ ಉದಾಂತ ಬಿಎಫ್‌ಸಿ ಪರ ಗೋಲಿನ ಖಾತೆ ತೆರೆದರು. ಇನ್ನು 19ನೇ ನಿಮಿಷದಲ್ಲಿ ಸೆಲ್ಟನ್ ಸಿಲ್ವಾ ಗೋಲು ಬಾರಿಸುವ ಮೂಲಕ ಬೆಂಗಳೂರು ತಂಡಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಇನ್ನು 35ನೇ ನಿಮಿಷದಲ್ಲಿ ಲಿಯೊನ್ ಅಗಸ್ಟೀನ್ ಗೋಲು ಬಾರಿಸಿ ಬೆಂಗಳೂರು ಎಫ್‌ಸಿಗೆ 3-0 ಮುನ್ನಡೆ ಒದಗಿಸಿಕೊಟ್ಟರು.
ಎಎಫ್‌ಸಿ ಕಪ್: ಎಟಿಕೆ ಎದುರು ಮುಗ್ಗರಿಸಿದ ಬೆಂಗಳೂರು ಎಫ್‌ಸಿ
ಇನ್ನು ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್ ತಂಡವು 67ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಹಮ್ಜಾ ಮೊಹಮ್ಮದ್ ಮಾಝಿಯಾ ತಂಡಕ್ಕೆ ಮೊದಲ ಗೋಲು ದಾಖಲಿಸಿಕೊಟ್ಟರು. ಇದಾಗಿ ಮೂರು ನಿಮಿಷದಲ್ಲೇ ಬೆಂಗಳೂರಿಗೆ ಶಿವಶಕ್ತಿ ನಾರಾಯಣನ್ ಗೋಲು ಬಾರಿಸುವ ಮೂಲಕ ಚೆಟ್ರಿ ಪಡೆಗೆ 4-1ರ ಮುನ್ನಡೆ ಒದಗಿಸಿಕೊಟ್ಟರು. ಇನ್ನು 82ನೇ ನಿಮಿಷದಲ್ಲಿ ಅಸಾದುಲ್ಲಾ ಅಬ್ದುಲ್ಲಾ ಮಾಝಿಯಾ ತಂಡಕ್ಕೆ ಎರಡನೇ ಗೋಲು ದಾಖಲಿಸಿದರು. ಕೊನೆಯಲ್ಲಿ ಬಿದಿಯಾಸಾಗರ್ ಸಿಂಗ್ 2 ಗೋಲು ಬಾರಿಸುವ ಮೂಲಕ ಬಿಎಫ್‌ಸಿ ತಂಡವು ಭಾರೀ ಅಂತರದ ಗೆಲುವು ದಾಖಲಿಸಲು ನೆರವಾದರು.
'ಡಿ' ಗುಂಪಿನಲ್ಲಿ ಮೂರು ಪಂದ್ಯಗಳ ಪೈಕಿ 2 ಗೆಲುವು ಹಾಗೂ ಒಂದು ಡ್ರಾ ಸಹಿತ 7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದ ಎಟಿಕೆ ಮೋಹನ್ ಬಗಾನ್ ತಂಡವು ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.