ಹಬ್ಬಹರಿದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಸೇವನೆ ಮಾಡಬಾರದು ಎಂಬುದಕ್ಕೆ ಚೆಂದದೊಂದು ಪುರಾಣದ ಕತೆ ಇದೆ. ಕೇಳಿದ್ದೀರಾ?
ಸಾಮಾನ್ಯವಾಗಿ ಹಿಂದೂಗಳು ನವರಾತ್ರಿ, ದೀಪಾವಳಿ ಸೇರಿದಂತೆ ಹಬ್ಬಹರಿದಿನಗಳಂದು, ಪೂಜೆ ಪುನಸ್ಕಾರಗಳಂದು ಈರುಳ್ಳಿ ಬೆಳ್ಳುಳ್ಳಿ(Onion and Garlic) ಸೇವಿಸುವುದಿಲ್ಲ. ಅದನ್ನು ಹಾಕಿದ ಅಡುಗೆ ಮಾಡುವುದಿಲ್ಲ. ಇದಲ್ಲದೆ, ಹಿಂದೂ ದೇವರಿಗೆ ಸಾಕಷ್ಟು ಆಹಾರ ನೈವೇದ್ಯ ಮಾಡಿದರೂ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊಡುವುದಿಲ್ಲ.. ಈರುಳ್ಳಿ ಬೆಳ್ಳುಳ್ಳಿಯನ್ನು ತಾಮಸಿಕ ಆಹಾರ ಎಂದು ದೂರವಿಡಲಾಗುತ್ತದೆ. ಇದೇಕೆ ಹೀಗೆ?
ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ(medicine properties). ಕೆಮ್ಮು, ಉದರ ಸಮಸ್ಯೆಗಳು, ಶೀತ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಔಷಧಿಯ ಹಾಗೆ ನೀಡಲಾಗುತ್ತದೆ. ಹೀಗಿದ್ದೂ, ಅವಕ್ಕೆ ಏಕೆ ತಾಮಸಿಕ ಆಹಾರ ಪದಾರ್ಥ ಎಂಬ ಕಳಂಕ? ಅವನ್ನೇಕೆ ಪೂಜೆಯಲ್ಲಿ ಬಳಸುವುದಿಲ್ಲ? ಇದಕ್ಕೆ ಉತ್ತರವಾಗಿ ಪುರಾಣ(Mythology)ದಲ್ಲಿ ಚೆಂದದೊಂದು ಕತೆಯಿದೆ.
ರಾಕ್ಷಸರ ಬಾಯಿಂದ ಬಂದಿದ್ದು..
ಸಮುದ್ರಮಂಥನದ ನಂತರ ಮೋಹಿನಿಯ ವೇಷವನ್ನು ಧರಿಸಿ ಮಹಾವಿಷ್ಣು(Mahavishnu)ವು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ. ಅದನ್ನರಿತ ರಾಹು ಹಾಗೂ ಕೇತುವೆಂಬ ರಾಕ್ಷಸರು(demons) ಕೂಡಾ ವೇಷ ಮರೆಸಿಕೊಂಡು ಅಮೃತವನ್ನು ಸ್ವೀಕರಿಸಲು ಬರುತ್ತಾರೆ. ಇದು ತಕ್ಷಣ ತಿಳಿಯದೆ ವಿಷ್ಣುವು ಅವರಿಗೂ ಅಮೃತವನ್ನು ನೀಡುತ್ತಾನೆ. ಆದರೆ, ಸೂರ್ಯ ಚಂದ್ರರಿಗೆ ಬಂದಿದ್ದು ರಾಕ್ಷಸರೆಂಬುದು ತಿಳಿದಿರುತ್ತದೆ. ಅವರು ಕೂಡಲೇ ವಿಷ್ಣುವಿಗೆ ತಿಳಿಸುತ್ತಾರೆ. ಅಷ್ಟರಲ್ಲಿ ಅವರಿಬ್ಬರೂ ಅಮೃತ(Amrut)ವನ್ನು ಕುಡಿದಾಗಿರುತ್ತದೆ. ಆಗಿನ್ನೂ ಅಮೃತ ಗಂಟಲಿಂದ ಇಳಿದು ದೇಹ ಸೇರಿರಲಿಲ್ಲ. ಅದು ದೇಹ ಸೇರುವುದನ್ನು ತಪ್ಪಿಸಲು ಕೂಡಲೇ ಮಹಾವಿಷ್ಣು ಅವರಿಬ್ಬರ ತಲೆಯನ್ನು ಕಡಿಯುತ್ತಾನೆ. ಆದರೆ ಅದಾಗಲೇ ಅಮೃತವನ್ನು ಕುಡಿದಿದ್ದರಿಂದ ಅವರ ತಲೆ(head) ನಾಶವಾಗುವುದಿಲ್ಲ. ಕೇವಲ ದೇಹಾಂತ್ಯವಾಗುತ್ತದೆ. ಮಹಾವಿಷ್ಣು ಶಿರವನ್ನು ತುಂಡರಿಸುವಾಗ ಅವರ ಬಾಯಲ್ಲಿದ್ದ ಅಮೃತಬಿಂದುಗಳು ನೆಲವನ್ನು ತಲುಪಿ ಅಲ್ಲಿ ಹುಟ್ಟಿದವೇ ಈರುಳ್ಳಿ ಮತ್ತು ಬೆಳ್ಳುಳ್ಳಿ. ಅಮೃತದಿಂದ ಹುಟ್ಟಿದ್ದರಿಂದಾಗಿ ಇವಕ್ಕೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.
ಮುಟ್ಟಾದ ಮಹಿಳೆಯರೇಕೆ ಮೂಲೆಯಲ್ಲಿ ಕೂರಬೇಕು?
ಹಾಗೆಯೇ ಈ ಅಮೃತಕ್ಕೆ ರಾಕ್ಷಸರ ಎಂಜಲು(saliva) ಸೇರಿದ್ದರಿಂದ ಇವುಗಳಲ್ಲಿ ದುರ್ಗಂಧವೂ ಹೆಚ್ಚು, ಅದೇ ಕಾರಣಕ್ಕೆ ಅಪವಿತ್ರವಾಗಿ ಉಳಿದಿವೆ. ಹಾಗಾಗಿ ದೈವಕಾರ್ಯಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸೇವನೆ ವರ್ಜ್ಯವಾಗಿದೆ.
ಇನ್ನು ನಂಬಿಕೆಗಳಂತೆ, ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಶುದ್ಧವಲ್ಲ ಮತ್ತು ಈ ಆಹಾರವನ್ನು ರಾಕ್ಷಸ ತಿನ್ನುತ್ತಾನೆ. ಇದನ್ನು ತಿಂದರೆ ದುಃಖ ಹೆಚ್ಚುತ್ತದೆ ಎನ್ನಲಾಗುತ್ತದೆ.
ಇನ್ನೊಂದು ವರ್ಷ ಈ 3 ರಾಶಿಯವರಿಗೆ ಕೇತುವಿನ ಕೃಪೆ - ಧನಲಾಭ
ವೈಜ್ಞಾನಿಕ ಕಾರಣ(Scientific reason)
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಶರೀರ ರಾಕ್ಷಸರಂತೆ ಗಟ್ಟಿಮುಟ್ಟಾದರೂ, ಆಚಾರ-ವಿಚಾರಗಳೂ ಸಹ ರಾಕ್ಷಸರಂತಾಗುತ್ತವೆ ಎಂಬ ಕಥೆಯಿದೆ. ಹಾಗಾಗಿ ಇವು ತಾಮಸಿಕ ಆಹಾರ ಎಂದು ಗುರುತಿಸಿಕೊಂಡಿವೆ. ಅಲ್ಲದೆ , ವೈಜ್ಞಾನಿಕವಾಗಿ ಕೂಡಾ ಈರುಳ್ಳಿ, ಬೆಳ್ಳುಳ್ಳಿ ಸೇವನೆಯಿಂದ ಕೋಪ ಹೆಚ್ಚುತ್ತದೆ, ದು ಮನಸ್ಸು ಮತ್ತು ದೇಹದ ಮೇಲೆ ನಿದ್ರಾಜನಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಸಾಬೀತಾಗಿದೆ. ಈ ಆಹಾರಗಳು ನಮ್ಮ ರಕ್ತಪರಿಚಲನಾ ವ್ಯವಸ್ಥೆಯಲ್ಲಿ ಶಾಖದ ಬಿಡುಗಡೆ ಮಾಡಿ ಮಾನಸಿಕ ಮಂದತೆ ಮತ್ತು ದೈಹಿಕ ಮರಗಟ್ಟುವಿಕೆಗೆ ಕಾರಣವಾಗಬಹುದು. ಇದರ ಸೇವನೆಯಿಂದ ಕಾಮ, ಸೋಮಾರಿತನ ಹೆಚ್ಚುತ್ತದೆ, ಶಾಂತತೆ, ಸಂಕೀರ್ಣ ಆಲೋಚನೆ, ತರ್ಕಬದ್ಧ ಚಿಂತನೆ ತಗ್ಗುತ್ತದೆ. ಅದಕ್ಕಾಗಿಯೇ ಇವುಗಳ ಸೇವನೆ ಕಡಿಮೆ ಇರಬೇಕು. ಸಾತ್ವಿಕ ಆಹಾರಗಳ ಸೇವನೆ ಹೆಚ್ಚಿಸಬೇಕು.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.