ಯಾದಗಿರಿಯ ಮಂಗಿಹಾಳ ಗ್ರಾಮದಲ್ಲಿ ಒಂದೇ ದಿನದಲ್ಲಿ ಟೆಂಪಲ್ ನಿರ್ಮಾಣ. ಪವಾಡ ಪುರುಷನ ಗುಡಿ ಕಟ್ಟಿ, ಕಣ್ತುಂಬಿಕೊಂಡ ಭಕ್ತರು.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಜೂ.14): ಭಾರತ ದೇಶದಲ್ಲಿ ವಾಸಿಸುವ ಹಲವು ಜನರು ದೈವ ಭಕ್ತಿಯನ್ನು ಹೊಂದಿದ್ದಾರೆ. ಭಾರತವು ಗುಡಿ-ಗುಂಡಾರಗಳಿಂದ ಕೂಡಿದೆ. ಪ್ರತಿ ಹಳ್ಳಿಯಲ್ಲೂ ಆ ಹಳ್ಳಿಯ ಪವಾಡ ಪುರುಷನನ್ನು ಆರಾಧಿಸುತ್ತಾರೆ. ಸೂಲಧೀಶ್ವರ ಎಂಬ ಪವಾಡ ಪುರುಷನ ದೇವಸ್ಥಾನವನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಿಹಾಳ ಗ್ರಾಮದ ಭಕ್ತರು ಒಂದೇ ದಿನದಲ್ಲಿ ನಿರ್ಮಾಣ ಮಾಡಿದ್ದಾರೆ.
ಒಂದೇ ದಿನದಲ್ಲಿ ನಿರ್ಮಾಣವಾಯ್ತು ಸೂಲಧೀಶ್ವರನ ದೇವಾಲಯ
ಒಂದೇ ದಿನದಲ್ಲಿ ದೇವಾಲಯ ನಿರ್ಮಾಣ, ಹುರುಪಿನಿಂದ ಬಂದು ದೇವಸ್ಥಾನ ನಿರ್ಮಾಣಕ್ಕೆ ಕೈ ಜೋಡಿಸಿದ ಭಕ್ತರು, ನೋಡ ನೋಡುತ್ತಿದ್ದಂತೆ ತಲೆ ಎತ್ತಿದ ಗುಡಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಿಹಾಳ ಗ್ರಾಮದಲ್ಲಿ ಶಕ್ತಿವಂತ, ಪವಾಡ ಪುರುಷ ಸೂಲಧೀಶ್ವರ ಮೂತ್ಯಾನ ಮಾತಿನಂತೆ ಒಂದೇ ದಿನದಲ್ಲಿ ದೇವಾಲಯ ನಿರ್ಮಾಣವಾಗಿದೆ.
ಮಂಗಿಹಾಳ ಗ್ರಾಮದಲ್ಲಿ ಸುಮಾರು 300 ವರ್ಷಗಳ ಹಿಂದೆ ಪವಾಡ ಪುರುಷ ಸೂಲಧೀಶ್ವರ ಮೂತ್ಯಾ ನದಿ ನೀರಿನಿಂದ ಗುಡಿ ಕಟ್ಟುವ ಬಗ್ಗೆ ಹೇಳಿದ್ದರಂತೆ. ಅದರಂತೆ ಮಂಗಿಹಾಳ ಗ್ರಾಮದ ಸುತ್ತಮುತ್ತಲಿನ ಭಕ್ತರು ಹಾಗೂ ಮಂಗಿಹಾಳ ಗ್ರಾಮಸ್ಥರ ಒಳಗೊಂಡ ಭಕ್ತರು ಸ್ವಯಂಪ್ರೇರಿತವಾಗಿ ಹಣ ಸಂಗ್ರಹಿಸಿ ದೇವಸ್ಥಾನ ಕಟ್ಟಿದ್ದಾರೆ. ಸಂಜೆ 6 ಗಂಟೆಗೆ ಆರಂಭವಾದ ದೇವಸ್ಥಾನ ನಿರ್ಮಾಣ ಕಾರ್ಯ ಮರುದಿನ ಸಂಜೆ 4 ಗಂಟೆಯವರೆಗೂ ಭಕ್ತರು ಶ್ರದ್ಧಾಪೂರ್ವಕವಾಗಿ ಮುಗಿಸಿದ್ದಾರೆ. ಮಂಗಿಹಾಳ ಗ್ರಾಮದ ಆರಾಧ್ಯ ದೈವ ಸೂಲಿಮನಿ ಲಿಂಗೇಶ್ವರ(ಸೂಲದರಪ್ಪ) ದೇವಸ್ಥಾನ ಕಟ್ಟಡದವನ್ನು 24 ಗಂಟೆಯಲ್ಲಿಯೇ ಕಾಮಗಾರಿಯನ್ನು ಭಕ್ತರು ಸಂಪೂರ್ಣಗೊಳಿಸಿ ಸಂಪನ್ನಗೊಳಿಸಿದ್ದಾರೆ. ಇದರಿಂದ ಈಡೀ ಗ್ರಾಮದ ಭಕ್ತರು ಸಂತಸದಲ್ಲಿದ್ದಾರೆ.
ಜೈ ಭಜರಂಗಿ: ದೇಗುಲ ಮುಂದೆ ಭಕ್ತಿಗೀತೆಗೆ ಬಾಲಕಿಯ ನೃತ್ಯ: ವಿಡಿಯೋ ವೈರಲ್
24 ಗಂಟೆಯಲ್ಲಿ ಗುಡಿ ಕಟ್ಟುವ ಸಂಕಲ್ಪ
ಮಂಗಿಹಾಳ ಗ್ರಾಮದ ಸಿದ್ದಿ ಪುರುಷ ಸೂಲಧೀಶ್ವರನ ಗುಡಿಯನ್ನು 24 ಗಂಟೆಯಲ್ಲಿ ಕಟ್ಟುವ ಅಪಾರ ಭಕ್ತರ ಸಂಕಲ್ಪ ಹಿಡೇರಿದೆ. ಸಮಾರು 11*11 ಅಡಿ ಅಗಲ, 11 ಅಡಿ ಎತ್ತರದ ಗುರಿಯೊಂದಿಗೆ ಗರ್ಭಗುಡಿ ನಿರ್ಮಾಣ ಸಂಜೆ 6 ಗಂಟೆಗೆ ಕಾಮಗಾರಿ ಆರಂಭಿಸಿದ್ದಾರೆ. ಮರು ದಿನ ಸಂಜೆ 4 ಗಂಟೆಯವರೆಗೆ ಈ ದೇವಾಲಯ ನಿರ್ಮಾಣ ಕಾರ್ಯ ಮುಗಿದಿದೆ. ಸುಣ್ಣ ಬಣ್ಣ ಬಳಿದು ಉದ್ಘಾಟನೆ ನೆರವೇರಿಸು ಸಂಕಲ್ಪದೊಂದಿಗೆ ಭಕ್ತರು ದೇವಾಲಯ ನಿರ್ಮಿಸಿದ್ದಾರೆ.
ಈ ಸೂಲಧೀಶ್ವರ ದೇವಾಲಯ ನಿರ್ಮಾಣಕ್ಕೆ ಅಂದಾಜು 35 ಲಕ್ಷ ರೂ. ವೆಚ್ಚ ತಗುಲಿದೆ. ಜೆಸಿಬಿ ಯಂತ್ರದ ಮೂಲಕ ತಳಪಾಯ ಅಗೆದು, ಸುಮಾರು 35 ಟ್ರಿಪ್ ಮರಂ, 9 ತರಹದ ತಳಪಾಯ ಕಟ್ಟಲಾಗಿದೆ. ಈ ದೇವಾಲಯ ನಿರ್ಮಾಣಕ್ಕೆ ಮಂಗಿಹಾಳ ಗ್ರಾಮದ ನೀರನ್ನು ಬಳಸುವಂತಿಲ್ಲ. ಇದಕ್ಕೆ ನದಿಯ ನೀರನ್ನು ಬಳಸಿ ಕಟ್ಟಲಾಗಿದೆ. ದೂರದ ಕೃಷ್ಣಾ ನದಿಯಿಂದ ಬಳಸಿ, ಸಂಪ್ರದಾಯ ಬದ್ಧವಾಗಿ ನಿರ್ಮಿಸಲಾಗಿದೆ. ಟ್ಯಾಂಕರ್ ಮೂಲಕ ಕೃಷ್ಣಾನದಿಯಿಂದ ನೀರನ್ನು ತಂದು ದೇವಸ್ಥಾನ ನಿರ್ಮಾಣಕ್ಕೆ ಬಳಸಲಾಗಿದೆ.
ಈ ಮರಗಿಡಗಳಿಗೆ ರಕ್ಷಾಸೂತ್ರ ಕಟ್ಟಿದರೆ, ಅದೃಷ್ಟ ಬದಲಾಗೋದ್ರಲ್ಲಿ ಅನುಮಾನವೇ
ಮದ್ಯಪಾನ , ಮೂತ್ರ ಹಾಗೂ ಶೌಚ ಮಾಡುವಂತಿಲ್ಲ:
ಸೂಲಧೀಶ್ವರನ ಗುಡಿ ನಿರ್ಮಾಣ ಕಾರ್ಯ ಮಂಗಿಹಾಳ ಗ್ರಾಮಸ್ಥರಿಗೆ ಸವಾಲಿನ ಕೆಲಸವಾಗಿತ್ತು. ಅದನ್ನು ಭಕ್ತಾದಿಗಳು ಯಶಸ್ವಿಗೊಳಿಸಿದ್ದಾರೆ. ಕಟ್ಟಡಕ್ಕೆ ಚಿಕ್ಕಬಳ್ಳಾಪುರದಿಂದ ಬೈರಾ ಹೆಸರಿನ 12 ಅಡಿ ಉದ್ದ, 3 ಅಡಿ ಎತ್ತರದ 30 ದೊಡ್ಡ ಗಾತ್ರದ ಕಲ್ಲುಗಳನ್ನು ತರಿಸಲಾಗಿತ್ತು. ಯಂತ್ರದ ಸಹಾಯದಿಂದ ಕಲ್ಲುಗಳನ್ನು ಜೋಡಿಸಲಾಗಿದೆ. ಜಾತಿ-ಬೇಧವಿಲ್ಲದೇ ಈಡೀ ಗ್ರಾಮಸ್ಥರು ಒಗ್ಗಟ್ಟಿನಿಂದ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಜೊತೆಗೆ ಸುತ್ತಮೂತ್ತಲಿನ ಗ್ರಾಮಸ್ತರು ಕೈ ಜೋಡಿಸಿದ್ದಾರೆ.
ಸುಮಾರು 40 ಜನ ಗಾರೆಯರು ಕೆಲಸ ಮಾಡಿದ್ದಾರೆ. ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗುವವರು ಮಡಿ ಪಾಲಿಸಬೇಕು. ಮದ್ಯಪಾನ ಮಾಡಬಾರದು, ಮೂತ್ರ ವಿಸರ್ಜನೆ ಮಾಡಿದ್ರೆ ಪುನಃ ಶುಚಿಗೊಳ್ಳಬೇಕು. 24 ಗಂಟೆಯಲ್ಲಿ ದೇವಾಲಯ ನಿರ್ಮಾಣ ಕಾರ್ಯ ಎಂಬುದು ಸವಾಲಿನ ಕೆಲಸ. ದೇವರ ಮೇಲೆ ಭಾರ ಹಾಕಿ, ದೇವಾಲಯ ನಿರ್ಮಾಣ ಆರಂಭಿಸಲಾಯಿತು.
ಗ್ರಾಮಸ್ಥರು ಹಾಗೂ ಭಕ್ತರು ಉತ್ತಮ ಸಹಕಾರ ನೀಡಿದ್ರೂ ಎಂದು ಗುತ್ತಿಗೆದಾರ ಸುರೇಶ ದೊಡ್ಡಬಳ್ಳಾಪುರ ತಿಳಸಿದರು. ನಂತರ ಭಕ್ತರು ಮಾತನಾಡಿ, ಒಂದು ಶತಮಾನದ ಹಿಂದೆ ಭಕ್ತರು ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಯಾಕಂದ್ರೆ ದೇವಾಲಯ ನಿರ್ಮಾಣಕ್ಕೆ ತನ್ನದೆಯಾದ ನಿಯಮಗಳಿವೆ. ಇದರಿಂದಾಗಿ ಗ್ರಾಮದಲ್ಲಿ ದೊಡ್ಡ ಅವಘಡ ನಡೆದಿತ್ತು. ಆಗ ದೇವಾಲಯ ನಿರ್ಮಾಣ ಕೈ ಬಿಡಲಾಗಿತ್ತು ಎಂದು ಹಿರಿಯರು ತಿಳಿಸಿದ್ದಾರೆ. ಇವತ್ತು ಸೂಲಧೀಶ್ವರ ದೇವಸ್ಥಾನ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಪವಾಡ, ಸಿದ್ದಪುರುಷನ ದೇವಸ್ಥಾನ ನಿರ್ಮಾಣವಾಗಿರುವುದು ಸಂತಸ ಎಂದು ಹೇಳಿದರು.