
ಪ್ರೀತಿಪಾತ್ರರಿಗಾಗಿ ನಾವೇ ಸ್ವತಃ ಮನೆಯಲ್ಲಿ ತಯಾರಿಸಿ
ಚಾಕೊಲೇಟ್ ಡೇ ಅಂದ್ರೆ ಸಿಹಿಯ ಹಬ್ಬ. ದುಬಾರಿ ಚಾಕೊಲೇಟ್‌ಗಳನ್ನು (Chacolate) ಅಂಗಡಿಯಿಂದ ತಂದು ಕೊಡುವುದಕ್ಕಿಂತ, ನಮ್ಮ ಪ್ರೀತಿಪಾತ್ರರಿಗಾಗಿ ನಾವೇ ಸ್ವತಃ ಮನೆಯಲ್ಲಿ ತಯಾರಿಸಿಕೊಡುವ ಸಿಹಿಗೆ ಬೆಲೆ ಹೆಚ್ಚು, ಅಲ್ವಾ?
ವ್ಯಾಲೆಂಟೈನ್ಸ್ ವೀಕ್‌ನ ಮೂರನೇ ದಿನವೇ ಚಾಕೊಲೇಟ್ ಡೇ. ಈ ದಿನ ಪ್ರೀತಿಯನ್ನು ಸಿಹಿ ಹಂಚಿಕೊಳ್ಳುವ ಮೂಲಕ ಸೆಲೆಬ್ರೇಟ್ ಮಾಡ್ತಾರೆ. ಅಂಗಡಿಯಿಂದ ತಂದ ಚಾಕೊಲೇಟ್‌ಗಿಂತ, ನೀವೇ ಸ್ವತಃ ಮಾಡಿದ ಚಾಕೊಲೇಟ್ ಕೊಟ್ಟರೆ ನಿಮ್ಮವರಿಗೆ ಹೆಚ್ಚು ಖುಷಿಯಾಗುತ್ತೆ. ಕಡಿಮೆ ಪದಾರ್ಥ ಬಳಸಿ, ಸುಲಭವಾಗಿ ಮಾಡಬಹುದಾದ 5 ಬಗೆಯ ಚಾಕೊಲೇಟ್ ರೆಸಿಪಿಗಳು ಇಲ್ಲಿವೆ.
ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಿಮ್ಮ ಪ್ರೀತಿಪಾತ್ರರಿಗೆ ಕೊಡಲು ಇದಕ್ಕಿಂತ ಒಳ್ಳೆ ಗಿಫ್ಟ್ ಮತ್ತೊಂದಿಲ್ಲ. ಇದನ್ನು ತಯಾರಿಸಲು ಮೊದಲು 'ಡಬಲ್ ಬಾಯ್ಲಿಂಗ್' ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದ್ರೆ, ಒಂದು ದೊಡ್ಡ ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ಅದರ ಮೇಲೆ ಮತ್ತೊಂದು ಚಿಕ್ಕ ಪಾತ್ರೆ ಇಟ್ಟು ಚಾಕೊಲೇಟ್ ಮಿಶ್ರಣ ರೆಡಿ ಮಾಡಬೇಕು. ಈ ಚಿಕ್ಕ ಪಾತ್ರೆಗೆ ಅರ್ಧ ಕಪ್ ಶುದ್ಧ ಕೊಬ್ಬರಿ ಎಣ್ಣೆ ಅಥವಾ ಕೋಕೋ ಬಟರ್ ಹಾಕಿ, ನಿಧಾನವಾಗಿ ಕರಗಿಸಿ.
ಎಣ್ಣೆ ಕರಗಿದ ಮೇಲೆ, ಅದಕ್ಕೆ ಮುಕ್ಕಾಲು ಕಪ್ ಕೋಕೋ ಪೌಡರ್, ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಪುಡಿ ಸಕ್ಕರೆ ಸೇರಿಸಿ. ಗಂಟುಗಳಾಗದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಈ ಹಂತದಲ್ಲಿ ಎರಡು-ಮೂರು ಹನಿ ವೆನಿಲ್ಲಾ ಎಸೆನ್ಸ್ ಕೂಡ ಸೇರಿಸಬಹುದು. ರೆಡಿಯಾದ ಮಿಶ್ರಣವನ್ನು ಸಿಲಿಕಾನ್ ಮೋಲ್ಡ್‌ಗಳಿಗೆ ಹಾಕಿ. ಫ್ರಿಡ್ಜ್‌ನಲ್ಲಿ ಎರಡು-ಮೂರು ಗಂಟೆ ಇಟ್ಟರೆ, ಕ್ಲಾಸಿಕ್ ಡಾರ್ಕ್ ಚಾಕೊಲೇಟ್ ಸವಿಯಲು ಸಿದ್ಧ. ಸಕ್ಕರೆ ಬದಲು ಜೇನುತುಪ್ಪ ಬಳಸುವುದರಿಂದ ಡಯಟ್ ಮಾಡುವವರಿಗೂ ಇದನ್ನು ಧೈರ್ಯವಾಗಿ ಕೊಡಬಹುದು.
2. ನಟ್ಸ್ ಆ್ಯಂಡ್ ರೈಸಿನ್ ಡಿಲೈಟ್
ಅಂಗಡಿಗೆ ಹೋಗಿ 'ಫ್ರೂಟ್ ಆ್ಯಂಡ್ ನಟ್' ಚಾಕೊಲೇಟ್ ಕೊಳ್ಳದವರು ಯಾರಿದ್ದಾರೆ ಹೇಳಿ? ಅದೇ ರುಚಿಯಲ್ಲಿ ಮನೆಯಲ್ಲೇ ಮಾಡೋದು ತುಂಬಾನೇ ಸುಲಭ. ಇದಕ್ಕಾಗಿ ಅಂಗಡಿಗಳಲ್ಲಿ ಸಿಗುವ ಮಿಲ್ಕ್ ಚಾಕೊಲೇಟ್ ಕಾಂಪೌಂಡ್ ಬಳಸಬಹುದು. ಒಂದು ದೊಡ್ಡ ಚಾಕೊಲೇಟ್ ಬಾರ್ ತೆಗೆದುಕೊಂಡು, ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಮೊದಲೇ ಹೇಳಿದಂತೆ ಡಬಲ್ ಬಾಯ್ಲಿಂಗ್ ವಿಧಾನದಲ್ಲಿ ಇದನ್ನು ಕರಗಿಸಿಕೊಳ್ಳಿ. ಚಾಕೊಲೇಟ್ ಕರಗುವಷ್ಟರಲ್ಲಿ, ಇನ್ನೊಂದು ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪ ಹಾಕಿ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಲೈಟಾಗಿ ಹುರಿದುಕೊಳ್ಳಿ. ಹುರಿದ ನಟ್ಸ್‌ಗಳನ್ನು ಸಣ್ಣಗೆ ಕತ್ತರಿಸಿ, ಕರಗಿದ ಚಾಕೊಲೇಟ್‌ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಟ್ಸ್ ಎಲ್ಲ ಕಡೆ ಸರಿಯಾಗಿ ಹರಡುವಂತೆ ಕಲಸಿ. ಈ ಮಿಶ್ರಣವನ್ನು ಮೋಲ್ಡ್‌ಗಳಿಗೆ ಹಾಕುವಾಗ, ಮಧ್ಯೆ ಮಧ್ಯೆ ಸ್ವಲ್ಪ ತಟ್ಟಿದರೆ ಒಳಗಿರುವ ಗಾಳಿಗುಳ್ಳೆಗಳು ಹೋಗುತ್ತವೆ. ಎರಡು-ಮೂರು ಗಂಟೆ ಫ್ರಿಡ್ಜ್‌ನಲ್ಲಿಟ್ಟರೆ, ಅಂಗಡಿಯ ಚಾಕೊಲೇಟ್‌ಗಿಂತಲೂ ಹೆಚ್ಚು ರುಚಿಕರವಾದ, ಗರಿಗರಿಯಾದ ಚಾಕೊಲೇಟ್ ರೆಡಿ. ಪ್ರತಿ ಕಚ್ಚುವಾಗಲೂ ನಟ್ಸ್‌ನ ಕ್ರಂಚಿ ರುಚಿ ಮತ್ತು ಚಾಕೊಲೇಟ್‌ನ ಸಿಹಿ ಸೇರಿ ಅದ್ಭುತ ಅನುಭವ ನೀಡುತ್ತೆ.
ಚಾಕೊಲೇಟ್ ಮತ್ತು ತೆಂಗಿನಕಾಯಿ ಕಾಂಬಿನೇಷನ್ ಎವರ್‌ಗ್ರೀನ್ ಹಿಟ್. 'ಬೌಂಟಿ' ಚಾಕೊಲೇಟ್ ಇಷ್ಟಪಡುವವರಿಗಾಗಿ ಇದನ್ನು ಮನೆಯಲ್ಲೇ ತಯಾರಿಸಬಹುದು. ಮೊದಲು, ಚೆನ್ನಾಗಿ ತುರಿದ ತೆಂಗಿನಕಾಯಿ (ಡೆಸಿಕೇಟೆಡ್ ಕೋಕೊನಟ್) ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಕೈಗೆ ಅಂಟಿಕೊಳ್ಳದ ಹದಕ್ಕೆ ಇದು ಬರಬೇಕು. ಈ ಮಿಶ್ರಣದಿಂದ ಸಣ್ಣ ಬಾರ್ ಅಥವಾ ಉಂಡೆಗಳನ್ನು ಮಾಡಿಕೊಳ್ಳಿ. ಇವುಗಳ ಆಕಾರ ಸರಿಯಾಗಿ ಬರಲು, ಅರ್ಧ ಗಂಟೆ ಫ್ರೀಜರ್‌ನಲ್ಲಿ ಇಟ್ಟು ಸೆಟ್ ಮಾಡಿ. ಈ ಸಮಯದಲ್ಲಿ, ಸ್ವಲ್ಪ ಡಾರ್ಕ್ ಚಾಕೊಲೇಟ್ ಕರಗಿಸಿ ಇಟ್ಟುಕೊಳ್ಳಿ. ಫ್ರಿಡ್ಜ್‌ನಿಂದ ತೆಗೆದ ತೆಂಗಿನಕಾಯಿ ಬಾರ್‌ಗಳನ್ನು ಒಂದೊಂದಾಗಿ ಈ ಕರಗಿದ ಚಾಕೊಲೇಟ್‌ನಲ್ಲಿ ಅದ್ದಿ ತೆಗೆಯಿರಿ. ಬಾರ್‌ನ ಎಲ್ಲಾ ಬದಿಗೂ ಚಾಕೊಲೇಟ್ ಕೋಟಿಂಗ್ ಸರಿಯಾಗಿ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಂತರ ಇವನ್ನು ಒಂದು ಬಟರ್ ಪೇಪರ್ ಮೇಲೆ ಅಥವಾ ಪ್ಲೇಟ್‌ನಲ್ಲಿ ಇಟ್ಟು ಮತ್ತೆ ತಣ್ಣಗಾಗಲು ಬಿಡಿ. ಹೊರಗೆ ಗರಿಗರಿಯಾದ ಚಾಕೊಲೇಟ್ ಮತ್ತು ಒಳಗೆ ಮೃದುವಾದ, ಸಿಹಿಯಾದ ತೆಂಗಿನಕಾಯಿ ಇರುವ ಈ ಚಾಕೊಲೇಟ್, ಈ ಚಾಕೊಲೇಟ್ ಡೇಗೆ ಬೆಸ್ಟ್ ಸರ್ಪ್ರೈಸ್ ಆಗಲಿದೆ.
4. ಕ್ರೀಮಿ ವೈಟ್ ಚಾಕೊಲೇಟ್
ವೈಟ್ ಚಾಕೊಲೇಟ್ ಪ್ರಿಯರಿಗಾಗಿ ಹಾಲಿನ ಪುಡಿ ಮತ್ತು ತುಪ್ಪ ಬಳಸಿ ಇದನ್ನು ತಯಾರಿಸಬಹುದು. ಡಬಲ್ ಬಾಯ್ಲಿಂಗ್ ವಿಧಾನದಲ್ಲಿ ತುಪ್ಪ ಕರಗಿಸಿ, ಅದಕ್ಕೆ ಜರಡಿ ಹಿಡಿದ ಹಾಲಿನ ಪುಡಿ ಮತ್ತು ಪುಡಿ ಸಕ್ಕರೆ ಸೇರಿಸಿ. ಗಂಟುಗಳಿಲ್ಲದೆ ನಯವಾಗಿ ಕಲಸಿ, ಮೋಲ್ಡ್‌ಗಳಿಗೆ ಹಾಕಿ ಸೆಟ್ ಮಾಡಿ. ಇದಕ್ಕೆ ಸ್ವಲ್ಪ ಸ್ಟ್ರಾಬೆರಿ ಎಸೆನ್ಸ್ ಸೇರಿಸಿದರೆ ಬಣ್ಣ ಮತ್ತು ರುಚಿಯಲ್ಲಿ ದೊಡ್ಡ ಬದಲಾವಣೆ ತರಬಹುದು.
5. ಬಿಸ್ಕತ್ ಚಾಕೊಲೇಟ್ ಟ್ರಫಲ್ಸ್
ಒಲೆ ಹಚ್ಚಿ ಅಡುಗೆ ಮಾಡಲು ಕಷ್ಟಪಡುವವರು ಈ ರೆಸಿಪಿ ಟ್ರೈ ಮಾಡಬಹುದು. ಚಾಕೊಲೇಟ್ ಬಿಸ್ಕೆಟ್‌ಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ, ಅದಕ್ಕೆ ಸ್ವಲ್ಪ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಕಲಸಿ ಉಂಡೆಗಳನ್ನಾಗಿ ಮಾಡಿ. ಈ ಉಂಡೆಗಳನ್ನು ಕರಗಿಸಿದ ಚಾಕೊಲೇಟ್‌ನಲ್ಲಿ ಅದ್ದಿ, ಮೇಲೆ ಸ್ವಲ್ಪ ಚಾಕೊಲೇಟ್ ಚಿಪ್ಸ್ ಹಾಕಿದರೆ, ನಿಮಿಷಗಳಲ್ಲಿ ಭರ್ಜರಿ ಚಾಕೊಲೇಟ್ ರೆಡಿ.
ಗಮನಿಸಿ: ಚಾಕೊಲೇಟ್ ತಯಾರಿಸುವಾಗ ಬಳಸುವ ಪಾತ್ರೆ ಅಥವಾ ಚಮಚದಲ್ಲಿ ಒಂದು ಹನಿ ನೀರು ಕೂಡ ಇರಬಾರದು. ಈ ಸ್ಪೆಷಲ್ ಚಾಕೊಲೇಟ್‌ಗಳನ್ನು ಒಂದು ಸುಂದರವಾದ ಬಾಕ್ಸ್‌ನಲ್ಲಿ ಹಾಕಿ ನಿಮ್ಮ ಪ್ರೀತಿಪಾತ್ರರಿಗೆ ನೀಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.