
ಒಂದು ಪ್ಲೇಟ್ ಬಿರಿಯಾನಿ ತಿನ್ನಬೇಕೆಂಬ ಆಸೆ ಕೆಲವೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಬಹುದು. ಅದರಲ್ಲೂ ಸ್ವಂತ ದುಡಿಮೆಯ ಹಣದಲ್ಲಿ ದುಬಾರಿ ಊಟ ಆರ್ಡರ್ ಮಾಡಿದರೆ ಮನೆಯವರಿಂದಲೇ ಪ್ರಶ್ನೆಗಳು ಎದುರಾಗಬಹುದು. ಇಂತಹದ್ದೇ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. 23 ವರ್ಷದ ಯುವಕನೊಬ್ಬ ದುಬಾರಿ ಬಿರಿಯಾನಿ ಆರ್ಡರ್ ಮಾಡಿದ್ದಕ್ಕೆ ತಂದೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರ ಹಣದ ಉಳಿತಾಯ ಮತ್ತು ಜೀವನವನ್ನು ಆನಂದಿಸುವುದರ ನಡುವಿನ ಚರ್ಚೆಗೆ ಕಾರಣವಾಗಿದೆ.
ಈ ಯುವಕ ಇತ್ತೀಚೆಗೆ ತನ್ನ ಮೊದಲ ಉದ್ಯೋಗವನ್ನು ಆರಂಭಿಸಿದ್ದಾನೆ. ಪೋಷಕರ ಜೊತೆ ವಾಸಿಸುತ್ತಿರುವ ಆತ ಮನೆಯ ಖರ್ಚಿಗೂ ತನ್ನ ಪಾಲಿನ ಹಣ ನೀಡುತ್ತಾನೆ. ಜೊತೆಗೆ ಪ್ರತಿತಿಂಗಳು ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿದ್ದಾನೆ. ಅನಗತ್ಯವಾಗಿ ಹೊರಗೆ ಸುತ್ತುವುದು ಅಥವಾ ದುಬಾರಿ ವಸ್ತುಗಳನ್ನು ಖರೀದಿಸುವ ಅಭ್ಯಾಸ ತನಗಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.
ಆದರೆ ಬಿರಿಯಾನಿ ಎಂದರೆ ಆತನಿಗೆ ತುಂಬಾ ಇಷ್ಟ. ಇತ್ತೀಚೆಗೆ ವಿವಿಧ ಬಗೆಯ ಬಿರಿಯಾನಿಗಳನ್ನು ಪರಿಚಯಿಸುವ 'ಟೂಫಾನಿ ಬಿರಿಯಾನಿ ಹಂಟ್' ನೋಡಿದ ಬಳಿಕ ಹೊಸ ರುಚಿಗಳನ್ನು ಪ್ರಯತ್ನಿಸುವ ಆಸೆ ಹೆಚ್ಚಾಗಿತ್ತು. ಹೀಗಾಗಿ ವಾರಾಂತ್ಯದಲ್ಲಿ ಹಲವು ದಿನಗಳಿಂದ ತಿನ್ನಬೇಕೆಂದುಕೊಂಡಿದ್ದ ದುಬಾರಿ ಹಾಂಡಿ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾನೆ.
ಆರ್ಡರ್‌ನ ಬಿಲ್ ನೋಡಿದ ತಂದೆ ಮಗನನ್ನು ಪ್ರಶ್ನಿಸಿದ್ದಾರೆ. ಈ ವಯಸ್ಸಿನಲ್ಲಿ ಆಹಾರಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡುವ ಬದಲು ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಮಗನ ಆಹಾರದ ಮೇಲಿನ ಖರ್ಚು ಆತನ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂಬುದು ತಂದೆಯ ಅಭಿಪ್ರಾಯ.
ಆದರೆ ಯುವಕನಿಗೆ ತಂದೆಯ ಈ ವರ್ತನೆ ಅರ್ಥವಾಗಿಲ್ಲ. ತಾನು ಪ್ರತಿದಿನ ದುಬಾರಿ ಊಟ ಆರ್ಡರ್ ಮಾಡುವುದಿಲ್ಲ, ಕೆಲವೊಮ್ಮೆ ಇಷ್ಟದ ಆಹಾರ ಸೇವಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾನೆ. ತಂದೆ ಕಳೆದ ಆರು ವರ್ಷಗಳಿಂದ ಒಂದೇ ಜೋಡಿ ಚಪ್ಪಲಿಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಇಬ್ಬರ ಖರ್ಚು ಮಾಡುವ ಮನೋಭಾವದಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ಆತ ಹೇಳಿಕೊಂಡಿದ್ದಾನೆ.
ಈ ವಿಚಾರವನ್ನು ಯುವಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ದುಡಿದ ಹಣದಲ್ಲಿ ಕುಟುಂಬದ ಜವಾಬ್ದಾರಿ ನಿಭಾಯಿಸಿ ಉಳಿತಾಯ ಮಾಡುತ್ತಿದ್ದರೆ, ಸ್ವಂತ ಸಂತೋಷಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡುವುದರಲ್ಲಿ ತಪ್ಪಿಲ್ಲ ಎಂದು ಹಲವರು ಹೇಳಿದ್ದಾರೆ.
ಇನ್ನು ಕೆಲವರು ತಂದೆಯ ಉಳಿತಾಯದ ಮನೋಭಾವವನ್ನೂ ಗೌರವಿಸಬೇಕು ಎಂದಿದ್ದಾರೆ. ಹಣ ಉಳಿಸುವುದು ಮುಖ್ಯವಾದರೂ ಜೀವನದ ಸಣ್ಣ ಸಂತೋಷಗಳನ್ನು ಅನುಭವಿಸುವುದೂ ಅಷ್ಟೇ ಮುಖ್ಯ ಎಂಬ ಚರ್ಚೆ ಈ ಘಟನೆಯಿಂದ ಮತ್ತೆ ಮುನ್ನೆಲೆಗೆ ಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.