ಮೊಬೈಲ್‌ ಫೋಟೋಗಳ ಕ್ಷಣ ಭಂಗುರ ಜಗತ್ತು

By Kannadaprabha News  |  First Published Oct 8, 2023, 12:31 PM IST

ಮೊಬೈಲ್ ಬಂದ್ಮೇಲೆ ಎಲ್‌ ಹೋದ್ರೂ ಜನರು ಕ್ಲಿಕ್‌ ಕ್ಲಿಕ್‌ ಅಂತ ಪೋಟೋ ಕ್ಲಿಕ್ಕಿಸಿಕೊಳ್ತಾನೆ ಇರ್ತಾರೆ. ಕ್ಯಾಮರಾ ಫೋಟೋಗ್ರಫಿ, ಫೋಟೋ ಎಕ್ಸಿಬಿಶನ್ ಅನ್ನೋದೆಲ್ಲಾ ತಕ್ಕಮಟ್ಟಿಗೆ ತೆರೆ ಹಿಂದೆ ಸರಿದಂತೆಯೇ ಆಗ್ಬಿಟ್ಟಿದೆ. ಈ ಬಗ್ಗೆ ಡಾ ಕೆ ಎಸ್ ಪವಿತ್ರ ಬರೆದಿರೋ ಲೇಖನ ಇಲ್ಲಿದೆ.


- ಡಾ ಕೆ ಎಸ್ ಪವಿತ್ರ

‘ಛೇ ಈ ಮೊಬೈಲ್ ಬಂದು ಫೋಟೋಗ್ರಫಿ ಫ್ಯೂಚರ್ ಎಲ್ಲಾ ಮಂಕಾಗಿ ಹೋಯ್ತು ಮೇಡಂ..’ಖ್ಯಾತ ಛಾಯಾಚಿತ್ರ ಗ್ರಾಹಕರೊಬ್ಬರು ಇತ್ತೀಚೆಗೆ ಹೇಳಿದರು. ಮತ್ತೊಂದೆಡೆ ಆಮ್‌ಸ್ಟರ್‌ಡ್ಯಾಂನ ಬೊಟಾನಿಕಲ್ ಗಾರ್ಡನ್‌ನಲ್ಲಿ ಓಡಾಡುವಾಗ ನನ್ನ ಪುಟ್ಟ ಮಗ ದೊಡ್ಡ ಕ್ಯಾನನ್ ಕ್ಯಾಮೆರಾ ತೂಗು ಹಾಕಿಕೊಂಡು ಹಕ್ಕಿಯ ಫೋಟೋ ತೆಗೆಯಲು ಓಡುತ್ತಿದ್ದ. ಆಗ ಅವನು ಢಿಕ್ಕಿ ಹೊಡೆದದ್ದು ಒಬ್ಬ ಹಿರಿಯ ಇಂಗ್ಲಿಷ್ ದಂಪತಿಗಳಿಗೆ. ನಾನು ಓಡಿ ‘ಸಾರಿ’ ಅಂದಾಗ ಅವರು ನಕ್ಕು ಹೇಳಿದ ಮಾತು ‘ಅವನ ಫೋಟೋಗ್ರಫಿ ಎಕ್ಸಿಬಿಷನ್ ನೋಡಲು ನಾವು ಕಾಯುತ್ತಿರುತ್ತೇವೆ.’ ಆಗ ನಾನೆಂದೆ ‘ಅವನು ಕಣ್ಣಲ್ಲಿ ನೋಡಲು ಮೊದಲು ಕಲಿಯಲಿ ಅಂತ ನನ್ನಿಷ್ಟ’.

Latest Videos

undefined

ಈ ಎರಡೂ ಸಂದರ್ಭಗಳು ನನ್ನನ್ನು ಬಹುವಾಗಿ ಕಾಡಿವೆ. ಮನಸ್ಸು ಬಾಲ್ಯದೆಡೆಗೆ ಓಡುತ್ತದೆ. ಬಾಲ್ಯದಲ್ಲಿ ಕ್ಯಾಮೆರಾ ಏನು ಸುಲಭದ ಮಾತಾಗಿರಲಿಲ್ಲ. ಪುಟ್ಟ ಕ್ಯಾಮರಾ, ಜೊತೆಗೆ ಅದರ ಫಿಲ್ಮ್‌ ರೋಲ್, ಅದನ್ನು ಡೆವಲಪ್ ಮಾಡಿಸು, ಇವೆಲ್ಲ ‘ಫೋಟೋ ತೆಗೆಸುವುದು’ ಎಂಬ ಪ್ರಕ್ರಿಯೆಯ ಅವಿಭಾಜ್ಯ ಅಂಗಗಳಾಗಿದ್ದವು. ಇದು ಕಷ್ಟವೇ ಆದ್ದರಿಂದ, ದೀರ್ಘವಾದ ಕೆಲಸವೂ ಆದ್ದರಿಂದ ಬಹುಜನರಿಗೆ ಉಳಿಯುತ್ತಿದ್ದದ್ದು ನಿಜವಾದ ‘ಭಾವ’ ಚಿತ್ರಗಳೇ! ಅಂದರೆ ನಾವು ಮನಸ್ಸಿನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ನೆನಪುಗಳೇ.

Photography Tips : ಪ್ರವಾಸದಲ್ಲಿ ಫೋಟೋ ಚೆನ್ನಾಗಿ ಬರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಒಮ್ಮೆ ನಾವು ಬ್ಯಾಂಕಾಕಿಗೆ ಪ್ರವಾಸಕ್ಕೆ ಹೋಗಿದ್ದೆವು. ಪುಟ್ಟ ಕ್ಯಾಮೆರಾದಿಂದ ಕ್ಲಿಕ್ಕಿಸಿಯೇ ಕ್ಲಿಕ್ಕಿಸಿದೆವು. 36 ಫೋಟೋಗಳ ರೋಲ್ ಅದು. ಎಷ್ಟು ಫೋಟೋ ಕ್ಲಿಕ್ಕಿಸಿದರೂ ಕೊನೆ ತೋರಿಸುತ್ತಲೇ ಇಲ್ಲವಲ್ಲ ಎಂದು ಅಲ್ಲೇ ಇದ್ದ ರೋಲ್ ಸಿಗುವ ಅಂಗಡಿಗೆ ಹೋಗಿ ಅಲ್ಲಿದ್ದ ಹುಡುಗಿಯನ್ನು ಕೇಳಿದೆವು. ಅವಳು ಅನಾಯಾಸವಾಗಿ ಕ್ಯಾಮೆರಾ ತೆರೆದು ‘ನೋ ಫಿಲ್ಮ್’ ಎಂದು ನಮ್ಮ ಮುಂದೆ ಹಿಡಿದಳು. ಫೋಟೋದಲ್ಲಿರುತ್ತದೆಂದು ಭಾವಿಸಿ ಸರಿಯಾಗಿ ಯಾವ ಸ್ಥಳವನ್ನೂ ನೋಡದ ನಮಗೆ ಬ್ಯಾಂಕಾಕಿನ ಆ ದಿನದ ಪ್ರವಾಸ ಕೇವಲ ‘ಫೋಸ್ ಪ್ರಾಕ್ಟೀಸ್’ ಆಗಿಬಿಟ್ಟಿತ್ತು.

ನಂತರದ 20 ವರ್ಷಗಳಲ್ಲಿ ಹಲವು ದೊಡ್ಡ, ಚಿಕ್ಕ ಕ್ಯಾಮೆರಾಗಳನ್ನು ನಾನು ಕೊಂಡಿದ್ದಿದೆ. ಅವುಗಳ ಸ್ಟ್ಯಾಂಡನ್ನೂ ಕೊಂಡಿದ್ದಾಗಿದೆ, ಮೊಬೈಲ್ ಸೆಲ್ಫೀ ಸ್ಟಿಕ್ ಎಂಬ ಸಾಹಸವನ್ನೂ ಮಾಡಿದ್ದಾಗಿದೆ. ಅದೇನೋ ಪ್ರತಿಯೊಂದನ್ನೂ ‘ಪ್ರಯೋಜನವಿರಬೇಕು/ಉದ್ದೇಶ ಹೊಂದಿರಬೇಕು / ಗುರಿಯಿರಬೇಕು’ ಎಂಬ ಮನೋಭಾವದಿಂದ ನೋಡುವುದರಿಂದ ಇರಬೇಕು, ನನಗೆ ನನ್ನ ಸಂಗ್ರಹಕ್ಕೆಂದು ಸಹಸ್ರ ಫೋಟೋಗಳನ್ನು ಕ್ಲಿಕ್ಕಿಸುವುದು ವ್ಯರ್ಥ ಸಮಯ ಅಂತಲೇ ಅನ್ನಿಸುತ್ತದೆ. ಬಹುಬಾರಿ ಫೋಟೋ ಕ್ಲಿಕ್ಕಿಸುವ ಯುವ ಜನರನ್ನು ನೋಡುವ ನನಗೆ ಕೆಲವು ಕುತೂಹಲಕಾರಿ ಪ್ರಶ್ನೆಗಳು ಮನದಲ್ಲಿ ಏಳುತ್ತವೆ.

ಮದುವೆ ಮೆಮೊರೆಬಲ್ ಆಗಿರ್ಬೇಕಾ, ಅತ್ಯುತ್ತಮ ಫೋಟೋ ಕ್ಲಿಕ್ಕಿಸಲು ಇಲ್ಲಿದೆ ಟಿಪ್ಸ್

‘ಮೊಬೈಲ್ ಫೋಟೋ ಜ್ಞಾನ’ ಎಂಬ ಅಧ್ಯಯನ ಕ್ಷೇತ್ರವನ್ನೇ ಆರಂಭಿಸಬಹುದು ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಛಾಯಾಗ್ರಹಣ ನಮ್ಮನ್ನು ಆವರಿಸಿದೆ. ನಾವು ಕಾತುರದಿಂದ ಸೆರೆಹಿಡಿಯುವ ಫೋಟೋ ಚೆನ್ನಾಗಿ ಬರಲು ಎಷ್ಟೆಲ್ಲಾ ತಂತ್ರಗಳನ್ನು ಯುವಜನರು ಪರಿಣತಿಯಿಂದ ಉಪಯೋಗಿಸುತ್ತಾರೆ. ಸೆಲ್ಫೀ ತೆಗೆಯಬೇಕೆಂದರಂತೂ ಮುಖವನ್ನು ಓರೆಯಾಗಿ ಹಿಡಿಯಬೇಕು, ಕೆಳಗಿನಿಂದ ತೆಗೆಯಬೇಕು, ತುಟಿಯನ್ನು ‘ಪೌಟ್’ ಮಾಡಬೇಕು, ಒಂದು ಆಂಗಲ್‌ನಿಂದ ನೋಡಬೇಕು, ಹಿಂಬದಿಯ, ಪಕ್ಕದ ಯಾವುದು ಬರಬೇಕು, ಬರಬಾರದು ಒಂದೇ ಎರಡೇ.. ಸಾವಿರ ತಂತ್ರಗಳು. ಒಂದೊಮ್ಮೆ ಇದೇನಾದರೂ ತಪ್ಪಿತೆಂದರೆ ಎಡಿಟ್ ಮಾಡಲು ಮತ್ತಷ್ಟು ಉಪಾಯಗಳು. ಅದೂ ಆಗಲಿಲ್ಲವೆಂದರೆ ‘ಡಿಲೀಟ್’ ಆಯ್ಕೆಯಂತೂ ಇದೆ. ಆದರೆ ಮೊಬೈಲ್ ಮೆಮೊರಿಯಲ್ಲಿ ಸೇವ್ ಆದ ಈ ಚಿತ್ರಗಳು ಮಿದುಳಿನ, ಮನಸ್ಸಿನ ಮೆಮೊರಿಯಲ್ಲಿ ದಾಖಲಾಗಬಹುದೇ? ಮುಂದೊಮ್ಮೆ ‘ಫೈಲ್’ ಹುಡುಕಿ ತೆರೆದಂತೆ, ನಮ್ಮ ನೆನಪಿನ ಕೋಶದಿಂದ ‘ರಿಟ್ರೀವ್’ ಮಾಡಲು ಬರಬಹುದೇ..

ಆದರೂ ನಾವು ಏನನ್ನಾದರೂ ಮನಸ್ಸಿಗೆ ಸಂತಸ ತರುವುದನ್ನು ನೋಡಿದಾಗ ತತ್‌ಕ್ಷಣ ಮೊಬೈಲ್ ಮೇಲೇರುತ್ತದೆ. ಆ ‘ಸಂತಸ’ ವನ್ನು ಆ ‘ಕ್ಷಣ’ವನ್ನು ಶಾಶ್ವತವಾಗಿ ಹಿಡಿದಿಡುತ್ತೇವೆಂಬ ಭ್ರಮೆ! ಮತ್ತೆ ಕೆಲವೊಮ್ಮೆ ಯಾರಿಗೋ ಸಂಬಂಧಿಸಿದ ಆ ಕ್ಷಣವನ್ನು ನಾವು ಹಿಡಿದಿಟ್ಟು, ಅವರಿಗೆ ವರ್ಗಾಯಿಸಿ, ಹಂಚಿ ಆ ವ್ಯಕ್ತಿಗೆ ಆನಂದವುಂಟು ಮಾಡುವ ಹಂಬಲ. ಅವರು ನಮಗೆ ಹತ್ತಿರವಾಗುತ್ತಾರೆಂಬ ಮನೋಭಾವ.

ಆದರೆ ನಾನು ನೋಡಿರುವ ಬಹುಜನ ಆ ಕ್ಷಣವನ್ನು ಶಾಶ್ವತವಾಗಿ ಹಿಡಿದಿಡುವ ಭ್ರಮೆಯ ಹಿಂದೆ ಓಡಿ, ಆ ಕ್ಷಣವನ್ನು ಅನುಭವಿಸುವುದನ್ನೇ ಮರೆಯುತ್ತಾರೆ. ಅಷ್ಟೇ ಅಲ್ಲ, ತೆಗೆದ ಫೋಟೋ-ವೀಡಿಯೋಗಳನ್ನು ಒಂದೆಡೆ ವ್ಯವಸ್ಥಿತವಾಗಿ ಹೆಸರಿಟ್ಟು, ಕೂಡಿಡುವ ಶಿಸ್ತು ಬಹಳಷ್ಟು ಮಂದಿಗೆ ಸಾಧ್ಯವಾಗದ ಕೆಲಸ. ಈ ಕಾರ್ಯ ಮಾಡಲಾಗದ ಸಂಕಟದಿಂದ ನಾವು ಮತ್ತಷ್ಟು ಮಗದಷ್ಟು ಮೆಮೊರಿಯಿರುವ ಮೊಬೈಲ್ ಮೊರೆ ಹೋಗುತ್ತೇವೆ. ತಂತ್ರಜ್ಞಾನವನ್ನು ಪ್ರಬಲವಾಗಿಸಿ, ಫೇಸ್‌ಬುಕ್-ಇನ್ಸ್ಟಾನೀವು ಹೋದ ವರ್ಷ ಇಂತಹ ಕಡೆ ಹೋಗಿದ್ದಿರಿ-ಹೀಗಿದ್ದಿರಿ ಎಂದು ನೆನಪಿಸುವ ಹಾಗೆ ಮಾಡುತ್ತೇವೆ.

‘ಇರಲಿ, ಇದರಿಂದ ನಿಮಗೇನು ನಷ್ಟ?’ ಎಂದು ನೀವು ನನಗನ್ನಬಹುದು. ಯಾವುದು ಪೂರ್ತಿ ಸ್ಪಷ್ಟವಲ್ಲವೋ ಅದು ಆನಂದವನ್ನು ಹೆಚ್ಚಿಸುತ್ತದೆ. ಕ್ಯಾಮೆರಾದಷ್ಟು ನಿಖರವಲ್ಲದ ಕಣ್ಣು, ಕ್ಯಾಮೆರಾ ಕಣ್ಣುಗಳಾಚೆಗೆ ನೋಡಬಲ್ಲ ಮನಸ್ಸು ಇವೆರಡೂ ದೃಶ್ಯದ ಆನಂದವನ್ನು ಅನಂತವಾಗಿ ವಿಸ್ತರಿಸಬಹುದು. ಎಂದೆಂದಿಗೂ ಉಳಿಯಬಲ್ಲ ‘ಭಾವ’ ಚಿತ್ರಗಳನ್ನು ನೆನಪಿನಲ್ಲಿ ಉಳಿಸಬಲ್ಲದು.

ಮೊಬೈಲ್ ತೆಗೆದು ಫೋಟೋ ಕ್ಲಿಕ್ಕಿಸುವುದಕ್ಕೆ ನಾನು ವಿರೋಧಿಯಲ್ಲ. ಪ್ರತಿಯೊಬ್ಬರೂ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಾಕುವ ಫೋಟೋಗಳು ಅವರವರ ಜಗತ್ತಿನ ಗ್ರಹಿಕೆ-ಬಿಂಬ ಮತ್ತು ವೈವಿಧ್ಯಮಯ ಕಥನಗಳ ಪ್ರತಿನಿಧಿಯಂತೆ ಎಂದೇ ನಾನು ನಂಬುತ್ತೇನೆ. ಆದರೆ ವೇದಿಕೆಯ ಮೇಲೆ ನೃತ್ಯ/ ನಾಟಕ/ಸಮಾರಂಭ ನಡೆಯುವಾಗ ಒಂದು ಫೋಟೋ ಕ್ಲಿಕ್ಕಿಸಿ ಮೊಬೈಲ್ ಕೆಳಗಿಳಿಸಿ, ಬರಿಗಣ್ಣಿನಿಂದ ಕಾರ್ಯಕ್ರಮ ಸವಿಯುವುದು ನಮಗೆ ಸಾಧ್ಯವಾಗಬೇಕು. ಅಥವಾ ಆಗುಂಬೆಯ ಸೂರ್ಯಾಸ್ತ ನೋಡುವಾಗ ಮೊಬೈಲ್ ಹೊರ ತೆಗೆಯದೆ, ಸೂರ್ಯಾಸ್ತವನ್ನು ಪೂರ್ಣವಾಗಿ ಸವಿಯುವ ಸಾಹಸವನ್ನು ನಾವು ಮಾಡಬೇಕು. ಅಥವಾ ದೆಹಲಿಯ ಅಕ್ಷರಧಾಮದಲ್ಲಿರುವಂತೆ ಮೊಬೈಲ್-ಕ್ಯಾಮೆರಾ ನಿಷೇಧವಿರುವಾಗ ಮೊಬೈಲ್‌ನಲ್ಲಿ ಫೋಟೋ ತೆಗೆಯದೆ ಇಲ್ಲಿ ಬಂದದ್ದೇ ವ್ಯರ್ಥ ಎನ್ನುವ ಭಾವನೆ ಕಾಡುವ ಬದಲು ಆರಾಮವಾಗಿ ನೋಡಬಹುದು ಎಂಬ ನಿರಾಳತೆ ಮನಸ್ಸನ್ನು ಆವರಿಸಬೇಕು!

click me!