ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಏಕೆ ಮಾಡುತ್ತಾರೆ? ಇತ್ತೀಚೆಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸರ್ಪಸಂಸ್ಕಾರ ಮಾಡಿಸಿದರು. ಯಾವ ಕಾರಣಕ್ಕೆ ಅವರು ಸರ್ಪ ಸಂಸ್ಕಾರ ಮಾಡಿಸಿದರು? ಈ ಒಂದು ಕುತೂಹಲ ಎಲ್ಲರಲ್ಲಿದೆ. ಅದಕ್ಕೆ ಇಲ್ಲಿ ಉತ್ತರವಿದೆ.
ಸುಬ್ರಹ್ಮಣ್ಯಕ್ಕೆ ಬಹಳಷ್ಟು ಸೆಲೆಬ್ರಿಟಿಗಳು ಬಂದು ಸರ್ಪ ಸಂಸ್ಕಾರ ಮಾಡಿಸಿದ್ದಾರೆ. ಸಚಿನ್ ತೆಂಡುಲ್ಕರ್, ಅಜಯ್ ದೇವಗನ್ ಮುಂತಾದವರು ಕೂಡ ಈ ಹಿಂದೆ ಬಂದದ್ದುಂಟು. ಹಾಗೆ ಬಂದಾಗಲೆಲ್ಲ ದೇವರ ದರ್ಶನ ಮಾಡಿ, ಸರ್ಪಸಂಸ್ಕಾರ ಮಾಡಿಸಿಯೇ ಹೋಗುವುದು ವಾಡಿಕೆ. ಕುಕ್ಕೆಯಲ್ಲಿ ನಡೆಯುವಷ್ಟು ಸರ್ಪ ಸಂಸ್ಕಾರ ಇನ್ನೆಲ್ಲೂ ನಡೆಯುವುದಿಲ್ಲ. ಹಾಗಾದರೆ ಯಾಕೆ ಇದನ್ನು ಮಾಡಬೇಕು? ಯಾರು ಸಾಮಾನ್ಯವಾಗಿ ಮಾಡುತ್ತಾರೆ?
ಕೆಲವೊಮ್ಮೆ ಕಷ್ಟಗಳು ಕಾಡಿದಾಗ ಜ್ಯೋತಿಷಿಗಳು ನಿಮ್ಮ ಜಾತಕ ನೋಡಿ ನಿಮಗೆ ಸರ್ಪ ದೋಷವಿದೆ, ಸರ್ಪ ಸಂಸ್ಕಾರ ಮಾಡಿಸಿ ಬನ್ನಿ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಜಾತಕದಲ್ಲಿ ಸಾಮಾನ್ಯವಾಗಿ ದುಃಸ್ಥಾನಗಳಲ್ಲಿ (6, 8, 12)ರಲ್ಲಿ ರಾಹು ಇದ್ದಾಗ ಈ ಸಲಹೆ ಬರುತ್ತದೆ. ಕೆಲವೊಮ್ಮೆ ದಂಪತಿಗಳಿಗೆ ಸಂತಾನ ಭಾಗ್ಯ ಇಲ್ಲದಾಗಲೂ ಜ್ಯೋತಿಷಿಗಳು ಇದನ್ನು ಹೇಳುವುದಿದೆ.
ಯಾವ ಸಂದರ್ಭದಲ್ಲಿ ಸರ್ಪಸಂಸ್ಕಾರ ಮಾಡಬೇಕು? ಈ ಕೆಳಗಿನ ಕಾರಣಗಳು ಇದ್ದಾಗ ಅದನ್ನು ಮಾಡಬೇಕು-
1. ಸರ್ಪದ ಮರಣ ನೋಡಿರಬೇಕು ಮತ್ತು ಅದಕ್ಕೆ ಸಂಸ್ಕಾರ ಆಗದೆ ಇರಬೇಕು.
2. ಸ್ಥಳಭಾದಿತ ಸರ್ಪ ದೋಷಗಳು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದರೆ ಆಗ ಸರ್ಪ ಸಂಸ್ಕಾರ ಬೇಕು.
3. ಹೊಸದಾಗಿ ನಾಗವನ ಮಾಡುವುದಿದ್ದರೆ ಆಗ ಸರ್ಪ ಸಂಸ್ಕಾರದ ಮೂಲಕ ನಾಗ ಶಿಲಾ ಪ್ರತಿಷ್ಟೆಯಾಗಬೇಕು. ಆಗ ಸರ್ಪಸಂಸ್ಕಾರ ಮಾಡಿ ಭೂಮಿಯಲ್ಲಿ ನಿಧಿ ಸ್ಥಾಪಿಸಿ ನಾಗ ಪ್ರತಿಷ್ಟೆ ಮಾಡಬಹುದು.
4. ವಾಹನಗಳ ಚಕ್ರಗಳಿಗೆ ನಾಗರಹಾವು ಸಿಕ್ಕಿ ಸತ್ತಿದ್ದು ಕಂಡರೆ, ಯಾವುದೋ ನವಿಲೋ, ಗಿಡುಗನೋ, ಮುಂಗುಸಿಯೋ ಅಥವಾ ಇನ್ಯಾವ ಪ್ರಾಣಿ ಪಕ್ಷಿಗಳಿಂದ ನಾಗರ ಹಾವು ಸತ್ತಿದ್ದು ಕಂಡರೆ ಸಂಸ್ಕಾರ ಮಾಡಬೇಕು.
5. ನಾಗವಂಶದ ಸರಿಸೃಪಾದಿ ಅಂದರೆ ಇತರ ವಿಷಯುಕ್ತ ಹಾವುಗಳು ನಮ್ಮ ಕೈಯಲ್ಲಿ ಕೊಲ್ಲಲ್ಪಟ್ಟಿದ್ದರೆ ಅದು ನಾಗದೋಷವಾಗುತ್ತದೆ. ಆಗ ಸಂಸ್ಕಾರ ಮಾಡಬಹುದು.
6. ನಾಗ ವನಗಳು ನಮ್ಮಿಂದಾಗಿ ಸುಟ್ಟು ಹೋಗಿದ್ದರೆ, ಧ್ವಂಸವಾಗಿದ್ದರೆ ಇಲ್ಲಿ ಅಗೋಚರವಾಗಿ ಸರ್ಪ ಸಂತತಿ ನಾಶವಾಗಿರಬಹುದು. ಇಂತಹ ವಿಚಾರವಿದ್ದಾಗ ಸಂಸ್ಕಾರ ಮಾಡಬೇಕು.
ಸಂಸ್ಕಾರಗಳನ್ನು ಅಂದರೆ ನಾಗ ಪ್ರತಿಕೃತಿ ದಹನವನ್ನು ನದೀ ತೀರ, ಕೆರೆ ಬಾವಿಗಳ ಬಳಿ ಮಾಡಬೇಕು. ಕೆಲ ದೇವಸ್ಥಾನ, ಮಠಗಳಲ್ಲಿ ಇದಕ್ಕೆ ಬೇಕಾದ ವ್ಯವಸ್ಥೆಗಳಿವೆ. ಸಂಸ್ಕಾರವು ಸಾಮಾನ್ಯವಾಗಿ ನಾಲ್ಕು ದಿನಗಳದ್ದಾಗಿರುತ್ತದೆ. ಮೊದಲ ದಿನ ಪ್ರತಿಕೃತಿ ದಹನ, ಮತ್ತೆ ಎರಡು ದಿನ ತರ್ಪಣ, ಕೊನೆಯ ದಿನ ಇದಕ್ಕೆ ಸಂಬಂಧಿಸಿ ಕಾರ್ಯಗಳು. ಕೆಲವೆಡೆ ಎರಡು ದಿನದಲ್ಲೇ ಮುಗಿಯುವ ಸಂಸ್ಕಾರ ವಿಧಿಗಳಿವೆ. ಇನ್ನು ಕೆಲವೊಮ್ಮೆ ಕೇವಲ ಸರ್ಪಬಲಿ ಮಾತ್ರ ಮಾಡಿ ಸರ್ಪದೋಷದ ನಿವಾರಣಾ ಕ್ರಮವೂ ಇದೆ. ಇದು ದೋಷಗಳ ಆಧಾರದಲ್ಲಿ ಮಾಡುವಂತದ್ದು. ಸಂಸ್ಕಾರಕ್ಕೆ ಶುರುಮಾಡಿದ ಮೇಲೆ ಸಂಸ್ಕಾರ ದೀಕ್ಷೆಯಲ್ಲಿರಬೇಕು. ಅಂದರೆ ಒಪ್ಪೊತ್ತು ಊಟ, ಸಾತ್ವಿಕ ಆಹಾರ. ಈರುಳ್ಳಿ ಬೆಳ್ಳುಳ್ಳಿ, ಮಾಂಸಾಹಾರ, ಶರಾಬು ಸೇವಿಸಬಾರದು. ಸಂಸ್ಕಾರ ಪೂರ್ಣವಾದ ನಂತರ ಅವರವರ ಕ್ರಮಗಳ ಆಹಾರ ನಿಯಮಗಳನ್ನು ಮುಂದುವರಿಸಬಹುದು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಕತ್ರೀನಾ ಕೈಫ್: ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ಪೂಜೆ
ಸಂಸ್ಕಾರ ಆರಂಭಿಸಿ ಮುಗಿಯುವ ತನಕ ಯಾವುದೇ ದೇವತಾ ಕಾರ್ಯವನ್ನು ಆ ಯಜಮಾನನ ಕುಟುಂಬಸ್ಥರು ಮಾಡಬಾರದು. ದೇವಸ್ಥಾನಕ್ಕೂ ಹೋಗಬಾರದು. ಮನೆ ದೇವರಿಗೂ ಪೂಜೆ ಮಾಡಬಾರದು. ಯಾವುದೇ ಮಂತ್ರ ಪಠಣವನ್ನೂ ಮಾಡಬಾರದು. ನಿತ್ಯ ಓದುವ ಸಹಸ್ರನಾಮಾದಿ ಸ್ತುತಿ ಶ್ಲೋಕಗಳಿದ್ದರೆ ಮನಸ್ಸಿನಲ್ಲೇ ಓದಬಹುದು. ಇದು ಸೂತಿಕಾಚರಣೆಯಂತೆಯೇ ಆಗಿರುವುದರಿಂದ ಈ ನಿಯಮ ಪಾಲನೆ ಮಾಡಬೇಕು. ಇಷ್ಟೆಲ್ಲ ಸಂಸ್ಕಾರ ನಿಯಮಗಳಾದ ಮೇಲೆ ದೇವತಾದರ್ಶನ, ಪೂಜಾದಿಗಳನ್ನು ಮಾಡಬಹುದು.
ಹೀಗಾಗಿ ಕತ್ರಿನಾ ಕೈಫ್ ಅವರಿಗೆ ಜಾತಕದಲ್ಲಿ ಕಂಡುಬಂದ ದೋಷವನ್ನು ಉಲ್ಲೇಖಿಸಿ ಸರ್ಪಸಂಸ್ಕಾರದ ಬಗ್ಗೆ ಜ್ಯೋತಿಷಿಗಳು ಹೇಳಿರಬಹುದು. ಅಥವಾ ಸಂತಾನಭಾಗ್ಯಕ್ಕಾಗಿಯೂ ಇದನ್ನು ಸೂಚಿಸಿರಬಹುದು. ಆದ್ದರಿಂದ ಅವರು ಇಲ್ಲಿಗೆ ಆಗಮಿಸಿ ಅದನ್ನು ಮಾಡಿದ್ದಾರೆ ಎಂದು ನಾವು ಊಹಿಸಬಹುದಾಗಿದೆ.
ಈ ದಿನಾಂಕದಲ್ಲಿ ಜನಿಸಿದ ಹುಡುಗರೊಂದಿಗೆ ಡೇಟಿಂಗ್ ವರ್ಕ್ ಆಗಲ್ವಂತೆ, ಹುಡುಗಿರಿಗೆ ಚುಂಬನ ಭಾಗ್ಯವು ಇಲ್ಲ