ಹರಿಹರಪುರದಲ್ಲಿ ಮಹಾಕುಂಭಾಭಿಷೇಕ ವೈಭವ

By Suvarna News  |  First Published Apr 13, 2022, 11:02 AM IST

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದಕ್ಷಾಶ್ರಮದಲ್ಲಿ ಐತಿಹಾಸಿಕ ಧರ್ಮಕಾರ್ಯ ನಡೆಯುತ್ತಿದೆ. ಬರೋಬ್ಬರಿ 15 ದಿನಗಳ ಕಾಲ ಬೃಹತ್ ಮಟ್ಟದ ಕುಂಭಾಭಿಷೇಕ ಹರಿಹರಪುರ ಮಠದಲ್ಲಿ ನಡೆಯುತ್ತಿದೆ.


ಡಾ. ಬಿ.ಎಸ್‌.ರವಿಶಂಕರ್‌, ಹರಿಹರಪುರ ಮಠದ ಆಡಳಿತಾಧಿಕಾರಿ

ಪ್ರಶಾಂತವಾಗಿ ಹರಿಯುವ ತುಂಗಾ ನದಿ. ಅಕ್ಕಪಕ್ಕದಲ್ಲಿ ಕಂಗೊಳಿಸುವ ಅಡಕೆ ತೋಟ. ಸುತ್ತ ಹಸಿರು ಹೊದ್ದ ಮನಮೋಹಕ ಪರಿಸರ. ದಡದಲ್ಲಿ ವಿದ್ಯಾಧಿದೇವತೆ ಶಾರದಾಂಬೆಯ ಭವ್ಯ ಸನ್ನಿಧಿ. ಅಲ್ಲೇ ಹಿಂದೊಮ್ಮೆ ಪುರಾಣ ಪ್ರಸಿದ್ಧವಾದ ದಕ್ಷಯಜ್ಞ ನಡೆದಿತ್ತೆಂಬ ಪ್ರತೀತಿ. ಆದ್ದರಿಂದಲೇ ಇದು ದಕ್ಷಾಶ್ರಮ ಕೂಡ.

Latest Videos

undefined

ಹರಿಹರಪುರ ಕ್ಷೇತ್ರದ ಹೆಸರು ಕೇಳದವರು ಯಾರಿದ್ದಾರೆ? ರಾಜ್ಯದ ಪ್ರಸಿದ್ಧ ಪ್ರವಾಸಿ ಜಿಲ್ಲೆಗಳಲ್ಲೊಂದಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಹರಿಹರಪುರ ಕ್ಷೇತ್ರಕ್ಕೆ ಪೌರಾಣಿಕ ಮಹತ್ವವಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಲ್ಲಿ ದಕ್ಷಯಜ್ಞ ನಡೆದಿತ್ತಂತೆ. ಆಗ ಪರಶಿವನು ಯಜ್ಞಕುಂಡದಲ್ಲಿ ಆವಿರ್ಭವಿಸಿ ಸಮಸ್ತ ಭಕ್ತರನ್ನು ಅನುಗ್ರಹಿಸಿದನಂತೆ. ಇಂದಿಗೂ ದಕ್ಷಹರ ಸೋಮೇಶ್ವರನ ದೇವಸ್ಥಾನವು ಹರಿಹರಪುರದಲ್ಲಿದೆ. ಇಂತಹ ಪವಿತ್ರ ಸ್ಥಳದಲ್ಲಿ ದಕ್ಷಯಜ್ಞ ನಡೆದಿತ್ತೆಂದು ತುಂಗಾಭದ್ರಾ ಕಾಂಡದ ಸ್ಕಂದ ಪುರಾಣದಲ್ಲಿದೆ. ಆದ್ದರಿಂದಲೇ ಇದು ಬಹುಕಾಲ ದಕ್ಷಾಶ್ರಮವೆಂದೇ ಪ್ರಸಿದ್ಧವಾಗಿತ್ತು.

ಹರಿಹರಪುರಕ್ಕೆ ಇನ್ನೊಂದು ಐತಿಹ್ಯವಿದೆ. ಇಲ್ಲಿ ಅಗಸ್ತ್ಯ ಮಹರ್ಷಿಗಳು ಕಠಿಣವಾದ ತಪಸ್ಸನ್ನು ಮಾಡಿ ಲಕ್ಷ್ಮೀನೃಸಿಂಹ ಸ್ವಾಮಿಯ ಸಾಕ್ಷಾತ್‌ ದರ್ಶನ ಪಡೆದಿದ್ದಾರೆ. ಇಲ್ಲಿನ ಗುರು ಪರಂಪರೆಯಲ್ಲಿ ಇಂದಿಗೂ ಅಗಸ್ತ್ಯ ಕರಾರ್ಚಿತ ಲಕ್ಷ್ಮೀನೃಸಿಂಹ ಸಾಲಿಗ್ರಾಮ ಪೂಜಿಸಲ್ಪಡುತ್ತಿರುವುದು ಅತ್ಯಂತ ವಿಶೇಷ. ಒಂದೆಡೆ ದಕ್ಷಯಜ್ಞದಲ್ಲಿ ಆವಿರ್ಭವಿಸಿದ ಪರಮೇಶ್ವರ. ಇನ್ನೊಂದೆಡೆ, ಅಗಸ್ತ್ಯ ಮುನಿಗಳಿಗೆ ದರ್ಶನ ನೀಡಿದ ಲಕ್ಷ್ಮೀನೃಸಿಂಹನೆಂಬ ಮಹಾವಿಷ್ಣು. ಹೀಗಾಗಿ ಇದು ಹರಿ ಮತ್ತು ಹರನ ಸಂಗಮ ಕ್ಷೇತ್ರ. ಆದ್ದರಿಂದಲೇ ಇದಕ್ಕೆ ಹರಿಹರಪುರವೆಂಬ ಹೆಸರು ಬಂತು.

ಇಂತಹ ಭವ್ಯ ಪರಂಪರೆಯುಳ್ಳ ಹರಿಹರಪುರ ಕ್ಷೇತ್ರದಲ್ಲಿ ಶ್ರೀ ಆದಿಶಂಕರಾಚಾರ್ಯರು ಶಾರದಾ ಪರಮೇಶ್ವರಿಯನ್ನು ಶ್ರೀಚಕ್ರ ಸಮೇತ ಪ್ರತಿಷ್ಠಾಪಿಸಿ, ಸ್ವಯಂಪ್ರಕಾಶ ಪೀಠವೆಂದು ನಾಮಕರಣ ಮಾಡಿದರು. ಇಲ್ಲಿನ ಪ್ರಥಮ ಪೀಠಾಧಿಪತಿಗಳಾಗಿ ಶ್ರೀ ಸ್ವಯಂಪ್ರಕಾಶ ಕೃಷ್ಣಯೋಗೀಂದ್ರ ಸರಸ್ವತೀ ಮಹಾಸ್ವಾಮಿಗಳವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಅನುಗ್ರಹಿಸಿದರು. ನಂತರದ ದಿನಗಳಲ್ಲಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್‌ ಎಂದು ಪ್ರಖ್ಯಾತವಾದ ಇಲ್ಲಿನ ಪೀಠವು ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದೆ.

ಈ ಧರ್ಮ ಪೀಠಕ್ಕೆ ವಿಜಯನಗರ ಅರಸರು, ಮೈಸೂರು ಸಂಸ್ಥಾನದ ಅರಸರು ಅಲ್ಲದೇ ಪಾಳೇಗಾರರು ದಾನ ಧರ್ಮ ನೀಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.

ಸ್ವಯಂಪ್ರಕಾಶ ಸಚ್ಚಿದಾನಂದ ಶ್ರೀಗಳು
ಹರಿಹರಪುರ ಮಠದ ಪ್ರಸ್ತುತ ಪೀಠಾಧಿಪತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು. ಇವರು ಇಲ್ಲಿನ ಗುರು ಪರಂಪರೆಯ 25ನೇ ಪೀಠಾಧಿಪತಿ. ಸಾಮಾಜಿಕ ಕಳಕಳಿ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಧ್ಯೇಯವಾಗಿಸಿಕೊಂಡು ಧರ್ಮರಕ್ಷಣೆ ಮತ್ತು ಧರ್ಮಪ್ರಸಾರದಲ್ಲಿ ತೊಡಗಿರುವ ಶ್ರೀಗಳು ಸದಾ ಕ್ರಿಯಾಶೀಲವಾಗಿರುವ ದಣಿವರಿಯದ ಸಂತ. ಸಮಕಾಲೀನ ಸಮಾಜದಲ್ಲಿ ಧಾರ್ಮಿಕ ಪೀಠಗಳು ಹೇಗೆ ಕೆಲಸ ಮಾಡಬೇಕು ಹಾಗೂ ಯಾವ ದಾರಿಯಲ್ಲಿ ಸಾಗಬೇಕು ಎಂಬುದಕ್ಕೆ ಶ್ರೀಗಳು ಉತ್ತಮ ಉದಾಹರಣೆ. ಸಾಮಾಜಿಕ ನೈರ್ಮಲ್ಯ, ಪಾರಿಸರಿಕ ನೈರ್ಮಲ್ಯ, ಧಾರ್ಮಿಕ ಆಚರಣೆಗಳ ವಿಧಿವಿಧಾನಗಳು, ಅವುಗಳಲ್ಲಿ ಒಡಮೂಡುವ ಅಭಿಪ್ರಾಯ ಭೇದಗಳು ಹೀಗೆ ಪ್ರತಿಯೊಂದನ್ನೂ ವೈಚಾರಿಕ, ಚಿಕಿತ್ಸಕ ದೃಷ್ಟಿಕೋನದಿಂದ ಗಮನಿಸಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಶ್ರೀಗಳ ವಿಶೇಷ. ಎಲ್ಲ ವಿಷಯಗಳಲ್ಲೂ, ಪ್ರತಿಷ್ಠಾಪಿತ ಧಾರ್ಮಿಕ, ನೈತಿಕ, ಸಾತ್ವಿಕ ಚೌಕಟ್ಟಿನಲ್ಲೇ ಸರ್ವಸಮ್ಮತ ಅಭಿಪ್ರಾಯವನ್ನು ಮೂಡಿಸಿ, ಎಲ್ಲ ಸಮುದಾಯದವರನ್ನೂ ಒಟ್ಟಾಗಿಸಿ ‘ಭಾರತೀಯರಾಗಿಸಿ’ ಮುಂದಕ್ಕೆ ಕರೆದೊಯ್ಯುವ ಶ್ರೀಗಳ ಹಂಬಲವು ಭಾರತೀಯ ಸನಾತನ ಪರಂಪರೆಯಲ್ಲಿ ಅವರಿಗೆ ಉನ್ನತ ಸ್ಥಾನವನ್ನು ನೀಡಿದೆ. ಸುತ್ತಲ ಸಮಾಜವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿಸುವ ಅವರ ಕಳಕಳಿ ಪ್ರಶ್ನಾತೀತ.

Chikkamagaluru: ಹರಿಹರಪುರ ಮಠದಲ್ಲಿ ಕುಂಭಾಭಿಷೇಕಕ್ಕೆ ಭರ್ಜರಿ ಸಿದ್ಧತೆ

ಇಲ್ಲಿನ ಲಕ್ಷ್ಮೀನರಸಿಂಹ ದೇವಾಲಯ ಹಾಗೂ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತವಾದ ಶಾರದಾ ಪರಮೇಶ್ವರೀ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಬೇಕೆಂಬುದು ಸಚ್ಚಿದಾನಂದ ಶ್ರೀಗಳ ಕನಸಾಗಿತ್ತು. ಅದರಂತೆ ಹನ್ನೊಂದು ವರ್ಷಗಳ ಹಿಂದೆ ಮಾಡಿದ ಮಹಾಸಂಕಲ್ಪವು ಇಂದು ಪೂರ್ಣಗೊಂಡಿದೆ. ತುಂಗೆಯ ದಡದಲ್ಲಿ ಭವ್ಯವಾದ ದೇಗುಲ ಶ್ರೀಗಳ ಮಾರ್ಗದರ್ಶನದಲ್ಲಿ ಎದ್ದುನಿಂತಿದೆ. 

ಧರ್ಮಪ್ರಸಾರದಲ್ಲಿ ಶ್ರೀಕ್ಷೇತ್ರ
ಹರಿಹರಪುರ ಮಠದ ವತಿಯಿಂದ ‘ಸ್ವಯಂಪ್ರಕಾಶ ಪಬ್ಲಿಕೇಶನ್ಸ್‌ ಟ್ರಸ್ಟ್‌’ ಮೂಲಕ ಕಳೆದ 20 ವರ್ಷಗಳಿಂದ ಶ್ರೀಗಳವರ ಆಶಯದಂತೆ ಭಾರತೀಯ ಸನಾತನ ಧರ್ಮದ ಆಚಾರ ವಿಚಾರಗಳು, ಪೀಠಾಧಿಪತಿಗಳ ಅನುಗ್ರಹ ಸಂದೇಶಗಳು, ಧಾರ್ಮಿಕ ಮುಖಂಡರುಗಳ ಲೇಖನಗಳು ಮತ್ತಿತರ ಸಂಗ್ರಹಯೋಗ್ಯವಾದ ಲೇಖನಗಳನ್ನೊಳಗೊಂಡ ‘ಸ್ವಯಂಪ್ರಕಾಶ’ ಎಂಬ ಕನ್ನಡ ಮತ್ತು ಇಂಗ್ಲಿಷ್‌ ಮಾಸಪತ್ರಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

Jupiter Transit: 12 ವರ್ಷಗಳ ಬಳಿಕ ಗುರು ಮೀನಕ್ಕೆ, ಈ 5 ರಾಶಿಗಳಿಗಿನ್ನು ಪರ್ವ ಕಾಲ

30 ಲಕ್ಷ ಮಂದಿಗೆ ಶಿವದೀಕ್ಷೆ
ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಭಾರತೀಯ ಸನಾತನ ಧರ್ಮದ ಪ್ರಚಾರಕ್ಕಾಗಿ ದಕ್ಷಿಣ ಭಾರತಾದ್ಯಂತ ಪ್ರವಾಸ ಕೈಗೊಂಡು ಜಾತಿ ಮತ ಲಿಂಗ ಭೇದವಿಲ್ಲದೆ ಪರಮ ಮಂಗಲಕರವಾದ ಶಿವದೀಕ್ಷೆಯನ್ನು ಸಮಸ್ತ ಜನತೆಗೆ ನೀಡುತ್ತಾ ಬಂದಿದ್ದಾರೆ. ಸಮಾಜದಲ್ಲಿ ಪರಸ್ಪರ ಶಾಂತಿ, ಸೌಹಾರ್ದ, ನೆಮ್ಮದಿಯನ್ನು ನೀಡುವ ಶಿವಪಂಚಾಕ್ಷರಿ ಸ್ತೋತ್ರವನ್ನು ಈವರೆಗೂ ಸುಮಾರು 30 ಲಕ್ಷಕ್ಕೂ ಹೆಚ್ಚು ಮಂದಿಗೆ ದೀಕ್ಷೆ ನೀಡಿದ್ದಾರೆ. ನಮ್ಮ ನಡುವೆ ಇರುವ ಎಲ್ಲ ಜಾತಿ ವರ್ಗದವರೂ ಶಿವದೀಕ್ಷೆಯನ್ನು ಪಡೆದು ಸುಖ ನೆಮ್ಮದಿಯ ಜೀವನವ ಅರಸಿ ಸಹಬಾಳ್ವೆ ನಡೆಸುವಂತಾಗಲಿ ಎಂಬುದು ಶ್ರೀಗಳ ಆಶಯ.

ನೂತನ ಅಗಸ್ತ್ಯ ಮಂಟಪ
ಇದೀಗ ಪವಿತ್ರ ತುಂಗಾನದಿಯಿಂದ ಶುದ್ಧವಾದ ತೀರ್ಥವನ್ನು ಶಾರದಾ ಪರಮೇಶ್ವರಿ ಹಾಗೂ ಲಕ್ಷ್ಮೀನೃಸಿಂಹ ಸ್ವಾಮಿಯ ಅಭಿಷೇಕಕ್ಕಾಗಿ ತರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅಗಸ್ತ್ಯ ಮಂಟಪವನ್ನು ನಿರ್ಮಾಣ ಮಾಡಿ ಪ್ರಶಾಂತವಾದ ದೇವಸ್ಥಾನಕ್ಕೆ ತೆರಳಿ ಭಗವಂತನ ದರ್ಶನವನ್ನು ಮಾಡುವ ಸಂದರ್ಭದಲ್ಲಿ ಗೋಪುರ ದರ್ಶನ ಮಾಡುವುದು ಇಲ್ಲಿನ ವಿಶೇಷವಾಗಲಿದೆ. ಇದರಿಂದ ಅನಂತ ಪುಣ್ಯ ಹಾಗೂ ಮೋಕ್ಷ ದೊರಕುವುದಾಗಿ ಹಿಂದೂ ನಂಬಿಕೆಗಳು ಹೇಳುತ್ತವೆ. ಹಾಗೆಯೇ ಹರಿಹರಪುರದಲ್ಲಿ ಸುಂದರವಾದ ವೀಕ್ಷಣಾ ಗೋಪುರವನ್ನು ನಿರ್ಮಿಸಿ ಕಾಮಧೇನು ಪ್ರತಿಮೆಯನ್ನು ಅಮೃತಶಿಲೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಸಕಲ ಭಕ್ತರು ಕಾಮಧೇನುವಿನ ಕೊಂಬುಗಳಿಂದ ಶಿಖರ ದರ್ಶನ ಮಾಡಿದಲ್ಲಿ ಪುಣ್ಯ ಪ್ರಾಪ್ತವಾಗುವುದು ಹಾಗೂ ವೈಕುಂಠಲೋಕ ಪ್ರಾಪ್ತಿಯಾಗುವುದು ಎಂದು ಸಚ್ಚಿದಾನಂದ ಶ್ರೀಗಳು ಹೇಳುತ್ತಾರೆ.

ಕಾಮಧೇನು ಪ್ರಥಮತಃ ಕೇಳಿದ ವರವನ್ನು ದಯಪಾಲಿಸುವ ದೇವತೆ. ಹೀಗಾಗಿ ಧೇನುವಿನ ಕೊಂಬುಗಳ ನಡುವಿನಿಂದ ಶಿಖರ ದರ್ಶನ ಮಾಡುವುದರಿಂದ ಪುಣ್ಯವು ಇಮ್ಮಡಿಯಾಗುತ್ತದೆ ಎಂಬುದು ಭಕ್ತರ ವಿಶ್ವಾಸ ಹಾಗೂ ನಂಬಿಕೆ.

ಗುರು ರಾಶಿ ಪರಿವರ್ತನೆ; ತರಲಿದೆ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆ

27 ಅಡಿಯ ಭಕ್ತಾಂಜನೇಯ
ಲಕ್ಷ್ಮೀನೃಸಿಂಹ ಲೇಖನ ಜಪಯಜ್ಞದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕನ್ನಡ, ತಮಿಳು, ತೆಲುಗು, ಸಂಸ್ಕೃತ ಭಾಷೆಯಲ್ಲಿ ನರಸಿಂಹ ನಾಮವನ್ನು ಬರೆದು ಶ್ರೀ ಕ್ಷೇತ್ರಕ್ಕೆ ತಲುಪಿಸಿದ್ದಾರೆ. ಕ್ಷೇತ್ರದಲ್ಲಿ ದೊಡ್ಡ ಹೊಂಡವನ್ನು ನಿರ್ಮಾಣ ಮಾಡಿ ಪುಸ್ತಕಗಳನ್ನು ಭದ್ರವಾಗಿರಿಸಿ ಮೇಲೆ ಸುಮಾರು 27 ಅಡಿಯ ಭಕ್ತಾಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಆಂಜನೇಯನು ಇಲ್ಲಿಗೆ ಆಗಮಿಸುವ ಸಮಸ್ತ ಭಕ್ತರ ಪರವಾಗಿ ಲಕ್ಷ್ಮೀನೃಸಿಂಹನನ್ನು ಪ್ರಾರ್ಥನೆ ಮಾಡಿ ಇಚ್ಛಿಸಿದ ಕಾರ್ಯವು ಅನುಗ್ರಹ ಮಾಡುವಂತೆ ಕೋರುತ್ತಾನೆ ಎಂಬುದು ಭಕ್ತಾದಿಗಳ ನಂಬಿಕೆ.

ನೃಸಿಂಹ ಪ್ರಸಾದ ಮಂದಿರ
ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಂಗಲು ಈಗಿರುವ ವಸತಿ ನಿಲಯದ ಜೊತೆಗೆ ಅನುಕೂಲವಾಗುವಂತೆ ಸುಸಜ್ಜಿತವಾದ ನೂತನ ವಸತಿ ನಿಲಯ ನಿರ್ಮಿಸಲಾಗಿದೆ. ಒಮ್ಮೆಗೆ ಸುಮಾರು 1500 ಭಕ್ತರು ಭೋಜನ ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ರೀತಿ, ಭವ್ಯವಾದ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದ್ದು, ಆಗಮಿಸುವ ಭಕ್ತಾದಿಗಳಿಗೆ ಹಾಗೂ ಸಾಧು ಸಂತರಿಗೆ ಧ್ಯಾನ ಮಾಡಲು ಏರ್ಪಾಡು ಮಾಡಲಾಗುತ್ತಿದೆ. ಇಲ್ಲಿ ಸುಂದರವಾಗಿ ಕೆತ್ತಿರುವ ಅಗಸ್ತ್ಯ ಮಹರ್ಷಿಗಳ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

4 ಲಕ್ಷ ಮಹಿಳೆಯರಿಂದ ಲಲಿತಾ ಪೂಜೆ
ಸಾಮಾನ್ಯವಾಗಿ ದೇವತಾ ಪೂಜೆಯನ್ನು ಪುರುಷರು ನೆರವೇರಿಸುವುದು ವಾಡಿಕೆ. ಆದರೆ ಜಗನ್ಮಾತೆಯ ಪೂಜೆಯನ್ನು ನಡೆಸಲು ಮಹಿಳೆಯು ಅರ್ಹಳು ಎಂಬ ಶಂಕರ ಭಗವತ್ಪಾದರ ಆದೇಶವನ್ನು ಪಾಲಿಸುತ್ತ ಸ್ವಯಂಪ್ರಕಾಶ ಶ್ರೀಗಳು ಈವರೆವಿಗೂ ಸುಮಾರು 4 ಲಕ್ಷಕ್ಕೂ ಅಧಿಕ ಮಹಿಳೆಯರಿಂದ ಶೋಡಷೋಪಚಾರ ಪೂಜಾ ವಿಧಾನದಿಂದ ಲಲಿತಾ ಪೂಜೆಯನ್ನು ದಿವ್ಯ ಸಾನ್ನಿಧ್ಯ ವಹಿಸಿ ನಡೆಸಿದ್ದಾರೆ.

ಭವ್ಯವಾಗಿ ಪುನರ್‌ ನಿರ್ಮಾಣಗೊಂಡಿರುವ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಶಾರದಾ ಪರಮೇಶ್ವರೀ ದೇವಾಲಯಗಳ ಉದ್ಘಾಟನೆ ಹಾಗೂ ಮಹಾಕುಂಭಾಭಿಷೇಕ ಏ.10ರಂದು ಆರಂಭವಾಗಿದ್ದು, ಏ.24ರವರೆಗೆ ಹದಿನೈದು ದಿನಗಳ ಕಾಲ ನಡೆಯಲಿದೆ.

Mahavir Jayanti ಯಾವಾಗ? ಹಬ್ಬದ ವೈಶಿಷ್ಟ್ಯತೆ ಏನು?

15 ದಿನಗಳ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಕಾರ‍್ಯಕ್ರಮ
 ಶುಭಕೃತ್‌ ಸಂವತ್ಸರದ ಚೈತ್ರ ಶುದ್ಧ ಚತುರ್ದಶಿ (ಏಪ್ರಿಲ್‌ 15, 2022) ಶುಕ್ರವಾರದ ದಿನ ಲಕ್ಷ್ಮೀನರಸಿಂಹ ಹಾಗೂ ಶಾರದಾ ಪರಮೇಶ್ವರೀ ದೇವಸ್ಥಾನಗಳ ಪುನಃಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕವನ್ನು ನೆರವೇರಿಸಲು ಶ್ರೀಗಳು ನಿಶ್ಚಯಿಸಿದ್ದಾರೆ.

ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ 15 ದಿನಗಳ ಕಾಲ ನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹರಿಹರಪುರದಲ್ಲಿ ನಡೆಯುತ್ತಿವೆ. ಏ.10ರ ಭಾನುವಾರ ಚತುದ್ರ್ರವ್ಯ ಮಹಾಗಣಪತಿ ಹೋಮದಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಅಂದೇ ಶ್ರೀರಾಮನವಮಿ ಪೂಜೆ ಹಾಗೂ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮಗಳು ಜರುಗಿವೆ. ಏ.11ರಂದು ದೇವನಾಂದಿ, ರಾಕ್ಷೋಘ್ನ ಹೋಮಾದಿಗಳು, ಏ.12ರಂದು ನವಗ್ರಹ ಹೋಮಾದಿಗಳು ನಡೆದಿವೆ. ಏ.13ರಂದು ಶ್ರೀ ಸ್ವಯಂಪ್ರಕಾಶ ಅಭಿನವ ರಾಮಾನಂದ ಸರಸ್ವತೀ ಮಹಾಸ್ವಾಮಿಗಳ ಜನ್ಮಜಯಂತಿ ಶತಮಾನೋತ್ಸವ ಕಾರ್ಯಕ್ರಮ, ಏ.14ರಂದು ಗುರು ದತ್ತಾತ್ರೇಯ ಮಹಾಯಾಗ ಹಾಗೂ ಏ.15ರಂದು ದೇವತಾ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ನಡೆಯಲಿದೆ. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ತಮ್ಮ ಅಮೃತಹಸ್ತದಿಂದ ಮಹಾಕುಂಭಾಭಿಷೇಕ ನೆರವೇರಿಸಲಿದ್ದಾರೆ. ಏ.16ರಿಂದ ಏ.24ರವರೆಗೆ ಕೋಟಿ ತುಳಸಿ ಅರ್ಚನೆ, ಲಕ್ಷ ಮೋದಕ ಗಣಪತಿ ಮಹಾಯಾಗ, ಸಹಸ್ರ ಚಂಡಿಕಾ ಮಹಾಯಾಗ, ಕೋಟಿ ಕುಂಕುಮಾರ್ಚನೆ, ಮಹಾಮೃತ್ಯುಂಜಯ ಯಾಗ, ಆಂಜನೇಯ ಮಹಾಯಾಗ, ಲಕ್ಷ್ಮೀನಾರಾಯಣಹೃದಯ ಹೋಮ, ಧನ್ವಂತರೀ ಮಹಾಯಾಗ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ, ಮಹಾರಥೋತ್ಸವ ನಡೆಯಲಿದೆ.

ಏ.21ರಂದು ಧಾರ್ಮಿಕ ಸಭೆ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪಾಲ್ಗೊಳ್ಳಲಿದ್ದಾರೆ. ಏ.22ರಂದು ಸಹಸ್ರ ಚಂಡಿಕಾ ಮಹಾಯಾಗದ ಪೂರ್ಣಾಹುತಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್‌ ಜೋಶಿ ಸೇರಿದಂತೆ ಕರ್ನಾಟಕದ ಸಚಿವರು, ಪ್ರಮುಖ ರಾಜಕೀಯ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಏ.10ರಿಂದ ಏ.24ರವರೆಗೆ ಪ್ರತಿದಿನ ಸಂಜೆ 5.30ರಿಂದ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಮಹಾಕುಂಭಾಭಿಷೇಕ ಹಾಗೂ ಜಾತ್ರಾ ಮಹೋತ್ಸವಕ್ಕೆ ಭಕ್ತರು ಅಕ್ಕಿ, ಆಹಾರ ಧಾನ್ಯ, ತರಕಾರಿ, ಹಣ್ಣು, ಬಾಳೆಎಲೆ, ಕಟ್ಟಿಗೆ ಮುಂತಾದವುಗಳನ್ನು ಸಂಗ್ರಹಿಸಿ ಹೊರೆಕಾಣಿಕೆ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.
ಏ.24 ರವರೆಗೆ ಶ್ರದ್ಧಾ, ಭಕ್ತಿ, ಸಡಗರ, ಸಂಭ್ರಮದಿಂದ ಈ ಮಹಾಕುಂಭಾಭಿಷೇಕ ಮಹೋತ್ಸವವು ನಡೆಯಲಿದ್ದು, ಈ ಶುಭ ಸಂದರ್ಭದಲ್ಲಿ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯ ಮತ್ತು ರಾಷ್ಟ್ರದ ಅನೇಕ ಗಣ್ಯರು ಹಾಗೂ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. 

click me!