
ಕೆಲವು ವರ್ಷಗಳ ಹಿಂದಿನವರೆಗೂ, ಅನೇಕ ಜನರು ರೆಸ್ಟೋರೆಂಟ್‌ನಲ್ಲಿ ಒಂಟಿಯಾಗಿ ಊಟ ಮಾಡುವುದು ವಿಚಿತ್ರ ಎನಿಸುತ್ತಿತ್ತು. ಮಾಣಿ ಕೂಡ "ಸರ್, ಬೇರೆ ಯಾರಾದರೂ ಬರುತ್ತಾರ?" ಎಂದು ಕೇಳುತ್ತಿದ್ದರು. ರೆಸ್ಟೋರೆಂಟ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಒಬ್ಬಂಟಿಯಾಗಿ ನೋಡಿದಾಗ ಅವನಿಗೆ ಸ್ನೇಹಿತರಿಲ್ಲ, ಅಥವಾ ಸಂಬಂಧ ಮುರಿದುಹೋಗಿದೆ ಅಥವಾ ಬಹುಶಃ ಯಾರನ್ನೋ ಕಾಯುತ್ತಿದ್ದಾನೆ ಎಂದು ಅಂದುಕೊಳ್ಳುತ್ತಿದ್ದರು. ಆದರೆ ಈಗ ಚಿತ್ರಣ ಬದಲಾಗುತ್ತಿದೆ. ಪ್ರಪಂಚದ ಇತರ ಹಲವು ಪ್ರಮುಖ ದೇಶಗಳಂತೆ, ಭಾರತದಲ್ಲಿ ಒಂಟಿಯಾಗಿ ಊಟ ಮಾಡುವ ಟ್ರೆಂಡ್, ಅಂದರೆ, ಸೋಲೋ ಡೈನಿಂಗ್ ಮಾಡಲು ಹೊರಗೆ ಹೋಗುವುದು ವೇಗವಾಗಿ ಹೆಚ್ಚುತ್ತಿದೆ. ಇದು ಲೈಫ್ ಸ್ಟೈಲ್ ನ ಒಂದು ಭಾಗವಾಗುತ್ತಿದೆ.
Solo Dining ಮಾಡುವವರು ಪ್ರತಿ ಬಾರಿ ಊಟ ಮಾಡುವಾಗಲೂ ತಮ್ಮ ಆಹಾರದ ವಿನ್ಯಾಸವನ್ನು ಸವಿಯುತ್ತಾರೆ. ಅವರು ರೆಸ್ಟೋರೆಂಟ್‌ನ ಸರ್ವೀಸ್, ಹಿನ್ನೆಲೆ ಸಂಗೀತ ಮತ್ತು ಶೆಫ್ ಗಳ ಕ್ರಿಯೇಟಿವಿಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಸುತ್ತಲಿನ ಟೇಬಲ್ ಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ಅವರು ಗಮನಿಸುತ್ತಾರೆ.
ಸೋಲೋ ಡೈನಿಂಗ್ ಟ್ರೆಂಡ್ ಬೆಳೆಯುತ್ತಿರುವುದಕ್ಕೆ ದೊಡ್ಡ ಕಾರಣವೆಂದರೆ ಬದಲಾಗುತ್ತಿರುವ ಜೀವನಶೈಲಿ. ಇಂದು, ಎಂದಿಗಿಂತಲೂ ಹೆಚ್ಚು ಜನರು ಒಂಟಿಯಾಗಿ ವಾಸಿಸುತ್ತಿದ್ದಾರೆ, ಉದ್ಯೋಗಗಳಿಗಾಗಿ ಇತರ ನಗರಗಳಿಗೆ ಹೋಗುತ್ತಿದ್ದಾರೆ ಮತ್ತು ತಮಗಾಗಿ ಸಮಯವನ್ನು ಕಂಡುಕೊಳ್ಳಲು ಕಲಿಯುತ್ತಿದ್ದಾರೆ. ಆದ್ದರಿಂದ, ಸ್ನೇಹಿತ ಅಥವಾ ಕುಟುಂಬದ ಸದಸ್ಯರು ಫ್ರೀ ಆಗುವವರೆಗೂ ಕಾಯುವ ಬದಲು, ಒಬಬ್ರೇ ಹೋಗಿ ಊಟ ಮಾಡಿ ಬರುತ್ತಾರೆ.
ಇಂದಿನ ಯುವ ಪೀಳಿಗೆಯಲ್ಲಿ ಸೋಲೋ ಟ್ರಾವೆಲ್ ಮತ್ತು ಸಿನಿಮಾ ನೋಡುವ ಟ್ರೆಂಡ್ ಹೆಚ್ಚುತ್ತಿರುವಂತೆಯೇ, ಈಗ ಏಕಾಂಗಿಯಾಗಿ ಊಟ ಮಾಡುವುದು ಕೂಡ ಸಾಮಾನ್ಯವಾಗಿದೆ. ಈ ವ್ಯಕ್ತಿಗಳು ಏಕಾಂಗಿಯಾಗಿ ಊಟ ಮಾಡುವುದನ್ನು ತಮ್ಮೊಂದಿಗೆ ಸಮಯ ಕಳೆಯುವ ಒಂದು ಮಾರ್ಗವೆಂದು ನೋಡುತ್ತಾರೆ. ಅವರು ಇತರರ ಆದ್ಯತೆಗಳಿಗಾಗಿ ಕಾಯಬೇಕಾಗಿಲ್ಲ, ತಮಗೆ ಇಷ್ಟ ಬಂದಾಗ, ತಾವು ಇಷ್ಟಪಟ್ಟಿದ್ದನ್ನು ತಿನ್ನಬಹುದು.
ಮೆಟ್ರೋ ನಗರಗಳಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ, ಅಧ್ಯಯನ ಅಥವಾ ವೃತ್ತಿಜೀವನದ ಕಾರಣದಿಂದಾಗಿ ತಮ್ಮ ಕುಟುಂಬಗಳಿಂದ ದೂರ ವಾಸಿಸುತ್ತಿದ್ದಾರೆ. ನಗರ ಜೀವನದ ಬದಲಾಗುತ್ತಿರುವ ಸ್ವರೂಪ ಮತ್ತು ಕೆಲಸದ ವಾತಾವರಣದೊಂದಿಗೆ, ಕೆಲಸದ ನಂತರ ಎಲ್ಲರೂ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಅವರು ರೆಸ್ಟೋರೆಂಟ್‌ಗಳಲ್ಲಿ ಒಂಟಿಯಾಗಿ ತಿನ್ನುವ ಪರಿಸ್ಥಿತಿ ಉಂಟಾಗುತ್ತದೆ.
ನಿರಂತರ ಗಡಿಬಿಡಿಯ ನಡುವೆ, ಕೆಲವರು ಒಂಟಿಯಾಗಿ ಊಟ ಮಾಡುವುದನ್ನು ಮನಸ್ಸಿಗೆ ಶಾಂತಿ ಸಿಗುವ ಒಂದು ಅವಕಾಶ ಎಂದುಕೊಳ್ಳುತ್ತಾರೆ. ಅವರು ಫೋನ್ ಕರೆಗಳು ಅಥವಾ ಸಂಭಾಷಣೆಯ ಅಗತ್ಯವಿಲ್ಲದೆ ತಮ್ಮ ಆಹಾರದ ರುಚಿಯನ್ನು ಎಂಜಾಯ್ ಮಾಡುತ್ತಾರೆ. ಏನು ತಿನ್ನಬೇಕು, ಎಷ್ಟು ಹೊತ್ತು ಕುಳಿತುಕೊಳ್ಳಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಸಂತೋಷವು ಜನರನ್ನು ಸೋಲೋ ಡೈನಿಂಗ್ ಮಾಡಲು ಪ್ರೇರೇಪಿಸುತ್ತದೆ.
ಕೆಲವರಿಗೆ, ಶಾಂತ ವಾತಾವರಣದಲ್ಲಿ ಒಂಟಿಯಾಗಿ ಊಟ ಮಾಡುವುದರಿಂದ ಸಾಮಾಜಿಕ ಒತ್ತಡದಿಂದ ಪರಿಹಾರ ಸಿಗುತ್ತದೆ. ಅವರು ಇತರರನ್ನು ಮೆಚ್ಚಿಸುವ ಅಥವಾ ಸಂಭಾಷಣೆಯನ್ನು ನಿರ್ವಹಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ.
ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ವೇದಿಕೆಗಳು ಈ ಟ್ರೆಂಡ್ ನ್ನು ವೈರಲ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹಾಗಾಗಿ ಜನರು ಸಹ ತಾವು ಸೋಲೋ ಡೈನಿಂಗ್ ಮಾಡುತ್ತಿರುವುದನ್ನು ತೋರಿಸಲು ಹೆಚ್ಚಾಗಿ ಒಬ್ಬರೇ ಊಟ ಮಾಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.